Sunday, July 27, 2025

ಸತ್ಯ | ನ್ಯಾಯ |ಧರ್ಮ

ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆ

ಕೊನೆಗೂ ಚುನಾವಣಾ ಆಯೋಗವು ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 1ರಂದು 89 ಸ್ಥಾನಗಳಿಗೆ, ಡಿಸೆಂಬರ್ 5ರಂದು 93 ಸ್ಥಾನಗಳಿಗೆ ಮತದಾನ ನಡೆಯಲಿದೆಯೆಂದು ಆಯೋಗ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್​ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.

ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನು ಮಾತ್ರವೇ ಘೋಷಿಸಿ ಗುಜರಾತ್‌ ಚುನಾವಣಾ ದಿನಾಂಕ ನಿಗದಿಪಡಿಸದ ಚುನಾವಣಾ ಆಯೋಗದ ಕುರಿತು ಅಲ್ಲಲ್ಲಿ ಅಪಸ್ವರ ಕೇಳಿ ಬಂದಿತ್ತು. ಆಡಳಿತ ರೂಢ ಬಿಜೆಪಿಗೆ ಅದರ ಯೋಜನೆಗಳನ್ನು ಉದ್ಘಾಟಿಸಲು ಅನುವು ಮಾಡಿಕೊಡುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೆಲ್ಲದರಿಂದ ಕೆರಳಿದ ಆಯೋಗವು ತನ್ನ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿತ್ತು.

ಇಂದು ಬೆಳಗಿನ ಹೊತ್ತು ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿಲಿದೆ ಎಂದು ತಿಳಿದ ಕೂಡಲೇ ಅದಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಹೀಗೆ ಟ್ವೀಟ್‌ ಮಾಡಿದ್ದರು: “ಬ್ರೇಕಿಂಗ್ ನ್ಯೂಸ್: ಈಗ ಎಲ್ಲಾ ಸರ್ಕಾರಿ ಉದ್ಘಾಟನೆಗಳು ಮುಗಿದಿವೆ, ರಿಬ್ಬನ್ ಕಟ್, ಶಿಲಾನ್ಯಾಸ ಸಮಾರಂಭಗಳು, ಭರವಸೆಗಳನ್ನು ನೀಡುವುದು ಹೀಗೆ ಎಲ್ಲವೂ ಮುಗಿದಿದೆ. ಅಂತೂ ಕೊನೆಗೂ ಗುಜರಾತ್ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗವು ಅಂತಿಮವಾಗಿ ಘೋಷಿಸಲಿದೆ! ಇಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಯಾರು ಹೊಂದಿಸುತ್ತಾರೆ ಎಂದು ನೀವೇ ಊಹಿಸಿ!”

Related Articles

ಇತ್ತೀಚಿನ ಸುದ್ದಿಗಳು

You cannot copy content of this page