ರಿಯಾದ್: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿ ಇರುವ ಅಮೇರಿಕಾದ ರಾಯಭಾರಿ ಕಚೇರಿ ಮೇಲೆ ಮುಂಜಾನೆ ನಡೆದ ಡ್ರೋನ್ ದಾಳಿ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಎರಡು ಆತ್ಮಹತ್ಯಾ ಡ್ರೋನ್‌ಗಳು ಕಚೇರಿ ಆವರಣವನ್ನು ಗುರಿಯಾಗಿಸಿಕೊಂಡು ಸ್ಫೋಟಗೊಂಡಿದ್ದು, ಕಟ್ಟಡಕ್ಕೆ ಅಲ್ಪ ಹಾನಿಯಾಗಿದೆ.
ಅಧಿಕಾರಿಗಳ ಪ್ರಕಾರ, ದಾಳಿ ನಡೆದ ಸಮಯದಲ್ಲಿ ಕಚೇರಿ ಖಾಲಿಯಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಸ್ಫೋಟದ ಪರಿಣಾಮವಾಗಿ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ದಳ ಅದನ್ನು ನಿಯಂತ್ರಿಸಿದೆ.
ಇದಕ್ಕೂ ಮುನ್ನ, ರಿಯಾದ್ ಕಡೆಗೆ ಚಲಿಸುತ್ತಿದ್ದ ಇನ್ನೂ ನಾಲ್ಕು ಡ್ರೋನ್‌ಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ಮಧ್ಯದಲ್ಲೇ ಹೊಡೆದುರುಳಿಸಿರುವುದಾಗಿ ರಕ್ಷಣಾ ಇಲಾಖೆ ತಿಳಿಸಿದೆ. ರಾಜಧಾನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಅಮೆರಿಕದ ಕಠಿಣ ಪ್ರತಿಕ್ರಿಯೆ
ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಈ ರೀತಿಯ ಕೃತ್ಯಗಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಸೌದಿ ಸೇರಿದಂತೆ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರುವ ಅಮೆರಿಕ ನಾಗರಿಕರು ತಕ್ಷಣವೇ ಎಚ್ಚರಿಕೆಯಿಂದ ವರ್ತಿಸಬೇಕೆಂದು ಸೂಚಿಸಲಾಗಿದೆ.
ತೈಲ ಮಾರುಕಟ್ಟೆಯಲ್ಲಿ ಆತಂಕ
ಘಟನೆಯ ಬಳಿಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೌದಿ ಆರಾಮ್ಕೋ ತನ್ನ ಪ್ರಮುಖ ತೈಲ ಸಂಸ್ಕರಣಾ ಘಟಕಗಳಲ್ಲಿ ಒಂದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಇರಾನ್ ಬೆಂಬಲಿತ ಗುಂಪುಗಳ ಮೇಲೆ ಅನುಮಾನ
ಈ ದಾಳಿಯ ಹಿಂದೆ ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆಗಳ ಕೈವಾಡವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಯಾವುದೇ ಸಂಘಟನೆ ಇದುವರೆಗೆ ಹೊಣೆ ಹೊತ್ತಿಲ್ಲ. ಸೌದಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ದಾಳಿಯನ್ನು ಖಂಡಿಸಿ, “ಇದು ಸೌದಿಯ ಸಾರ್ವಭೌಮತ್ವದ ಮೇಲಿನ ದಾಳಿ” ಎಂದು ಹೇಳಿದೆ.
ಪ್ರಾದೇಶಿಕ ಭದ್ರತೆ ಕಾಪಾಡಲು ಅಂತರರಾಷ್ಟ್ರೀಯ ಸಹಕಾರ ಅಗತ್ಯವಿದೆ ಎಂದು ಸೌದಿ ಸರ್ಕಾರ ಒತ್ತಿಹೇಳಿದೆ. ರಿಯಾದ್ ಸೇರಿದಂತೆ ಪ್ರಮುಖ ತೈಲ ಕೇಂದ್ರಗಳ ಭದ್ರತೆ ಹೆಚ್ಚಿಸಲಾಗಿದ್ದು, ವಾಯು ರಕ್ಷಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.
