Thursday, June 13, 2024

ಸತ್ಯ | ನ್ಯಾಯ |ಧರ್ಮ

ಕಿ ರಂ ಅವರನ್ನು ಕಾವ್ಯವೆಂಬ ಗೊಂತಿಗೆ ಕಟ್ಟಿ ಹಾಕಿದ ಹಸುವಿನಂತೆ ನೋಡಬೇಡಿ…


ಕವಿ ರವೀಂದ್ರರು ಮತ್ತು ಜ್ಞಾನದಾಹಿ ಕಿರಂ ನಾಗರಾಜರ ಕುರಿತು ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗಳು ಸಾಹಿತ್ಯ, ಕಾವ್ಯಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಬಹುಪಾಲು ಜನರಲ್ಲಿ ಕಾವ್ಯದ ಹುಸಿ ಸಂಭ್ರಮವೊಂದು ತುಂಬಿ ತುಳುಕಾಡುತ್ತಿದೆ. ಈ ದೇಶಕ್ಕಿದು ಹೊಸದೇನೂ ಅಲ್ಲ. ಬೌದ್ಧರ ಜ್ಞಾನದಾಹವನ್ನು, ಗುಪ್ತರ ಕಾಲ ವರ್ಣನೆಯ ಕಾವ್ಯ ವೇಷದ ಮೋಸದ ಕಡೆಗೆ ತಿರುಗಿಸಿ, ಹದಿನಾರು- ಹದಿನೇಳು ನೂರು ವರ್ಷಗಳನ್ನು ರೋಮಾಂಚನದಲ್ಲಿ ಮುಳುಗಿಸಿತು. ವರಹಾಮಿಹಿರನಂಥ ವಿಜ್ಞಾನಿ ಗಣಿತವನ್ನು ಕಾವ್ಯಕ್ಷೀರದಲ್ಲಿ ಅದ್ದಿ ಮೈಮರೆಯುತ್ತಿದ್ದಾಗ ಬಗ್ದಾದಿನ ವಿಜ್ಞಾನಿಯೊಬ್ಬ ಖಗೋಳ ವಿಜ್ಞಾನದ ಕಡೆ ಗಮನ ಕೊಡುವಂತೆ ಸಲಹೆ ನೀಡಿದ್ದನಂತೆ.

ಕಾವ್ಯ ಸಂಭ್ರಮವನ್ನು ನಾನು ತಪ್ಪು ಎಂದೇನೂ ಹೇಳುತ್ತಿಲ್ಲ. ಅದು ಬದುಕಿನ ಉಳಿದ ಅಂಗಗಳಿಂದ ದೂರ ಸರಿದ ಬೋನ್ಸಾಯ್ ಗಿಡವಾಗಬಾರದು ಎಂಬುದಷ್ಟೆ ನನ್ನ ಕಾಳಜಿ. ಬದುಕು ಅಲಂಕಾರ, ಛಂದಸ್ಸುಗಳಲ್ಲಿ, ನೆಲೆ ತಪ್ಪಿದ ಹುಸಿ ವರ್ಣನೆಗಳಲ್ಲಿ ಮುಳುಗಿ ಹೋಗಬಾರದಲ್ಲವೆ?
ಇಲಿಯಡ್,ಒಡಿಸ್ಸಿಗಳಿಗಿಂತ ಎರಡು ಸಾವಿರ ವರ್ಷಗಳ ಮೊದಲೇ ಜ್ಞಾನಮೀಮಾಂಸೆಯ ಗುರುತುಗಳು ನಮ್ಮಲ್ಲಿ ದಾಖಲಾಗಿರಲಿಲ್ಲವೆ? ಯಾವುದನ್ನು ಸುವರ್ಣ ಯುಗವೆಂದು ಕರೆದೆವೋ ಅಲ್ಲಿಂದ ಕೇವಲ ವರ್ಣನಾ ಸಾಹಿತ್ಯ ಮೇಲುಗೈ ಪಡೆದು ಉಳಿದ ಎಲ್ಲವನ್ನು ತೊತ್ತಳ ತುಳಿದು ಹಾಕಲಿಲ್ಲವೆ? ಗ್ರೀಕೋ ರೋಮನ್ ಸಂಸ್ಕೃತಿಗೆ ಸಮಸಮವಾಗಿ ಬೆಳೆದ ಈ ಉಪ ಖಂಡವು ರಾಜರ ಆಸ್ತಾನಗಳಲ್ಲಿ ಕುಳಿತು ಲೋಲುಪಗೊಂಡಿತೇಕೆ?

13 ನೇ ಶತಮಾನದವರೆಗೆ ಬಗ್ದಾದು ಜ್ಞಾನದ ಶಿಖರವಾಗಿ ಮೆರೆಯಿತು. ಮಂಗೋಲರು ದಾಳಿ ಮಾಡಿ ಅಲ್ಲಿನ ಲಕ್ಷಾಂತರ ಗ್ರಂಥಗಳನ್ನು ಸುಟ್ಟು, ನೈಲ್ ನದಿಗೆ ಎಸೆದು ಹಾಳು ಮಾಡಿದ ಉದಾಹರಣೆಗಳಿವೆ. ನಮ್ಮಲ್ಲಿ ಜ್ಞಾನ ವೃಕ್ಷ ಫಲ ಬಿಡುವ ಹೊತ್ತಿಗೆ ಕಡಿದು ಹಾಕಲಾಯಿತು. ಕ್ರಿಸ್ಮಸ್ ಮರದ ಕೊಂಬೆಯನ್ನು ನೆಟ್ಟು ಮರವೆಂದು ಪೂಜಿಸುವ ದ್ರೋಹವಾದವನ್ನು ಬೆಳೆಸಲಾಯಿತು. ಈ ಮೂಲಕ ಕಾವ್ಯ ರೋಮಾಂಚನ ಆವರಿಸಿ ಮೈಮರೆಸಿತು.

ಬೋದಿಲೇರ್ ವೈನ್, ಕಾವ್ಯ, ಋಜುತ್ವ; ಈ ಮೂರರ ಪೈಕಿ ಯಾವುದನ್ನಾದರೂ ಕುಡಿದೇ ಇರುವಂತೆ ಹೇಳಿದ. ಕಿ ರಂ, ಟಾಗೂರರು ಇವು ಮೂರನ್ನೂ ಕುಡಿದು ಅದರಾಚೆಗಿನ ಜಗತ್ತಿನ ಜ್ಞಾನ ಸಮಸ್ತವನ್ನೂ ಹಿಡಿದು ತರುವ ಹಠ ತೊಟ್ಟವರಂತೆ ಒದ್ದಾಡಿದರು. ಬೋದಿಲೇರನ ನಾಡಿಗಿದ್ದ ಲಕ್ಷುರಿ ಈ ಇಬ್ಬರಿಗೂ ಇರಲಿಲ್ಲ. ಸಂಘರ್ಷ, ಅಜ್ಞಾನ, ತರತಮಗಳ, ಹಸಿವಿನ ಅಂಧಕಾರದಲ್ಲಿ ಮುಳುಗಿ ಹೋಗಿರುವ ನಾಡಿನಲ್ಲಿ ಕೂತು ರತ್ನಖಚಿತ ಕಿರೀಟಗಳ ಕುರಿತು ಹಾಡುವ, ಕ್ರೌಂಚ ಪಕ್ಷಿಯ ಆಕ್ರಂದನವನ್ನು ಸಂಗೀತ ಎಂದು ಹೇಳುವಷ್ಟು ಆತ್ಮದ್ರೋಹ ಈ ಇಬ್ಬರಲ್ಲೂ ಇರಲಿಲ್ಲ. ನಿಮ್ಮ ರಾಜಕೀಯ ತತ್ವದಲ್ಲಿ ಮೂಢ ನಂಬಿಕೆಗಳಿವೆ ಎಂದು ಗಾಂಧೀಜಿಯೊಂದಿಗೆ ಜಗಳಕ್ಕಿಳಿಯುವಷ್ಟು ಪೊಲಿಟಿಕಲ್ಲಾಗಿದ್ದರು ಟಾಗೂರರು. ‘ಅಮರ್ ಸೋನಾರ್ ಬಾಂಗ್ಲಾ’ ವರ್ಣನಾ ಕಾವ್ಯವಲ್ಲ, ಅದೊಂದು ತೀವ್ರ ರಾಜಕೀಯದ ಹಾಡು. ಟಾಗೂರರ ರಾಷ್ಟ್ರವಾದ ಕುರಿತ ಆಲೋಚನೆಗಳು ತತ್ವಶಾಸ್ತ್ರ, ರಾಜಕೀಯಶಾಸ್ತ್ರ, ವಿಜ್ಞಾನ, ಸಮಾಜ ವಿಜ್ಞಾನಗಳ ,ಇತಿಹಾಸಗಳ ಆಳವಾದ ಓದಿನಿಂದ ಎದ್ದು ಬಂದವಾಗಿದ್ದವು.

ಕಿ.ರಂ ಕೂಡ ಅಷ್ಟೆ, ಕಾವ್ಯವೇ ಜೀವನ ಸಮಸ್ತವಲ್ಲ ಎಂಬ ತಿಳುವಳಿಕೆ ಅವರಿಗೆ ಇತ್ತು. ಅನೇಕ ಸಾರಿ ಅವರ ತರಗತಿಗಳು ನನಗೆ ವಿಜ್ಞಾನದ, ತತ್ವಶಾಸ್ತ್ರದ, ಖಗೋಳಶಾಸ್ತ್ರದ, ಆಲ್ಕೆಮಿಯ, ರಾಜಕೀಯದ, ಇತಿಹಾಸದ, ವೈದ್ಯಕೀಯ ವಿಜ್ಞಾನದ ತರಗತಿಗಳು ಎನ್ನಿಸಿದ್ದಿದೆ. ಕಿ.ರಂ ಪಂಪನ ಕಾವ್ಯಗಳನ್ನು ಮುಂದಿಟ್ಟುಕೊಂಡು ಸಾಮ್ರಾಜ್ಯವಾದಿ ಸಿದ್ಧಾಂತಗಳನ್ನು ವಿವರಿಸುತ್ತಿದ್ದರು. ಅಲ್ಲಮ, ಬಸವಣ್ಣನ ಮೂಲಕ ಮಾರ್ಕ್ಸ್, ಹೆಗೆಲ್ಸ್, ಏಂಗೆಲ್ಸ್ ರನ್ನು ತೋರಿಸುತ್ತಿದ್ದರು. ಅವರ ಕಾವ್ಯ/ ಸಾಹಿತ್ಯ ಮೀಮಾಂಸೆಯ ತರಗತಿಗಳು ಅಲಂಕಾರ, ರಸ, ಛಂದಸ್ಸುಗಳ ತರಗತಿಗಳಾಗುತ್ತಲೇ ಇರಲಿಲ್ಲ. ಅವು ಜೀವನ ದರ್ಶನದ ತರಗತಿಗಳಾಗುತ್ತಿದ್ದವು. ಅವರ ಅಸಂಖ್ಯಾತ ಭಾಷಣಗಳೂ ಹೀಗೆ ಇರುತ್ತಿದ್ದವು.

ಕಿ. ರಂ ಗೆ ಕಾವ್ಯವು ಜೀವನ ದರ್ಶನವನ್ನು ಕಟ್ಟಿಕೊಡಲು ಬೇಕಿದ್ದ ನೆಪ ಅಷ್ಟೆ. ಅವರಿಗೆ ಬೇರೆಯದೇ ಲಘಿಮಾ ಕೌಶಲವಿತ್ತು. ಮನುಷ್ಯನಿಗೆ ಪ್ರತಿದಿನದ ಸೂರ್ಯನೂ ಹೊಸಬನೆಂಬಂತೆ ಕಂಡರೆ ಮಾತ್ರ ಆತ ಬದುಕಿದ್ದಾನೆ ಎಂದು ಅರ್ಥ. ಕಿ. ರಂ ಹಾಗೆ ಪ್ರತಿದಿನವೂ ಜೀವಿಸಲು ಒದ್ದಾಡುತ್ತಿದ್ದರು. ನಿನ್ನೆ ಹೇಳಿದ್ದನ್ನೇ ಇಂದು ಹೇಳುತ್ತಿರಲಿಲ್ಲ. ಸಾಧ್ಯವಾದಷ್ಟೂ ವಿಸ್ತರಿಸುತ್ತಿದ್ದರು. ಹಾಗಂತ ವಿಚಾರಗಳನ್ನು‌ ತಲೆ ಕೆಳಗು ಮಾಡಿ ನೋಡುತ್ತಿರಲಿಲ್ಲ. ಬುಡಮೇಲು ಮಾಡಬೇಕಾಗಿ ಬಂದರೆ ಹಿಂದೆ ಮುಂದೆ ನೋಡುತ್ತಿರಲಿಲ್ಲ.

ಅವರ ಮನೆಗೆ ಹೋದರೆ ಕುರಿಯ ಒರಟು ಕಪ್ಪು ಕಂಬಳಿ ಮೇಲೆ ಹತ್ತಾರು ಪುಸ್ತಕಗಳು ಪಿರಮಿಡ್ಡುಗಳಂತೆ ಮಲಗಿರುತ್ತಿದ್ದವು. ಹೊಗೆ ಸೇದಿ, ಖಾರವಾದದ್ದನ್ನು ತಿಂದು ಸೀನು ಬಂದರೆ ಅಲ್ಲೇ ಒರೆಸಿ ಮಾತಾಡುತ್ತಿದ್ದರು. ಇಂಥ ಗಳಿಗೆಗಳಲ್ಲಿ ಅವರು ಸಾಕ್ರೆಟೀಸನಂತೆ ಕಾಣುತ್ತಿದ್ದರು. ತಿಪಟೂರಿನ ಐ. ಬಿ ಮುಂದೆ ಕೊರೆವ ಚಳಿಗಾಲದ ಥಂಡಿಯಲ್ಲಿ ಕಾರಿನ ಬಾಗಿಲು ತೆರೆದುಕೊಂಡು ಮಲಗಿದ್ದಾಗ ಅಲ್ಲಿನ ಗೆಳೆಯರಿಗೆ ಸಾಕ್ರೆಟೀಸನೇ ಮಲಗಿದ್ದಾನೆ ಅನ್ನಿಸಿತ್ತಂತೆ.

ಧೂಳಿಡಿದ ಕಂಬಳಿಯ ಮೇಲೆ ಅಂಡು ಮೇಲೆ ಮಾಡಿ ಮಲಗಿರುತ್ತಿದ್ದ ಪುಸ್ತಕಗಳಲ್ಲಿ ಒಂದೋ ಎರಡೋ ಮಾತ್ರ ಸಾಹಿತ್ಯಕ್ಕೆ ಸಂಬಂಧಿಸಿದ್ದವಾಗಿರುತ್ತಿದ್ದವು. ಉಳಿದವೆಲ್ಲ ಬೇರೆ ಬೇರೆ ಶಿಸ್ತುಗಳಿಗೆ ಸಂಬಂಧಿಸಿದವು. ಈ ವಿಚಾರದಲ್ಲಿ ಡಿ. ಆರ್ ಗಿಂಥ ಮುಂದಿರುತ್ತಿದ್ದರು. ಇಬ್ಬರೂ ಚರ್ಚೆಗೆ ಕೂತರೆ ಆಳ ಅಳೆಯುವುದು ಕಷ್ಟವಾಗುತ್ತಿತ್ತು. ಆದರೆ ಯಾಕೋ ಕಿ.ರಂ ಎಂಬ ಸಮುದ್ರವೇ ಹೆಚ್ಚು ನೀಲಿಯಾಗಿ ಕಾಣಿಸುತ್ತಿತ್ತು.

ಮೇಡಂ ವಿಜಯಲಕ್ಷ್ಮಿಯವರಿಗೆ ಕ್ಯಾನ್ಸರ್ ಬಂದಾಗ; ಕ್ಯಾನ್ಸರಿನ ಕುಲ, ಗೋತ್ರ , ಸೃಷ್ಟಿ ,ಲಯಗಳನ್ನು ಬುಡ ಸಮೇತ ಓದಿಕೊಂಡು ವೈದ್ಯರುಗಳಿಗೇ ಗಾಬರಿ ಹುಟ್ಟಿಸುವಷ್ಟು ಅಪ್ಡೇಟ್ ಆಗಿದ್ದರು. ಇದು ಕಿ.ರಂ. ಕಾರಂತರು, ತೇಜಸ್ವಿಯವರಿಗೆ ಈ ಥರದ ಹುಡುಕಾಟವಿತ್ತು. ಹಳಬರು ಬಹುಶಿಸ್ತುಗಳನ್ನು ಬಹಳ ಶ್ರದ್ಧೆಯಿಂದ ಕಲಿಯುತ್ತಿದ್ದರು. ನಮಗೇನಾಗಿದೆ? ನಾವು ಏನನ್ನೂ ಕಲಿಯುತ್ತಿಲ್ಲ. ಜ್ಞಾನ ಸೃಜನೆಯಲ್ಲಿ ಪಶ್ಚಿಮ ನಮಗಿಂಥ ನೂರು ವರ್ಷ ಮುಂದಿದೆ. ನಾವು ಅದನ್ನು ಕನ್ನಡಕ್ಕೆ ತಂದು ಭಾಷೆಯನ್ನೂ ಉಳಿಸಿಕೊಳ್ಳಲಾಗದಷ್ಟು ಬಂಜರಾಗಿದ್ದೇವೆ. ಹೊಸದನ್ನು ಸೃಜಿಸಲಾಗದಷ್ಟೂ ಬಂಜರಾಗಿದ್ದೇವೆ.

ನಾಡು ಧಗೆಯೊಳಗೆ ಬಿದ್ದಿದೆ. ಮತ್ತೆ ನಾವು ಕಾವ್ಯ ಸಂಭ್ರಮದೊಳಗೆ ನರಳುತ್ತಿದ್ದೇವೆ. ಉಳಿದ ಜ್ಞಾನಶಿಸ್ತುಗಳಲ್ಲಿ ಏನಾಗುತ್ತಿದೆ ಎಂದು ಕಣ್ಣೆತ್ತಿಯೂ ನೋಡದೆ ಮಕ್ಕಳ ಮನಸ್ಸನ್ನು ಕಟ್ಟುವುದು ಹೇಗೆ?
ನಾಡಿಗೆ ಬಂದ ಕಾಯಿಲೆಗೆ ಕಾವ್ಯವೇ ಮದ್ದು‌ ಅರೆಯುವುದಾದರೆ ನನಗೇನೂ ತಕರಾರಿಲ್ಲ. ಕಾವ್ಯ ಆ ರೀತಿಯ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆಯೆ?
ನೆರೂಡ, ಬ್ರೆಕ್ಟ್ , ಬಸವಣ್ಣ, ವ್ಯಾಸ ಮುಂತಾದವರು ದರ್ಶನಗಳನ್ನು ಹೇಳಲು ಕಾವ್ಯವನ್ನು ಕೆಟಲಿಸ್ಟ್ ಆಗಿ ಬಳಸಿಕೊಂಡರು. ಕಾವ್ಯಕ್ಕೆ ಪ್ರೇಮಮಯಿ(ಕಾಂತಾ ಸಂಹಿತೆ) ಗುಣವಿದೆ ಎಂಬುದು ಇದಕ್ಕೆ ಕಾರಣ.
ಕಿ ರಂ ಕಾವ್ಯದ ಮರೆಗೆ ಹೋಗುತ್ತಿದ್ದುದು, ಅದು ಮನುಷ್ಯನ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕೆ. ಅವರು ರೂಪಕಗಳನ್ನು ರಾಜಕೀಯವಾಗಿ ಗ್ರಹಿಸುತ್ತಿದ್ದರೇ ಹೊರತು ಹೆಂಡದೊಡನೆ ನೆಂಜಿಕೊಳ್ಳುವ ಉಪ್ಪಿನ ಕಾಯಿಯಂತಲ್ಲ.

ಅರಾಜಕತೆಯನ್ನು ದೊಡ್ಡ ರಾಜಕೀಯ ಸಿದ್ಧಾಂತ ಎಂದು ಹೇಳಿಕೊಟ್ಟ ಗುರು ಅವರೇ. ಹಾಗಂತ ಎಲ್ಲ ವಿಚಾರಗಳಲ್ಲೂ ಅವರು ದಂಗೆಕೋರರಾಗಿರಲಿಲ್ಲ. ಒಮ್ಮೆ ಗಾಂಧೀಜಿ ಕುರಿತು ಮೈದುಂಬಿ ಮಾತನಾಡುತ್ತಿದ್ದರು. ಕೂಡಲೇ ನಾನು ಹರಿದ ಅಂಗಿಗೆ ಎಷ್ಟು ಸಾರಿ ತೇಪೆ ಹಾಕಲು ಸಾಧ್ಯ? ಪದೇ ಪದೇ ಮುರಿದು ಹೋಗುವ ಸೈಕಲ್ಲನ್ನು ಎಷ್ಟು ಸಾರಿ ರಿಪೇರಿ ಮಾಡಲು ಸಾಧ್ಯ? ಸುಧಾರಣವಾದದ ಮಿತಿ ಇದಲ್ಲವೆ? ಗಾಂಧೀವಾದದ ಮಿತಿಯೂ ಇದೇ ಅಲ್ಲವೇ ಎಂದೆ. ತಕ್ಷಣ ಗಳಗಳ ಕಣ್ಣೀರು ಸುರಿಸುತ್ತ ಎದ್ದು ನಿಂತು ಕೈ ಮುಗಿಯತೊಡಗಿದರು, ನಡುಗಿ ಹೋದೆ. ಆಮೇಲೆ ಅದೆಷ್ಟೋ ದಿನ ನಾನು ಕಂಡಾಗಲೆಲ್ಲ ಕರೆದು ಗಾಂಧೀವಾದದ ಭಿನ್ನ ಮುಖಗಳ ಕುರಿತು ಹೇಳುತ್ತಿದ್ದರು. ಗಾಂಧೀಜಿಯವರ ಗ್ರಾಮೀಣ ಆರ್ಥಿಕತೆ ಸುಧಾರಣಾವಾದಿಯಾದುದಲ್ಲ ಎಂಬುದು ನಿಧಾನಕ್ಕೆ ಅರ್ಥವಾಯಿತು. ಅವರ ಇನ್ ಕ್ಲೂಸಿವ್ ಪಾಲಿಟಿಕ್ಸ್ ಯಾವ ಕಾಲಕ್ಕೂ ಸಲ್ಲುವ ತತ್ವ ಎಂಬುದೂ ಅರ್ಥವಾಯಿತು. ಗೊತ್ತಿಲ್ಲದಂತೆ ಕಿ.ರಂ ದೃಷ್ಟಿಕೋನವನ್ನು ಬದಲಾಯಿಸಿದ್ದರು.
ಇಂಥ ಅನೇಕ ಸಂಗತಿಗಳು ನಮ್ಮೊಂದಿಗಿವೆ. ಬರೆವ ಹೊತ್ತು ಬಂದಾಗ ಬರೆಯುತ್ತೇನೆ.

ಕಿ ರಂ ಅವರನ್ನು ಕಾವ್ಯವೆಂಬ ಗೊಂತಿಗೆ ಕಟ್ಟಿ ಹಾಕಿದ ಹಸುವಿನಂತೆ ನೋಡಬೇಡಿ ಎಂದಷ್ಟೆ ನಿಮ್ಮನ್ನೆಲ್ಲ
ಕೇಳುತ್ತೇನೆ.

ಡಾ. ವೆಂಕಟೇಶಯ್ಯ ನೆಲ್ಲುಕುಂಟೆ

Related Articles

ಇತ್ತೀಚಿನ ಸುದ್ದಿಗಳು