Saturday, June 15, 2024

ಸತ್ಯ | ನ್ಯಾಯ |ಧರ್ಮ

‘ಡ್ರೈವ್ ಮೈ ಕಾರ್’ – ಒಂದು  ಸಿನಿಮಾ ಪಯಣ

ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಸೆಣೆಸಿರುವ ಪ್ರಮುಖ ಚಿತ್ರಗಳಲ್ಲಿ ‘ಡ್ರೈವ್ ಮೈ ಕಾರ್’  ಕೂಡಾ ಒಂದು. ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದಿರುವ ಈ ಚಿತ್ರದ ಕುರಿತು ಯುವನೋಟದಲ್ಲಿ ಬರೆದಿದ್ದಾರೆ ಗುರು ಸುಳ್ಯ

ಜಪಾನಿನೆಡೆಗಿನ ಇಷ್ಟ

ಜಪಾನ್ ದೇಶದೆಡೆಗೊಂದು ಪ್ರತ್ಯೇಕವಾದ ಇಷ್ಟವಿದೆ ನನಗೆ. ಕಲೆಗೆ ಸಂಬಂಧಿತ ವಿಷಯಗಳಲ್ಲಿ ಜಪಾನಿನ ಹೆಸರು ಕೇಳಿದರೆ ನನ್ನ ಕಿವಿ ನಿಮಿರುತ್ತದೆ. ಜಪಾನೀ ನಿರ್ದೇಶಕ ‘ಕೋರಿ ಇಡಾ’ ನ ಸಿನಿಮಾಗಳು ನನಗೆ ತುಂಬಾ ಇಷ್ಟ. ಆತನ ‘ಮಾಬೊರೋಸಿ’ ಚಿತ್ರ ನನ್ನ ಮನಸ್ಸಿಗೆ ಇವತ್ತಿಗು ಬಣ್ಣ ಹಚ್ಚುತ್ತಿದೆ. ಇತ್ತೀಚೆಗೆ ಪ್ರಕಟವಾದ ‘ಮಂಜುನಾಥ ಚಾರ್ವಾಕ’ ಅನುವಾದಿಸಿರುವ ಜಪಾನಿ ಬರಹಗಾರ ‘ಮುರಕಾಮಿ’ಯ ‘ಕಿನೊ ಮತ್ತು ಇತರ ಕಥೆಗಳು’ ಕೂಡ ನನ್ನನ್ನು ಬಹುವಾಗಿ ಆವರಿಸಿದ್ದವು. ಕೆಲವೊಂದು ಸಿನಿಮಾಗಳು, ಆ ಸಿನಿಮಾದ ಬಗ್ಗೆ ಒಂದಕ್ಷರ ಬರೆಯಲಾಗದಷ್ಟು ತಮ್ಮೊಳಗೆ ಎಳೆದುಕೊಂಡು ಬಿಡುತ್ತವೆ. ಆಧುನಿಕ ಯುಗದ ಜನಪ್ರಿಯ ಕಲೆಯಾದ  ಸಿನಿಮಾ ನನ್ನ ಅಂತರಾಳವನ್ನು ಕಲಕುವ ಪರಿಗೆ ಬೆರಗು ಗೊಳ್ಳುತ್ತೇನೆ. ಕಳೆದ ವಾರ ಮುರಕಮಿ ಕಥೆಗಳನ್ನು ಆದರಿಸಿದ ಸಿನಿಮಾವೊಂದನ್ನು ನೋಡಿದೆ. ಅದರ ಬಗ್ಗೆ ಸುಮ್ಮನೆ ಮಾಡಿಟ್ಟುಕೊಂಡ ಟಿಪ್ಪಣಿಗಳು ವಿಸ್ತೃತಗೊಂಡು ಈ ಬರಹವಾಗಿದೆ.


ಮಾತಿನ ಪರಿಮಿತಿಗಳ ಆಚೆಗೆ

ನನ್ನ ಪಾಲಿಗೆ ಈ ಸಿನಿಮಾ ತೆರೆದುಕೊಳ್ಳುವುದೆ ಡೈನಿಂಗ್ ಟೇಬಲಿನಲ್ಲಿ. ಊಟದ ನಡುವೆ ಸನ್ನೆಗಳಲ್ಲಿ ಹರಡಿಕೊಳ್ಳುವ ಮೂಕಿ ಹುಡುಗಿಯ ಜೊತೆಗಿನ ಸಂಭಾಷಣೆಯಲ್ಲಿ. ಆ ದೃಶ್ಯ ಬರುವ ಹೊತ್ತಿಗಾಗಲೇ ಅರ್ಧ ಸಿನಿಮಾ ಮುಗಿದು ಹೋಗಿರುತ್ತದೆ. ಆದರೆ, ಅಲ್ಲಿಂದ ಹಿಂದಕ್ಕೂ-ಮುಂದಕ್ಕೂ ಚಲಿಸುತ್ತಾ, ನನ್ನನ್ನು ಒಂದು ಟೇಪ್ ರೆಕಾರ್ಡರಿನಂತಾಗಿಸಿತು ಆ ಸಿನಿಮಾ. ಆಡಿದ್ದು, ಆಡದ್ದು ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುವ ಅಸ್ತವ್ಯಸ್ತ ಬದುಕಿನಲ್ಲಿ ಕ್ಷಣಗಳಿಗೆ ಅಂಟಿಕೊಂಡು ಚದುರುವ ಚಿತ್ರಗಳು ನಾವು. ಈ ಚಲನಚಿತ್ರವು ಅಂತದ್ದೇ ಏನೋ ಒಂದು ಹೇಳಲಾಗದ ಸಂಕಟಗಳ ಸುರುಳಿಯನ್ನು ಹರವಿಟ್ಟು ನೋಡು ಎನ್ನುತ್ತದೆ. ಸಿನಿಮಾದಲ್ಲಿ, ಅಲ್ಲಲ್ಲಿ ಕಾರಿನ ಸ್ಟೀರಿಯೋದಲ್ಲಿ ‘ಕಫುಕು’ ರೆಕಾರ್ಡ್ ಮಾಡಿಟ್ಟುಕೊಂಡ ಪಾತ್ರಗಳ ಮಾತುಗಳು ಪ್ಲೇ ಆಗುತ್ತಿರುತ್ತವೆ. ಆ ಮಾತುಗಳು ರಿಯಾಲಿಟಿಯನ್ನು ಪ್ರತಿಬಿಂಬಿಸುತ್ತವೆ. ಕಫುಕು ಒಬ್ಬ ನಾಟಕಕಾರ. ಜಪಾನಿನ ‘ಹಿರೋಶಿಮ’ ನಗರದಲ್ಲಿ ನಡೆಯುವ ಆತನ ಹೊಸ ನಾಟಕ, ನಾಟಕಕಾರ ‘ಚೆಕಾವ್’ನ ‘ಅಂಕಲ್ ವ್ಯಾನ್ಯಾ’. ಕಫುಕುವಿನ ಬದುಕಿನ ಸಂದಿಗ್ಧತೆಗಳು ಈ ನಾಟಕದೊಳಗೂ ಹಾಸು ಹೊಕ್ಕಾಗಿರುತ್ತದೆ. ಈ ನಾಟಕಕ್ಕಾಗಿ ವಿವಿಧ ಭಾಷೆಗಳ ಕಲಾವಿದರನ್ನು ಆಯ್ಕೆ ಮಾಡಲು ಹುಡುಕಾಟ ನಡೆಯುತ್ತದೆ. ಜಪಾನ್, ಕೊರಿಯ, ಚೈನೀಸ್, ಥಾಯ್ ಇತ್ಯಾದಿ ಭಾಷೆಗಳನ್ನು ಒಟ್ಟಿಗೆ ಒಂದೇ ರಂಗದಲ್ಲಿ ತರುವ ಉದ್ದೇಶವು ಇದಕ್ಕಿರುತ್ತದೆ. ಈ ಹುಡುಕಾಟದ ನಡುವೆ ಸಿಗುವವಳೇ ಈ ಸದ್ದಿಲ್ಲದೆ ಮಾತನಾಡುವ ಹುಡುಗಿ. ಭಾಷೆಯ ಪರಿಮಿತಿಯನ್ನು ಮೀರಲು ಯತ್ನಿಸುವ ಮುರಕಾಮಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ. ಮಾತು ಬಾರದ ಹುಡುಗಿಯ ಮಾತುಗಳು, ಸಿನಿಮಾದ ಡೈಲಾಗುಗಳಾಗಿ ಮೌನದ ರೂಪದಲ್ಲಿ ಚಿತ್ರದುದ್ದಕ್ಕೂ ಹರಿಯುತ್ತಲೇ, ಅಂತ್ಯ ಹಾಡುತ್ತದೆ.



ಕಾರಿಗೂ ಜೀವವಿದೆ

ಚಿತ್ರದ ಹೆಸರು ‘ಡ್ರೈವ್ ಮೈ ಕಾರ್’. ‘ನಾರ್ವೇಯನ್ ವುಡ್’ ಹಾಡಿನಂತೆಯೇ ಮುರಕಾಮಿಯ ಇಷ್ಟದ ‘ಬೀಟಲ್ಸ್ ಮ್ಯೂಸಿಕ್ ಬ್ಯಾಂಡಿನ’ ಹಾಡೊಂದರ ಸಾಲಿದು. ಕಥೆಯಲ್ಲಿ ಹಳದಿ ಬಣ್ಣದಲ್ಲಿರುವ ಕಾರನ್ನು ನಿರ್ದೇಶಕ ಎದ್ದು ಕಾಣುವ ಕೆಂಪು ಬಣ್ಣವಾಗಿಸಿದ್ದಾನೆ. ಸಿನಿಮಾದ ಮುಖ್ಯ ಪಾತ್ರವಾಗಿರುವ ‘ಕಫುಕು’ವಿನ ಕಾರಿನ ಡ್ರೈವರ್ ಆಗಿ ಬರುವವಳು ‘ಮಿಸಾಕಿ’. ಕಾರಿಗೂ ಜೀವವಿದೆ ಎಂಬಂತೆ ಚಲಾಯಿಸುವ ಮಿಸಾಕಿ, ಅಪಘಾತ ಮತ್ತು ಚೇತರಿಕೆಗಳರೆಡಕ್ಕೂ ಸಾಕ್ಷಿಯಂತಿರುವವಳು. ಕಾರಿನ ಚಾಲಕಿಯಾದ ಈ ಹುಡುಗಿ ನಿಂತು ಹೋದಂತಿದ್ದ ಆತನ ಚಲನೆಯನ್ನು ಉದ್ದೀಪಿಸುತ್ತಾಳೆ. ಯಾರಿಗೂ ಬೇಡವಾದ ಕಸದ ರಾಶಿಯನ್ನು ಸಂಸ್ಕರಿಸುವ ಜಾಗ ಆಕೆಯ ಇಷ್ಟದ ಜಾಗ. ಇದು ಹಿರೋಶಿಮದಲ್ಲಿ ನಡೆದ ಮಾರಣಹೋಮದ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕದ ಸ್ವಲ್ಪ ಹತ್ತಿರದಲ್ಲಿರುವುದು ಸಿನಿಮಾದ ಮಟ್ಟಿಗೆ ಕಾಕತಾಳೀಯವೇನಲ್ಲ. ಹಿರೋಶಿಮ ನಗರಕ್ಕೆ ಅಂಟಿಕೊಂಡಿರುವ ನೋವಿನ ಇತಿಹಾಸದ ಮೇಲೆ ನೇರವಾಗಿ ಕ್ಯಾಮರ ಚಲಿಸುವುದೇ ಇಲ್ಲ. ಹಿರೋಶಿಮದ ರಸ್ತೆಗಳಲ್ಲಿ ಓಡಾಡುವ ಕಾರನ್ನು ತೋರಿಸುವ ದೃಶ್ಯಗಳಲ್ಲಷ್ಟೇ ಆ ನಗರ ಓಡಾಡುವುದು.


ಕಫುಕು ಮತ್ತು ಮಿಸಾಕಿ, ತಮ್ಮ ಬದುಕಿನ ಕಥೆಗಳನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಗೂಗಲ್ ಮ್ಯಾಪ್ ತೆರೆದಿಟ್ಟು ತಮ್ಮ

ಗಮ್ಯವನ್ನು ಹುಡುಕಿ ಕೊಳ್ಳುವಂತಿರುತ್ತದೆ ಅವರಿಬ್ಬರ ಪಯಣ. ಕಫುಕು – ನೀನು ಬಿಟ್ಟು ಬಂದ ಊರಿಗೆ, ನಿನ್ನಮ್ಮ ಸತ್ತ ಜಾಗಕ್ಕೆ ನನ್ನನ್ನು ಕರೆದೊಯ್ಯಿ ಅನ್ನುತ್ತಾನೆ. ಹಿಮಪಾತವಾದ, ಮಂಜುತುಂಬಿದ ಜಾಗಕ್ಕೆ ಹೋಗುತ್ತಾರೆ ಇಬ್ಬರೂ. ದೇಹ ತಣ್ಣಗಾಗುವ ಮಂಜಿನ ಮಧ್ಯೆ ಅವಳು ಸೇದಿ ಮುಗಿಸಿದ ಸಿಗರೇಟಿನ ತುಂಡನ್ನು ನೆಡುತ್ತಾಳೆ. ಮರಣಕ್ಕೆ ಸಾಂತ್ವನಿಸುವಂತೆ, ಉರಿದು ಹೋಗುವ ಸಿಗರೇಟಿಗೆ ಲಾಲಿ ಹಾಡುತ್ತದೆ ಹಿಮ. ಇಬ್ಬರೂ ಸೇರಿಕೊಂಡು ಸತ್ತವರ ನೆನಪುಗಳಿಗೆ ಅಂಟಿದ ಕೊಳೆಯನ್ನು ತೊಳೆಯುತ್ತಾರೆ. ಅದನ್ನು ನೋಡುತ್ತಿರುವಾಗಲೇ, ‘ಸ್ಮಶಾನದಲ್ಲಿ ಮಾತನಾಡುವವರ, ಮೌನವನೊಮ್ಮೆ ಆಲಿಸಿ’ ಅನ್ನುವ ‘ರೂಮಿ’ ಯ ಸಾಲುಗಳು ನೆನಪಾಗುತ್ತವೆ.

ಗುಪ್ತಗಾಮಿನಿ


ಸಿನಿಮಾದ ಶುರುವಿಂದ ಕೊನೆಯವರೆಗೆ ಹರಿಯುವ ಗುಪ್ತಗಾಮಿನಿ ಕಫುಕುವಿನ ಹೆಂಡತಿ ‘ಒಟೊ’. ಆ ಹರಿವಿಂದ ಹುಟ್ಟಿದ ಕಥೆಗಳೇ ಎಲ್ಲವೂ. ಅವಳು ಯಾರ ಜೊತೆಗಾದರು ಸೆಕ್ಸ್ ಮಾಡುವಾಗ ಅವಳಲ್ಲಿ ಹುಟ್ಟುವ ಕಥೆಗಳನ್ನು ಕಾಣಬಹುದು, ಕೇಳಬಹುದು. ಇದು ಮನುಷ್ಯರ ವಿಕಾಸದಲ್ಲಿ ಕಥೆಗಳು ವಹಿಸಿದ ಪಾತ್ರವನ್ನು ಹೇಳುವಂತಿದೆ. ಅವಳ ಕಥೆಯೊಂದರಿಂದ ಪಾತ್ರವೊಂದು ಎದ್ದು ಬಂದು, ಉಳಿದ ಕಥೆ ತಾನೇ ಹೇಳುವಂಥ ಪಾತ್ರವೊಂದಿದೆ ಚಿತ್ರದಲ್ಲಿ. ಆ ಪಾತ್ರದ ಹೆಸರು ‘ಕೋಶಿ’. ಆತನ ಹುಡುಕಾಟಕ್ಕಿರುವ ಪ್ರಾಮಾಣಿಕತೆ ತೀವ್ರ ತರವಾದದ್ದು. ಕಪುಕು ಮತ್ತು ಒಟೊ ದಂಪತಿಗಳ ಮಗು ತೀರಿ ಹೋಗಿರುತ್ತದೆ. ಕಫುಕುವಿನ ಹೆಂಡತಿ ಒಟೊ ಕೂಡ ತೀರಿಕೊಳ್ಳುತ್ತಾಳೆ. ಮಿಸುಕಿಯ ತಾಯಿ ಸತ್ತಿರುತ್ತಾಳೆ. ಮಿಸುಕಿ ತನ್ನ ತಾಯಿ ಸಾಯುವುದನ್ನು ಹತಾಶೆ, ಪ್ರೀತಿ ಮತ್ತು ತಣ್ಣಗಿನ ಕ್ರೌರ್ಯದೊಂದಿಗೆ ನೋಡಿದ ತನ್ನ ನಡವಳಿಕೆಯನ್ನು ಕಫುಕುವಿನೊಂದಿಗೆ ಹಂಚಿಕೊಳ್ಳುತ್ತಾಳೆ. ಕಫುಕು ತನ್ನ ಹೆಂಡತಿ ಸಾಯುವ ಮುಂಚೆ ತನಗೆ ಏನೋ ಹೇಳಬೇಕೆಂದಿದ್ದನ್ನು ಕೇಳಿಸಿಕೊಳ್ಳದೇ ಹೋದುದಕ್ಕೆ ಪರಿತಪಿಸುತ್ತಾನೆ. ಬದುಕಿನೊಳಗೆ ಮೌನವಾಗಿ ಪ್ರವಹಿಸುವ ಸಾವು ನೋಡುಗರನ್ನು ಸೋಕುತ್ತದೆ.

ಏಕತಾನತೆಯ ಪ್ರತಿನಿಧಿಗಳು

ಯಾವುದು ನಮ್ಮ ಮನೆ ? ಒಂದು ಕಟ್ಟಡವೋ, ಒಬ್ರು ವ್ಯಕ್ತಿಯಾ? ಅಪರಿಚಿತ ಮನೆಯಲ್ಲಿನ ನಾಯಿ, ನಿನಗೊಂದು ಮನೆಯ ಫೀಲ್ ಕೊಡಬಲ್ಲುದಾ? ಹೌದು; ಒಂದು ಕಾರು, ಪ್ರಾಣಿ , ಮನುಷ್ಯರು, ಒಂದು ಭಾವ, ನಾಟಕದ ಥಿಯೇಟರ್ ಅಥವಾ ಇನ್ಯಾವುದೇ ವಸ್ತು ಮನೆಯಾಗಬಲ್ಲುದು. ಇದು ಸಿನಿಮಾದೊಳಗೆ ಅಲ್ಲಲ್ಲಿ ವ್ಯಕ್ತವಾಗುತ್ತದೆ. ಮುಖ್ಯವಾಗಿ ಮಿಸುಕಿ ಪಾತ್ರದ ಆಳಕ್ಕಿಳಿದಾಗ ಅದಿನ್ನು ಸ್ಪಷ್ಟವಾಗುತ್ತದೆ. ಎಲ್ಲವೂ ಪರ್ಫೆಕ್ಟ್ ಆಗಿ ಸಾಗಬೇಕು ಅನ್ನುವ ಏಕತಾನತೆಗೆ ಹೊಂದಿಕೊಂಡಿರುವ ಕಫುಕು ಅದಕ್ಕೆ ಸಾಕ್ಷಿಯೆಂಬಂತೆ, ತುಂಬಾ ನೀಟಾಗಿ ಕಾಣಿಸುವ ಅವನ ಹಳೇ ಕಾರಿನಲ್ಲಿ ನೆನಪುಗಳನ್ನು ಸಾಗಿಸುತ್ತಿರುತ್ತಾನೆ. ತನ್ನ ಬದುಕಿನ ಬಗೆಗಿನ ಗಿಲ್ಟ್ ಅನ್ನು ಉಳಿಸಿ ಕೊಂಡಿರುವಾಕೆ ಮಿಸುಕಿ. ಯಾವುದನ್ನೂ ಪೂರ್ತಿಯಾಗಿ ಅಪ್ಪಿಕೊಳ್ಳದೇ, ಬದುಕಿನ ಸಣ್ಣ ಖುಷಿಗಳನ್ನು, ದುಃಖದಿಂದೆಂಬಂತೆ ಅನುಭವಿಸುತ್ತಿರುವಾಕೆ. ತನಗೇನು ಬೇಡ ಎಂಬಂತೆ ಒಂದರಿಂದ ಇನ್ನೊಂದಕ್ಕೆ ಸಾಗುವ ಮಿಸುಕಿ ಕೂಡ ಒಂದು ರೀತಿಯಲ್ಲಿ ಏಕತಾನತೆಯ ಪ್ರತಿನಿಧಿ. ನಾಟಕದ ಪರದೆ ಚೂರು ಚೂರೇ ಸರಿಯುವಂತೆ, ವೈರುಧ್ಯ ತುಂಬಿದ ಅವರವರ ಬದುಕು ಮತ್ತೆ ಮುಂದುವರೆಯುತ್ತದೆ. ಹಿಂದಿನದ್ದನ್ನು ಹಿಂದೆಯೇ ಬಿಟ್ಟು, ಬದುಕಿನೊಂದಿಗೆ ಪ್ರಾಮಾಣಿಕವಾಗಿರ ಬಯಸುವ ಬೀಜ ಚಿಗುರೊಡೆಯುತ್ತದೆ.


ಕಾಫ್ಕಾನ ಕೀಟ

‘ನಿನ್ನ ಹೆಂಡತಿ, ನಿನ್ನನ್ನು ಪ್ರೀತಿಸುವಷ್ಟೇ ಸಹಜವಾಗಿ ಬೇರೆ ಗೆಳೆಯರೊಂದಿಗೆ ಲೈಂಗಿಕ ಸಾಂಗತ್ಯವನ್ನು ಹೊಂದಿದ್ದಳು ಎಂದ್ಯಾಕೆ ನೀನು ತಿಳಿಯಬಾರದು’ – ಇದು ಒಂದು ಹಂತದಲ್ಲಿ ಕಫುಕುವಿಗೆ ಮಿಸುಕಿ ಹೇಳುವ ಮಾತುಗಳಿವು. “ನಮಗೆ ವಿವಿಧ ತರದ ಮನುಷ್ಯ ಸ್ವಭಾವಗಳನ್ನು ಅದು ಇರುವಂತೆಯೇ ನೋಡಲು ಸಾಧ್ಯವಾಗುವುದಿಲ್ಲ. ಅರ್ಥವಾಗದಿರುವ ಸಂದರ್ಭಗಳನ್ನು ಅತೀಂದ್ರಿಯತೆಗೆ ಆರೋಪಿಸಲು ಹಾತೊರೆಯುತ್ತೇವೆ. ಸಹಜವಾದ ನಡವಳಿಕೆಗಳನ್ನು ಸಂಶಯದ ಬಲಿಗಲ್ಲಿಗೆ ಒಡ್ಡುವಾಗ ನಮ್ಮಲ್ಲಿರುವ ಕ್ರೌರ್ಯದ ಅಂಶಗಳನ್ನು ಮರೆಯುತ್ತೇವೆ” – ಇವನ್ನೆಲ್ಲಾ ಒರೆಗಲ್ಲಿಗೆ ಹಚ್ಚುವ ಸಿನಿಮಾದ ಸಂಭಾಷಣೆ, ಅಲ್ಲಲ್ಲಿ ಚೂರು ಚೂರೇ ಸಾಣೆ ಹಿಡಿಯುತ್ತದೆ. ಕಫುಕು ಪಾತ್ರದ ಹೆಸರು ಬರುವಲ್ಲೆಲ್ಲಾ, ನಾನು ‘ಕಾಫ್ಕಾ’ ಅಂತಾನೆ ಕೇಳಿಸ್ಕೋತಾ ಇದ್ದೆ. ಕಾಫ್ಕಾನ ಕೀಟ ಒಳಗೆಲ್ಲೋ ಸುಳಿದಾಡಿದಂತಿದೆ.

ಯಾರೋ  ಕಿವಿಗೆ ಉಸಿರು ಸೋಕುವಷ್ಟು ಹತ್ತಿರ ಕೂತ್ಕೊಂಡು ಹೇಳಿದಂತಿದೆ ಇಲ್ಲಿನ ಕಥಾನಕಗಳು. 120 ನಿಮಿಷದಷ್ಟು ಉದ್ದವಿರುವ, ತುಂಬಾ ನಿಧಾನವಾಗಿ ಸರಿಯುವ ಸಿನಿಮಾ, ಅದರೊಳಗೆ ಇಳಿಯದಿದ್ದರೆ ಬೋರ್ ಹೊಡೆಸುವ ಸಾಧ್ಯತೆಯಿದೆ. ಇಲ್ಲಿನ ಪಾತ್ರಗಳು ಕಥೆ ಹೇಳುತ್ತಾ, ಹೇಳುತ್ತಾ ಕಥೆಗಳಾಗುತ್ತಾ ಹೋಗುತ್ತವೆ. ಮುರಕಾಮಿ ಕಥೆಗಳನ್ನು ಓದುವುದು ಹಾಗೇ ಇರುತ್ತದೆ; ಈ ಸಿನಿಮಾ ಕೊಡುವ ಫೀಲ್’ನ ಹಾಗೆ. ‘ಹೇಳಲಾಗದ್ದನ್ನು, ಹೇಳದೆಯೇ ಉಳಿಸಿಯೂ, ಓದುಗನೆಡೆಗೆ ತಲುಪಿಸುವ’ ಮುರಕಾಮಿಯ ಕ್ರಾಫ್ಟ್ ಅನ್ನು ಈ ಸಿನಿಮಾದ ನಿರ್ದೇಶಕ ‘ಹಮಗುಚಿ ರುಯ್ಯುಸ್ಕೆ’ ಅವಾಹಿಸಿಕೊಂಡಂತಿದೆ.

ಗುರು ಸುಳ್ಯ

ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

Related Articles

ಇತ್ತೀಚಿನ ಸುದ್ದಿಗಳು