Thursday, March 20, 2025

ಸತ್ಯ | ನ್ಯಾಯ |ಧರ್ಮ

ಎರಡು ಬಾರಿ ಜೈಲು ನೋಡಿ ಬಂದ ಪತ್ರಕರ್ತನೊಂದಿಗೆ 15 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ ದೂರದರ್ಶನ!

ಗಮನಾರ್ಹ ಬೆಳವಣಿಗೆಯೊಂದರಲ್ಲಿ, ಭಾರತದ ಸಾರ್ವಜನಿಕ ವಲಯದ ಸುದ್ದಿವಾಹಿನಿಯಾದ ದೂರದರ್ಶನವು, ಸುಳ್ಳು ಸುದ್ದಿ ಪ್ರಸಾರ ಮತ್ತು ಮಾಧ್ಯಮ ಸುಲಿಗೆಯ ಪ್ರಕರಣಗಳಲ್ಲಿ ಈ ಹಿಂದೆ ಜೈಲು ಶಿಕ್ಷೆಗೆ ಒಳಗಾಗಿದ್ದ ವಿವಾದಾತ್ಮಕ ಸುದ್ದಿ ನಿರೂಪಕ ಮತ್ತು ಪತ್ರಕರ್ತ ಸುಧೀರ್ ಚೌಧರಿ ಜೊತೆ ವಾರ್ಷಿಕ 15 ಕೋಟಿ ರೂಪಾಯಿಗಳ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

ಪ್ರಧಾನಿ ನರೇಂದ್ರ ಮೋದಿಯವರ ಮಾಧ್ಯಮ ತಂಡದಿಂದ ನೇರವಾಗಿ ಮೇಲ್ವಿಚಾರಣೆ ನಡೆಸಲ್ಪಡುವ ದೂರದರ್ಶನ ನ್ಯೂಸ್ (ಡಿಡಿ ನ್ಯೂಸ್), ಸುಧೀರ್ ಚೌಧರಿಯಂತಹ ಕಳಂಕಿತ ಪತ್ರಕರ್ತ ಜೊತೆ ದೈನಂದಿನ ಸುದ್ದಿ ಪ್ರಸ್ತುತಿ ಒಪ್ಪಂದವನ್ನು ಏಕೆ ಮಾಡಿಕೊಂಡಿದೆ? ಎನ್ನುವ ಪ್ರಶ್ನೆ ಈಗ ಸಾರ್ವಜನಿಕರ ನಡುವೆ ಚರ್ಚೆಗೆ ವಸ್ತುವಾಗಿದೆ.

ದೂರದರ್ಶನ ಮತ್ತು ಸುಧೀರ್‌ ಚೌದರಿ ನಡುವಿನ ಒಪ್ಪಂದದ ಪ್ರಕಾರ ಸುಧೀರ್‌ ಚೌದರಿ ದೂರದರ್ಶನದ ಸುದ್ದಿ ವಾಹಿನಿಯಾದ ಡಿ ಡಿ ನ್ಯೂಸ್‌ ವಾಹಿನಿಗೆ ವಾರದ ಐದು ದಿನಗಳ ಕಾಲ ಪ್ರತಿದಿನ ಒಂದು ಗಂಟೆ ಸಮಯದ ವಿಶೇಷ ಕಾರ್ಯಕ್ರಮಮವೊಂದನ್ನು ರೂಪಿಸಿಕೊಡಲಿದ್ದಾರೆ. ಇದಕ್ಕಾಗಿ ದೂರದರ್ಶನ ಸುಧೀರ್‌ ಚೌಧರಿಗೆ 15 ಕೋಟಿ ರೂಪಾಯಿ ಮತ್ತು ಅದಕ್ಕೆ ತಗಲುವ ಜಿಎಸ್‌ಟಿ ಮೊತ್ತವನ್ನು ಸಂಭಾವನೆಯಾಗಿ ನೀಡಲಿದೆ.

ಈ ಒಪ್ಪಂದವನ್ನು ನಿಯಮ 194 (GFR 2017 ರ ಷರತ್ತು (iii) ಮತ್ತು (iv) ಅಡಿಯಲ್ಲಿ M/s ESSPRIT ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಮುಖ ಸುದ್ದಿ ನಿರೂಪಕ ಶ್ರೀ ಸುಧೀರ್ ಚೌಧರಿ ಅವರೊಂದಿಗೆ ದೂರದರ್ಶನ ಮಾಡಿಕೊಂಡಿದೆ.

ವ್ಯವಹಾರ ಮಾತುಕತೆ ಸಮಿತಿಯು ಫೆಬ್ರವರಿ 6 ರಿಂದ 20, 2025 ರ ನಡುವೆ ಐದು ಬಾರಿ ಸಭೆ ಸೇರಿ ಸುಧೀರ್ ಚೌಧರಿ ಪ್ರತಿನಿಧಿಸುವ ನಿರ್ಮಾಣ ಕಂಪನಿ M/s ESSPRIT ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಮಾತುಕತೆ ನಡೆಸಿತು. ಹಾರ್ಡ್‌ವೇರ್, ಸ್ಟುಡಿಯೋ ಬಳಕೆಯ ವೆಚ್ಚ, ಸ್ಥಳ, ಪೀಠೋಪಕರಣಗಳು, ಸುದ್ದಿ ಸಂಸ್ಥೆ ಶುಲ್ಕಗಳು ಮತ್ತು ಇತರ ವಿವಿಧ ವೆಚ್ಚಗಳಂತಹ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರಸಾರ ಭಾರತಿಯಿಂದ ಭರಿಸಬೇಕಾದ ಉತ್ಪಾದನಾ ವೆಚ್ಚದ ಕುರಿತು ಸರಣಿ ಚರ್ಚೆಗಳ ನಂತರ, ಎರಡೂ ಪಕ್ಷಗಳು ಉತ್ಪಾದನಾ ವೆಚ್ಚದ ಕುರಿತು ಒಮ್ಮತಕ್ಕೆ ಬಂದವು.

ಆದರೆ ಈಗ ಪ್ರಶ್ನೆಯಿರುವುದು ಅಷ್ಟೇನೂ ಹೆಸರು ಮಾಡಿರದ ಸುಧೀರ್‌ ಚೌಧರಿಯ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ದೂರದರ್ಶನಕ್ಕೆ ಏನಿತ್ತು ಎನ್ನುವುದಾಗಿದೆ. ಈ ಸುಧೀರ್‌ ಚೌಧರಿ ಮೊದಲಿನಿಂದಲೂ ಸುದ್ದಿಗಿಂತಲೂ ಹೆಚ್ಚು ಸುಳ್ಳು ಸುದ್ದಿ, ವಸೂಲಿ ಮೊದಲಾದ ವಿಷಯಗಳಲ್ಲೇ ಖ್ಯಾತನಾಗಿದ್ದ ವ್ಯಕ್ತಿ.

2008ರಲ್ಲಿ ಶಿಕ್ಷಕಿಯೊಬ್ಬರ ವಿರುದ್ಧ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆನ್ನುವ ಆರೋಪವನ್ನು ಹೊರಿಸಿ ಇದೇ ಸುಧೀರ್‌ ಚೌಧರಿ ಸುಳ್ಳು ವರದಿ ಮಾಡಿದ್ದ. ನಂತರ ಈ ಪ್ರಕರಣದಲ್ಲಿ ಆತನಿಗೆ ಜೈಲು ಶಿಕ್ಷೆಯೂ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈತ ತಿಹಾಡಿ ಎಂದೇ ಪ್ರಸಿದ್ಧ (ತಿಹಾರ್‌ ಜೈಲಿನಲ್ಲಿ ಇದ್ದು ಬಂದವ). ಇಂತಹ ಪತ್ರಕರ್ತನಿಗೆ ಜೀ ನೆಟ್ವರ್ಕ್‌ ಮಾಲಿಕತ್ವದ ಜೀ‌ ನ್ಯೂಸ್ ಹಲವು ವರ್ಷ ಕೆಲಸ ಕೊಟ್ಟಿತ್ತು, ಅದರ ನಂತರ ಆತ ಇಂಡಿಯಾ ಟುಡೇ ವಾಹಿನಿಯಲ್ಲಿಯೂ ಇದ್ದ.

ಇದೆಲ್ಲ ಸಾಲದು ಎನ್ನುವಂತೆ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಸಹ ಈ ವ್ಯಕ್ತಿಗೆ ಸಂದರ್ಶನಗಳನ್ನು ಸಹ ನೀಡಿದ್ದಾರೆ. ಇದೀಗ ಅದೆಲ್ಲವನ್ನೂ ಮೀರುವಂತೆ ಇಂತಹ ಕಳಂಕಿತ ಪತ್ರಕರ್ತನೊಂದಿಗೆ ಸಾರ್ವಜನಿಕರ ಹಣದಿಂದ ಕಾರ್ಯನಿರ್ವಹಿಸುವ ದೂರದರ್ಶನ 15 ಕೋಟಿ ಮೌಲ್ಯದ ಒಪ್ಪಂದಕ್ಕೆ ಮುಂದಾಗಿದೆ.

ಇದೀಗ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆ ಆರಂಭವಾಗಿದ್ದು, ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್‌ ಭೂಷಣ್‌ ದೂರದರ್ಶನದ ಈ ನಡೆಯನ್ನು ಖಂಡಿಸಿದ್ದಾರೆ.
ಅವರ ಹೇಳಿಕೆಯನ್ನು ನೀವು ಇಲ್ಲಿ ಓದಬಹುದು.


ಸುಧೀರ್‌ ಚೌಧರಿಯ ಜೈಲು ಯಾತ್ರೆಯ ಕುರಿತು ನಿಮಗೆ ಆಸಕ್ತಿಯಿದ್ದಲ್ಲಿ ಈ ಕೆಳಗಿನ ವರದಿಗಳನ್ನು ಓದಬಹುದು


[1] Fake sting case: TV channel’s editor gets bail – May 29, 2008, News 18

[2] Zee News editors sent to Tihar jail – Dec 01, 2012, HT


Related Articles

ಇತ್ತೀಚಿನ ಸುದ್ದಿಗಳು

You cannot copy content of this page