ಅಹಮದಾಬಾದ್: ನಕಲಿ ಟೋಲ್ ಪ್ಲಾಜಾ, ನಕಲಿ ಬ್ಯಾಂಕ್ ಮತ್ತು ನಕಲಿ ಪೊಲೀಸ್ ಠಾಣೆಯ ನಂತರ ಗುಜರಾತ್‌ನಲ್ಲಿ ನಕಲಿ ನ್ಯಾಯಾಲಯವೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿಯು ನಕಲಿ ನ್ಯಾಯಾಧಿಕರಣವನ್ನು ಸ್ಥಾಪಿಸಿ ನ್ಯಾಯಾಧೀಶರಂತೆ ನಟಿಸಿ ತೀರ್ಪುಗಳನ್ನು ನೀಡಿದ್ದಾನೆ.
ಪ್ರಸ್ತುತ ಅವನು ಕಂಬಿ ಎಣಿಸುವಲ್ಲಿ ನಿರತನಾಗಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಇದಕ್ಕಾಗಿ ಆರೋಪಿ ತನ್ನ ಕಚೇರಿ ಕೊಠಡಿಯನ್ನು ನ್ಯಾಯಾಲಯದ ಕೊಠಡಿಯನ್ನಾಗಿ ಪರಿವರ್ತಿಸಿದ್ದ. ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ 2019ರಲ್ಲಿ ತನ್ನ ಕಕ್ಷಿದಾರರ ಪರವಾಗಿ ತೀರ್ಪು ನೀಡಿದ್ದ.
ಈ ವೇಳೆ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ. ಈತ ಕಳೆದ ಐದು ವರ್ಷಗಳಿಂದ ಇದೇ ಕೆಲಸದಲ್ಲಿ ಇರುವುದು ಪತ್ತೆಯಾಗಿದೆ. ಈತ ನೀಡಿದ ಆದೇಶಗಳು ಹುಸಿಯಾಗಿದ್ದನ್ನು ಕಂಡು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇರುವ ಭೂ ವಿವಾದ ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬಲೆಗೆ ಬೀಳಿಸಿ ತಮ್ಮ ನ್ಯಾಯಾಲಯಕ್ಕೆ ಕರೆತರುತ್ತಿದ್ದ. ಶೀಘ್ರ ಪರಿಹಾರ ನೀಡುವುದಾಗಿ ಹೇಳಿ ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಅವನ ಸಹಚರರು ನ್ಯಾಯಾಲಯದ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ಆತನ ವಿರುದ್ಧ 2015ರಲ್ಲಿಯೂ ವಂಚನೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.