ಬೆಂಗಳೂರಲ್ಲಿ ಇನ್ಮುಂದೆ ‘ಏರ್ ಶೋ’ ನಡೆಯೋದು ಡೌಟ್: ವಾಯುನೆಲೆ ವಶಕ್ಕೆ ಮುಂದಾದ ಅರಣ್ಯ ಇಲಾಖೆ

ಬೆಂಗಳೂರು: ದೇಶದ ಅತ್ಯಂತ ಪ್ರತಿಷ್ಠಿತ ವಾಯು ಪ್ರದರ್ಶನವಾದ ಏರೋ ಇಂಡಿಯಾ ಶೋ ಇನ್ನು ಮುಂದೆ ಬೆಂಗಳೂರಿನಲ್ಲಿ ನಡೆಯುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಯಲಹಂಕ ವಾಯುನೆಲೆ ಆವರಣದಲ್ಲಿ ಏರ್ ಶೋ ನಡೆಯುತ್ತಿರುವ ಭೂಮಿ ತಮ್ಮ ಇಲಾಖೆಗೆ ಸೇರಿದ್ದು ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಹತ್ವದ ಹೇಳಿಕೆ ನೀಡಿದ್ದು, ಆ ಭೂಮಿಯನ್ನು ವಾಪಸ್ ಪಡೆಯಲು ಅರಣ್ಯ ಇಲಾಖೆ ನಿರ್ಧರಿಸಿದೆ.

159 ಎಕರೆ ಭೂಮಿ ವಿವಾದದ ಮೂಲ
ಯಲಹಂಕ ತಾಲೂಕಿನ ಗಂಟಿಗಾನಹಳ್ಳಿ ಗ್ರಾಮದ 159 ಎಕರೆ ಪ್ರದೇಶದ ಪಹಣಿ ಮತ್ತು ಮ್ಯುಟೇಶನ್ ದಾಖಲೆಗಳು ಅರಣ್ಯ ಇಲಾಖೆ ಹೆಸರಲ್ಲಿ ನೋಂದಣಿಯಾಗಿರುವುದು ಈ ವಿವಾದಕ್ಕೆ ಕಾರಣವಾಗಿದೆ. ಪ್ರಸ್ತುತ ಭಾರತೀಯ ವಾಯುಸೇನೆ ಬಳಸುತ್ತಿರುವ ಈ ಭೂಮಿ ತಾನು ವಾಪಸ್ ಪಡೆಯಲಿದ್ದೇನೆ ಎಂದು ಸಚಿವ ಖಂಡ್ರೆ ಸ್ಪಷ್ಟ ಪಡಿಸಿದ್ದಾರೆ.

“ಅರಣ್ಯ ಇಲಾಖೆಯ ಜಾಗ ಯಾವತ್ತೂ ಅರಣ್ಯ ಇಲಾಖೆಗೇ ಸೇರಿದ್ದು. ಅರಣ್ಯ ಭೂಮಿಯಲ್ಲಿ ಒಂದಿಂಚು ಕೂಡ ಪೋಲಾಗಲು ಬಿಡುವುದಿಲ್ಲ. ಅರಣ್ಯ ಸಂಪತ್ತು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು” ಎಂದು ಖಂಡ್ರೆ ದೃಢವಾಗಿ ತಿಳಿಸಿದ್ದಾರೆ.

ಏರೋ ಇಂಡಿಯಾ ಶೋ ಏನು?
ಪ್ರತಿ ಎರಡು ವರ್ಷಕ್ಕೊಮ್ಮೆ ಭಾರತೀಯ ವಾಯುಸೇನೆ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಆಯೋಜಿಸುವ ಏರೋ ಇಂಡಿಯಾ, ಏಷ್ಯಾದ ಅತಿ ದೊಡ್ಡ ವಾಯು ಮತ್ತು ರಕ್ಷಣಾ ಪ್ರದರ್ಶನಗಳಲ್ಲಿ ಒಂದು. ದೇಶ-ವಿದೇಶಗಳಿಂದ ರಕ್ಷಣಾ ಕಂಪನಿಗಳು, ವಿಮಾನ ತಯಾರಕರು ಮತ್ತು ಹೂಡಿಕೆದಾರರು ಭಾಗವಹಿಸುವ ಈ ಶೋ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತ ಬಂದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ರಕ್ಷಣಾ ಒಪ್ಪಂದಗಳು ಮತ್ತು ಹೂಡಿಕೆಗಳು ಈ ವೇದಿಕೆಯಲ್ಲಿ ನಡೆಯುತ್ತವೆ.

ರಾಜ್ಯ ಮತ್ತು ಕೇಂದ್ರದ ನಡುವೆ ಜಟಾಪಟಿ
ಅರಣ್ಯ ಇಲಾಖೆಯ ಈ ನಿರ್ಧಾರ ರಾಜ್ಯ ಸರ್ಕಾರ ಮತ್ತು ಭಾರತೀಯ ವಾಯುಸೇನೆ ನಡುವೆ ಹೊಸ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. ವಾಯುಸೇನೆ ದಶಕಗಳಿಂದ ಬಳಸುತ್ತ ಬಂದಿರುವ ಭೂಮಿಯ ಮೇಲೆ ಅರಣ್ಯ ಇಲಾಖೆ ಹಕ್ಕು ಸಾಧಿಸುತ್ತಿರುವುದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಭೂಮಿ ವಶ ಪಡೆದರೆ ಏರೋ ಇಂಡಿಯಾ ಶೋ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳಬಹುದು ಅಥವಾ ರದ್ದಾಗಬಹುದು ಎಂಬ ಆತಂಕ ರಕ್ಷಣಾ ಉದ್ಯಮ ವಲಯದಲ್ಲಿ ವ್ಯಕ್ತವಾಗಿದೆ.

ಈ ವಿಷಯದ ಬಗ್ಗೆ ವಾಯುಸೇನೆ ಮತ್ತು ಕೇಂದ್ರ ರಕ್ಷಣಾ ಸಚಿವಾಲಯದ ಪ್ರತಿಕ್ರಿಯೆ ಇನ್ನೂ ಬಾಕಿ ಇದೆ.

Related Articles

ಇತ್ತೀಚಿನ ಸುದ್ದಿಗಳು