ಡಿಕೆಶಿ ಸಿಎಂ ಆಗಿದ್ದೆ ರಾಜ್ಯಕ್ಕೆ ಬರಗಾಲ – ಆರ್.ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ (Mansoon Rain) ಸಂಪೂರ್ಣವಾಗಿ ಕೈಕೊಟ್ಟು ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲದ (Drought) ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ (R Ashok) ಅವರು ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಏಕವಚನದಲ್ಲೇ ಅತ್ಯಂತ ಭೀಕರವಾಗಿ ವಾಗ್ದಾಳಿ ನಡೆಸಿದ್ದಾರೆ.ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಭರ್ಜರಿ ಒಂದು ತಿಂಗಳು ಕಳೆದಿದೆ. ಆದರೆ ಈ ಒಂದು ತಿಂಗಳ ಆಡಳಿತದಲ್ಲಿ ರಾಜ್ಯದಲ್ಲಿ ಏನು ಬದಲಾವಣೆಯಾಗಿದೆ ಎಂದು ಪ್ರಶ್ನಿಸಿದ ಅಶೋಕ್, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮಾತ್ರ ತಾರಕಕ್ಕೇರಿದ್ದು, ಇದು ನೋಡಲು ‘ಹಳೇ ಬಾಟಲಿಗೆ ಹೊಸ ಮದ್ಯ’ ತುಂಬಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಅಷ್ಟೇ ಅಲ್ಲದೆ, ಡಿ.ಕೆ.ಶಿವಕುಮಾರ್ ಅಧಿಕಾರಕ್ಕೇರಿದ ಕಾಲ್ಗುಣವೇ ಅಂತಹದ್ದು ಅನಿಸುತ್ತದೆ, ಅವರು ಸಿಎಂ ಆದ ತಕ್ಷಣವೇ ಇಡೀ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.ರೈತರಿಗೆ ನೀರಿಲ್ಲದ ಕಾರಣಕ್ಕೆ ಈ ಬಾರಿ ಯಾವುದೇ ಬೆಳೆಗಳನ್ನು ಬೆಳೆಯಬೇಡಿ ಎಂದು ಸರ್ಕಾರ ಹೇಳುತ್ತಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿದ ಅಶೋಕ್, ನಿನಗೆ ನಿಜವಾಗಿಯೂ ಧೈರ್ಯ ಇದ್ದರೆ ಇದೇ ಮಾತನ್ನು ತಮಿಳುನಾಡಿಗೆ ಹೋಗಿ ಹೇಳು ಎಂದು ಮುಖ್ಯಮಂತ್ರಿಗೆ ನೇರ ಸವಾಲು ಹಾಕಿದ್ದಾರೆ. 

ಮೇಕೆದಾಟು ಅಣೆಕಟ್ಟು ಯೋಜನೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಬಹಿರಂಗವಾಗಿ ಹೇಳುತ್ತಿದ್ದಾರೆ. ನಮ್ಮ ಸಿಎಂ ಅಧಿಕಾರಕ್ಕೆ ಬಂದು ತಿಂಗಳಾದರೂ ತಮಿಳುನಾಡಿನ ಈ ದಾರ್ಷ್ಟ್ಯದ ವಿರುದ್ಧ ಪ್ರತಿಯಾಗಿ ಒಂದು ಕಠಿಣ ನಿರ್ಣಯವನ್ನೂ ಕೈಗೊಂಡಿಲ್ಲ. ಬದಲಿಗೆ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಬಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ನಮ್ಮ ನೀರಾವರಿ ಸಚಿವರು ಬೆಂಗಳೂರು ಬಿಟ್ಟು ಆಚೆಗೇ ಹೋಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. 

Related Articles

ಇತ್ತೀಚಿನ ಸುದ್ದಿಗಳು