ಕೇಂದ್ರ ಸರ್ಕಾರ ಇತ್ತೀಚೆಗೆ ಪರಿಚಯಿಸಿರುವ ಈ20 (E20) ಪೆಟ್ರೋಲ್‌ನಿಂದಾಗಿ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಎಂದು ಹಲವು ವಾಹನ ಸವಾರರು ದೂರುತ್ತಿದ್ದಾರೆ.
ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಸ್ಪಷ್ಟನೆ ನೀಡಿದ್ದು, ಈ20 ಪೆಟ್ರೋಲ್ ವಾಹನಗಳ ಮೈಲೇಜ್ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ. ಆದರೆ ಕೇವಲ ಎಥನಾಲ್ ಮಾತ್ರವಲ್ಲದೆ, ಹಲವು ಕಾರಣಗಳಿಂದಾಗಿ ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ರೇಸಿಂಗ್ ಕಾರುಗಳಲ್ಲೂ ಎಥನಾಲ್ ಬಳಸಲಾಗುತ್ತದೆ ಎಂಬ ವಿಷಯ ಈಗ ಸಾಬೀತಾಗಿದೆ. ಇದರಿಂದ ಪಿಕಪ್ ವೇಗ ಸುಧಾರಿಸುತ್ತದೆ ಮತ್ತು ಇಂಜಿನ್ ನಾಕಿಂಗ್ ಕೂಡ ಉತ್ತಮಗೊಳ್ಳುತ್ತದೆ. ಇನ್ನು ಮೈಲೇಜ್ ವಿಷಯಕ್ಕೆ ಬಂದರೆ.. ಮೈಲೇಜ್ ಸ್ವಲ್ಪ ಕಡಿಮೆಯಾಗಿರುವುದು ನಿಜ. ಆದರೆ ಹಲವು ಕಾರಣಗಳಿಂದಾಗಿ ಅದು ಸಂಭವಿಸಬಹುದು’ ಎಂದು ಹೇಳಿದ್ದಾರೆ.
ಭಾರತೀಯ ವಾಹನ ತಯಾರಕರ ಒಕ್ಕೂಟ (SIAM) ಮತ್ತು ಆಟೋಮೊಬೈಲ್ ಸಂಶೋಧನೆ, ಪರೀಕ್ಷೆ ಹಾಗೂ ಪ್ರಮಾಣೀಕರಣ ಸಂಸ್ಥೆಯಾದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸೇರಿದಂತೆ ಎಲ್ಲಾ ಸಂಬಂಧಿತ ವಲಯಗಳೊಂದಿಗೆ ಸಮಾಲೋಚಿಸಿದ ನಂತರವೇ ಕೇಂದ್ರ ಸರ್ಕಾರ ಈ20 ಪೆಟ್ರೋಲ್ ಅನ್ನು ಪರಿಚಯಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ವಾಹನಗಳ ಮೇಲಿನ ವಿಮಾ ರಕ್ಷಣೆಯ ಬಗ್ಗೆ ಮಾತನಾಡಿದ ಅವರು, ಇನ್ಮುಂದೆ ಇದಕ್ಕೆ ಇನ್ಶೂರೆನ್ಸ್ ಕವರೇಜ್ ಇರುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ಅಂತಹದ್ದೇನೂ ಇಲ್ಲ ಎಂಬ ವಿಷಯವನ್ನು ವಿಮಾ ಕಂಪನಿಗಳು ಈಗಾಗಲೇ ಸ್ಪಷ್ಟಪಡಿಸಿವೆ ಎಂದು ಸಚಿವರು ತಿಳಿಸಿದ್ದಾರೆ.
