Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮನಿಸಮ್ಮಿನ ಆರಂಭಿಕ ರಾಜಕೀಯ ಚಟುವಟಿಕೆಗಳು

ಮೇಲ್ಜಾತಿ ವೈಚಾರಿಕ ನವೋತ್ಥಾನ ಚಳುವಳಿ ಮತ್ತು ಕೆಳಜಾತಿ ಚಳುವಳಿಗಳೆರಡನ್ನೂ ಈ ಹೊಸ ಅವೈಚಾರಿಕ ಸಂಪ್ರದಾಯವಾದಿ ಬ್ರಾಹ್ಮಣ್ಯ ಎದುರಿಸಿದ್ದು ಸಾಂಸ್ಕೃತಿಕ ಮುಖಾಮುಖಿಗಳೊಂದಿಗೆ.  ಆದರೆ, ಬ್ರಿಟಿಷ್‌ ವಿರೋಧವನ್ನು ಪ್ರದರ್ಶಿಸಿದ್ದು ಬಹುತೇಕ ರಾಜಕೀಯ ಮುಖಾಮುಖಿಗಳ ಮೂಲಕವಾಗಿತ್ತು. ಬ್ರಿಟಿಷ್‌ ಇಂಡಿಯಾದಲ್ಲಿ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ ೧೮೭೯ರಲ್ಲಿ ಆಗಿನ ವೈಸ್‌ರಾಯ್‌ ಲೈಟನ್‌ಗೆ ಬರೆದ ಪತ್ರ ಓದಿದರೆ ಚಿತ್ಪಾವನ ಬ್ರಾಹ್ಮಣರು ಮತ್ತು ಬ್ರಿಟಿಷರ ನಡುವೆ ಇದ್ದ ಸಂಘರ್ಷದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ.

ʼಚಿತ್ಪಾವನ ಗೋತ್ರ ರಾಷ್ಟ್ರೀಯ ಭಾವನಾತ್ಮಕತೆಯಿಂದ ಪ್ರಚೋದಿತರಾಗಿದ್ದಾರೆ. ಇಂಡಿಯಾ ತನ್ನನ್ನು ತಾನು ಯಾವ ಉತ್ಕರ್ಷೆಯಲ್ಲಿ ಹೊದ್ದುಕೊಂಡಿದೆಯೋ ಅದೇ ಉತ್ಕರ್ಷೆಯಲ್ಲಿ ಚಿತ್ಪಾವನರು ತಮ್ಮನ್ನು ತಾವು ಹೊದ್ದುಕೊಂಡಿದ್ದಾರೆ. ನಿಜವಾದ ಚಿತ್ಪಾವನ ಸಾಹಸಿಕತೆಯನ್ನೂ ಒಬ್ಬ ಸೈನಿಕನ ಯುದ್ಧಸನ್ನಾಹದ ಎಲ್ಲ ಶಕ್ತಿಯನ್ನೂ ಒಬ್ಬ ರಾಜತಾಂತ್ರಿಕನ ಬುದ್ಧಿಯನ್ನೂ ತನ್ನೊಳಗೆ ಸಮನ್ವಯಗೊಳಿಸಿರುತ್ತಾನೆ. ವಿದ್ಯಾಭ್ಯಾಸ ಮತ್ತು ಸರಕಾರಿ ಉದ್ಯೋಗ ಮಾತ್ರವೇ ಚಿತ್ಪಾವನರನ್ನು ಸಂತೃಪ್ತಿಗೊಳಿಸಬಹುದೇ ಎಂದು ನಮಗೀಗ ತಿಳಿದಿಲ್ಲ. ಖಂಡಿತವಾಗಿ ವಿದ್ಯಾಭ್ಯಾಸ ಅವರಿಗೆ ನಮ್ಮ ಮೇಲೆ ಸಣ್ಣ ಮಟ್ಟದ ಗೌರವ ಮೂಡುವಂತೆ ಮಾಡಿದೆ. ಹಲವು ದೊಡ್ಡ ಸಂಗತಿಗಳನ್ನು ಅವರು ನಮ್ಮ ಭಾಷೆಯ ಮೂಲಕವೇ ಹೇಳುತ್ತಿದ್ದಾರೆ. ಅವರು ನಮ್ಮ ಯೋಚನೆಗಳನ್ನು ಮೈಗೂಡಿಸಿಕೊಂಡು ತಮ್ಮ ಯೋಚನೆಗಳನ್ನು ಕೈ ಬಿಡುತ್ತಲೂ ಇದ್ದಾರೆ. ಆದರೂ, ಇನ್ನೊಂದು ದಿಕ್ಕಿನಿಂದ ನೋಡುವಾಗ ವಿದ್ಯಾಭ್ಯಾಸ ಅವರನ್ನು ಅಸ್ವಸ್ಥಗೊಳಿಸಿದೆ. ಕಳೆದ ಶತಮಾನದಲ್ಲಿ ಅವರಿಗಿದ್ದ ಸ್ಥಾನಮಾನಗಳನ್ನು ಮತ್ತೆ ಪಡೆದುಕೊಳ್ಳದ ತನಕ ಅವರು ಸ್ವಸ್ಥರಾಗುವುದಿಲ್ಲ. ಈ ಮೇಲೆ ವಿವರಿಸಿದ, ಪಶ್ಚಿಮ ಇಂಡಿಯಾದ ಬ್ರಾಹ್ಮಣರಲ್ಲಿ ಒಂದು ವಿಭಾಗವಾದ ಕೊಂಕಣಸ್ತ ಬ್ರಾಹ್ಮಣರ ಹಾಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಮತ್ತು ರಾಜಕೀಯ ಮಹಾತ್ವಾಂಕ್ಷೆ ಹೊಂದಿರುವ, ಅದನ್ನು ಕಾಪಿಟ್ಟುಕೊಂಡಿರುವ, ನಮ್ಮಿಂದ ಸಂತೃಪ್ತಿಪಡಿಸಲಾಗದಷ್ಟು ಅದನ್ನು ಬೆಳೆಸಿಕೊಂಡಿರುವ ಇನ್ನೊಂದು ಜನ ಸಮುದಾಯವನ್ನು ಇಂಡಿಯಾದಲ್ಲಿ ನಾನು ಕಂಡಿಲ್ಲ.ʼ

೧೮೪೭ ರಿಂದ ೧೮೮೦ ರ ತನಕ ಬ್ರಿಟಿಷ್‌ ಇಂಡಿಯಾದಲ್ಲಿ ಹಲವು ಸ್ಥಾನಗಳನ್ನು ಹೊಂದಿದ್ದ ಅಧಿಕಾರಿಯಾಗಿದ್ದ ಸರ್‌ ರಿಚರ್ಡ್‌ ಟೆಂಪಲ್.‌ ಈ ಪತ್ರ ಬರೆಯುವಾಗ ಆತ ಬಾಂಬೆ ಪ್ರಾಂತ್ಯದ ಗವರ್ನರ್‌. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರ ನಂತರ ನಿರಂತರವಾಗಿ ಬ್ರಿಟಿಷ್‌ ವಿರೋಧಿ ಹೋರಾಟವನ್ನು ಎದುರಿಸಿದ್ದ ಅಧಿಕಾರಿ ಆತ. ಬ್ರಿಟಿಷ್‌ ಸಾಮ್ರಾಜ್ಯಕ್ಕೆ ನಿಷ್ಠನಾಗಿದ್ದ ಒಬ್ಬ ಅಧಿಕಾರಿಯಾಗಿ ತನ್ನ ಪ್ರಾಂತ್ಯದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಲನವನಲಗಳನ್ನು ಆತ ನಿರೀಕ್ಷಿಸುತ್ತಿದ್ದ. ಚಿತ್ಪಾವನ ಬ್ರಾಹ್ಮಣ ಗೋತ್ರದ ವಿಭಾಗವೊಂದು ಬ್ರಿಟಿಷರ ವಿರುದ್ಧ ರಾಜಕೀಯವಾಗಿ ಹಗೆತನದ ಮನೋಭಾವ ಹೊಂದಿರುವುದನ್ನು ಆತ ನಿರೀಕ್ಷಿಸಿದ್ದನೆಂದು ಮಾತ್ರವಲ್ಲ, ಆಡಳಿತಾಧಿಕಾರಿ ಎಂಬ ನೆಲೆಯಲ್ಲಿ ಅದು ಆತನ ಅನುಭವಕ್ಕೂ ಬಂದಿತ್ತು. ಪೇಶ್ವೆಗಳ ರಾಜಧಾನಿಯಾಗಿದ್ದ ಪುಣೆ ಕೇಂದ್ರೀಕರಿಸಿಕೊಂಡು ಅವರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಪತ್ರದಲ್ಲಿ ಆತ ಎತ್ತಿ ತೋರಿಸುವ ಒಂದು ಸಂಗತಿ, ʼಸಾಮಾನ್ಯವಾಗಿ ಹೇಳಲ್ಪಡುವುದು ಇಂಡಿಯಾದ ಆಡಳಿತಾಧಿಕಾರಿಗಳು ಎಂಬ ನೆಲೆಯಲ್ಲಿ ನಾವು ಮಹಮ್ಮದೀಯರನ್ನು ಸೋಲಿಸಿ ಓಡಿಸಿದೆವು ಎಂದು. ಇದು ಪೂರ್ಣಾರ್ಥದಲ್ಲಿ ನಿಜವಲ್ಲ. ನಾವು ಮುಖ್ಯವಾಗಿ ಮರಾಠರನ್ನು ಸೋಲಿಸಿದೆವು ಎಂದು ಹೇಳುವುದೇ ಸ್ವಲ್ಪವಾದರು ಸತ್ಯಕ್ಕೆ ಹತ್ತಿರವಾಗಿ ನಿಲ್ಲುವಂಥದ್ದು.ʼ

ಸರ್‌ ರಿಚರ್ಡ್‌ ಟೆಂಪಲ್‌ ಈ ಪತ್ರ ಬರೆಯುವ ಚಾರಿತ್ರಿಕ ಸಂದರ್ಭ ಬಹಳ ಮುಖ್ಯವಾದದ್ದು. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧರ್ಮದ ಸಂಕೀರ್ಣವಾದ ಹಸ್ತಕ್ಷೇಪವೂ ಇತ್ತು. ಕಾನ್ಪುರದಲ್ಲಿ ಇದಕ್ಕೆ ನಾಯಕತ್ವ ನೀಡಿದ್ದ ನಾನಾಸಾಹೇಬ್‌ ತರದ ಚಿತ್ಪಾವನ ಬ್ರಾಹ್ಮಣರು, ಆ ವಂಶದಲ್ಲಿ ಹುದುಗಿ ಹೋಗಿದ್ದ ಪೇಶ್ವಾ ಸಾಮ್ರಾಜ್ಯದ ದೀಪ್ತಸ್ಮರಣೆಯನ್ನು ಬಡಿದೆಬ್ಬಿಸಿದ್ದರು. ಇದು ಸಂಪ್ರದಾಯವಾದಿ ಬ್ರಾಹ್ಮಣರಿಗೆ ಇನ್ನಿಲ್ಲದ ಶಕ್ತಿ ನೀಡಿತು. ಆದರೆ, ಆ ಕ್ರಾಂತಿಯನ್ನು ಬ್ರಿಟಿಷರು ಹಿಮ್ಮೆಟ್ಟಿಸಿದ ಕಾರಣ ತಾತ್ಕಾಲಿಕವಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹುದುಗಿಸಿಟ್ಟುಕೊಳ್ಳಲು ಸಂಪ್ರದಾಯವಾದಿ ಚಿತ್ಪಾವನರು ನಿರ್ಬಂಧಿತರಾದರು. ಆದರೆ, ತಾವು ಒಂದು ಕಾಲದಲ್ಲಿ ಅನುಭವಿಸಿದ್ದ ಸಾಮಾಜಿಕ ಮೇಲುಸ್ತರದ ನೆನಪು ಅವರೊಳಗಿನ ಒಂದು ವಿಭಾಗದೊಳಗೆ ಹೊಗೆಯಾಡುತ್ತಲೇ ಇತ್ತು. ಬ್ರಿಟಿಷರು ಗೆದ್ದುಕೊಂಡಿರುವ ತಮ್ಮ ಸಾಮ್ರಾಜ್ಯವನ್ನು ಸಶಸ್ತ್ರ ಹೋರಾಟದ ಮೂಲಕವೇ ಮರಳಿ ಪಡೆದು ಪೇಶ್ವಾ ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸಲು ಬೇಕಾದ ಪ್ರಯತ್ನಗಳು ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ನಡೆಯುತ್ತಲೇ ಇದ್ದವು.

ವಾಸುದೇವ್‌ ಬಲವಂತ್‌ ಫಾಡ್ಕೇ (೧೮೪೫-೧೮೮೩) ೧೮೫೭ರ ಮೊದಲ ಸ್ವಾತಂತ್ರ್ಯ ಸಮರದ ನಂತರ ಬ್ರಿಟಿಷರ ವಿರುದ್ಧ ರಾಜಕೀಯ ಹೋರಾಟಕ್ಕೆ ಧುಮುಕಿದ ಚಿತ್ಪಾವನ ಬ್ರಾಹ್ಮಣರಲ್ಲಿ ಪ್ರಮುಖ ವ್ಯಕ್ತಿ. ಬ್ರಿಟಿಷರನ್ನು ಭೂಗತ ಸಶಸ್ತ್ರ ಹೋರಾಟದ ಮೂಲಕ ಸೋಲಿಸಬಹುದು ಮತ್ತು ಆ ಮೂಲಕ ಚಿತ್ಪಾವನರ ನೇತೃತ್ವದಲ್ಲಿ ಪೇಶ್ವಾಸಾಮ್ರಾಜ್ಯವನ್ನು ಪುನರ್‌ ಸ್ಥಾಪಿಸಬಹುದೆಂಬ ಅಭಿಲಾಷೆಯೇ ಫಾಡ್ಕೆಯನ್ನು ಮುನ್ನಡೆಸಿದ ಪ್ರೇರಕ ಶಕ್ತಿ ಎಂಬುದಕ್ಕೆ ಧಾರಾಳ ಸಾಕ್ಷಿಗಳಿವೆ. ಫಾಡ್ಕೆ ತನ್ನನ್ನು ತಾನು ‘ಹೊಸ ಪೇಶ್ವಾ ಪ್ರಧಾನ್’‌ ಎಂದು ಗುರುತಿಸಿಕೊಂಡಿದ್ದ. ಫಾಡ್ಕೆಯ ತೀವ್ರವಾದಿ ಸಂಘಟನೆ ನಿಜದಲ್ಲಿ ಪೂರ್ಣ ಸ್ವರೂಪದ ತೀವ್ರವಾದಿ ಸಂಘಟನೆಯಾಗಿರಲಿಲ್ಲ. ಈ ವಿಷಯದಲ್ಲಿ ಶಿವಾಜಿ ಮತ್ತು ಪೇಶ್ವೆಗಳು ಅವಲಂಬಿಸಿದ್ದ ದಾರಿಯ ಹೊಸರೀತಿಯನ್ನು ಫಾಡ್ಕೆಯೂ ಅವಲಂಬಿಸಿದ್ದ. ಕೆಳಜಾತಿಯ ಜನರನ್ನು ಸಂಘಟಿಸಿ ತಮಗೆ ನಿಷ್ಠೆ ಹೊಂದಿದ ಒಂದು ಸಂಘಟನೆ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಒಂದು ಸೈನ್ಯವನ್ನು ಕಟ್ಟುವುದು. ಮರಾಠ ಪ್ರಾಂತ್ಯದ ಕೆಳಜಾತಿ ವಿಭಾಗಗಳಾದ ಕೋಳಿಯರು, ರಾಮೋಶಿಯರು ಮತ್ತಿತರರನ್ನು ತನ್ನ ಆತ್ಮಾಹುತಿ ದಳವಾಗಿಸಲು ‘ಪೇಶ್ವಾ ಪ್ರಧಾನಿ’ಗೆ ಸಾಧ್ಯವಾಗಿತ್ತು. ಇವರುಗಳೇ ಹಲವಾರು ದರೋಡೆಗಳನ್ನು ನಡೆಸಿ ಫಾಡ್ಕೆಯ ಸಂಘಟನೆಯನ್ನು ಆರ್ಥಿಕವಾಗಿ ಸಬಲರಾಗಿಸಿದವರು.

ಫಾಡ್ಕೆ ಆಗಿನ ಗ್ರೇಟ್‌ ಇಂಡಿಯನ್‌ ಪೆನಿನ್ಸುಲಾ ರೈಲ್ವೇಯಲ್ಲಿ ಆಡಿಟ್‌ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದ. ಚಿತ್ಪಾವನ ಬ್ರಾಹ್ಮಣರು ಪೇಶ್ವಾ ಆಡಳಿತದ ಅಡಿಯಲ್ಲಿ ಗಳಿಸಿದ ಸಾಮಾಜಿಕ ಚಲನಾತ್ಮಕತೆಯ ಫಲವಾಗಿ, ಬ್ರಿಟಿಷರ ಎದುರು ಸೋತು ಶರಣಾಗಬೇಕಾಗಿ ಬಂದಿದ್ದರು ಕೂಡ, ಸಾಮಾಜಿಕವಾಗಿ ಅಸ್ತಿತ್ವ ಕಾಯ್ದುಕೊಂಡದನ್ನು ನಾವು ಕಂಡೆವು. ಫಾಡ್ಕೆ ಅಂತವರಲ್ಲಿ ಒಬ್ಬನಾಗಿದ್ದ. ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದ ನಂತರ ಆತ ಉದ್ಯೋಗಕ್ಕೆ ಸೇರಿದ್ದ. ೧೫ ವರ್ಷಗಳ ತನ್ನ ಔದ್ಯೋಗಿಕ ಬದುಕಿನಲ್ಲಿ ಮಿಲಿಟರಿ ಅಕೌಂಟ್ಸ್‌ ಕಂಟ್ರೋಲರ್‌ ಆಗಿಯೂ ಭಡ್ತಿ ಹೊಂದಿದ್ದ. ಪುಣೆಯಲ್ಲಿ ಆತ ಕೆಲಸ ಮಾಡುತ್ತಿದ್ದ. ಸಹಜವಾಗಿಯೇ ಅಂದಿನ ಪ್ರಗತಿಪರ ಚಿತ್ಪಾವನ ಯುವಕರ ಹಾಗೆ ಆತನೂ ರಾಣಡೆಯ ಆಕರ್ಷಣೆಗೆ ಬಿದ್ದು ಸಾರ್ವಜನಿಕ್‌ ಸಭಾದ ಸ್ವದೇಶಿ ಘೋಷಣೆಗಳನ್ನು ಕೂಗುತ್ತಲೂ ಇದ್ದ. ಉತ್ತಮ ವಾಗ್ಮಿಯಾಗಿದ್ದ ಆತ ಜನರನ್ನು ಆಕರ್ಷಿಸುತ್ತಿದ್ದ.

೧೮೭೬-೭೭ ಕಾಲದ ಡೆಕ್ಕನ್‌ ಬರಗಾಲ ಬ್ರಿಟಿಷ್‌ ಅಧಿಕಾರಿಗಳನ್ನು ಇನ್ನಿಲ್ಲದ ಒತ್ತಡಕ್ಕೆ ಸಿಲುಕಿಸಿತ್ತು. ಆ ನಡುವೆ ಮರಣಶಯ್ಯೆಯಲ್ಲಿದ್ದ ತನ್ನ ತಾಯಿಯನ್ನು ಕಾಣಲು ರಜೆ ಕೇಳಿ ಫಾಡ್ಕೆ ಹಾಕಿದ ಅರ್ಜಿಯನ್ನು ಬ್ರಿಟಿಷರು ಪರಿಗಣಿಸಲಿಲ್ಲ. ಅದನ್ನು ಲೆಕ್ಕಿಸದೆ ತನ್ನ ಗ್ರಾಮಕ್ಕೆ ಹೊರಟನಾದರೂ ತಾಯಿಯನ್ನು ಜೀವಂತ ಕಾಣಲಾಗಲಿಲ್ಲ. ಇದನ್ನೇ ನಿಮಿತ್ತವಾಗಿರಿಸಿಕೊಂಡು, ಆ ಕಾಲದಲ್ಲಿ ತನ್ನೊಳಗೆ ಕಟ್ಟಿಕೊಂಡಿದ್ದ ಬ್ರಿಟಿಷ್‌ ವಿರೋಧಕ್ಕೆ ಸಂಘಟನೆಯ ರೂಪ ನೀಡಿ ಕಾರ್ಯಾಚರಿಸಲು ಫಾಡ್ಕೆ ನಿರ್ಧರಿಸಿದ. ʼಮ್ಲೇಚ್ಛʼರಾದ ಬ್ರಿಟಿಷರನ್ನು ಓಡಿಸಿ ಬ್ರಾಹ್ಮಣರ ನೇತೃತ್ವದ ಸ್ವದೇಶಿ ರಾಷ್ಟ್ರ ಸ್ಥಾಪನೆಗೆ ಒಂದು ಭೂಗತ ಸಂಘವನ್ನು ರೂಪೀಕರಿಸಿದ.

ನಾಲ್ಕು ವಿಧದ ಸಂಘಗಳು ಸೇರಿದ ಒಂದು ಸಂಘಟನೆಯಾಗಿತ್ತು ಫಾಡ್ಕೆಯದ್ದು. ಮೊದಲನೆಯದು ವಿದ್ಯಾರ್ಥಿಗಳನ್ನು ಸಂಘಟಿಸುವುದರಲ್ಲಿ ಗಮನ ಕೇಂದ್ರೀಕರಿಸಿತ್ತು. ಎರಡನೆಯ ಸಂಘ ಪ್ರದರ್ಶನಗಳನ್ನು ಸಂಘಟಿಸಿತು. ಪೇಶ್ವಾ ಬ್ರಾಹ್ಮಣ ಸಾಮ್ರಾಜ್ಯದ ಸ್ಮೃತಿಯನ್ನು ಬಡಿದೆಬ್ಬಿಸುವ ರೀತಿಯಲ್ಲಿ ಶಿವಾಜಿಯ ಗುರುವಾಗಿದ್ದ ರಾಮದಾಸರ ಕೀರ್ತನೆಗಳ ಮೂಲಕ ಇವರು ಪ್ರದರ್ಶನಗಳನ್ನು ನಡೆಸಿದರು. ಮೂರನೆಯದ್ದು ಗಾಯಕರ ಸಂಘ. ಇವರು ಮ್ಲೇಚ್ಛರಾದ ಬ್ರಿಟಿಷರ ಆಡಳಿತದಲ್ಲಿ ಭಾರತದ ಪ್ರಜೆಗಳು ಅನುಭವಿಸುತ್ತಿರುವ ದುರಿತಗಳನ್ನು ಹಾಸ್ಯಾತ್ಮಕವಾಗಿ ಹಾಡಿದರು. ನಾಲ್ಕನೇ ಸಂಘ ಜನರಿಂದ ದೂರ ನಿಂತು ಬ್ರಿಟಿಷ್‌ ಸರಕಾರವನ್ನು ಬುಡಮೇಲು ಮಾಡಲು ಬೇಕಾದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿತ್ತು. ಪುಣೆಯ ನರಸಿಂಹ ದೇವಸ್ಥಾನದ ಹಿಂಭಾಗದ ಕುರುಚಲು ಕಾಡಿನಲ್ಲಿ ಖಡ್ಗ ಯುದ್ಧದ ತರಬೇತಿಯನ್ನು ಫಾಡ್ಕೆ ತನ್ನ ಸಂಘಟನೆಯ ಸದಸ್ಯರಿಗೆ ನೀಡುತ್ತಿದ್ದ.

ಇವತ್ತು ಹಿಂತಿರುಗಿ ನೋಡುವಾಗ ಹಿಂದುತ್ವಸಂಘಟನೆಯ ಪರಿವಾರ ಸಂರಚನೆ ಫಾಡ್ಕೆಯ ಸಂಘಟನೆಯಲ್ಲಿ ಸೂಕ್ಷ್ಮ ರೂಪದಲ್ಲಿ ನೆಲೆ ನಿಂತಿದ್ದನ್ನು ಕಾಣಬಹುದು. ದೇವಸ್ಥಾನ ಕೇಂದ್ರಿತ ಆಯುಧ ತರಬೇತಿ ಶುರು ಮಾಡಿದ ವ್ಯಕ್ತಿ ಫಾಡ್ಕೆ. ಬಾಲ ಗಂಗಾಧರ ತಿಲಕ್‌ ಕೂಡ ತನ್ನ ಯೌವನದಲ್ಲಿ ಫಾಡ್ಕೆಯ ಆಯುಧ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾಗಿ ಹೇಳಲಾಗುತ್ತದೆ. ಹಿಂದುತ್ವ ಸಿದ್ಧಾಂತದ ಪಿತಾಮಹ ವಿ.ಡಿ. ಸಾವರ್ಕರ್‌ ಮಿತ್ರ ಮೇಳ ಎಂಬ ಸಂಘಟನೆ ಕಟ್ಟಿಕೊಂಡು ಅದರ ಚಟುವಟಿಕೆಗಳನ್ನು ಶುರು ಮಾಡಿದಾಗ ದೈನಂದಿನ ದೈಹಿಕ ತರಬೇತಿ ಅದರ ಪ್ರಮುಖ ಭಾಗವಾಗಿತ್ತು. ನಂತರದ ಕಾಲದಲ್ಲಿ ಆರ್‌ಎಸ್‌ಎಸ್‌ನ ಸ್ಥಾಪಕರಲ್ಲಿ ಒಬ್ಬರಾಗಿದ್ದ ಬಿ.ಎಸ್.‌ ಮುನ್ಜೇ ದೈಹಿಕ ತರಬೇತಿಗಾಗಿ ಒಂದು ಕೇಂದ್ರವನ್ನೇ ಸ್ಥಾಪಿಸಿದ್ದ. ಆರ್‌ಎಸ್‌ಎಸ್‌ ಈಗಲೂ ಕಾರ್ಯಾಚರಿಸುತ್ತಿರುವುದು ದೇವಸ್ಥಾನದ ಮೈದಾನಗಳಲ್ಲಿ ದೈಹಿಕ ತರಬೇತಿ ನೀಡುವ ಶಾಖೆಗಳ ಮೂಲಕ. ಗಾಂಧಿಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ನಾಥುರಾಮ್‌ ಗೋಡ್ಸೆ ಮತ್ತು ನಾರಾಯಣ್‌ ಆಪ್ಟೆ ಸಾವರ್ಕರ್‌ ʼಫ್ಯೂರರ್‌ʼ ಆಗಿದ್ದ ಹಿಂದು ರಾಷ್ಟ್ರ ದಳ್‌ ಎಂಬ ಒಳಸಂಘಟನೆಯ ಮುಖ್ಯ ಕಾರ್ಯಕರ್ತರಾಗಿದ್ದರು. ಗಾಂಧಿಹತ್ಯೆಯಲ್ಲಿ ಆರೋಪಿಯಾಗಿದ್ದ ಮತ್ತೊಬ್ಬ ವ್ಯಕ್ತಿ ಡಾ. ದತ್ತಾತ್ರೇಯ ಪರ್ಚುರೆ ಹಿಂದು ರಾಷ್ಟ್ರ ಸೇನ ಎಂಬ ಸಂಘಟನೆಯ ನಾಯಕನಾಗಿದ್ದ. ಈ ಸಂಘಟನೆಗಳೆಲ್ಲ ತಮ್ಮ ದೈನಂದಿನ ಚಟುವಟಿಕೆಯಲ್ಲಿ ದೈಹಿಕ ತರಬೇತಿಯನ್ನೂ ನೀಡುತ್ತಿದ್ದ ಅರೆಸೇನಾ ಸ್ವಭಾವವನ್ನು ಹೊಂದಿದ್ದವು. ಫಾಡ್ಕೆ ಇತಿಹಾಸದಲ್ಲಿ ಹೇಗೆ ಆವರಿಸಿಕೊಂಡ ಎಂಬುದರ ಬಗ್ಗೆ ಇದರಿಂದ ನಮಗೆ ಅರ್ಥವಾಗುತ್ತದೆ.

ಅಷ್ಟೇ ಅಲ್ಲ, ಚಿತ್ಪಾವನ ಬ್ರಾಹ್ಮಣ ರಾಷ್ಟ್ರ ಕಲ್ಪನೆ ನಂತರದ ಕಾಲದಲ್ಲಿ ವಿಕಾಸ ಹೊಂದಿದ್ದು ಮರಾಠ ಸಾಮ್ರಾಜ್ಯವನ್ನು ಮುಂದಿಟ್ಟುಕೊಂಡಾಗಿತ್ತು. ಶಿವಾಜಿಯ ಸಾಮ್ರಾಜ್ಯವನ್ನು ಅವರು ಹಿಂದೂ ಸಾಮ್ರಾಜ್ಯವಾಗಿ ವ್ಯಾಖ್ಯಾನಿಸಿದರು. ಗಂಭೀರವಾದ ಎಲ್ಲ ಇತಿಹಾಸ ಸಂಶೋಧನೆಗಳು ಈ ವ್ಯಾಖ್ಯಾನವನ್ನು ವಿರೋಧಿಸಿವೆ. ಶಿವಾಜಿಯ ಮುಖ್ಯ ಸೇನಾಧಿಕಾರಿ ಸಹಿತ ಹಲವರು ಮುಸ್ಲಿಮರಾಗಿದ್ದರು ಎಂಬ ಸತ್ಯವನ್ನು ಮರೆಮಾಚಿಕೊಂಡು, ಶಿವಾಜಿ ಮತ್ತು ಮೊಘಲರ ನಡುವಿನ ಯುದ್ಧವನ್ನು ಹಿಂದೂ-ಮುಸ್ಲಿಂ ಹೋರಾಟವಾಗಿ ನಿರೂಪಿಸುವ ಪ್ರಕ್ರಿಯೆಯನ್ನು ಫಾಡ್ಕೆಯಿಂದ ಹಿಡಿದು ನಂತರದ ಚಿತ್ಪಾವನ ನೇತೃತ್ವದ ಹಿಂದೂ ಸಂಘಟನೆಗಳು ನಡೆಸಿದವು. ಹಾಗಾಗಿ ಒಂದು ಬಣ್ಣವನ್ನು, ಹಿಂದೂ ಬಣ್ಣವನ್ನು ಶಿವಾಜಿ ಮತ್ತು ಮರಾಠ ಸಾಮ್ರಾಜ್ಯದ ಮೇಲೆ ಹಚ್ಚಲು ಮುಖ್ಯ ಕಾರಣ, ಶಿವಾಜಿಯ ನಂತರದ ಮರಾಠ ಸಾಮ್ರಾಜ್ಯ, ಪೇಶ್ವಾಸಾಮ್ರಾಜ್ಯ ಚಿತ್ಪಾವನ ಬ್ರಾಹ್ಮಣರ ಸುವರ್ಣ ಕಾಲವಾಗಿತ್ತು ಎಂಬುದೇ ಆಗಿದೆ. ಫಾಡ್ಕೆ ಪ್ರಯತ್ನಿಸಿದ್ದು ಪೇಶ್ವಾಸಾಮ್ರಾಜ್ಯದ ಪುನರ್‌ ಸ್ಥಾಪನೆಗೆ ಆಗಿದ್ದರೆ ತಿಲಕ್‌ ಪ್ರಯತ್ನ ಪಟ್ಟಿದ್ದು ಹಿಂದೂ ವರ್ಣ ವ್ಯವಸ್ಥೆಯ ಬುನಾದಿಯ ಮೇಲೆ ಬ್ರಾಹ್ಮಣ ರಾಷ್ಟ್ರ ಕಟ್ಟಲಾಗಿತ್ತು. ಇದು ಸಾವರ್ಕರ್‌ ತನಕ ತಲುಪುವಾಗ ಚಿತ್ಪಾವನ ಹಿಂದೂ ರಾಷ್ಟ್ರ ಕಲ್ಪನೆಯಿಂದ ಹಿಂದೂ ರಾಷ್ಟ್ರ ಕಲ್ಪನೆಯಾಗಿ ಬದಲಾಗುತ್ತದೆ. ಮನುಸ್ಮೃತಿ ಕಾಲದ ಸಾಮಾಜಿಕ ಅಧಿಪತ್ಯವನ್ನು ಹೊಸ ರಾಷ್ಟ್ರದಲ್ಲಿ ಬ್ರಾಹ್ಮಣ ಹಿಂದೂ ರಾಜಕೀಯ ಅಧಿಪತ್ಯವಾಗಿ ವಿಕಾಸ ಪಡಿಸಲು ಸಾವರ್ಕರ್‌ ಪ್ರಯತ್ನಿಸಿದ. ಈ ವಿಕಾಸದ ಉದ್ದಕ್ಕೂ ರಾಷ್ಟ್ರಾಡಳಿತದ ಮಾದರಿ ಬಿಂಬ ಮಾತ್ರ ಶಿವಾಜಿಯ ಮರಾಠಾ ಸಾಮ್ರಾಜ್ಯವೇ ಆಗಿತ್ತು. ಆದ್ದರಿಂದಲೇ ಹಿಂದೂ ವ್ಯಾಖ್ಯಾನಗಳಿಂದ ಶಿವಾಜಿಯನ್ನು ಹೊರತರುವ ಯಾವ ಇತರ ವ್ಯಾಖ್ಯಾನಗಳನ್ನೂ ಹಿಂದುತ್ವ ರಾಜಕೀಯ ಸಹಿಸಲೇ ಇಲ್ಲ. ಅದರ ಅತ್ಯಂತ ಕೊನೆಯ ಉದಾಹರಣೆ ಗೋವಿಂದ್‌ ಪನ್ಸಾರೆ. ಚಾರಿತ್ರಿಕ ದೃಷ್ಟಿಕೋನದಿಂದ ಶಿವಾಜಿಯನ್ನು ವಿಶ್ಲೇಷಿಸಿ ಪುಸ್ತಕ ಬರೆದ ಬೆನ್ನಿಗೇ ಪನ್ಸಾರೆಯನ್ನು ಹಿಂದುತ್ವ ಸಂಘಟನೆಗಳು ತಮ್ಮ ಹಿಟ್‌ಲಿಸ್ಟಿಗೆ ಸೇರಿಸಿದರು. ಕೊನೆಗೆ ಪನ್ಸಾರೆಯ ಹತ್ಯೆಯೂ ನಡೆಯಿತು.

ಶಿವಾಜಿಯನ್ನು ಈ ಮಟ್ಟಿಗೆ ಒಂದು ಬ್ರಾಹ್ಮಣ ಕೇಂದ್ರಿತ ರಾಜಕೀಯದ ಬಿಂಬವಾಗಿ ಬ್ರಿಟಿಷ್‌ ಇಂಡಿಯಾದಲ್ಲಿ ಮೊದಲ ಬಾರಿಗೆ ಪ್ರಯೋಗಿಸಿರುವುದು ಫಾಡ್ಕೆ. ಶಿವಾಜಿಯ ತಂತ್ರದ ಮುಂದುವರಿಕೆಯೆಂಬಂತೆ ಫಾಡ್ಕೆ ಮತ್ತು ಸಹಚರರು ಬ್ರಿಟಿಷರ ವಿರುದ್ಧ ಭೂಗತ ಹೋರಾಟ ಆರಂಭಿಸುತ್ತಾರೆ. ೧೮೭೯ ಮೇಯಲ್ಲಿ ತನ್ನ ಕೆಳಜಾತಿ ಆತ್ಮಾಹುತಿ ದಾಳಿಕೋರರನ್ನು ಬಳಸಿಕೊಂಡು ಕೊಂಕಣ ಪ್ರದೇಶದ ಸಿರಿವಂತರನ್ನು ಕೊಳ್ಳೆ ಹೊಡೆದು ೧,೫೦,೦೦೦ಕ್ಕೂ ಹೆಚ್ಚು ಹಣ ಫಾಡ್ಕೆಯ ಸಂಘ ಒಟ್ಟುಗೂಡಿಸಿತ್ತು. ದೌಲತ್‌ ರಾವ್‌ ನಾಯಕ್‌ ಎಂಬಾತನ ನೇತೃತ್ವದಲ್ಲಿ ಈ ದರೋಡೆ ನಡೆದಿತ್ತು. ಆದರೆ ಈ ದುಡ್ಡು ಪುಣೆ ತಲುಪುವ ಮೊದಲೇ ಮಾವಲದ ತುಳ್ಸಿ ಕಣಿವೆಯಲ್ಲಿ ಮೇಜರ್‌ ಡೇನಿಯಲನ ನೇತೃತ್ವದ ಬ್ರಿಟಿಷ್‌ ಸೈನ್ಯ ಭೀಕರವಾದ ಹೋರಾಟದಲ್ಲಿ ಅವರನ್ನು ಸೋಲಿಸಿತು. ದೌಲತ್‌ ರಾವ್‌ ನಾಯಕ್‌ ಈ ಯುದ್ಧದಲ್ಲಿ ಕೊಲೆಯಾದ. ಬೆನ್ನಲ್ಲೇ ಫಾಡ್ಕೆಯನ್ನು ಹುಡುಕಿ ಕೊಡಲು ಬ್ರಿಟಿಷ್‌ ಸರಕಾರ ನೋಟೀಸ್‌ ಜಾರಿಗೊಳಿಸಿತು.

ಪೇಶ್ವಾ ಪ್ರಧಾನ್‌ ಎಂಬ ನೆಲೆಯಲ್ಲಿ ಫಾಡ್ಕೆಯೂ ಅಂದಿನ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ನ ತಲೆ ಕಡಿದು ತರುವವರಿಗೆ ಇನಾಂ ಘೋಷಿಸಿದ. ೧೮೭೯ ಮೇ ೧೩ ರಂದು ಫಾಡ್ಕೆಯ ಸಂಘ ಪುಣೆಯ ವಿಶ್ರಂಭಾಗ್‌ ವಾಡಾ ಮತ್ತು ಬುಧವಾರ್‌ ವಾಡಾದ ಎರಡು ಬ್ರಿಟಿಷ್‌ ಬಂಗಲೆಗಳನ್ನು ಬೆಂಕಿಗಾಹುತಿಯಾಗಿಸಿತು. ಹಲವಾರು ದಾಖಲೆಗಳು ನಾಶವಾದವು. ಇದರೊಂದಿಗೆ ಫಾಡ್ಕೆಯ ಚಟುವಟಿಕೆಗಳು ಬ್ರಿಟಿಷ್‌ ಪಾರ್ಲಿಮೆಂಟಿನಲ್ಲಿ ಪ್ರತಿಧ್ವನಿಸಿತು. ಇದರ ನಡುವೆ ಕೆಳಜಾತಿಯವರಾದ ರಾಮೋಶಿಗಳು ಫಾಡ್ಕೆಯ ಸಂಘವನ್ನು ತೊರೆದಿದ್ದರು.

ಇವೆಲ್ಲ ತನಗೆ ಪ್ರತಿಕೂಲವಾಗಿದ್ದರು ಕೂಡ ಶಿವಾಜಿಯ ತಂತ್ರವನ್ನು ಬಳಸಿಕೊಂಡು ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಓಡಿಸಿ ಪೇಶ್ವಾ ಸಾಮ್ರಾಜ್ಯವನ್ನು ಮತ್ತೆ ಕಟ್ಟಬಹುದೆಂಬ ಯೋಜನೆಯೊಂದಿಗೆ ತನ್ನ ಚಟುವಟಿಕೆಗಳನ್ನು ಫಾಡ್ಕೆ ಯೋಜಿಸುತ್ತಿದ್ದ. ಬ್ರಿಟಿಷ್‌ ಇಂಡಿಯಾದ ಬೆನ್ನುಲುಬಾಗಿದ್ದ ಸೇತುವೆಗಳು, ಟೆಲಿಗ್ರಾಫ್‌ ಲೈನುಗಳು, ರೈಲ್ವೇ ಹಳಿಗಳು ಮೊದಲಾದವನ್ನು ನಾಶಪಡಿಸುತ್ತಾ ಬ್ರಿಟಿಷ್‌ ಸರಕಾರದ ವಾರ್ತಾಜಾಲವನ್ನು ತುಂಡರಿಸಬಹುದೆಂದು ಫಾಡ್ಕೆ ಯೋಚಿಸಿದ. ಅದರ ಜೊತೆಗೆ ಬ್ರಿಟಿಷ್ ಇಂಡಿಯಾದ ಜೈಲುಗಳನ್ನು ಹೊಡೆದುರುಳಿಸಿ ಖೈದಿಗಳನ್ನು ಬಿಡುಗಡೆಗೊಳಿಸಿ ಅವರನ್ನು ಬ್ರಟಿಷರ ವಿರುದ್ಧದ ಸಶಸ್ತ್ರ ಹೋರಾಟದಲ್ಲಿ ಬಳಸಬಹುದೆಂದು ಯೋಜನೆ ಹಾಕಿದ. ಆದರೆ ನಡೆದದ್ದು ಮಾತ್ರ ಇನ್ನೊಂದು. ಶೋಲಾಪುರ-ಕರ್ನಾಟಕ ಗಡಿಭಾಗದ ಗಂಗಾಪುರ ಎಂಬಲ್ಲಿ ಆತ ಬ್ರಿಟಿಷರ ಬಲೆಗೆ ಬಿದ್ದ. ವಿಚಾರಣೆಯ ನಂತರ ಆತನನ್ನು ಏಡನ್‌ಗೆ ಗಡಿಪಾರು ಮಾಡಲಾಯಿತು (ಯಮನಿನ ಏಡನ್‌ ಆಗ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು). ಅಲ್ಲಿಂದ ಪಾರಾಗಲು ಫಾಡ್ಕೆ ಪ್ರಯತ್ನಿಸಿದನಾದರೂ ಪರಾಜಯಗೊಂಡ. ಕೊನೆಗೆ ಆಹಾರ ತ್ಯಜಿಸಿ ೧೮೮೩ ಫೆಬ್ರವರಿ ೧೭ ರಂದು ಮರಣ ಹೊಂದಿದ.

೧೮೯೬-೯೭ ಕಾಲಘಟ್ಟದಲ್ಲಿ ಪ್ಲೇಗ್‌ ಸಾಂಕ್ರಾಮಿಕ ರೋಗ ಇಂಡಿಯಾ ತಲುಪಿತ್ತು. ೧೮೫೫ರಲ್ಲಿ ಚೀನಾದ ಯುನಾನ್‌ ಪ್ರಾಂತ್ಯದಲ್ಲಿ ಇದು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಭೂಮಿಯ ಮೇಲಿಂದ ದೊಡ್ಡದೊಂದು ಜನಸಂಖ್ಯೆಯನ್ನು ಅಳಿಸಿ ಹಾಕಿದ ಮಹಾಮಾರಿಯಾಗಿತ್ತು ಪ್ಲೇಗ್.‌ ಒಟ್ಟು ಭೂಮಿಯ ಮೇಲೆ ೧೫ ದಶಲಕ್ಷದಷ್ಟು ಸಾವು ಈ ಬ್ಯುಬೋನಿಕ್‌ ಪ್ಲೇಗ್‌ ಕಾರಣದಿಂದ ಸಂಭವಿಸಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ. ಇದು ನಿಜವಾದ ಲೆಕ್ಕ ಅಲ್ಲವೆಂದೂ ೧೦ ದಶಲಕ್ಷದಷ್ಟು ಜನರು ಭಾರತದಲ್ಲಿ ಮಾತ್ರ ಸತ್ತಿದ್ದಾರೆಂದೂ ಹೇಳುತ್ತಾರೆ. ಬಹುಷಃ ಬ್ರಿಟಿಷ್‌ ಇಂಡಿಯಾದಲ್ಲಿ ಕಾಣಿಸಿಕೊಂಡ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ ಇದೇ ಆಗಿರಬೇಕು. ಕೇರಳೀಯನೂ, ನವೋತ್ಥಾನ ಚಳುವಳಿಯ ಆರಂಭಿಕರಲ್ಲಿ ಒಬ್ಬರೂ ಆಗಿದ್ದ ಡಾ. ಪಲ್ಪು, ಮೈಸೂರಿನಲ್ಲಿ ಪ್ಲೇಗ್‌ ವಿರುದ್ಧ ಹೋರಾಡುವ ತಂಡದ ನಾಯಕತ್ವ ವಹಿಸಿದ್ದರು. ಕ್ವಾರೆಂಟೈನ್‌ ಮತ್ತು ಆಸ್ಪತ್ರೆ ಚಿಕಿತ್ಸೆಗಳನ್ನು ಒಳಗೊಂಡ ವಿಧಾನವನ್ನು ಡಾ. ಪಲ್ಪು ಕೈಗೊಂಡಿದ್ದರು. ಆದರೂ ಮನುಷ್ಯರು ಇಲಿಗಳ ಹಾಗೆ ಸತ್ತು ಬೀಳುತ್ತಿದ್ದ ದಿನಗಳ ಕುರಿತು ಡಾ. ಪಲ್ಪು ತನ್ನ ದಿನಚರಿಯಲ್ಲಿ ಹೃದಯಸ್ಪರ್ಶಿಯಾಗಿ ಬರೆದಿದ್ದಾರೆ.

೧೯೬೦ರ ತನಕವೂ ಹಬ್ಬಿದ್ದ ಮಹಾರೋಗದ ಕಾಲವನ್ನು ಈ ಪ್ಲೇಗ್‌ ಮಹಾಮಾರಿ ಅನಾವರಣಗೊಳಿಸಿತ್ತು. ಸಹಜವಾಗಿಯೇ ಬಾಂಬೆಯಲ್ಲಿ ಆರಂಭವಾದ ಮಹಾಮಾರಿಯನ್ನು ತಡೆದು ನಿಲ್ಲಿಸಬೇಕಾದ ಜವಾಬ್ದಾರಿಯೂ ಬಾಂಬೆ ಪ್ರಾಂತ್ಯದಲ್ಲಿ ಅಧಿಕಾರದಲ್ಲಿದ್ದ ಬ್ರಿಟಿಷ್‌ ಅಧಿಕಾರಿಗಳ ಹೆಗಲ ಮೇಲೆ ಬಿದ್ದಿತ್ತು. ಕ್ವಾರಂಟೈನ್‌ ಮತ್ತು ಆಸ್ಪತ್ರೆ ವ್ಯವಸ್ಥೆಗಳ ಜೊತೆಗೆ ಲಸಿಕೆ ಹಾಕಿಸುವುದನ್ನೂ ತುರ್ತಾಗಿ ಶುರು ಮಾಡಬೇಕಾಗಿತ್ತು. ಇದನ್ನೆಲ್ಲ ಜಾರಿಗೊಳಿಸಲು ವಾಲ್ಟರ್‌ ಚಾರ್ಲ್ಸ್‌ ರಾನ್ಡ್‌ ಎಂಬ ಅಧಿಕಾರಿಯನ್ನು ಪ್ಲೇಗ್‌ ಅಧಿಕಾರಿಯಾಗಿ ನೇಮಿಸಲಾಯಿತು. ಚಿಕಿತ್ಸೆಯ ಮೇಲ್ನೋಟವನ್ನು ಡಬ್ಯೂ.ಡಬ್ಯೂ. ಬೆವರಿಡ್ಜ್‌ ಎಂಬ ಸರ್ಜನ್ನಿಗೂ ವಹಿಸಲಾಯಿತು. ೧೮೯೭ರ ಫೆಬ್ರವರಿಯಲ್ಲಿ ಅವರು ಪುಣೆ ತಲುಪಿದ್ದರು. ಮಹಾಮಾರಿ ಹರಡುವಿಕೆಯನ್ನು ತಡೆಯಲು ರಚಿಸಿದ್ದ ಸ್ಪೆಷಲ್‌ ಪ್ಲೇಗ್‌ ಕಮಿಟಿಯ (ಎಸ್.ಪಿ.ಸಿ) ಸದಸ್ಯರಾಗಿದ್ದರು ಅವರಿಬ್ಬರು. ಭಾರತದಲ್ಲಿ ಪ್ಲೇಗ್‌ ಹರಡುವ ವೇಗ ನಿಯಂತ್ರಣಾತೀತವಾದಾಗ ಯುರೋಪಿನ ದೇಶಗಳು ಭಾರತದೊಂದಿಗಿನ ಆಮದು ವಹಿವಾಟನ್ನು ನಿಲ್ಲಿಸುವ ಹಂತಕ್ಕೆ ಬಂದವು. ಈ ಹೊತ್ತಲ್ಲೇ ಬ್ರಿಟಿಷ್‌ ಇಂಡಿಯಾ ಸರಕಾರ ೧೮೯೭ರ ಸಾಂಕ್ರಾಮಿಕ ರೋಗ ಕಾನೂನನ್ನು ಜಾರಿಗೆ ತರುವುದು. ಈ ಕಾನೂನಿನ ಪ್ರಕಾರ ವೈದ್ಯರುಗಳು ಮಾತ್ರವಲ್ಲದೆ ಸ್ವಯಂಸೇವಕರನ್ನೂ ಪ್ಲೇಗ್‌ ನಿಯಂತ್ರಣಕ್ಕೆ ನಿಯೋಗಿಸಬಹುದಾಗಿತ್ತು.

ಪ್ರತಿ ಕುಟುಂಬದ ಮುಖ್ಯ ವ್ಯಕ್ತಿ ತನ್ನ ಕುಟುಂಬದ ಪ್ಲೇಗ್‌ ಬಾಧಿತರ ಮತ್ತು ಪ್ಲೇಗ್‌ ಕಾರಣದಿಂದ ಸಾವನ್ನಪ್ಪಿದವರ ವಿವರಗಳನ್ನು ಎಸ್.ಪಿ.ಸಿಗೆ ನೀಡಬೇಕಾಗಿತ್ತು. ಆದರೆ, ಸರಿಯಾದ ಮಾಹಿತಿಗಳು ಎಸ್.ಪಿ.ಸಿಗೆ ಸಿಗದ ಕಾರಣ ರಾನ್ಡ್‌ ಮತ್ತು ತಂಡ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲು ಮುಂದಾದರು. ಪ್ಲೇಗ್‌ ರೋಗಿಗಳನ್ನು ಕಂಡರೆ ತಕ್ಷಣ ಅವರನ್ನು ಐಸೊಲೇಷನ್‌ ಕ್ಯಾಂಪುಗಳಿಗೆ ರವಾನಿಸಿದರು. ರೋಗಿಗಳ ಉಡುಪುಗಳನ್ನು ಮತ್ತು ಅವರು ಬಳಸುತ್ತಿದ್ದ ಬಟ್ಟೆಗಳನ್ನು ಬೆಂಕಿ ಹಾಕಿ ಸುಟ್ಟರು. ಸಾವು ರಿಜಿಸ್ಟರ್‌ ಮಾಡದ ಅಂತ್ಯ ಸಂಸ್ಕಾರಗಳನ್ನು ನಿಷೇಧಿಸಲಾಯಿತು. ಇದು ಮರಾಠ ಪ್ರಾಂತ್ಯದ ಬ್ರಾಹ್ಮಣರೊಳಗೆ ಇನ್ನಿಲ್ಲದ ಕೋಲಾಹಲಗಳನ್ನು ಸೃಷ್ಟಿಸಿತು.

Related Articles

ಇತ್ತೀಚಿನ ಸುದ್ದಿಗಳು