Saturday, September 6, 2025

ಸತ್ಯ | ನ್ಯಾಯ |ಧರ್ಮ

ಶೂದ್ರ ಶ್ರೀನಿವಾಸ್, ಜನ್ನಿಗೆ ಡಾ. ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿ ಶ್ರವಣಬೆಳಗೊಳದಲ್ಲಿ ಪ್ರಶಸ್ತಿ ಪ್ರದಾನ

ಚನ್ನರಾಯಪಟ್ಟಣ : ತಾಲ್ಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ 2024ನೇ ಸಾಲಿಗೆ ಜನಪದ ಗಾಯಕ ಎಚ್.ಜನಾರ್ಧನ್(ಜನ್ನಿ) ಮತ್ತು 2025ನೇ ಸಾಲಿಗೆ ಶೂದ್ರ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಸೆ.18 ರ ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ದಿವ್ಯ ಸಾನ್ನಿಧ್ಯ ವಹಿಸುವರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ವಹಿಸಲಿದ್ದು, ಡಾ.ಸಿದ್ದಲಿಂಗಯ್ಯ ಅವರ ಶ್ರೀಮತಿ ರಮಾಕುಮಾರಿ, ಮಗಳು ಡಾ.ಮಾನಸ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹಾಜರಿರುವರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ ಈ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವಂತೆ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರನ್ನು ಶುಕ್ರವಾರ ಕೇಂದ್ರ ಹಾಗೂ ಜಿಲ್ಲಾ ಕಸಾಪ ವತಿಯಿಂದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಆಹ್ವಾನಿಸಲಾಯಿತು. ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಎಚ್.ಬಿ.ಮದನಗೌಡ, ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಶ್ರವಣಬೆಳಗೊಳ ಕಸಾಪ ಮಾಜಿ ಅಧ್ಯಕ್ಷ ಡಾ. ಬಿ.ಆರ್. ಯುವರಾಜ್, ಅಧ್ಯಕ್ಷ ನಾಗೇಂದ್ರ ರಾಯ ಮೊದಲಾದವರಿದ್ದರು.

2024 ಹಾಗೂ 25ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ:

ಎಚ್.ಜನಾರ್ಧನ (ಜನ್ನಿ): 2024ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವ ಎಚ್.ಜನಾರ್ಧನ (ಜನ್ನಿ) ಅವರು ಸುಮಾರು ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡವರು. ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಅವರು ಬೀದಿ ನಾಟಕ ಚಳುವಳಿಯಲ್ಲಿ, ಕಾವ್ಯರಂಗ ಪ್ರಯೋಗದಲ್ಲಿ ತಮ್ಮ ವಿಶಿಷ್ಟತೆ ಮರೆದಿದ್ದಾರೆ. ಬರ ಚಿತ್ರದ ಮೂಲಕ ಚಲನಚಿತ್ರ ಕ್ಷೇತ್ರವನ್ನು ಪ್ರವೇಶ ಮಾಡಿ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜನಮನದ ಜನ್ನಿ ಎಂದೇ ಹೆಸರಾಗಿರುವ ಇವರು ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಗಾಯನದ ಮೂಲಕ ಜನಮನಕ್ಕೆ ತಲುಪಿಸಿದ ಸಾಧನೆಯನ್ನು ಗಮನಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಶೂದ್ರ ಶ್ರೀನಿವಾಸ್: 2025ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವ ಶೂದ್ರ ಶ್ರೀನಿವಾಸ್ ಶೂದ್ರ ಸಾಹಿತ್ಯ ಪತ್ರಿಕೆ ಮೂಲಕ ಜನಪ್ರಿಯರಾದವರು. ಸಂವೇದನಾಶೀಲ ಬರಹಗಾರರಾದ ಅವರು ನಿರಂತರ ಹೋರಾಟಗಾರರು. ಶೂದ್ರ, ಸಲ್ಲಾಪ, ನೆಲದ ಮಾತು ಪತ್ರಿಕೆಗಳನ್ನು ಪ್ರಕಟಿಸಿದ ಹೆಗ್ಗಳಿಕೆಯ ಅವರು ಕರ್ನಾಟಕದ ಪ್ರಮುಖ ಚಳುವಳಿಗಳ ಜೊತೆಗೆ ಸದಾ ಇದ್ದವರು. ಮಾನವ ಸಂಬಂದಗಳ ವೃದ್ಧಿಗಾಗಿ ಬೋಧಿವೃಕ್ಷ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಹಲವು ಪ್ರಮುಖ ಕಾರ್ಯಕ್ರಮ ನಡೆಸಿದರು. ಲಂಕೇಶ್ ಪತ್ರಿಕೆ ಅಂಕಣಕಾರರಾಗಿ ಹೆಸರು ಮಾಡಿರುವ ಅವರು ಡಾ.ಸಿದ್ದಲಿಂಗಯ್ಯ ಅವರ ಮೊದಲ ಕೃತಿ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page