Friday, June 14, 2024

ಸತ್ಯ | ನ್ಯಾಯ |ಧರ್ಮ

ಬಾಕಿ ವೇತನ ಬಿಡುಗಡೆ, ಉದ್ಯೋಗ ಭದ್ರತೆಗೆ ಆಗ್ರಹ: ಮಂಗಳೂರಿನಲ್ಲಿ ಅತಿಥಿ ಶಿಕ್ಷಕರಿಂದ ಧರಣಿ

ಐದು ತಿಂಗಳಿಂದ ವೇತನ ಪಾವತಿಸದೆ ಸತಾಯಿಸುತ್ತಿರುವುದರಿಂದ ಆಕ್ರೋಶಗೊಂಡ ದ.ಕ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರು ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಸಿ ಬಾಕಿ ವೇತನ ತಕ್ಷಣ ಬಿಡುಗಡೆಗೊಳಿಸುವಂತೆ ಪಟ್ಟು ಹಿಡಿದರು. ಉದ್ಯೋಗ ಭದ್ರತೆ, ತಿಂಗಳಿಗೆ ಕನಿಷ್ಟ 22,000 ರೂಪಾಯಿ ವೇತನ ನೀಡುವುದು, ಮಹಿಳಾ ಶಿಕ್ಷಕಿಯರಿಗೆ ಹೆರಿಗೆ ರಜೆ ಸೌಲಭ್ಯ ಒದಗಿಸುವುದು, ವರ್ಷದ 12 ತಿಂಗಳು ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆದ ಸಾಯಂಕಾಲ ಐದರ ವರಗೆ ನಡೆದ ಧರಣಿಯಲ್ಲಿ ಜಿಲ್ಲೆಯ ವಿವಿದೆಡೆಯ 300ಕ್ಕೂ ಹೆಚ್ಚು ಅತಿಥಿ ಟೀಚರ್ ಗಳು ಪಾಲ್ಗೊಂಡರು.

ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಮಂಗಳೂರು ತಾಲೂಕು ವ್ಯಾಪ್ತಿಯ ಇಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಧರಣಿ ನಿರತರೊಂದಿಗೆ ಮಾತುಕತೆಗೆ ಕಳುಹಿಸಿಕೊಟ್ಟರು. ‘ಬಾಕಿ ವೇತನ ಈಗಾಗಲೆ ಬಿಡುಗಡೆಗೊಂಡಿದೆ. ಎರಡು ದಿನಗಳಲ್ಲಿ ಶಿಕ್ಷಕರ ಖಾತೆಗೆ ಜಮಾ ಮಾಡಲಾಗುವುದು’ ಎಂದು ಭರವಸೆ ನೀಡಿದರು. ಎರಡು ದಿನಗಳಲ್ಲಿ ಬಾಕಿ ವೇತನ ಸಂದಾಯ ಆಗದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ಧಿಷ್ಟ ಧರಣಿ ನಡೆಸುವ ತೀರ್ಮಾನದೊಂದಿಗೆ ಧರಣಿ ಕೊನೆಗೊಂಡಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮುಖಂಡರಾದ ಸಂತೋಷ್ ಬಜಾಲ್, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಕಾಂಗ್ರೆಸ್ ನಾಯಕ ಮಿಥುನ್ ರೈ, ಅತಿಥಿ ಶಿಕ್ಷಕರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಜಯಮಾಲ ಧರಣಿ ನಿರತರನ್ನು ಉದ್ದೇಶಿ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಿಕಾ, ಕಾರ್ಯದರ್ಶಿ ಚಿತ್ರಲೇಕಾ ಕೆ, ಮುಖಂಡರಾದ ರೇವತಿ ಬಂಟ್ವಾಳ, ಸೌಮ್ಯ ಕಡಬ, ಕಾವ್ಯ ಸುಳ್ಯ, ಕವಿತಾ ನಾಯಕ್, ಜ್ಯೋತಿ ಮುಂತಾದವರು ಧರಣಿಯ ನೇತೃತ್ವ ವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು