Thursday, June 13, 2024

ಸತ್ಯ | ನ್ಯಾಯ |ಧರ್ಮ

CM ಸಿದ್ದರಾಮಯ್ಯ, ನರೇಂದ್ರ ಮೋದಿ ಭೇಟಿ : ಚರ್ಚೆಗೆ ಬರಲಿರುವ ವಿಷಯಗಳು ಏನೇನು ಗೊತ್ತಾ?

ರಾಜ್ಯಕ್ಕೆ ಬೇಕಾದ ಹಲವು ಅಗತ್ಯ ಅನುದಾನ, ವಿವಿಧ ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಗೆ ನರೇಂದ್ರ ಮೋದಿಯವರು ಅವಕಾಶ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿಕೊಂಡೇ ಬಂದಿದ್ದರು. ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಪ್ರಯತ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂತೂ ಪ್ರಧಾನಿಗಳು ಅವಕಾಶ ಕಲ್ಪಿಸಿದ್ದಾರೆ.

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ನಂತರ ಒಂದು ಬಾರಿ ಮಾತ್ರ ಔಪಚಾರಿಕವಾಗಿ ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿತ್ತು. ಆ ನಂತರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅಗತ್ಯ ವಿಚಾರಗಳ ಬಗ್ಗೆ ಚರ್ಚೆಗೆ ಹಲವು ಬಾರಿ ಅವಕಾಶ ಕೋರಿ ಪತ್ರ ಬರೆಯಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಕಛೇರಿಯಿಂದ ಸಿದ್ದರಾಮಯ್ಯನವರ ಭೇಟಿಗೆ ಈ ವರೆಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ.

ಸಿದ್ದರಾಮಯ್ಯ ಕೂಡಾ ರಾಜ್ಯದಲ್ಲಿ ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದೇ ದೂರಿಕೊಂಡು ಬಂದಿದ್ದರು. ಸದನದಲ್ಲೂ ಸಹ ಬಿಜೆಪಿ ನಾಯಕರಿಗೆ ನೀವಾದರೂ ಪ್ರಧಾನಿ ಭೇಟಿಗೆ ಅನುಮತಿ ಕೊಡಿಸಿ ಎಂದು ಪರೋಕ್ಷವಾಗಿ ಚಾಟಿ ಬೀಸಿದ್ದರು.

ಅದರಂತೆ ಇಂದು ನವದೆಹಲಿಯಲ್ಲಿ ಪ್ರಧಾನಿಗಳ ಭೇಟಿಗೆ ಸಿದ್ದರಾಮಯ್ಯನವರಿಗೆ ಅವಕಾಶ ಕಲ್ಪಿಸಲಾಗಿದೆ. ಕಾವೇರಿ ಜಲವಿವಾದ, ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಸರ್ವಪಕ್ಷ ನಿಯೋಗ ಭೇಟಿಗೆ ಕೇಳಿದರೂ ಪ್ರಧಾನಿ ಅವಕಾಶ ನೀಡು ತ್ತಿಲ್ಲ ಎಂದು ಸಿಎಂ ಆರೋಪಿಸಿದ್ದರು.

ಈಗ ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವ ಸರಕಾರ, 30-35 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಕನಿಷ್ಠ 18 ಸಾವಿರ ಕೋಟಿ ರೂ.ಗಳ ಪರಿಹಾರಕ್ಕಾಗಿ ಕೇಂದ್ರ ಸರಕಾರದ ಮುಂದೆ ಬೇಡಿಕೆ ಇಟ್ಟಿದೆ. ಇದರ ಜೊತೆಗೆ ಅಂತರರಾಜ್ಯ ಗಡಿ ಮತ್ತು ನದಿ ನೀರಿನ ಸಮಸ್ಯೆ, ‘ಗ್ಯಾರಂಟಿ’ ಅಕ್ಕಿಯ ಅಭಾವದ ಬಗ್ಗೆಯೂ ಪ್ರಧಾನಿಗಳ ಜೊತೆಗೆ ಚರ್ಚೆ ನಡೆಯುವ ಸಂಭವ ಇದೆ ಎನ್ನಲಾಗಿದೆ.

ಇವೆಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಅವಕಾಶ ಕಲ್ಪಿಸಿದರೆ ಮಾತ್ರ ಈ ಬಗ್ಗೆ ಮಾತುಕತೆ ನಡೆಯಬಹುದು. ಇಂದು ಪ್ರಧಾನಿಗಳ ಜೊತೆಗಿನ ಭೇಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಸಚಿವರಾದ ಕೃಷ್ಣಭೈರೇಗೌಡರು ಇರಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು