ಇಸ್ರೇಲ್ ಇನ್ನು ಮುಂದೆ ದಾಳಿ ಮಾಡದು: ಟ್ರಂಪ್ ಹೇಳಿಕೆ

ಇರಾನ್‌ನ ಅತ್ಯಂತ ಮೌಲ್ಯಯುತವಾದ ‘ಸೌತ್ ಪಾರ್ಸ್’ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. “ನಿರಪರಾಧಿ ಖತಾರ್ ಮೇಲೆ ದಾಳಿ ಮಾಡಲು ಇರಾನ್ ನಿರ್ಧರಿಸದ ಹೊರತು, ಸೌತ್ ಪಾರ್ಸ್ ಗ್ಯಾಸ್ ಕ್ಷೇತ್ರದ ಮೇಲೆ ಇಸ್ರೇಲ್ ದಾಳಿ ನಡೆಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಆಫ್‌ಶೋರ್ ಎಲ್‌ಎನ್‌ಜಿ ಕ್ಷೇತ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಖತಾರ್‌ನ ಅತಿದೊಡ್ಡ ಗ್ಯಾಸ್ ಕ್ಷೇತ್ರ ಹಾಗೂ ಪರ್ಷಿಯನ್ ಗಲ್ಫ್‌ನ ಇಂಧನ ನೆಲೆಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಖತಾರ್ ಮೇಲೆ ಇರಾನ್ ದಾಳಿ ಮಾಡಿದರೆ, ಇಸ್ರೇಲ್‌ನ ಸಹಾಯ ಅಥವಾ ಅನುಮತಿ ಪಡೆಯದೆಯೇ ನಾವು ಸೌತ್ ಪಾರ್ಸ್ ಕ್ಷೇತ್ರವನ್ನು ಧ್ವಂಸ ಮಾಡುತ್ತೇವೆ ಮತ್ತು ಇರಾನ್ ಈ ಹಿಂದೆ ಎಂದೂ ನೋಡಿರದ ರೀತಿಯಲ್ಲಿ ನಮ್ಮ ಶಕ್ತಿ ಹಾಗೂ ಬಲವನ್ನು ಪ್ರದರ್ಶಿಸುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. ಇಸ್ರೇಲ್ ಈ ದಾಳಿಯನ್ನು ಆಕ್ರೋಶದಿಂದ ನಡೆಸಿದೆ ಮತ್ತು ಹಿಂಸಾತ್ಮಕವಾಗಿ ವರ್ತಿಸಿದೆ, ಆದರೆ ಈ ದಾಳಿಯ ಬಗ್ಗೆ ತಮಗೆ ಮೊದಲೇ ಮಾಹಿತಿ ಇರಲಿಲ್ಲ ಎಂದು ಅಮೆರಿಕದ ಕಮಾಂಡರ್-ಇನ್-ಚೀಫ್ ಹೇಳಿದ್ದಾರೆ. ಖತಾರ್‌ಗೂ ಕೂಡ ಇಂತಹ ದಾಳಿ ನಡೆಯುವ ಬಗ್ಗೆ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ವಾಸ್ತವವನ್ನು ಅರಿಯದೆ ಇರಾನ್ ಖತಾರ್‌ನ ಎಲ್‌ಎನ್‌ಜಿ ಗ್ಯಾಸ್ ಕ್ಷೇತ್ರದ ಒಂದು ಭಾಗದ ಮೇಲೆ ದಾಳಿ ಮಾಡಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.

ಸೌತ್ ಪಾರ್ಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಅಮೆರಿಕದ ಅಧ್ಯಕ್ಷರನ್ನು ರಕ್ಷಣಾತ್ಮಕ ಸ್ಥಿತಿಗೆ (Defense) ತಳ್ಳಿದೆ. ದಾಳಿಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಅವರು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಿರುವ ಈ ದಾಳಿಯಿಂದಾಗಿ ಇಂಧನ ಸರಬರಾಜಿಗೆ ತೀವ್ರ ಅಡೆತಡೆ ಉಂಟಾಗಿದ್ದು, ತೈಲ, ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರ ಕೈಗೆಟುಕದಂತೆ ಏರಿಕೆಯಾಗುವ ಅಪಾಯವಿದೆ.

ಸೌತ್ ಪಾರ್ಸ್ ಕ್ಷೇತ್ರವು ಒಂದು ಕಡೆ ಇರಾನ್ ಮತ್ತು ಇನ್ನೊಂದು ಕಡೆ ಖತಾರ್ ದೇಶಗಳ ನಡುವೆ ಹಂಚಿಕೆಯಾಗಿದೆ. ಇರಾನ್‌ನ ಬುಶೆಹರ್ ಪ್ರಾಂತ್ಯದಲ್ಲಿರುವ ಈ ಕ್ಷೇತ್ರದಲ್ಲಿ ಅಪಾರ ಗ್ಯಾಸ್ ಸಂಗ್ರಹವಿದೆ. ಇರಾನ್‌ನ ನೈಸರ್ಗಿಕ ಅನಿಲದ ಅಗತ್ಯದ ಶೇ. 70 ರಷ್ಟನ್ನು ಈ ಕ್ಷೇತ್ರವೇ ಪೂರೈಸುತ್ತದೆ. ಅಷ್ಟೇ ಅಲ್ಲದೆ, ಜಾಗತಿಕ ಎಲ್‌ಎನ್‌ಜಿ (LNG) ಬೇಡಿಕೆಯ ಶೇ. 20 ರಷ್ಟನ್ನು ಇದು ಒದಗಿಸುತ್ತದೆ. ಈ ಕ್ಷೇತ್ರದಲ್ಲಿ 1,800 ಟ್ರಿಲಿಯನ್ ಕ್ಯೂಬಿಕ್ ಅಡಿ ಗ್ಯಾಸ್ ಸಂಗ್ರಹವಿದ್ದು, ಇದು ಜಗತ್ತಿನ ಒಟ್ಟು ಗ್ಯಾಸ್ ಸಂಗ್ರಹದ ಶೇ. 8 ರಷ್ಟಾಗಿದೆ. ಖತಾರ್‌ನಿಂದ ಯುರೋಪ್ ಮತ್ತು ಏಷ್ಯಾ ದೇಶಗಳಿಗೆ ನಡೆಯುವ ಎಲ್‌ಎನ್‌ಜಿ ರಫ್ತಿನ ಮೇಲೆಯೂ ಈ ದಾಳಿ ದೊಡ್ಡ ಪರಿಣಾಮ ಬೀರುತ್ತದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಎಲ್‌ಎನ್‌ಜಿ ಪೂರೈಸುವಲ್ಲಿ ಸೌತ್ ಪಾರ್ಸ್ ಕ್ಷೇತ್ರವು ಬೆನ್ನೆಲುಬಾಗಿದೆ. ಇಸ್ರೇಲ್ ದಾಳಿಯ ಕಾರಣದಿಂದಾಗಿ ತೈಲ ಮತ್ತು ಅನಿಲ ಬೆಲೆಗಳು ತಕ್ಷಣವೇ ಏರಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

Related Articles

ಇತ್ತೀಚಿನ ಸುದ್ದಿಗಳು