ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025ರ ಗಣತಿ ಕಾರ್ಯದ ಅವಧಿಯನ್ನು ಅಕ್ಟೋಬರ್ 12ರವರೆಗೆ ವಿಸ್ತರಿಸಲಾಗಿದ್ದು, ಇದರ ಬೆನ್ನಲ್ಲೇ ಶಿಕ್ಷಕರ ದಸರಾ ರಜೆ ಅವಧಿಯನ್ನು ವಿಸ್ತರಿಸಬೇಕೆಂದು ಶಿಕ್ಷಕರು ಮನವಿ ಮಾಡಿದ್ದಾರೆ. ಸಮೀಕ್ಷಾ ಅವಧಿಯ ವಿಸ್ತರಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆಪ್ಟೆಂಬರ್ 20, 2025 ರಿಂದ ಅಕ್ಟೋಬರ್ 7, 2025 ರವರೆಗೆ ದಸರಾ ರಜೆ ಘೋಷಿಸಿತ್ತು. ಆದರೆ, ಸಮೀಕ್ಷೆ ಗಣತಿ ಕಾರ್ಯದಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲಾ ಶಿಕ್ಷಕರುಗಳನ್ನು ಸೆಪ್ಟೆಂಬರ್ 22, 2025 ರಿಂದ ಅಕ್ಟೋಬರ್ 7, 2025 ರವರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಗಣತಿ ಕಾರ್ಯದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ನಿಗದಿತ ಅವಧಿಯೊಳಗೆ ಕಾರ್ಯ ಪೂರ್ಣಗೊಂಡಿಲ್ಲ, ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವು ಅಕ್ಟೋಬರ್ 5, 2025 ರಿಂದ ತಡವಾಗಿ ಪ್ರಾರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 8, 2025 ರೊಳಗೆ ಗಣತಿ ಕಾರ್ಯ ಸಂಪೂರ್ಣಗೊಳ್ಳದೇ ಇರುವುದು ಸ್ಪಷ್ಟವಾಗಿದೆ. ಅಲ್ಲದೆ, ರಜಾ ಅವಧಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳು ದೈಹಿಕ ಮತ್ತು ಬೌದ್ಧಿಕ ಒತ್ತಡದಲ್ಲಿ ಗಣತಿ ಕಾರ್ಯದ ಕರ್ತವ್ಯ ನಿರ್ವಹಿಸಿರುವುದರಿಂದ, ಅವರ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕಾಗಿ ಅವರಿಗೆ ಸೂಕ್ತ ರಜೆಯ ಅವಶ್ಯಕತೆ ಇದೆ. ಆದ್ದರಿಂದ, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯ ಅವಧಿಯನ್ನು ಅಕ್ಟೋಬರ್ 17, 2025ರ ವರೆಗೆ ವಿಸ್ತರಿಸುವಂತೆ ಸೂಕ್ತ ನಿರ್ದೇಶನ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘವು ಶಿಕ್ಷಣ ಸಚಿವರಿಗೆ ಕೋರಿದೆ.