Home ವಿದೇಶ ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಭಾರತೀಯ ಸಿಬ್ಬಂದಿ ಸಾವು

ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಭಾರತೀಯ ಸಿಬ್ಬಂದಿ ಸಾವು

0

ಮಸ್ಕತ್: ಒಮನ್ ಕರಾವಳಿಯಲ್ಲಿ ಸಾಗುತ್ತಿದ್ದ ತೈಲ ಟ್ಯಾಂಕರ್ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದ್ದು, ಈ ದುರಂತದಲ್ಲಿ ಭಾರತೀಯ ಮೂಲದ ನೌಕಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವುದನ್ನು ಒಮನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ತಿರುಗೇಟು ನೀಡುತ್ತಿರುವ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಮಾರ್ಚ್ 1 ರಂದು ಒಮನ್ ಸಮುದ್ರ ಜಲಪ್ರದೇಶದಲ್ಲಿ ಚಲಿಸುತ್ತಿದ್ದ ಮಾರ್ಷಲ್ ದ್ವೀಪಗಳಿಗೆ ಸೇರಿದ ‘ಎಂಕೆಡಿ ವಿಯೋಮ್’ ಎಂಬ ತೈಲ ಟ್ಯಾಂಕರ್ ಅನ್ನು ಡ್ರೋನ್ ಮೂಲಕ ಗುರಿಯಾಗಿಸಲಾಗಿತ್ತು. ಡ್ರೋನ್ ದಾಳಿಯ ತೀವ್ರತೆಗೆ ಹಡಗಿನ ಪ್ರಧಾನ ಇಂಜಿನ್ ಕೊಠಡಿಯಲ್ಲಿ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ.

ದಾಳಿಗೊಳಗಾದ ತೈಲ ಟ್ಯಾಂಕರ್‌ನಲ್ಲಿ ಒಟ್ಟು 21 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ 16 ಮಂದಿ ಭಾರತೀಯರು, ನಾಲ್ವರು ಬಾಂಗ್ಲಾದೇಶದವರು ಮತ್ತು ಒಬ್ಬರು ಉಕ್ರೇನ್ ಪ್ರಜೆಯಾಗಿದ್ದರು. ಸ್ಫೋಟದ ವೇಳೆ ಭಾರತೀಯ ಮೆರೈನ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಸೋಮವಾರ ಒಮನ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಹೆಚ್ಚಿನ ವಿವರಗಳನ್ನು ಭದ್ರತಾ ಕಾರಣಗಳಿಗಾಗಿ ಇನ್ನು ಬಹಿರಂಗಪಡಿಸಲಾಗಿಲ್ಲ.

ಘಟನೆಯ ನಂತರ ಹಡಗಿನಲ್ಲಿದ್ದ ಉಳಿದ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಅವರನ್ನು ಪನಾಮ ದೇಶಕ್ಕೆ ಸೇರಿದ ಕಾರ್ಗೋ ಹಡಗಿನ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಈಗ ಸಮುದ್ರಯಾನದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ.


You cannot copy content of this page

Exit mobile version