Saturday, June 15, 2024

ಸತ್ಯ | ನ್ಯಾಯ |ಧರ್ಮ

ಡಿಎಸ್‌ಎಸ್‌ ಪಕ್ಷವಲ್ಲ ದಲಿತರ ಶಕ್ತಿ: ಸಿ.ಬಸವಲಿಂಗಯ್ಯ

ಬೆಂಗಳೂರು: ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಒಂದು ಪಕ್ಷವಲ್ಲ ಇದು ದಲಿತರ ಶಕ್ತಿ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬ, ನಾವು ಇದನ್ನು ಸಂಭ್ರಮಿಸುತ್ತೇವೆ ಎಂದರು.

ಈ ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ “ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ ಚರ್ಮ ಎಬ್ಬುರ್ಲʼಎಂದು ಹಾಡಿದ್ದೇವೆ ಹೌದು. ಜೊತೆಗೆ ನಾವು ಕಟ್ಟುತ್ತೇವೆ, ನಾವು ಕಟ್ಟುತ್ತೇವೆ ಹಾಡನ್ನು ಸಹ ಹಾಡುತ್ತೇವೆ. ನಮ್ಮದು ಸಾಂಸ್ಕೃತಿಕ ಪ್ರತರೋಧ ಎಂದು ಹೇಳಿದರು.

ದಲಿತರ ತಮಟನೆಯನ್ನು ಜನ ಕೀಳೆಂದು ತಿಳಿದಿದ್ದರು. ಅದನ್ನೆ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಜಂಬೆ ಎನ್ನುವುದು ಆಫ್ರಿಕದಲ್ಲಿ ಹುಟ್ಟಿತು. ಅದಕ್ಕೂ ನಮಗೂ ಡಿಎನ್‌ಎ ಸಂಬಂಧವಿದೆ ಮತ್ತು ಜಂಬೆ ಇಂದು ವಿಶ್ವವ್ಯಾಪಿಯಾಗಿದೆ. ಈ ಸಾಂಸ್ಕೃತಿಕ ಆಯುಧಗಳ ಮೂಲಕ ಹೊಸ ಪ್ರತಿರೋಧ ಚಳವಳಿ ಕಟ್ಟುತ್ತೇವೆ. ಏಕೆಂದರೆ ಡಿಎಸ್‌ಎಸ್‌ ಎಂಬುದು ಒಂದು ಪಕ್ಷವಲ್ಲ, ಬದಲಿಗೆ ದಲಿತರ ಶಕ್ತಿ ಎಂದರು.

ನಾವೆಲ್ಲವರೂ ವಿಶ್ವಮಾನವರು, ನಾವೆಲ್ಲ ಒಂದೇ. ಮೂಲನಿವಾಸಿಗಳ ಮೇಲಿನ ದಮನ ದೌರ್ಜನ್ಯವನ್ನು ಒಟ್ಟಾಗಿ ಎದುರಿಸುತ್ತೇವೆ. ಇದು ಪೇಶ್ವೆ ಭಾರತವಲ್ಲ, ಇದು ಸಂವಿಧಾನ ಭಾರತ. ದೌರ್ಜನ್ಯ ನಡೆಸುವವರ ಡಿಎನ್‌ಎ ಚೆಕ್ ಮಾಡಿದರೆ ನಮಗೆ ಸತ್ಯ ತಿಳಿಯುತ್ತದೆ ಎಂದು ಹೇಳಿದರು.

ಇದು ಬುದ್ದನ ನಾಡು, ಆದರೆ ಬುದ್ಧನೇ ಇಲ್ಲಿ ಪರಕೀಯನಾಗಿದ್ದಾನೆ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ, ಇದಕ್ಕೆ ಅವಕಾಶ ಕೊಡಬಾರದು. ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ ಎಂದು ಸಿ.ಬಸವಲಿಂಗಯ್ಯ ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು