ಕಪ್ಪು ಚಿನ್ನ ಎಂದೇ ಕರೆಯಲ್ಪಡುವ ಕಾಳುಮೆಣಸು, ಅಡಿಕೆ ಧಾರಣೆ ಕುಸಿತ ಕಂಡಾಗ ರೈತರ ಕೈಹಿಡಿದು ಮೇಲೆತ್ತಿದ ಆಪತ್ಬಾಂಧವ ಬೆಳೆ. ಅಡಕೆ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಸಂದರ್ಭದಲ್ಲಿ ರೈತರಿಗೆ ನೆರವಾಗುತ್ತಿದ್ದದ್ದೇ ಈ ಕಪ್ಪುಚಿನ್ನ ಕಾಳುಮೆಣಸು. ಅಡಕೆ ಮರ, ತೆಂಗಿನ ಮರಕ್ಕೆ ಕಾಳುಮೆಣಸಿನ ಬಳ್ಳಿಗಳು ಹಬ್ಬಿಕೊಂಡು ಹೇರಳ ಫಸಲು ನೀಡುತ್ತಿದ್ದ ಪರಿಣಾಮ, ಬೆಳೆಗಾರನೂ ಚೇತರಿಸಿಕೊಳ್ಳುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಕಾಳುಮೆಣಸು ಸಹ ರೈತರ ಕೈ ಕಚ್ಚುವ ಮಟ್ಟಕ್ಕೆ ರೋಗಕ್ಕೆ ತುತ್ತಾಗುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮತ್ತು ಅಂಟುರೋಗದಂತೆ ಬಂದೆರಗಿರುವ ಹಳದಿ ಎಲೆ (ಸೊರಗು) ರೋಗ ಈಗ ಕಾಳುಮೆಣಸನ್ನೇ ನಂಬಿದ ರೈತರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಭಾಗದ ರೈತರು ಪರ್ಯಾಯ ಬೆಳೆಯನ್ನಾಗಿ ಕಾಳುಮೆಣಸಿನ ಕೃಷಿಗೆ ಅವಲಂಬಿತರಾಗಿರುವ ಈ ಸಂದರ್ಭದಲ್ಲಿ ಇಂತಹ ಮಾರಣಾಂತಿಕ ರೋಗ ಮತ್ತೆ ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಸೊರಗು (ಹಳದಿ ಎಲೆ) ರೋಗದ ಲಕ್ಷಣಗಳು :
ಸೊರಗು ರೋಗ ತಗುಲಿದರೆ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ನಿಧಾನವಾಗಿ ಸಾಯುತ್ತದೆ. ಬಳ್ಳಿಯಲ್ಲಿರುವ ಕಾಳುಮೆಣಸು ಒಣಗಿ ಉದುರುತ್ತದೆ. ರೋಗ ಬಾಧಿಸಿದ ಬಳ್ಳಿಯನ್ನು ಕಿತ್ತು ಬುಡದಲ್ಲಿ ಹೊಸದಾಗಿ ಬಳ್ಳಿ ನೆಟ್ಟು ಗೊಬ್ಬರ ಹಾಕಿದರೂ ಪ್ರಯೋಜನವಿಲ್ಲ. ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂಧ್ರವೇ ಈ ರೋಗ ಹರಡಲು ಕಾರಣವಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮಳೆಗಾಲದಲ್ಲಿ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂಧ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಮೊದಲು ಕಾಳುಮೆಣಸಿನ ಬಳ್ಳಿಯ ಬೇರುಗಳನ್ನು ಆಕ್ರಮಿಸುವುದರಿಂದ ಬೇರುಗಳು ಸಾಯುತ್ತದೆ.ನಂತರ ಬಳ್ಳಿ ಹಾಗೂ ಎಲೆಗಳನ್ನು ಆಕ್ರಮಿಸುತ್ತದೆ. ‘ಮೆಲೋಯ್ಡೋಗೈನ್ ಇಂಕಾಗ್ನಿಟ’ ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಇತ್ತೀಚಿನ ವರದಿಗಳಿಂದ ತಿಳಿದು ಬಂದಿದೆ.
ಹೆಚ್ಚಾಗಿ ಮಳೆಯ ಪರಿಣಾಮ ತೋಟಗಳಲ್ಲಿ ಈ ರೋಗ ಉಲ್ಬಣವಾಗುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಹೆಚ್ಚು ತೇವಾಂಶ ಕೂಡ ಸೊರಗು ರೋಗದ ಉಲ್ಬಣಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಕಾಳುಮೆಣಸಿಗೆ ಗುಡ್ಡ, ಕಡಿದಾದ ಪ್ರದೇಶದಲ್ಲಿ ರೋಗ ತಗುಲುವುದು ಕಡಿಮೆ.
ಸೊರಗು ರೋಗಕ್ಕೆ ಫರ್ಟಿಲೈಜರ್ ಕಂಪನಿಗಳು ನಾನಾ ರೀತಿಯ ಔಷಧಿಗಳನ್ನು ಮಾರುಕಟ್ಟೆಗೆ ತಂದಿದ್ದರೂ ಅದು ಪರೋಕ್ಷವಾಗಿ ತೋಟಗಳಿಗೆ ಹಾನಿ ಆಗುವುದೇ ಆಗಿದೆ. ಹೀಗಿರುವಾಗ ಬೋರ್ಡೋ ದ್ರಾವಣವೇ ಸೊರಗು ರೋಗಕ್ಕಿರುವ ಏಕೈಕ ಪರಿಹಾರ ಎನ್ನಲಾಗಿದೆ. ಈಗಾಗಲೇ ಶೇ 90 ರಷ್ಟು ಬೋರ್ಡೋ ದ್ರಾವಣ ಸಿಂಪಡಣೆ ನಂತರ ಸೊರಗು ರೋಗ ಪರಿಣಾಮಕಾರಿಯಾಗಿ ಕಡಿಮೆ ಆಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
10 ಲೀ. ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿಒಂದು ಕೆಜಿ ಮೈಲುತುತ್ತು ಹಾಗೂ ಇನ್ನೊಂದು 10 ಲೀ. ಬಕೆಟ್ ನೀರಿನಲ್ಲಿ1 ಕೆಜಿ ಶುದ್ಧ ಸುಣ್ಣವನ್ನು ಸಂಪೂರ್ಣ ಕರಗಿಸಬೇಕು. ಕರಗಿದ 10 ಲೀ. ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‌ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತು ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ಶೇ.1ರ ಬೋರ್ಡೊ ದ್ರಾವಣ ಮಿಶ್ರಣ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ದ್ರಾವಣ ತಯಾರಿಗೆ ಮಣ್ಣು ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವುದು ಸೂಕ್ತ. ದ್ರಾವಣವನ್ನು ಬಟ್ಟೆಯಲ್ಲಿಶೋಧಿಸಿ ಉಪಯೋಗಿಸಬೇಕು. ಬಹಳ ಹೊತ್ತು ಗಾಳಿಗೆ ತೆರೆದಿಟ್ಟಾಗ ತನ್ನ ಪರಿಣಾಮ ಕಳೆದುಕೊಳ್ಳುವುದರಿಂದ ತಯಾರಿಸಿದ ಕೂಡಲೇ ಉಪಯೋಗಿಸಬೇಕು. ದಿನ ಬಿಟ್ಟು ಉಪಯೋಗಿಸುವುದಿದ್ದಲ್ಲಿ250 ಗ್ರಾಂ ಬೆಲ್ಲವನ್ನು 100 ಲೀ. ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು. ಸುಣ್ಣದ ಪ್ರಮಾಣ ಹೆಚ್ಚಿದಲ್ಲಿದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7ಕ್ಕಿಂತ ಹೆಚ್ಚಾಗುವುದು. ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂಧ್ರ ನಾಶಕ ಗುಣ ಕಡಿಮೆಯಾಗುವುದು.
ರೋಗ ಬಾಧೆಯಿಂದ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ತೋಟಗಳಲ್ಲಿಕನಿಷ್ಠ ಶೇ.20ರಿಂದ 25ರಷ್ಟು ನೆರಳಿರುವ ಹಾಗೆ ನೋಡಿಕೊಳ್ಳಬೇಕು. ಬಳ್ಳಿಯ ಸುತ್ತ ಹಸಿರು ಎಲೆ, ಒಣ ಎಲೆ, ಸೋಗೆ, ಮಡಿಲುಗಳನ್ನು ಹೊದಿಸಬೇಕು. ಇದರಿಂದ ಬಳ್ಳಿಯ ಬುಡ ಬೇಗ ಒಣಗದಂತೆ ತಡೆಗಟ್ಟಬಹುದು.