Monday, September 15, 2025

ಸತ್ಯ | ನ್ಯಾಯ |ಧರ್ಮ

ಮತಗಳ್ಳತನದಿಂದ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದೆ, ಅದಕ್ಕೆ ಅವಕಾಶ ನೀಡಬೇಡಿ-ರಾಜ್ಯದ ಜನರಿಗೆ ಸಿಎಂ ಕರೆ

ಬೆಂಗಳೂರು, ಸೆಪ್ಟೆಂಬರ್ 15: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ದೇ ನಿರ್ವಹಿಸಲೇಬೇಕು.ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಾತಿವ್ಯವಸ್ಥೆಯಿಂದ ಅಸಮಾನತೆ

ದೇಶದಲ್ಲಿ ವಿವಿಧ ಜಾತಿಧರ್ಮಗಳ ವ್ಯವಸ್ಥೆಯಿದೆ. ಬಹುಸಂಸ್ಕೃತಿಯುಳ್ಳ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತರಲಾಗಿದೆ. ಜಾತಿವ್ಯವಸ್ಥೆಯಿಂದಾಗಿ ಅಸಮಾನತೆ ಉಂಟಾಗಿದೆ. ಆದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ಜಾರಿಗೊಂಡ ಸಂಧರ್ಭದಲ್ಲಿ- ವೈರುಧ್ಯತೆಯಿರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಅಸಮಾನತೆಗಳಿವೆ. ದೇಶದಲ್ಲಿ ಜನರಿಗೆ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಯಶಸ್ವಿಯಾಗುತ್ತದೆ. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಬಸವಣ್ಣನವರು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಜೀವತುಂಬಿದ್ದರು. ಅತ್ಯಂತ ತಳಸಮುದಾಯದವರಾದ ಅಲ್ಲಮ ಪ್ರಭು ಅವರನ್ನು ಅನುಭವ ಮಂಟಪದ ಅಧ್ಯಕ್ಷರಾಗಿಸಿದ್ದರು. ಇದರಲ್ಲಿ ಮಹಿಳೆಯರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರೂ ಪ್ರಾತಿನಿಧ್ಯವನ್ನು ಹೊಂದಿದ್ದರು. ಎಲ್ಲಿ ಎಲ್ಲ ವರ್ಗದವರ ಅಭಿಪ್ರಾಯಕ್ಕೆ ಬೆಲೆ ದೊರಕುವುದೇ, ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ ಎಂದು ಹೇಳಬಹುದು ಎಂದರು.

ಮತಗಳ್ಳತನದಿಂದ ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದೆ

ಇಂದಿನ ಪ್ರಜಾಪ್ರಭುತ್ವ ದಿನಾಚರಣೆಯ ಘೋಷವಾಕ್ಯ ‘ನನ್ನ ಮತ ನನ್ನ ಹಕ್ಕು’. ಈ ಶಕ್ತಿಯನ್ನು ದುರ್ಬಲಗೊಳಿಸುವ ಹುನ್ನಾರ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿದೆ. ಶ್ರೀಮಂತರಿಗೆ ಅಧಿಕಾರ ದೊರೆಯುವ ಕಾಲವೊಂದಿತ್ತು. ಆದರೆ ಈಗ ಶ್ರೀಮಂತ ಬಡವ ಬಲ್ಲಿದ ಎಂಬ ಬೇಧವಿಲ್ಲದೇ, ಎಲ್ಲರಿಗೂ ಒಂದೇ ಮತದ ಅಧಿಕಾರ ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ‘’ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ’ ಎಂದರು. ಆದರೆ ಇದರ ದುರುಪಯೋಗಪಡಿಸಿಕೊಂಡು, ಸಂವಿಧಾನವನ್ನು ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದ್ದು, ಇದನ್ನು ನಡೆಯದಂತೆ ನೋಡಿಕೊಳ್ಳಬೇಕಿದೆ. ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ದೇ ನಿರ್ವಹಿಸಲೇಬೇಕು.ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯವಾಗುತ್ತದೆ ಎಂದರು.

ಸಹಿಷ್ಣುತೆ ಹಾಗೂ ಸಹಬಾಳ್ವೆ ಅವಶ್ಯ

ನಮ್ಮ ಜಾತಿ ವ್ಯವಸ್ಥೆಗೆ ಚಲನೆಯಿಲ್ಲದೇ,ಸಮಾಜದಲ್ಲಿ ಆಳವಾಗಿ ಬೇರೂರಿದೆ.ಆರ್ಥಿಕ, ಸಾಮಾಜಿಕ ಸಮಾನತೆ ತರದೇ ಜಾತಿ ವ್ಯವಸ್ಥೇ ನಿರ್ಮೂಲಗೊಳಿಸಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗಮಾತ್ರ ಬದಲಾವಣೆ ಸಾಧ್ಯ. ಹಿಂದಿನಿಂದಿಲೂ ಮಹಿಳೆಯರು ಹಾಗೂ ಶೂದ್ರರು ಅಕ್ಷರ ಸಂಸ್ಕೃತಿ ಹಾಗೂ ಅವಕಾಶಗಳಿಂದ ವಂಚಿಕತರಾಗಿದ್ದ ಕಾರಣ, ಅಸಮಾನತೆ ತಲೆದೋರಿದೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಅಂಬೇಡ್ಕರ್ ಅವರು ಬೋಧಿಸಿದರು. ಸಮಾಜದಲ್ಲಿ ಬಹುಸಂಖ್ಯಾತರು ಎಚ್ಚರದಿಂದಿರಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ಎಲ್ಲಾ ಜಾತಿ, ಧರ್ಮವೂ ಸಮಾನ

ಅಧಿಕಾರವನ್ನು ಉಳಿಸಿಕೊಳ್ಳಲು ಮತಗಳ್ಳತನದ ಹಾದಿಯನ್ನು ಹಿಡಿದಿದ್ದಾರೆ. ಆದ್ದರಿಂದ ನನ್ನ ಮತ ನನ್ನ ಹಕ್ಕು ಎಂಬುದು ಇಂತಹ ಸನ್ನಿವೇಶದಲ್ಲಿ ಪ್ರಮುಖವಾಗಿದ್ದು, ಮತಗಳ ದುರುಪಯೋಗವಾಗಬಾರದು. ಮತಗಳ್ಳತನಕ್ಕೆ ಅವಕಾಶ ನೀಡಬೇಡಿ. ಪ್ರಜಾಪ್ರಭುತ್ವ ಉಳಿಸಿ, ಹಕ್ಕುಗಳನ್ನು ರಕ್ಷಿಸುವ ಪ್ರಮಾಣವನ್ನು ಸ್ವೀಕರಿಸಲಾಗಿದೆ. ಸಂವಿಧಾನ ನೀಡುವ ಹಕ್ಕು ಹಾಗೂ ಕರ್ತವ್ಯಗಳ ಪಾಲನೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಜಾತಿ, ಧರ್ಮವೂ ಸಮಾನವಾಗಿದೆ. ಇಂತಹ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸವನ್ನು ಮನುವಾದಿಗಳು ಪ್ರಯತ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನ ವಿರೋಧಿಗಳು ಇದ್ದಾರೆ. ಅಸಮಾನತೆ ನಿವಾರಣೆಯಾದರೆ ಶೋಷಣೆ ಸಾಧ್ಯವಿಲ್ಲ.

ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು

ಸಾಹಿತಿ ಬಾನು ಮುಷ್ತಾಕ್ ಅವರು ಅನ್ಯಧರ್ಮದವರೆಂದು , ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಎಲ್ಲರೂ ರೂಢೀಸಿಕೊಳ್ಳಬೇಕು. ಜಾತಿಧರ್ಮ, ವರ್ಗವ್ಯವಸ್ಥೆಯನ್ನು ಮೀರಿ, ಸಮಾನತೆ ನೆಲೆಸಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಪಟ್ಟಭದ್ರಹಿತಾಸಕ್ತಿಗಳು, ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು. ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಜನರನ್ನು ತಪ್ಪದಾರಿಗೆಳೆಯುವ ಪ್ರಯತ್ನಗಳು ಖಂಡನೀಯ. ಆರ್ಥಿಕ ಅಸಮಾನತೆ ನಿವಾರಣೆಗಾಗಿ ಗ್ಯಾರಂಟಿ ಯೋಜನೆಗಳ ಮೂಲಕ 98950 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಸಂವಿಧಾನ ಆಶಯಗಳ ಅರಿವು ಅಗತ್ಯ

ಸಂವಿಧಾನ ಆಶಯಗಳ ಅರಿವು ಎಲ್ಲರೂ ಹೊಂದಬೇಕೆಂಬ ದೃಷ್ಟಿಯಿಂದ ಸರ್ಕಾರ, ಎಲ್ಲ ಶಾಲೆಗಳಲ್ಲಿ ಸಂವಿಧಾನಪೀಠಿಕೆಯನ್ನು ಓದಲು ಕ್ರಮ ಕೈಗೊಳ್ಳಲಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಸಂವಿಧಾನದ ಬಗ್ಗೆ ಅರಿವಿಲ್ಲದೇ, ಅದರ ದುರುಪಯೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page