ಜಗದೀಶ ಶೆಟ್ಟರ ಅವರ ಮೃದು ಹಿಂದುತ್ವ ಧೋರಣೆಗಿಂತ ಹೆಚ್ಚಾಗಿ ಈಗ ಅವರ ನೆರವಿಗೆ ಬರುವುದು ಅವರ ಸಮಚಿತ್ತ, ಸಮಭಾವದ ಗುಣಗಳು. ಆರ್.ಎಸ್.ಎಸ್. ಹಿನ್ನೆಲೆ ಹೊಂದಿದ್ದರೂ ಆ ಸಂಘಟನೆಯ ‘ವಿಭಜಕ ನೀತಿಯ’ ಬದಲು ‘ಎಲ್ಲರನ್ನೂ ಒಳಗೊಳ್ಳುವ, ಒಟ್ಟಿಗೆ ಕರೆದೊಯ್ಯುವ’ ಶೆಟ್ಟರ ಗುಣವೇ ಅವರಿಗೆ ಈಗ ವರವಾಗಲಿದೆ – ಸುನಂದಾ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ತಾವು ಅನಂತಕುಮಾರ, ಯಡಿಯೂರಪ್ಪ, ಈಶ್ವರಪ್ಪ ಮುಂತಾದವರ ಜೊತೆ ಕಟ್ಟಿದ ಭಾರತೀಯ ಜನತಾ ಪಕ್ಷ ತೊರೆದು, ಇದೀಗ ಸೈದ್ಧಾಂತಿಕವಾಗಿ ಸಂಪೂರ್ಣ ಅಲ್ಲದಿದ್ದರೂ, ಬಹುತೇಕ ಭಿನ್ನವಾಗಿರುವ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ತಮ್ಮ ರಾಜಕೀಯ ಜೀವನದ ಆರಂಭದಿಂದ ಅಂದರೆ 1990ರ ದಶಕದಿಂದಲೂ ಕಾಂಗ್ರೆಸ್ ವಿರುದ್ಧ ಹೋರಾಡುತ್ತ, ತೀರಾ ಇತ್ತೀಚೆಗೂ ‘ಕಾಂಗ್ರೆಸ್ ಒಂದು ಮುಳುಗುವ ಹಡಗು’ ಎಂಬ ಬಿ.ಜೆ.ಪಿ.ಯ ಗಿಳಿಪಾಠವನ್ನೇ ಜಪಿಸುತ್ತ ಬಂದಿದ್ದ ಶೆಟ್ಟರು, ಬಿ.ಜೆ.ಪಿ. ಟಿಕೆಟ್ ನೀಡದ್ದರಿಂದ ಬೇಸತ್ತು ಕೇಸರಿ ಪಾಳಯವನ್ನು ತೊರೆದಿದ್ದಾರೆ.
ಶೆಟ್ಟರು ಹುಬ್ಬಳ್ಳಿಯ ಈದಗಾ ಮೈದಾನದ ಧ್ವಜಾರೋಹಣ ವಿವಾದ ದಲ್ಲಿ ಲಾಠಿ ಏಟುಗಳನ್ನು ತಿಂದು ಬಂದವರು. ಬಿಜೆಪಿಯ ಎಲ್ಲ ನಾಯಕರಂತೆ ಉತ್ತರ ಕರ್ನಾಟಕದ ಹಲವು ಹೋರಾಟಗಳಲ್ಲಿ ಪಾಲ್ಗೊಂಡವರು. ಇಂಥ ಶೆಟ್ಟರು ಕಾಂಗ್ರೆಸ್ ಪ್ರತಿಪಾದಿಸುವ ಸಿದ್ಧಾಂತಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದೇ ಈಗ ಬಿ.ಜೆ.ಪಿ.-ಕಾಂಗ್ರೆಸ್ ಕಾರ್ಯಕರ್ತರೂ ಸೇರಿದಂತೆ ಎಲ್ಲ ರಾಜಕೀಯ ಜಿಜ್ಞಾಸುಗಳಲ್ಲಿ ನಡೆಯುತ್ತಿರುವ ಚರ್ಚೆ.
ಶೆಟ್ಟರು ತಮ್ಮ ತಂದೆಯವರ ಕಾಲದಿಂದಲೂ ಜನಸಂಘ, ಆರ್. ಎಸ್. ಎಸ್. ಹಿನ್ನೆಲೆಯಿಂದ ಬಂದವರಾದರೂ, ಮೃದು ಹಿಂದುತ್ವವಾದಿಗಳಲ್ಲಿ ಗುರುತಿಸಿಕೊಂಡವರು. ಕೆ.ಎಸ್. ಈಶ್ವರಪ್ಪ, ಪ್ರಲ್ಹಾದ್ ಜೋಶಿ, ನಳಿನ್ ಕುಮಾರ್ ಕಟೀಲರಂತೆ ಒಮ್ಮೆಯೂ ಅಲ್ಪಸಂಖ್ಯಾತರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದವರಲ್ಲ. ಆರ್.ಎಸ್.ಎಸ್., ಅಲ್ಪಸಂಖ್ಯಾತರ ಬಗ್ಗೆ ಹೊಂದಿರುವ ‘ಪರಕೀಯತೆಯ’ ನಿಲುವು ಶೆಟ್ಟರಲ್ಲಿ ಯಾವತ್ತೂ ಸುಳಿದಿಲ್ಲ. ತಾವು ಮುಖ್ಯಮಂತ್ರಿ ಆಗಿದ್ದಾಗ ಇತಿಹಾಸಜ್ಞ ಪ್ರೊ ಬಿ ಶೇಕ್ ಅಲಿ ಅವರಿಂದ ‘ಟಿಪು ಸುಲ್ತಾನ್ ಎ ಕ್ರುಸೇಡರ್ ಫಾರ್ ಚೇಂಜ್’ ಎಂಬ ವಿಶೇಷ ಕೃತಿಯನ್ನು ಕರ್ನಾಟಕ ಗೆಜೆಟಿಯರ್ ಇಲಾಖೆಯಿಂದ ಪ್ರಕಟಿಸಿದವರು. ಆ ಪುಸ್ತಕಕ್ಕೆ ಶೆಟ್ಟರು ಮುಖ್ಯಮಂತ್ರಿಯಾಗಿ ಬರೆದ ಮುನ್ನುಡಿಯ ಸಾರಾಂಶ ಹೀಗಿದೆ: “1782ರಿಂದ 1799ರ ಅವಧಿಯೂ ಸೇರಿದಂತೆ ಕರ್ನಾಟಕದ ಆಧುನಿಕ ಇತಿಹಾಸ, ಮೈಸೂರಿನ ಹುಲಿ ಎಂದೇ ಗುರುತಿಸಲ್ಪಟ್ಟ ಟಿಪು ಸುಲ್ತಾನನ ಪಾತ್ರದಿಂದಾಗಿ ವಿಶಿಷ್ಟವಾಗಿದೆ. ಆತನ ರಾಷ್ಟ್ರ-ರಾಜ್ಯದ ಪರಿಕಲ್ಪನೆ, ರಾಜ್ಯ ಉದ್ಯಮಶೀಲತೆಯ ಪ್ರಬುದ್ಧತೆಯ ಚಿಂತನೆ, ಆತನ ಆಧುನಿಕ ಸೈನಿಕ ಕೌಶಲ್ಯಗಳು, ಸುಧಾರಣೆಯ ಬಗ್ಗೆ ಆತನಲ್ಲಿದ್ದ ಅಮಿತೋತ್ಸಾಹಗಳು ಆತನನ್ನು ತನ್ನ ಕಾಲಮಾನಕ್ಕಿಂತಲೂ ಮುಂದಾಗಿ ಯೋಚಿಸುವ ದೂರದೃಷ್ಟಿಯ ನಾಯಕನನ್ನಾಗಿ ರೂಪಿಸಿದ್ದವು”.

ನಂತರ 2018ರಲ್ಲಿ ಟಿಪು ಜಯಂತಿ ಒಂದು ವಿವಾದವಾದ ಸಂದರ್ಭದಲ್ಲಿ ಶೆಟ್ಟರು ಬರೆದಿದ್ದ ಮುನ್ನುಡಿ ಮುನ್ನೆಲೆಗೆ ಬಂದು ಮಾಧ್ಯಮದಲ್ಲಿ ಸದ್ದು ಮಾಡಿತ್ತು. ಆಗ ಇದೇ ಶೆಟ್ಟರು, “ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನೂರಾರು ಕಡತಗಳನ್ನು ವಿಲೇವಾರಿ ಮಾಡಿರುತ್ತೇನೆ; ಹತ್ತಾರು ಸರಕಾರಿ ಪ್ರಕಟಣೆಗಳಿಗೆ ಹುದ್ದೆಯ ಬಲದಿಂದ ಮುನ್ನುಡಿ ಬರೆದಿರಬಹುದು. ಆಗ ಟಿಪು ಜಯಂತಿ ಸರಕಾರಿ ಆಚರಣೆ ಆಗಿರಲಿಲ್ಲ. ಈಗ ಅದನ್ನು ಸಿದ್ದರಾಮಯ್ಯನವರು ಸರಕಾರಿ ಆಚರಣೆ ಮಾಡಿ ವಿವಾದ ಸೃಷ್ಟಿಸಿದ್ದಾರೆ” ಎಂದಿದ್ದರು. ಬಿಜೆಪಿಗನಾಗಿ ಅವರ ಸ್ಪಷ್ಟೀಕರಣ ನಿರೀಕ್ಷಿತವೇ ಆಗಿತ್ತು.
ಆದರೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಶೆಟ್ಟರ ಮನೆ ‘ಪ್ರಕಲ್ಪ’, ಬಿಜೆಪಿಯ ಶಕ್ತಿಕೇಂದ್ರದಂತಿದ್ದರೂ, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡರು, ಜನಸಾಮಾನ್ಯರು ಬರುತ್ತಿದ್ದರು, ಇಂದಿಗೂ ಬರುತ್ತಾರೆ ಎಂಬುದು ದಿಟ. ಅವರು ಯಾವತ್ತೂ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಜಾತಿ-ಭೇದ ತೋರಿದವರಲ್ಲ. ಬಸನಗೌಡ ಪಾಟೀಲ್ ಯತ್ನಾಳರಂತೆ, “ಮುಸ್ಲಿಮರು ಯಾರು ನನ್ನ ಕಡೆ ಬರಬ್ಯಾಡ್ರಿ; ನನಗ ವೋಟ್ ಹಾಕೋದೂ ಬೇಕಾಗಿಲ್ಲ” ಎಂದವರಲ್ಲ, ನಡೆ-ನುಡಿಯಲ್ಲೂ ಹಾಗೆ ತೋರಿಸಿದವರಲ್ಲ. ಅಂತೆಯೇ ಏಪ್ರಿಲ್ 12ರಂದು ಹುಬ್ಬಳ್ಳಿಯಲ್ಲಿ ಅವರಿಗೆ ಬಿ.ಜೆ.ಪಿ. ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಬಾಂಧವರೂ ಗಣನೀಯ ಸಂಖ್ಯೆಯಲ್ಲಿ ಸೇರಿದ್ದರು!
ಇದನ್ನೂ ಓದಿ–https://peepalmedia.com/the-bjp-government-has-done-a-big-fraud-to-lingayats-and-okkaligas/http://ಕರ್ನಾಟಕದ ಬಿಜೆಪಿ ಸರಕಾರವು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮಾಡಿದ ಮಹಾ ಮೋಸ – ಶ್ರೀನಿವಾಸ ಕಾರ್ಕಳ
ಒಮ್ಮೆ ಪ್ರಮುಖ ದಿನಪತ್ರಿಕೆಯೊಂದು, ಶೆಟ್ಟರು ದೀಪಾವಳಿಯ ದಿನ ಯಾವ ರೀತಿ ಪೂಜೆ ಮಾಡುತ್ತಾರೆ ಎಂಬುದರ ಬಗ್ಗೆ ಒಂದು ಫೀಚರ್ ಸ್ಟೋರಿ ಮಾಡಲು ನಿರ್ಧರಿಸಿತು. ಆ ಪತ್ರಿಕೆಯ ವರದಿಗಾರ ಶೆಟ್ಟರಿಗೆ ಕರೆ ಮಾಡಿ, ತಾವು ದೀಪಾವಳಿ ಪೂಜೆ ಮಾಡುವ ಫೋಟೋ ಬೇಕೆಂದು ಕರೆ ಮಾಡಿದ. ಆಗ ಶೆಟ್ಟರು, “ನಾನು ಸ್ನಾನ ಮಾಡಿದ ನಂತರ ದೇವರಿಗೆ ಕೈ ಮುಗಿದು, ಒಂದು ನಿಮಿಷದಲ್ಲಿ ಪೂಜೆ ಮುಗಿಸುತ್ತೇನೆ. ನೀವು ಯಡಿಯೂರಪ್ಪ-ಈಶ್ವರಪ್ಪ ಅವರಂತೆ ಶಲ್ಯ-ಪಂಚೆ-ರುದ್ರಾಕ್ಷಿ, ಯಜ್ಞ, ಹೋಮ-ಹವನ ಬಯಸಿದರೆ ಅದೆಲ್ಲ ನನ್ನಲ್ಲಿ ಸಿಗಲ್ಲ. ಬೇಕಾದರೆ ಬಂದು ನೋಡಿ. ನಾನು ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವದ ಅನುಯಾಯಿ” ಅಂತ ಹೇಳಿದರು. ನಂತರ ಆ ಪತ್ರಿಕೆ ಜೋಶಿ ಅವರು ಪೂಜೆ ಮಾಡುವ ಫೋಟೋ ಪ್ರಕಟಿಸಿತು.
ಒಂದು ರೀತಿಯಲ್ಲಿ ಶೆಟ್ಟರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತೆ ‘ರಾಜಧರ್ಮ’ ಪಾಲಿಸುವವರು. ನೇರವಾಗಿ ಆದರೆ ಅಷ್ಟೇ ಮೃದುವಾಗಿ ಮಾತನಾಡಿ ತಮ್ಮ ಕೆಲಸ ಮುಗಿಸುವವರು ಅಥವಾ ಇತರರ ಕೆಲಸ ಮಾಡಿಕೊಡುವವರು. ಶೆಟ್ಟರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಮ್ಮೆ ಗಜೇಂದ್ರಗಡಕ್ಕೆ ಭೇಟಿ ನೀಡಿದ್ದರು. ರೋಣದ ಶಾಸಕ ಕಳಕಪ್ಪ ಬಂಡಿಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಅನ್ನದಾನೇಶ್ವರ ಐ.ಟಿ.ಐ. ಕಾಲೇಜಿನ ಸಿಬ್ಬಂದಿ, ತಮ್ಮ ಕಾಲೇಜನ್ನು ಅನುದಾನಕ್ಕೊಳಪಡಿಸುವಂತೆ ಒತ್ತಾಯಿಸಿ ಮನವಿ ನೀಡಲು ಬಂದಿದ್ದರು. ಆಗ ಬಂಡಿಯವರು, “ನೀವೆಲ್ಲ ಕಾಂಗ್ರೆಸ್ ಗೆ ವೋಟು ಹಾಕುವವರು; ನಮ್ಮನ್ನು ಯಾಕೆ ಕೇಳಲು ಬಂದಿದ್ದೀರಿ, ನಡೀರಿ…” ಅಂತ ಮುಖ್ಯಮಂತ್ರಿ ಭೇಟಿಗೆ ಅವಕಾಶ ಮಾಡಿಕೊಡಲಿಲ್ಲ. ಇದು ಅವರ ಮನೆಯ ಒಳಗೆ ಇದ್ದ ಶೆಟ್ಟರಿಗೆ ಗೊತ್ತಾಯಿತು. ತಾವೇ ಖುದ್ದಾಗಿ ಹೊರಗೆ ಬಂದು, “ನೋಡ್ರಿ, ಬಿ.ಜೆ.ಪಿ., ಕಾಂಗ್ರೆಸ್, ಜೆ.ಡಿ.ಎಸ್. ಅಂತ ಪಕ್ಷ ರಾಜಕಾರಣ ಎಲೆಕ್ಷನ್ ಟೈಮ್ನಲ್ಲಿ ಅಷ್ಟೇ. ನಾವು ಒಮ್ಮೆ ಆರಿಸಿ ಬಂದ ನಂತರ ಎಲ್ಲ ಮತದಾರರನ್ನು ಸಮನಾಗಿ ಕಾಣಬೇಕು” ಅಂತ ಬಂಡಿಯವರಿಗೆ ಬುದ್ಧಿ ಹೇಳಿ, ಆ ಕಾಲೇಜು ಸಿಬ್ಬಂದಿಯ ಮನವಿ ಸ್ವೀಕರಿಸಿ, ಅವರನ್ನು ಸಮಾಧಾನ ಮಾಡಿ ಕಳಿಸಿದ್ದರು.
ಇಂಥ ಶೆಟ್ಟರು ಈಗ ಕಾಂಗ್ರೆಸ್ ಸೇರಿರುವುದು ತಮ್ಮ ಅನುಕೂಲತೆಗೇ ಇರಬಹುದು. ಆದರೆ ಅವರ ಮೃದು ಹಿಂದುತ್ವ ಧೋರಣೆಗಿಂತ ಹೆಚ್ಚಾಗಿ ಈಗ ಅವರ ನೆರವಿಗೆ ಬರುವುದು ಅವರ ಸಮಚಿತ್ತ, ಸಮಭಾವದ ಗುಣಗಳು. ಆರ್.ಎಸ್.ಎಸ್. ಹಿನ್ನೆಲೆ ಹೊಂದಿದ್ದರೂ ಆ ಸಂಘಟನೆಯ ‘ವಿಭಜಕ ನೀತಿಯ’ ಬದಲು ‘ಎಲ್ಲರನ್ನೂ ಒಳಗೊಳ್ಳುವ, ಒಟ್ಟಿಗೆ ಕರೆದೊಯ್ಯುವ’ ಶೆಟ್ಟರ ಗುಣವೇ ಅವರಿಗೆ ಈಗ ವರವಾಗಲಿದೆ.
ಸುನಂದಾ
ಹವ್ಯಾಸಿ ಲೇಖಕರು
ಇದನ್ನೂ ಓದಿ–https://peepalmedia.com/shameful-politics/http://ನಾಚಿಕೆಗೆಟ್ಟ ರಾಜಕಾರಣ