Saturday, March 8, 2025

ಸತ್ಯ | ನ್ಯಾಯ |ಧರ್ಮ

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ..

“..ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ
ಪ್ರತ ಹೀನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯ
ಒಲ್ಲೆನೊಲ್ಲೆ ಒಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರ…” ನೀಲಪ್ಪ ಬಸವರಾಜ ಕಜ್ಜರಿ ಅವರ ಬರಹದಲ್ಲಿ

ಈ ಇಪ್ಪತ್ತೊಂದನೆ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಅದಕ್ಕಾಗಿ ತುಡಿಯುವ ಜೀವಗಳು, ಅವರಿಂದ ಬಂದ ವಿಚಾರಧಾರೆಗಳು, ಕಾನೂನುಗಳು ಇದ್ದರೂ ಸಮ ಸಮಾಜದ ಕನಸ ಇಂದಿಗೂ ಸಾಧಿಸಲಾಗದ ಕನಸಾಗಿಯೇ ಉಳಿದಿರುವುದು ಮಾನವ ಇತಿಹಾಸದ ದುರಂತ ಇಂದಿಗೂ ಮನುಷ್ಯರ ನುಡುವೆ ಜಾತಿಯಾಧಾರಿತ, ಲಿಂಗಾಧಾರಿತ, ವರ್ಗಾಧಾರಿತ, ಪ್ರಾದೇಶಿಕ ವಾಸಸ್ಥಳ ಆಧಾರಿತ ಹಾಗೂ ಆರ್ಥಿಕತೆಯ ಆಧಾರ ಮೇಲೆ ಸಮಾಜವನ್ನು ವಿಭಜಿಸಿ ಮೇಲು ಕೀಳು ಕಲ್ಪನೆಯ್ನು ಮುನ್ನಲೆಗೆ ತಂದು, ಕೆಲವೊಮ್ಮೆ ಇವುಗಳಿಗೆ ಧರ್ಮದ ಆಧಿಕೃತತೆಯನ್ನು ನೀಡಿ ಸಮಾಜದಲ್ಲಿ ಶೋಷಣೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬರಲಾಗುತ್ತಿದೆ.  ಭಾರತೀಯ ಸಂವಿಧಾನವು ಸಮ ಸಮಾಜದ ಅನುಷ್ಠಾನಕ್ಕೆ ಈ ದೇಶದ ಜನರಿಗೆ ಸುಭದ್ರ ಕಾನೂನುಗಳನ್ನು ಒದಗಿಸಿದ್ದರೂ ಇಂದಿಗೂ ನಾವು ಇಂತಹ ಸಮ ಸಮಾಜ ನಿರ್ಮಾಣಕ್ಕಾಗಿ ಬಲುದೂರ ಸಾಗಬೇಕಿದೆ.  ಈ ಸಮ ಸಮಾಜದ  ಕಲ್ಪನೆಯು ಬಹಳ ಆದರ್ಶಮಯವಾದದ್ದು.  ಇದರಲ್ಲಿ ಮುಖ್ಯವಾದದ್ದು ವ್ಯಕ್ತಿ ಸ್ವಾತಂತ್ರ್ಯ. ಈ ವ್ಯಕ್ತಿ ಸ್ವಾತಂತ್ರವು ಒಬ್ಬ ವ್ಯಕ್ತಿ ತಾನು ಅನುಭವಿಸುದರಲ್ಲಿ ಮತ್ತು ಅವನ ಅಭಿವ್ಯಕ್ತಿಯಲ್ಲಿ ಅಡಗಿದೆ ಎಂದು ಹೇಳಬಹುದು.  ಇಂತಹ ಸ್ವಾತಂತ್ರ್ಯವು ಮೇಲು & ಕೀಳು ಎಂಬ ಎರಡು ಭಾವನೆಗಳನ್ನು ಕಳಚಿಕೊಂಡಿರುತ್ತದೆ.  ಯಾವಾಗ ಮೇಲರಿಮೆಯ ಭಾವನೆ ಕಳಚುವುದೋ ಆಗಲೇ ಅವನು ಜನರಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಲು ಸಹಾಯ ಮಾಡಬಲ್ಲ ಅಥವಾ ಮೇಲೆತ್ತಬಲ್ಲ.  ಮೇಲರಿಮೆಯ ಭಾವನೆಯು ಆಳುವ, ಶೋಷಿಸುವ ಮನಸ್ಥಿತಿಯ ಪ್ರತಿಬಿಂಬವಾಗಿದ್ದು ಸದಾ ಪ್ರಶ್ನೆ ಮಾಡದ ಅಧೀನ ಮನಸ್ಥಿತಿಯ ಜನರನ್ನು ಬಯಸುತ್ತದೆ.  ಅದಕ್ಕೆ ನಾನು ಹೇಳಿದ್ದು ಮೇಲರಿಮೆಯೇ ಕೀಳರಿಮೆಯನ್ನು ಬೀಜಿಕರಿಸುವ ಮೂಲಭಿಂದು ಎಂದು.  ನಾವು ಈ ಸಮಾಜದಲ್ಲಿ ಕೀಳರಿಮೆಯನ್ನು ತೊಡೆದು ಹಾಕುವ ಜೊತೆ ಜೊತೆಗೆ ಮೇಲರಿಮೆಯ ಮನಸ್ಥಿತಿ ನಿವಾರಣೆ ಅತ್ಯಗತ್ಯ.  ನಾನು ಇತ್ತೀಚೆಗೆ ದೇವನೂರು ಮಹದೇವು ಸರ್‌ ಅವರ “ಎದೆಗೆ ಬಿದ್ದ ಅಕ್ಷರ” ಪುಸ್ತಕ ಓದಿದೆ, ಅದರ ಒಂದು ಅಧ್ಯಾಯದಲ್ಲಿ  ಅವರು ಒಂದು ಪ್ರಶ್ನೆ ಕೇಳುತ್ತಾರೆ.  ಅದೆಂದರೆ “ಅಹಿಂಸೆಯ ಪರಮ ಸ್ಥಿತಿ ಯಾವುದು” ಅಂತಾ.  ಈ ಪ್ರಶ್ನೆಗೆ ಅವರೇ ಉತ್ತರ ಹೇಳುತ್ತಾರೆ ಪರರನ್ನು OR  ಇತರರನ್ನು ತನ್ನಂತೆ ಬಗೆಯುವುದೇ ಅಹಿಂಸೆಯ ಪರಮ ಸ್ಥಿತಿ” ಎಂದು, ಹೀಗೆ ಬೇರೆಯವರಿಗೆ ತನ್ನ ನಡವಳಿಕೆಗಳಿಂದ, ಆಚರಣೆಗಳ ಕ್ರಿಯೆಗಳಿಂದ ಹಿಂಸೆ ಆಗುತ್ತದೆ ಎಂದ ನನಗೆ ಅನ್ನಿಸಿದರೆ  OR  ನಾನು ಅವನಾಗಿದ್ದರೇ? ಎಂದು ಅವನ ಜಾಗದಲ್ಲಿ ನಿಂತು ನೋಡುವ ಮನಸ್ಥಿತಿಯ ಅವನು ಇತರರಿಗೆ ಹಿಂಸಾತ್ಮಕವಾಗಿ ನಡೆದುಕೊಳ್ಳದಂತೆ ತಡೆಯಬಲ್ಲದು. ಅಂತಾರೆ ದೇವನೂರು ಸರ್‌.  ಇಲ್ಲಿಯೂ ಗಮನಿಸಬೇಕಾದ ಅಂಶವೊಂದಿದೆ, ತನ್ನಂತೆ ಪರರನ್ನು ಬಗೆಯುವುದು ಯಾವಾಗ? ಆಳುವ ಮನಸ್ಥಿತಿ ದೂರವಾದಾಗ, ಶೋಷಣೆಯ ಮನಃಸ್ಥಿತಿಯಿಂದ ಹೊರಬಂದಾಗ ಮಾತ್ರ ನಾವು ಪರರನ್ನು ತನ್ನಂತೆ ಭಗೆಯಲು ಸಾಧ್ಯ ಎಂಬ ಅಂಶವನ್ನು ಗಮನಿಸಬೇಕು.

ಹೀಗಿರುವಾಗ ಇಷ್ಟೊಂದು ಉಧಾತ್ತವಾದ ವಿಷಯಗಳ ಬಗ್ಗೆ ನಾವು ಈ ಕಾಲಘಟದಲ್ಲಿ ನಿಂತು ಮಾತನಾಡುವಾಗ ಇಂತಹುದೇ ವಿಷಯ ಬಗ್ಗೆ ಸಮ ಸಮಾಜದ ಉದಾತ್ತ ಕನಸುಗಳೊಂದಿಗೆ ವಚನ ಚಳುವಳಿಯ ಮೂಲಕ ಕಾರ್ಯಚರಣೆಗೆ ಇಳಿದವರು 12ನೇ ಶತಮಾನದ ಮಹಾಶರಣರು.  ಇಲ್ಲಿ ಜಾತಿ ಬೇಧ ಇರಲಲ್ಲ, ಮೇಲು ಕೀಳು ಇರಲಿಲ್ಲ… ಲಿಂಗ ಸಮಾನತೆಯು ತನ್ನ ಉಚ್ರಾಯ ಸ್ಥಿತಿಯಲ್ಲಿತ್ತು ಎಂಬ ಅಂಶವನ್ನು ನಾವು ಗಮನಿಸಬೇಕು.  ಈ ದೇಶದಲ್ಲಿ ಜಾತಿಯಾಧಾರಿತ ವೃತ್ತಿಗಳು ಪರಂಪರಾಗಥವಾಗಿ ಬಂದಿರುವುದನ್ನು ನಮ್ಮ ಸಾಮಾಜಿಕ ಸ್ಥಿತಿಗತಿಗಳೇ ಹೇಳುತ್ತವೆ.  ಹೀಗಿರುವಾಗ ಹೀನ ಜಾತಿಯವರು ಮಾಡುವ ವೃತ್ತಿಗಳು ಹೀನವೂ ಉಚ್ಛ ಜಾತಿಯವರು ಮಾಡುವ ವೃತ್ತಿಗಳು ಉರ್ತ್ಕೃಷ್ಟವೂ ಎಂಬಂಥಹ ಧರ್ಮ ಅಧಿಕೃತತೆಯ ಮನೋಭಾವ ಈ ಸಮಾಜದಲ್ಲಿ ಇಂದಿಗೂ ತಳವೂರಿರುವುದನ್ನು ಕಾಣುತ್ತೇವೆ.  ವೃತ್ತಿಯಾಧಾರಿತ ಕೀಳರಿಮೆಯನ್ನು ಈ ಸಮಾಜದಲ್ಲಿ ಶೋಷಣೆಯನ್ನು ಅಧಿಕೃತಗೊಳಿಸಿ ನಡೆಸಿಕೊಂಡ ಬಂದ ಮನಸ್ಥಿತಿಯ ಪಳಿಯುಳಿಕೆಯಂತೆ ಈಗಲೂ ಈ ಸಮಾಜದಲ್ಲಿದೆ.  ಈ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ವಚನ ಚಳುವಳಿ ಈ ಎಲ್ಲಾ ಮನಸ್ಥಿತಿಗಳನ್ನು ತೊಡೆದು ಸಮ ಸಮಾಜದ ಪರಿಕಲ್ಪನೆಯೊಂದಿಗೆ ನೈಜವಾಗಿ ಬದುಕಿತು. ಇದಕ್ಕೆ ಉತ್ಕೃಷ್ಟ ಉದಾಹರಣೆ ಎಂದರೆ ಯಾವ ಕಾಲದಲಿ ಮಹಿಳೆಗೆ ಸಮಾನ ಸಾಮಾಜಿಕ ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ಸ್ಥಾನಮಾನವನ್ನು ನಿರಾಕರಿಸಿ ದ್ವಿತೀಯ ದರ್ಜೆಯ ಸ್ಥಾನಮಾನಕ್ಕೆ ತಳ್ಳಲಾಗಿತ್ತೋ ಆ ಸಂದರ್ಭದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಸಮಾನ ಸಾಮಾಜಿಕ, ಧಾರ್ಮಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನಗಳನ್ನು ನೀಡಿದರು ಎಂಬ ಅಂಶವನ್ನು ನಾವಿಲ್ಲಿ ಗಮನಿಸಬೇಕು ಮಹಿಳೆಗೆ ಲಿಂಗ ಧೀಕ್ಷೆ ನೀಡಿದ್ದಲ್ಲದೆ ಅವರ ಕೀಳರಿಮೆಯ ತೊಡೆಯಲು ತಮ್ಮ ಗಂಡು ಮೇಲರಿಮೆಯ ತೊಡೆದು ಸಮ ಸಮಾಜದ ಕಲ್ಪನೆ ಸಾಕಾರಗೊಳಿಸಿದ್ದರು.  ನಾನು ಪದೇ ಪದೇ ಹೇಳುವೆ ಆಳುವ ಮನಸ್ಥಿತಿಯ ತೊಲಗುವಿಕೆಯಲ್ಲಿಯೇ ಅಧೀನ ಅಥವಾ ಗುಲಾಮಿ ಮನಸ್ಥಿತಿಯ ತೊಲಗುವಿಕೆ ಅಡಗಿದೆ ಎಂದು. ಇಲ್ಲಿ ಮಹಿಳೆ ನನ್ನ ಅಧೀನಳು ಎಂಬ ಮನಸ್ಥಿತಿ ತೊಲಗಿದರೆ, ದೂರವಾದರೆ ಅಲ್ಲಿಯೇ ಮಹಿಳೆಯ ನಿಜವಾದ ಆತ್ಮೋದ್ದಾರ ಅಡಗಿದೆ ಎಂದು ಹೇಳಬಹುದು. ಹೀಗೆ ನಾವು ನೋಡುವುದಾದರೆ ಬಸವಾದಿ ಶರಣರು ಆಳುವ & ಅಧೀನ ಮನಸ್ಥಿತಿಗೆ ಹೊರತಾದವರು ಎಂಬುದನ್ನು ಅರಿಯುತ್ತಾ ಇಲ್ಲಿ ಮಹಿಳೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಷ್ಟೇ ಅಲ್ಲದೆ ಶೈಕ್ಷಣಿಕವಾಗಿಯೂ ಸಮಾನ ಸ್ಥಾನದಲ್ಲಿದ್ದಳು ಎಂಬುದನ್ನು ವಚನ ಸಾಹಿತ್ಯ ಎತ್ತಿ ತೋರಿಸುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ವೃತ್ತಿಯಾಧಾರಿತ ಕೀಳರಿಮೆಯ ಭಾವನೆಗೆ ತಿಲಾಂಜಲಿ ನೀಡಿದ್ದು ವಚನ ಚಳುವಳಿಯ ಮಹಾಮೈಲುಗಲ್ಲು.  ಬವಸವಾದಿ ಶರಣರು ಕಾಯಕ ಸಿದ್ದಾಂತವನ್ನು ಅಂದರೆ ದುಡಿದು ಬದುಕುವ ಸಿದ್ದಾಂತವನ್ನು ಪ್ರತಿಪಾದಿಸಿದರು.  ಇಲ್ಲಿ ಬಹಳ ಸೂಕ್ಷ್ಮವಾಗಿ ಪದಗಳ ವಿಶ್ಲೇಷಣೆ ಮಾಡಿದರೆ ದುಡಿದು ಬದುಕುವ ಸಂಸ್ಕೃತಿ ಎಂದರೆ ಉತ್ಪಾದನಾ ಸಂಸ್ಕೃತಿ, ಆರ್ಥಿಕ ಚೈತನ್ಯವನ್ನು ಸೂಚಿಸುವ ಸಂಸ್ಕೃತಿ, ಪ್ರಗತಿಶೀಲ ಸಂಸ್ಕೃತಿ. ಯಾವುದು ಉತ್ಪಾದನ ಸಂಸ್ಕೃತಿಯನ್ನು ತಳಹದಿಯಾಗಿ ಹೊಂದಿ ಕಾಯಕ ತತ್ವವನ್ನು ಪ್ರತಿಪಾದಿಸುತ್ತದೆಯೋ ಅದೇ ನಿಜ ಅರ್ಥದಲ್ಲಿ ಮೇಲು, ಯಾವುದು ಅನುತ್ಪಾದಕ ಕ್ರಿಯಾವಿಧಿಗಳಲ್ಲಿ ಕಾಲಹರಣ ಮಾಡುವುದೋ ಅದು ಕಾಯಕವೇ ಅಲ್ಲ.  ಅದು ಅತ್ಯಂತ ಹೀನಾಯವಾದ ಬದುಕು ಅಂತಾ ಬಸವಾದಿ ಶರಣರು ಬಹಳ ಆತ್ಮವಿಶ್ವಾಸದಿಂದ ದುಡಿಯುವ ಜನರಲ್ಲಿ ಆತ್ಮ-ಸ್ಥೈರ್ಯ ತುಂಬಿದವರು.  ಹೀಗೆ ಕಾಯಕ ಸಿದ್ದಾಂತ ಹಾಗೂ ಮಹಿಳಾ ಸಮಾನತೆಯ ಅಂಶಗಳ ಅನುಷ್ಠಾನದ ಅತ್ಯುತ್ಕೃಷ್ಟ ಉದಾಹರಣೆಯೇ ಆ ಕಾಲಮಾನದ ಮಹಿಳೆ _ಸೂಳೆ ಸಂಕವ್ವ ಹಾಗೂ ಅವಳು ಬರೆದಿರುವ ಪೈಕಿ ಸಿಕ್ಕ ಒಂದೇ ಒಂದು ವಚನ  ಇದನ್ನು  ಲೇಖನದ ಪ್ರಾರಂಭದಲ್ಲೇ ಹೇಳಿರುವೆ.

ಸೂಳೆ ಅಂದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಅವಳ ಬಗ್ಗೆ ಎಂಥಹ ಭಾವನೆ ಮೂಡಬಹುದು? ಊಹಿಸಿ ಈ ಸೂಳೆಗಾರಿಕೆಗೆ ತಳ್ಳಲ್ಪಟ್ಟ ಮಹಿಳೆ ಯಾರೂ ಆತ್ಮಸಂತೋಷದಿದ ಈ ವೃತ್ತಿಯನ್ನು ಆಯ್ಕೆಮಾಡಿಕೊಂಡವರಲ್ಲ. ಅವಳನ್ನು ಸೂಳೆಗಾರಿಕೆಗೆ ಹೇಗೆ ಒಗ್ಗಿಸಲಾಗುತ್ತದೆ ಎಂಬುದನ್ನು ನಾವು ಅರಿಯಬೇಕಾದರೆ ಖಂಡಿತವಾಗಿಯೂ ಒಮ್ಮೆ ನಮ್ಮ ಈ ನೆಲದ ಖ್ಯಾತ ಚಲನ ಚಿತ್ರ ನಿರ್ದೇಶಕರಾದ ಪಟ್ಟಣ್ಣ ಕಣಗಾಲರವರ ಕೊನೆಯ ಚಿತ್ರ “ಮಸಣದ ಹೂವು” ಚಿತ್ರವನ್ನು ನೋಡಬೇಕು.  ಅವಳನ್ನು ಹಸಿವಿನಿಂದ ಕೆಡವಿ ಹೇಗೆ ಸೂಳೆಗಾರಿಕೆಗೆ ಒಗ್ಗಿಸಲಾಗುತ್ತದೆ ಎಂಬುದನ್ನು ನಾವು ಅರಿಯಬಹುದಾಗಿದೆ.  ಇದರೊಂದಿಗೆ ತೀರ ಸೂಳೆಯರ ಬಗ್ಗೆ ಒಂದು ಸ್ಪಷ್ಟವಾದ ಚಿತ್ರಣ ಬೇಕು ಎಂಬುದಾದರೆ ರಚಿತಾ ಗುಪ್ತ ಅವರ ಸಂಪಾದನೆಯ ಇಂಗ್ಲಿಷ ಮೂಲ ಕೃತಿಯ ಸುಕನ್ಯ ಕನಾರಳ್ಳಿ ಅವರಿಂದ ಕನ್ನಡಕ್ಕೆ ಅನುವಾದಿತ “ಬರ್ತಿಯಾ?” … ಎಷ್ಟು? ಭಾರತೀಯ ಸೂಳೆ ಲೋಕದ ಕಥೆಗಳು ಎಂಬ ಪುಸ್ತಕವನ್ನು ಒಮ್ಮೆ ಓದಿದರೆ ನೆರವಾಗಬಹುದು.  ಅಲ್ಲದೇ ಈ ಕೃತಿಗೆ ಪ್ರಸ್ಥಾವನೆಯನ್ನು  ಬರೆದಿರುವ ಎಂ.ಎಸ್‌.ಆಶಾದೇವಿಯವರು, ಅವರ ಈ ಪ್ರಸ್ಥಾವನೆಯಲ್ಲಿ 12ನೇ ಶತಮಾನದ ಈ ವಚನಕಾರ್ತಿ ಸೂಳೆ ಸಂಕವ್ವೆಯ ವಚನವನ್ನು ವಿವಿಧ ಆಯಾಮಗಳಿಂದ ನೋಡಿರುವುದು ಬಹಳ ಖುಷಿಯ ಸಂಗತಿ ಹಾಗೂ ಅವರ ಗ್ರಹಿಕೆ  & ವಿಷಯ ಸಮಗ್ರತೆ & ವಿಶ್ಲೇಷಣೆಗೆ ನಾನು ನಿಜವಾಗಿಯೂ ಬೆರಗಾಗಿರುವೆ.  ಅವರ ಈ ಪ್ರಸ್ಥಾವನೆ ಓದುವ ಮೊದಲು ನಾನು ಸಹ ಈ ವಚನವನ್ನು ಕೇವಲ ಆರ್ಥಿ ಸಮಾಜವಾದದ ಹಿನ್ನೆಲೆಯಲ್ಲಿ ಮಾತ್ರ ಗ್ರಹಿಸಲು ಸಾಧ್ಯವಾಗಿತ್ತು. ಆದರೆ ವಿವಿದ ಮಜಲುಗಳ ಪರಿಚಯ ಈ ಪ್ರಸ್ತಾವನೆ ಓದಿದ ಮೇಲಾಯಿತು. ಮುಂದುವರೆದು ವೃತ್ತಿಗೌರವವನ್ನು ಕ್ಷೇಮ ಮಾಡಿದ ವಿಧಾನವನ್ನು ಈ ವಚನದಲ್ಲಿ ಅತ್ಯತ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಬಹುದು. ಈ ವಚನದಲ್ಲಿ ಅಥವಾ ಒಟ್ಟಾರೆ ವಚನ ಸಾಹಿತ್ಯದಲ್ಲಿ ಪ್ರತಪಾದನೆಯಾಗಿರುವ ಒಂದು ಮಹತ್ತರವಾದ ವಿಚಾರಧಾರೆ ಯಾವುದೆಂದರೆ ಅದು ಆರ್ಥಿಕ ಸಮಾಜವಾದ. ಈ ಆರ್ಥಿಕ ಸಮಾಜವಾದ ಎಷ್ಟರಮಟ್ಟಿಗೆ ಶರಣರಲ್ಲಿ ಪ್ರಭಾವ ಬೀರಿತ್ತು  ಎಂದರೆ ಒಬ್ಬರ OR ಒಂದು ಕುಟುಂದ ಅವಶ್ಯಕತೆಗಿಂತ ಅಧಿಕವಾದ ಸಂಪತ್ತನ್ನು ಕೂಡಿಡುವುದು ಸಹ ಕಳ್ಳತನ ಎಂಬ ಉಧಾತ್ತ ಚಿಂತನೆ ಶರಣರದ್ದಾಗಿತ್ತು.  ಕಾರಣ ಈ ವಚನಕಾರ್ತಿ ಸೂಳೆ ಸಂಕವ್ವೆಯೂ ಸಹ ಒಂದು ಒತ್ತೆಯ ಹಿಡಿದು ಮತ್ತೊತ್ತೆ ಹಿಡಿಯಲಾರೆ ಅಂತಾಳೆ.  ಇತ್ತಿ ಒತ್ತೆ ಅಂದರೆ ಸೂಳೆಯರು ನೀಡುವ ದೈಹಿಕ ಸುಖಕ್ಕೆ ಪಡೆಯುವ ಹಣ. ನನಗೆ ನನ್ನ ಜೀವನಕ್ಕಾಗಿ ದಿನವೊಂದಕ್ಕೆ ಒಂದೇ ಒತ್ತೆ ಸಾಕು. ಇದು ಶರಣರ ಪ್ರತಿಪಾದನೆಯ ಆರ್ಥಿಕ ಸಮಾಜವಾದದ ಪರಿಕಲ್ಪನೆಗೆ ಪೂಕರವಾದದ್ದು ಎಂಬ ಮಹಾನ್‌ ವಿಚಾರಧಾರೆ ಆ ಕಾಲದ ಮಹಿಳೆ ಅದರಲ್ಲೂ ಸೂಳೆಗೆ ಬಂದಿತ್ತು ಎಂದರೆ ಅದು ಎಂಥ ಅದ್ಬುತ ಸಮ ಸಮಾಜದ ಕಲ್ಪನೆಯಾಗಿತ್ತು ಎಂಬುದು ಇಲ್ಲಿ ಅರ್ಥವಾಗಬೇಕು.  ಕೂಡಿಡುವುದು ಕಳ್ಳತನ ಎಂಬುದು ಅರ್ಥವಾದರೆ ಸಮ ಸಮಾಜ ತನ್ನಿಂದ ತಾನೆ ನಿರ್ಮಾಣ ಆಗುತ್ತದೆ ಎಂಬ ಅಂಶವನ್ನು  ನಾವು ಗಮನಿಸಬೇಕು.  ನಾವು ಕೇವಲ ಈ ಒಂದು ಒತ್ತೆಯ ಬಿಟ್ಟು ಮತ್ತೊತೆಯ ಹಿಡಿಯೇ ಎಂಬುದು ಆ ಸಮಾಜದಲ್ಲಿ ಅವಳಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಅನುಭವಿಸುವಿಕೆಯನ್ನು, ವೃತ್ತಿ ಕೀಳುರುಮೆ ಸ್ಥಿತಿಯಿಂದ ಹೊರಬಂದ ಅವಳನ್ನು ಕಾಣಬೇಕು ಹಾಗೂ ಆ ವಾಕ್ಯ ನಮಗೆ ಹಾಗೆಯೇ ಪ್ರತಿದ್ವನಿಸಬೇಕು. “ಮತ್ತೊತ್ತೆಯ ಹಿಡಿಯೇ” ಎಂಬ ನಿರಾಕರಣೆಯಲ್ಲಿ ನಾನು ಆ ಯಾರ ಅಧೀನಳೂ ಅಲ್ಲ, ಗುಲಾಮಳೂ ನನ್ನ ಎಂಬುದು ಮಹಾ ಸಂಸ್ಕಾರದ ಫಲ.  ಆ ಮಹಾ ಸಂಸ್ಕಾರ ಯಾವುದೆಂದರೆ ಬಸವಾಚಾರ. ಕೇವಲ ಸಮಾಜದ ಇದೊಂದೇ ವೃತ್ತಿ ಅಂತ ಅಲ್ಲಿ ಎಲ್ಲ ವೃತ್ತಿ ಬಾಂಧವರೂ ಅದರಲ್ಲೂ ಉತ್ಪಾದಕ ತತ್ವವ  ಹಿನ್ನಲೆಯ ಕಾರ್ಯ ತತ್ವದ ವೃತ್ತಿ ಬಾಂಧವರು ತಲೆ ಎತ್ತಿ ಬದುಕುವಂತೆ ಆತ್ಮಾಭಿಮಾನ ತುಂಬಿದವರು ಈ ಬಸವಾಚಾರ ಶರಣರು.  ಇಂತಹ ಮಹಾ ಬಸವ ಸಂಸ್ಕಾರದ ಪರಿಧಿಯೊಳಗೆ ಬಂದು ಸೂಳೆ ಸಂಕವ್ವೆ ಪ್ರತಿಪಾದಿಸಿದ ಈ ಆರ್ಥಿಕ ಸಮಾಜವಾದ ಇಂದಿನ ಸಮಾಜಕ್ಕೆ ನಿಜಕ್ಕೂ ಆದರ್ಶಪ್ರಾಯ.
ಒಂದು ಹಂತದಲ್ಲಿ ಈ ವಾಕ್ಯದಲ್ಲಿ ಕೇವಲ ಆರ್ಥಿಕ ಸಮಾಜವಾದದ ಪರಿಕಲ್ಪನೆ ಇದಯೇ? ಎಂಬುದನ್ನು ಸೂಕ್ಷ್ಮವಾಗಿ ನೋಡುವ ದೃಷ್ಟಿಕೋನ ನನಗೆ ಬಂದಿದ್ದು ರಚಿತಾ ಗುಪ್ತಾ ಅವರ ಇಂಗ್ಲಿಷ ಕೃತಿ ಹಾಗೂ ಸುಕನ್ಯಾ ಕನಾರಳ್ಳಿ ಅವರಿಂದ ಕನ್ನಡಕ್ಕೆ ಅನುವಾದಿತವಾದ ಬರ್ತೀಯಾ?…. ಎಷ್ಟು…..? ಭಾರತೀಯ ಸೂಳೆ ಲೋಕದ ಕಥೆಗಳು ಎಂಬ ಕೃತಿಯಲ್ಲಿ ಎಂ.ಎಸ್‌ ಆಶಾದೇವಿಯರ ಬರೆದ ಪ್ರಸ್ಥಾವನೆಯನ್ನು ಓದಿದ ಮೇಲೆ. ಈ ಆಧುನಿಕ ಭಾರತದಲ್ಲಿ ಸೂಳೆಗಾರಿಕೆಗೆ ನೂಕಲ್ಪಡುತ್ತಿರುವ ಹೆಣ್ಣು ತನ್ನ ದೇಹವನ್ನು ಒಂದು ದಿನದಲ್ಲಿ ಕನಿಷ್ಟ ಎಂಟರಿಂದ ಹತ್ತು ಜನಕ್ಕೆ ತೆರೆದಿಡಬೇಕಾದ ಅನಿವಾರ್ಯತೆಯ ಬಗ್ಗೆ ಮಾತಾಡಿದ್ದಾರೆ.  ಆ ಹೆಣ್ಣಿಗೆ ಒಂದು ದಿನಕ್ಕೆ ಎಂಟರಿಂದ ಹತ್ತು ಜನರೊಂದಿಗೆ ಮಲಗಿ ಎದ್ದರೆ ಅಥವಾ ಅಂತಹ ಅನಿವಾರ್ಯತೆ ಇದೆ ಎಂಬುದಾದರೆ ಆ ಅನಿವಾರ್ಯತೆಯ ಕ್ರೂರತ್ವ ಎಂಥಹದ್ದು, ಇಂತಹ ಕ್ರೂರ ವ್ಯವಸ್ಥೆಯ ಜೀವಂತ ಇಟ್ಟ ನಮ್ಮ ಸಾಮಾಜಿಕ ಮನಸ್ಥಿತಿ ಎಂಥಹದ್ದು? ಹತ್ತು ಜನರೊಂದಿಗೆ ಮಲಗಿ ಏಳಬೇಕಾದ ಅವಳ ಮನಸ್ಥಿತಿಯು ಇನ್ನಾವ ಮಟ್ಟಿನ ಒಪ್ಪಿತ ಶೋಷಿತತ್ವಕ್ಕೆ ಒಗ್ಗಿಸಿರಬೇಕು.  ಒಗ್ಗಿಸಿರುವ ಮನಸ್ಥಿತಿ ಇನ್ನೆಷ್ಟು ಕ್ರೂರವಾಗಿರಬೇಕು?  ಈ ಕ್ರೂರತ್ವದ ಜೀವಂತಿಕೆಗೆ ಈ ಸಮಾಜ ಎಷ್ಟರ ಮಟ್ಟಿಗೆ ನೀರೆರೆಯುತ್ತಿರಬೇಕು? ಎಷ್ಟು ಗಂಭಿರವಾಗಿದೆ ವಿಷಯ ನೋಡಿ.   ಆ ಸೂಳೆ ಸಂಕವ್ವೆ ಧೈರ್ಯದಿಂದ ಹೇಳಿದಂತೆ ಮತ್ತೊತ್ತೆಯ ಹಿಡಿಯೇ ಎಂಬ ಮಾತು ಈಗಿನ ಹದಿಹರೆಯದ ಸೂಳೆಯರ ಬಾಯಲ್ಲಿ ಬಂತೆಂದರೆ ಅವರ ಆಳ್ವಿಕೆಯು ಅವರಿಗೆ ಒದಗಿಸುವ ಹಿಂಸೆಯ ಭಯ ಇನ್ನೆಷ್ಟಿರಬೇಕು?  ಅದಕ್ಕಾಗಿ ನಾನು ಹೇಳುವುದು? ಈ ವಚನದ ಮೊದಲು ಮಾತು ಕೇವಲ ಆರ್ಥಿಕ ಸಮಾಜವಾದದ ಪ್ರತಿಧ್ವನಿಯಂತೆ ಕಾಣದೇ ಸಾಮಾಜಿಕ ಸ್ಥಾನಮಾನವು ಕೇವಲ ವೃತ್ತಿ ಸಂಬಂಧಿತವಾದುದ್ದಲ್ಲ! ಎಲ್ಲ ವೃತ್ತಿಯೂ ಸಮಾಜದಲ್ಲಿ ಸಮಾನ ಎಲ್ಲ ವೃತ್ತಿಯವರೂ ದಬ್ಬಾಳಿಕೆಯನ್ನು ಸಹಿಸಬಾರದು OR ಹೀನವೂ ಅಲ್ಲ, ಉತ್ಕೃಷ್ಟವೂ ಅಲ್ಲ ಎಂಬುದನ್ನು ತಿಳಿಸುತ್ತಾ, ಸಾಮಾಜಿಕ ಸ್ಥಾನಮಾನ ವೃತ್ತಿ ಸಂಬಂಧಿತವಾದುದಲ್ಲ ಎಂಬುದನ್ನು ಈ ವಚನದ ಮೊದಲ ಎರಡು ಮಾತುಗಳು ಪ್ರತಿಧ್ವನಿಸುತ್ತದೆ.  ಈ ಮಾತುಗಳು ಅಧೀನ ಸಂಸ್ಕೃತಿಯನ್ನು ಧಿಕ್ಕರಿಸುತ್ತಿರುವ ಸಮ ಸಮಾಜಕ್ಕೆ ತುಡಿಯುವ ಮನಸ್ಥಿತಿಯ ಸಂಕೇತದಂತಿವೆ.
ಈ ವಚನದಲ್ಲಿ ಸಂಕವ್ವೆ ಕೂಲವರಯ್ಯ ಮತ್ತು ಕೊಯ್ವರಯ್ಯ ಎಂಬ ಎರಡು ಹಿಂಸಾ ಸೂಚಕ ಪದ ಬಳಸಿರುವುದು ಕಂಡುಬಂದರೆ ದಯಯೇ ಧರ್ಮದ ಮೂಲವಯ್ಯ ಎಂದು ಹೇಳಿದ ಶರಣರಿಗೆ ಈ ಮಾತುಗಳು ಅಪಚಾರೆಸಗಿದಂತೆ ಅಲ್ಲವೇ? ಎಂಬ ಜಿಜ್ಞಾಸೆ ಮೂಡುತ್ತದೆ.  ಕಲಬೇಡ ಕೊಲಬೇಡ ಎಂಬ ಪ್ರತಿಪಾದಕತ್ವದ ಶರಣರು ಕೊಲವರಯ್ಯ ಕೊಯ್ವರಯ್ಯ ಎಂದು ಹೇಳಿದರೆ OR  ಬರೆದರೆ ಹೇಗೆ? ಇಲ್ಲಿ ನೇರವಾಗಿ ಶಬ್ದಾರ್ಥಗಳ ಮೂಲಕ ಈ ವಚನದ ಅರ್ಥ ಗ್ರಹಿಸುವುದಕ್ಕಿಂತ ಶರಣ ತತ್ವ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ತತ್ವವನ್ನು  ಸರಿಯಾಗಿ ಅರ್ಥಮಾಡಿಕೊಂಡರೆ ಮಾತ್ರ ಈ ಎರಡು ಪದಗಳ ಅರ್ಥ ನಮಗೆ ವೇಧ್ಯವಾಗುತ್ತದೆ.  ಶರಣರು ಅನುಭಾವಿಗಳು. ಅರಿವನ್ನು ಆಚರಿಸುವವರು. ನುಡಿ ನಡೆಯ ನಡುವೆ ವ್ಯತ್ಯಾಸ ಇರದವರು.  ಹೀಗೆ ಅರಿವನ್ನು ಆಚಾರಗೊಳಿಸದ ಬದುಕಿನ ರೀತಿಯನ್ನು ಶರಣರು ಖಂಡಿತ ಒಪ್ಪರು.  ಅಂತಹ ಒಪ್ಪದಿರುವಿಕೆಯೇ ಕೊಲೆಗೆ ಸಮಾನ ಎಂಬಂಶದ ಪ್ರತಿಪಾದಕತ್ವ ಈ ವಚನದಲ್ಲಿ ಅಡಗಿದೆ.  ಅದಕ್ಕಾಗಿಯೇ ನನ್ನ ನಡೆ ನುಡಿ ಒಂದೇ. ನನ್ನ ಆಚಾರ ಒಂದೇ ಅರಿವು ಆಚಾರ ವಿರುದ್ಧವಾಗಿರುವವರು ಒಪ್ಪರು ನಮ್ಮ ಶರಣರು ಎಂಬುದನ್ನು ಬಹಳ  ಕಟು ಶಬ್ಧ ಬಳಸಿ ವಚನವಾಗಿಸಿದ್ದಾರೆ ಸಂಕವ್ವ.
ಇದಕ್ಕೂ ಮಿಗಿಲಾಗಿ ಸೋಹಂದಿಂದ ದಾಸೋಹಂದೆಡೆಗೆ ಸಾಗುವ ಬಗೆಯದ್ದು ನಮ್ಮ ಬಸವಾಚಾರ.  ಸಂಕವ್ವ ಈ ವಚನದ ಮೂಲಕ ಅರಿವನ್ನು ಆಚಾರವಾಗಿಸಿ ಆಚಾರವನ್ನು ಸಮಾಜದೆದುರಿಗೆ ವಚನ ರೂಪದಲ್ಲಿ ಮಂಡಿಸಿ ಸಮಾಜಮುಖಿಯಾಗಿದ್ದಾರೆ.  ಸೋಹಂ ವ್ಯಕ್ತಿಗತ ನೆಲೆಯಲ್ಲಿ ನಿಂತರೆ ದಾಸೋಹಂ ಸಮಾಜಮುಖಿಯಾಗಿ ಅದರ ಒಳತಿಗಾಗಿ ಪ್ರವಹಿಸುತ್ತದೆ.  ಹಾಗೇ ಈ ವಚನದ ಮೂಲಕ ಸೂಳೆ ಸಂಕವ್ವೆಯೂ ಒಬ್ಬ ಸಮಾಜಮುಖಿ ಸಮ ಸಮಾಜಕ್ಕೆ ತುಡಿದ ನಾಯಕಿ ಅಂತಾ ಶರಣು ಆಕೆಯನ್ನು ಗುರುತಿಸಿ ಆಕೆಗೂ ಧಾರ್ಮಿಕ ಧೀಕ್ಷೆ ನೀಡಿ ಸಾಮಾಜಿಕ ಸಮಾನ ಸ್ಥಾನಮಾನ ನೀಡಿದ ಪರಿ ಇದೆಯಲ್ಲಾ ಇದು ಇಂದಿನ ಎಲ್ಲ ಸಮಾಜಕ್ಕೂ ಮಾದರಿಯಾಗಿ ನಿಲ್ಲಬೇಕಾದ ಸಂಗತಿ.
ಒಂದು ಕುಟುಂಬದಲ್ಲಿ, ಈ ಸಮಾಜದಲ್ಲಿ ಮಹಿಳೆಯ ಸಮಾಜಿಕ ಆರ್ಥಿಕ, ರಾಜಕೀಯ, ಧಾರ್ಮಿಕ ಸ್ಥಿತಿಗಳು ಇಂದಿಗೂ ನಮ್ಮ ನಿರೀಕ್ಷಿತ ಮಟ್ಟ ತಲುಪಿಲ್ಲ, ಅಂತಹದರಲ್ಲಿ ನಾವು ಯಾವ ವೃತ್ತಿಯನ್ನು ಹೀನ ವೃತ್ತಿ ಅಂತಾ ಕರೆಯುತ್ತೇವೆಯೋ ಅಂತಹ ವೃತ್ತಿಗೆ ಸಂಬಂಧಿಸಿದ ವ್ಯಕ್ತಿಗೆ ಸಾಮಾಜಿಕ ಸ್ಥಾನಮಾನ & ಅಭಿವ್ಯಕ್ತಿಯನ್ನು ಒದಗಿಸಿದ ಶರಣ ಚಳುವಳಿ ನಿಜಕ್ಕೂ ಮಾದರಿ.  ಈ ದೇಶದ ಅರ್ಧದಷ್ಟಿರುವ ಮಹಿಳೆಯರು ಇಂದಿಗೂ ಸಮಾಜದೆದುರು ನಮ್ಮ ನಾಯಕರಾಗಿ ಸರಿಯಾದ ಸಂಖ್ಯೆಯಲ್ಲಿ ಮುಂದೆ ಬಂದು ಇದು ಸರಿ ಇದು ತಪ್ಪು ಎಂದು ಹೇಳುವ ಮಟ್ಟದ ನಾಯಕತ್ವದ ಕೊರತೆ  OR ಅಂತಹದ್ದನ್ನು ಇನ್ನು ಒಪ್ಪದ ಈ ಕಾಲಘಟ್ಟಕ್ಕೆ ಹೋಲಿಸಿದರೆ ಶರಣರ ಕಾಲಘಟ್ಟ ಹೇಗೆ ಒಬ್ಬ ಸೂಳೆಯಲ್ಲೂ ಸಮ ಸಮಾಜಮುಖಿ ಚಿಂತನೆಯನ್ನು ಕಂಡಿತು, ಅವಳಲ್ಲಿ ಮೋಹದಿಂದ ದಾಸೋಹ ತತ್ವವನ್ನು ಕಂಡಿತು. ಅವಳಲ್ಲಿ ನಾಯಕತ್ವವನ್ನು ಕಂಡಿತು ಎಂಬುದು ನಮಗೆಲ್ಲರಿಗೆ, ಈಗಿನವರೆಗೆ ಮಾದರಿಯಾಗಲಿ ಕಾನೂನಿನ ಮೂಲಕ ರಾಜಕೀಯ ನಾಯಕತ್ವ ಒದಗಿಸಿದರೆ ಅದು ಹೇರಿಕೆ ಅನಿಸಬಹುದು ಸಮಾಜ ಒಪ್ಪಿ ಅರ್ಧದಷ್ಟಾದರೂ ಇಲ್ಲ. ಶೇ 30% ರಷ್ಟಾದರೂ ಮಹಿಳೆಯರು ರಾಜಕೀಯವಾಗಿ ಬೆಳೆಯುವ ಶಕ್ತಿ ಬೆಳೆಸುವಂತಹ ಸಮಾಜ ನಮ್ಮದಾಗಲಿ.

ಕೊನೆಯದಾಗಿ ಸೂಳೆಗಾರಿಕೆ ಈ ಜಗತ್ತಿನ ಯಾವ ಸೂಳೆಯ ಮನ ಒಪ್ಪಿತ ಆಯ್ಕೆಯಲ್ಲ..  ಅದು ಬಲವಂತದ ಹೇರಿಕೆ.  ಅವಳಿಗೆ ಸೃಷ್ಟಿಸಿದ ಅನಿವಾರ್ಯತೆ, ತಳ್ಳಲ್ಪಟ್ಟಿದ್ದು ಹೇರಲ್ಪಟ್ಟಿದ್ದು.  ಅವಳನ್ನು ವಸ್ತುವಾಗಿಸಿದ್ದು, ಅವಳನ್ನು ನಮ್ಮ ಸುಖದ ವಸ್ತುವಾಗಿಸಿದ್ದು. ಇದು ಕೊನೆಯಾಗಬೇಕು.  ಕನಿಷ್ಟ ಅವಳ ಕಷ್ಟಗಳಾದರೂ ಕೊನೆಯಾಗಬೇಕು.  ಅವಳ ದುಡಿಮೆ ಅವಳಲ್ಲಿಯೇ ಉಳಿಯಬೇಕು.  ಅವಳಿಗೂ ಒಂದು ಕನಿಷ್ಟಗೌರವ ಧಕ್ಕಬೇಕು.   ಇದೆಲ್ಲ ಆಗಬೇಕೆಂದರೆ ನಮ್ಮ ದೃಷಿಕೋನ ಬದಲಾಗಬೇಕು.  ಅದಕ್ಕಾಗಿ ನಾನು ಎರಡು ಸಲಹೆ ನೀಡುವೆ ಒಂದು ನಮ್ಮ ಪುಟ್ಟಣ್ಣ ಸರ್‌ ಅವರ “ಮಸಣದ ಹೂವು” ಚಿತ್ರ ನೋಡಿ. ಮತ್ತೆ.. “ಬರ್ತಿಯಾ?… ಎಷ್ಟು?” ಓದದೇ ಇರಬೇಡಿ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page