Friday, June 14, 2024

ಸತ್ಯ | ನ್ಯಾಯ |ಧರ್ಮ

ಗದಗ: ಕಾಂಗ್ರೆಸ್‌ ನಾಯಕನ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವೈದ್ಯ

ಗದಗ: ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯರೊಬ್ಬರು ಕಾಂಗ್ರೆಸ್ ಮುಖಂಡನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರದಂದು ಡಾ. ಶಶಿಧರ ಹಟ್ಟಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಲುಂಗಿಯಿಂದ ನೇಣಿಗೆ ಶರಣಾಗಿದ್ದಾರೆ.

ವರದಿಗಳ ಪ್ರಕಾರ ಶಶಿಧರ ಹಟ್ಟಿ, ಶರಣಗೌಡ ಪಾಟೀಲ್‌ ಸೇರಿದಂತೆ ಮೂವರು ಮರಳು ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದರೆ, ಶಶಿಧರ ಹಟ್ಟಿ ಅವರು ಎಲ್ಲಾ ಲೆಕ್ಕವನ್ನು ಸರಿಯಾಗಿ ಕೊಟ್ಟಿದ್ದರೂ ಪದೇ ಪದೇ ಶರಣಗೌಡ ಕಿರುಕುಳ ನೀಡುತ್ತಿದ್ದರು, ಹೀಗಾಗಿ ತಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ.

ಮರಳು ದಂಧೆಯಲ್ಲಿ ಪಾಲುದಾರಾಗಿದ್ದ ಶರಣಗೌಡ ಪಾಟೀಲ್ ಹಾಗೂ ತನ್ನ ನಡುವೆ ಉಂಟಾದ ಹಣಕಾಸಿನ ಒತ್ತಡಕ್ಕೆ ವೈದ್ಯ ಶಶಿಧರ ಬಲಿಯಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ರೋಣ ತಾಲೂಕಿನ ಹೊಳೆಮಣ್ಣೂರು ಬಳಿ ಮರಳು ತೆಗೆಯುತ್ತಿದ್ದರು.

ಇಲ್ಲಿ ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ್, ಗಜೇಂದ್ರಗಡ ತಾಲೂಕಿನ ಸರ್ಜಾಪೂರ ಗ್ರಾಮದ ಶರಣಗೌಡ ಎಲ್ ಪಾಟೀಲ ಹಾಗೂ ಇನ್ನೂ ಕೆಲವರ ಜೊತೆ ವೈದ್ಯ ಶಶಿಧರ ಮರಳಿನ ವ್ಯವಹಾರದಲ್ಲಿ ತೊಡಗಿದ್ದರು.

ಆರೋಪಿ ಶರಣಗೌಡ ಪಾಟೀಲ, ವೈದ್ಯ ಶಶಿಧರ ಅವರಿಗೆ ನಿತ್ಯವೂ ಮರಳಿನ ವ್ಯವಹಾರದ ಲೆಕ್ಕ ಪತ್ರ ಹಾಗೂ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ದಿನವೂ ಹಣ ಕೊಡಲೇಬೇಕು ಎಂದು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದರು ಎಂದು ಶಶಿಧರ್ ಹಟ್ಟಿ ತಮ್ಮ ಕೊನೆಯ ಪತ್ರದಲ್ಲಿ ಆರೋಪಿಸಿದ್ದಾರೆ.

ತನ್ನ ಆತ್ಮಹತ್ಯೆಗೆ ಕಾರಣವಾಗಿರುವ ಶರಣ ಗೌಡ ಅವರಿಗೆ ಶಿಕ್ಷೆ ಕೊಡಿಸಬೇಕು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್‌ರಿಗೆ ಈ ವಿಷಯ ತಿಳಿಸಿ ಎಂದು ಅವರು ತಮ್ಮ ಅಂತಿಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಆತ್ಮಹತ್ಯೆ ಘಟನೆ ನಡೆದಿದ್ದು ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು