Home ಪುಸ್ತಕ 20ನೇ ಶತಮಾನದ ಬಹಳ ದೊಡ್ಡ ಪುಸ್ತಕ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್: ಪ್ರೊ.ರಹಮತ್ ತರೀಕೆರೆ

20ನೇ ಶತಮಾನದ ಬಹಳ ದೊಡ್ಡ ಪುಸ್ತಕ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್: ಪ್ರೊ.ರಹಮತ್ ತರೀಕೆರೆ

ಬೆಂಗಳೂರು: ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಲೇಖಕರ ಸಂಘ ಬಹುತ್ವ ಆಯಾಮದ ಚಳವಳಿಯಾಗಿ ಮೂಡಲಿ ಎಂದು ಹಿರಿಯ ಸಾಹಿತಿ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು. 

ಏಪ್ರಿಲ್ 23ರ, ಬುಧವಾರ ನಗರದ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ನಡೆದ  ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘದ ಉದ್ಘಾಟನೆ ಜೊತೆಗೆ ಅಂಬೇಡ್ಕರ್ ಜಯಂತಿ-ವಿಶ್ವ ಪುಸ್ತಕ ದಿನಾಚರಣೆಯ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. 

1979 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಲಿತ ಸಾಹಿತ್ಯಕ್ಕೆ ವೇದಿಕೆಯಲ್ಲಿ ಅವಕಾಶ ನೀಡದಿದ್ದಕ್ಕಾಗಿ ಒಂದು ಪ್ರತಿಭಟನೆಯಾಗಿ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಿದಂತೆ, ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘವೂ ಕೆಲಸ ಮಾಡುತ್ತೆ ಎಂದೆನಿಸುತ್ತೆ. ಇದರಲ್ಲಿ ಒಂದು ಪ್ರತಿರೋಧ ಇದೆ ಎಂದು ಹೇಳಿದರು. 

ಕರ್ನಾಟಕದಲ್ಲಿ ಪುಸ್ತಕ ಸಂಸ್ಕೃತಿಯಲ್ಲಿ ಮೂರು ಮಾದರಿಗಳಿವೆ. ಶುದ್ಧ ವ್ಯಾಪಾರ ಮಾದರಿ, ಪುಸ್ತಕವನ್ನು ರಾಜಕೀಯ ಅಜೆಂಡಾವನ್ನಾಗಿ ನೋಡುವ ಮಾದರಿ, ಪುಸ್ತಕವನ್ನು ಮನುಕುಲದ ಸೇವೆಯನ್ನಾಗಿ, ಪ್ರಜಾಪ್ರಭುತ್ವದ ಸಂವೇದನಾಶೀಲ ನಾಗರಿಕರನ್ನು ಸೃಷ್ಠಿ ಮಾಡುವುದೇ ಪುಸ್ತಕ ಸಂಸ್ಕೃತಿಯ ಉದ್ದೇಶವನ್ನಾಗಿಸಿಕೊಂಡ ಮಾದರಿಯಾಗಿದೆ. 

ಕಳೆದ 5ವರ್ಷಗಳಲ್ಲಿ ಪುಸ್ತಕದ ಅಂಗಡಿಯಲ್ಲಿ ಹೆಚ್ಚು ಮಾತಾಡಿದ್ದೇನೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದ ಚರ್ಚೆಗಳು ಪುಸ್ತಕದಂಗಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು.

20ನೇ ಶತಮಾನದಲ್ಲಿ ಬಹಳ ದೊಡ್ಡ ಪುಸ್ತಕ ಪ್ರೇಮಿ ಯಾರಾದರೂ ಇದ್ದರೆ, ಅದು ಡಾ.ಬಿ.ಆರ್.ಅಂಬೇಡ್ಕರ್ ಅವರು. ಕಾರ್ಮಿಕ ಮಂತ್ರಿ ಯಾಗಿದ್ದಾಗ, ಹಳೆಯ ಪುಸ್ತಕದಂಗಡಿಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಂಡು ಬರುತ್ತಿದ್ದರು.

ಭಾರತದ ಮಂತ್ರಿಯೊಬ್ಬರು ಧೂಳಿನ ಪುಸ್ತಕದಂಗಡಿಯಲ್ಲಿ ಸಮಯ ಕಳೆದಿದ್ದೂ ಯಾರಾದೂ ಇದ್ದರೆ ಅದೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ. ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ನಿರ್ಮಾಣ ಹಾಗೂ ಅವರ ಚಳವಳಿಯ ಪುಸ್ತಕಗಳು ಮುಖ್ಯ ಪಾತ್ರವಹಿಸಿವೆ ಎಂದು ತಿಳಿಸಿದರು. 

ಸಿನೆಮಾ ಮತ್ತು ನಾಟಕಗಳು ನಾಯಕ ಮತ್ತು ನಿರ್ದೇಶಕ  ಕೇಂದ್ರಿತವಾಗಿರುತ್ತವೆ. ಆದರೆ ಸಿನೆಮಾದಲ್ಲಿ ಲೈಟ್‌ಬಾಯ್, ಪರದೆ ಎಳೆಯುವವರು ಇಲ್ಲದಿದ್ದರೇ ಏನಾಗುತ್ತಿತ್ತು. ಸಾಮೂಹಿಕ ದುಡಿಮೆಯ ಸಂಸ್ಕೃತಿಯ ಭಾಗವಾಗಿ ಕಲಾ ಮಾದ್ಯಮಗಳು ಸೃಷ್ಠಿಯಾಗಿವೆ. ಆದರೆ ನಟ ಕೇಂದ್ರಿತವಾಗಿ ವ್ಯಾಖ್ಯಾನ ಮಾಡಿ, ಇಡೀ ಕಲೆಯ ಸೃಷ್ಠಿಯ ಹಿಂದೆ ಇರುವ ವ್ಯಕ್ತಿಗಳನ್ನು ನಾವು ಮರೆತಿದ್ದೇವೆ.

ಇದು ಭಾರತೀಯರು ವ್ಯಕ್ತಿ ಕೇಂದ್ರಿತ ಇತಿಹಾಸವನ್ನು ರಚನೆ ಮಾಡುವ ದುಷ್ಪರಿಣಾಮದ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟರು. 

ಈಗ ಸಾಮೂಹಿಕ ಪ್ರಜ್ಞೆಯೇ ಇಲ್ಲವಾಗಿದೆ. ಆದಷ್ಟು ಹೊಸ ಉದ್ಯಮಶೀಲತೆಗಳನ್ನು ಸಾಮೂಹಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕು. ಬಹುತ್ವ ಎನ್ನುವುದು ಆದರ್ಶವಾದಾಗ ಅದನ್ನು ಪಾಲಿಸಬೇಕು. ಕರ್ನಾಟಕದ ಎಲ್ಲ ಕ್ಷೇತ್ರಗಳ ಸಾಧಕರ ಹಿನ್ನೆಲೆಯಲ್ಲಿ ದುಡಿದಿರುವವರನ್ನು ಸೇರಿಸಿಕೊಂಡೇ ನಾವು ಚರಿತ್ರೆಯನ್ನು ಕಟ್ಟಬೇಕಿದೆ ಎಂದು ತಿಳಿಸಿದರು. 

ಹೊಸತಲೆಮಾರು ಓದನ್ನು ಹೇಗೆ ನೋಡುತ್ತಾರೆ, ಡಿಜಿಟಲ್ ಯುಗದಲ್ಲಿ ನೋಡುವ ಮತ್ತು ಕೇಳುವ ಸಂಸ್ಕೃತಿ ಅತಿವೇಗವಾಗಿ ಬೆಳೆಯುತ್ತಿದ್ದು, ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. 

ಇದೇ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ‘ನಾನು ಬರಹಗಾರನಲ್ಲ, ಚಿಂತಕನೂ ಅಲ್ಲ, ಆದರೆ ಬರಹಗಾರರು, ಚಿಂತಕರ ಜೊತೆ ಓದುತ್ತಾ, ಅವರ ಒಡನಾಟದಲ್ಲಿ ಬೆಳೆದ ಹೋರಾಟಗಾರ, ನಾವು ಓದಿಗೆ ತೆರೆದುಕೊಂಡದ್ದೇ ವಿಭಿನ್ನ ಎಂದು ಹೇಳಿದರು.

ಈ ವೇಳೆ ದೇಶದಲ್ಲೆಡೆ, ಹಾಗೂ ಜಗತ್ತಿನ ಸುತ್ತಮುತ್ತ ನೋಡಿರೆ ಪ್ರಜಾತಂತ್ರವನ್ನು ಬಳಸಿಕೊಂಡೇ ಸರ್ವಾಧಿಕಾರಿಗಗಳು ಅಧಿಕಾರಕ್ಕೇರುತ್ತಿದ್ದಾರೆ. ಅವರೆಲ್ಲರೂ ಪುಸ್ತಕ ದ್ವೇಷಿಗಳೇ, ಅವರಿಗೆ ಒಬ್ಬ ಕನ್ನಡಿಗನನ್ನು, ಒಂದು ಮಗುವನ್ನು ಕೂಡ ಸಹಿಸಿಕೊಳ್ಳಲಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿಯ ಪಾತ್ರ ಏನು ಎನ್ನುವುದನ್ನು ಕೂಡ ಆಲೋಚನೆ ಮಾಡಬೇಕಿದೆ. ಇಡೀ ಪುಸ್ತಕೋದ್ಯಮ ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕಿವೆ. ಪುಸ್ತಕ ಮೇಳಗಳನ್ನು ಕೂಡ ಬಂಡವಾಳಶಾಹಿಗಳು ಸ್ಟಾರ್ ಹೊಟೇಲ್‌ಗಳಲ್ಲಿ ನಡೆಸುತ್ತಿದ್ದಾರೆ ಅಂತಾ ಆತಂಕ ವ್ಯಕ್ತ ಪಡಿಸಿದರು.

ಜೊತೆಗೆ ಪುಸ್ತಕ ಲೋಕ ಹೇಗೆ ಅಂಬೇಡ್ಕರ್ ಬರಹಗಳನ್ನು ವ್ಯವಸ್ಥಿತವಾಗಿ ಜನರ ಕೈಗೆ ಸಿಗದಂತೆ ನೋಡಿಕೊಂಡಿದೆ ಎಂಬುದನ್ನು ವಿವರಿಸಿದರು. ಜೊತೆಗೆ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ದಾರಿ ಮಾಡಿಕೊಡುತ್ತಿರುವ ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘಕ್ಕೆ ಶುಭಾಷಯ ಕೋರುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದರು. 

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ಪ್ರಕಾಶಕ ಗುರುಪ್ರಸಾದ್ ಡಿ.ಎನ್, ಪ್ರಕಾಶಕಿ ಡಾ.ಮಮತಾ ಕೆ.ಎನ್, ರಹಮತ್ ತರೀಕೆರೆ ಸೇರಿದಂತೆ ಅನೇಕ ಗಣ್ಯರು, ಪುಸ್ತಕಾಸಕ್ತರು ಉಪಸ್ಥಿತರಿದ್ದರು.

You cannot copy content of this page

Exit mobile version