ಚನ್ನರಾಯಪಟ್ಟಣ : ತಾಲೂಕಿನ ಸೋರೆಕಾಯಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹರೀಶ್ ಪಾನಮತ್ತನಾಗಿ ಶಾಲೆಗೆ ಹಾಜರಾಗಿ, ವಿದ್ಯಾರ್ಥಿಗಳನ್ನು ಥಳಿಸಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯೂ ಅಮಾನತು ಮಾಡಿ ಆದೇಶ ನೀಡಿದೆ. ಡಿ.8 ರಂದು ಶಿಕ್ಷಕ ಮತ್ತು ಆತನ ಪತ್ನಿ ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಥಳಿಸಿದ್ದರು. ಈ ಬಗ್ಗೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಲಿಖಿತ ದೂರು ನೀಡಿದ್ದರು. ಸಿಆರ್ ಪಿ ಮತ್ತು ಶಿಕ್ಷಣ ಸಂಯೋಜಕರುಗಳ ಪ್ರಕರಣದ ಬಗ್ಗೆ ನೀಡಿರುವ ವರದಿ, ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಹಾಗೂ ಕರ್ತವ್ಯ ಸಮಯದಲ್ಲಿ ಮದ್ಯಪಾನ ಮಾಡಿರುವುದಾಗಿ ಶಿಕ್ಷಕನೇ ಸ್ವ ಅಕ್ಷರದಲ್ಲಿ ಬರೆದು ಕೊಟ್ಟಿರುವ ಹಿನ್ನೆಲೆಯಲ್ಲಿ ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ ಆದೇಶ ನೀಡಿದ್ದಾರೆ.
