Home ದೇಶ 🛑 ಫಾರ್ಮ್-7ಗೆ ಇಸಿ ಕಡಿವಾಣ: ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್ ಮಾಡಲು ಮನಬಂದಂತೆ ಅರ್ಜಿ ಗುಡ್ಡೆ...

🛑 ಫಾರ್ಮ್-7ಗೆ ಇಸಿ ಕಡಿವಾಣ: ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್ ಮಾಡಲು ಮನಬಂದಂತೆ ಅರ್ಜಿ ಗುಡ್ಡೆ ಹಾಕುವುದಕ್ಕೆ ಚುನಾವಣಾ ಆಯೋಗ ಬ್ರೇಕ್

0

ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಸಾಮೂಹಿಕವಾಗಿ ತೆಗೆದುಹಾಕಲು ‘ಫಾರ್ಮ್-7’ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಮತ್ತು ವಿವಾದಗಳ ನಡುವೆ ಭಾರತೀಯ ಚುನಾವಣಾ ಆಯೋಗ (EC) ಮಹತ್ವದ ಹೆಜ್ಜೆಯಿಟ್ಟಿದೆ. ಒಬ್ಬ ವ್ಯಕ್ತಿಯು ಸಲ್ಲಿಸಬಹುದಾದ ಫಾರ್ಮ್-7 ಅರ್ಜಿಗಳ ಗರಿಷ್ಠ ಸಂಖ್ಯೆಗೆ ಆಯೋಗವು ಮಿತಿ ನಿಗದಿಪಡಿಸಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಮತದಾರರ ಪಟ್ಟಿ ಪರಿಷ್ಕರಣೆ (ರಿವಿಷನ್) ಸಮಯದಲ್ಲಿ ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ 10 ಫಾರ್ಮ್-7 ಅರ್ಜಿಗಳನ್ನು ಮಾತ್ರ ಸಲ್ಲಿಸಲು ಸಾಧ್ಯವಾಗುತ್ತದೆ. ಈ ನಿಯಮವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಯ ಸಲ್ಲಿಕೆಗಳಿಗೆ ಸಮಾನವಾಗಿ ಅನ್ವಯಿಸುತ್ತದೆ.

ಮತ್ತೊಂದೆಡೆ, ಯಾವುದೇ ವಿಶೇಷ ಪರಿಷ್ಕರಣೆ ನಡೆಯದೆ ಇರುವ ಸಾಮಾನ್ಯ ದಿನಗಳಲ್ಲಿ, ಒಬ್ಬ ವ್ಯಕ್ತಿಯು ಪ್ರತಿ ತಿಂಗಳು ಗರಿಷ್ಠ 5 ಫಾರ್ಮ್‌ಗಳನ್ನು ಮಾತ್ರ ಸಲ್ಲಿಸಲು ಅನುಮತಿ ನೀಡಲಾಗಿದೆ. ಶುಕ್ರವಾರವೇ ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (CEOs) ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ರವಾನಿಸಿದೆ.

ಫಾರ್ಮ್-7 ಮಿತಿಗೆ ಕಾರಣವೇನು?

ದೊಡ್ಡ ಪ್ರಮಾಣದಲ್ಲಿ ಫಾರ್ಮ್-7 ಅರ್ಜಿಗಳನ್ನು ರಾಶಿ ಹಾಕಿ ಮತದಾರರ ಹೆಸರುಗಳನ್ನು ದುರುದ್ದೇಶಪೂರ್ವಕವಾಗಿ ಕೈಬಿಡುವ ಪ್ರಯತ್ನಗಳು ನಡೆಯುತ್ತಿರುವುದು ಆಯೋಗದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಅಸಲಿ ಮತದಾರರು ಅನಗತ್ಯ ಕಿರುಕುಳ ಅನುಭವಿಸುವಂತಾಗಿತ್ತು ಮತ್ತು ಚುನಾವಣಾ ಅಧಿಕಾರಿಗಳಿಗೂ ತಲೆನೋವು ಸೃಷ್ಟಿಯಾಗಿತ್ತು.

ಈ ಹಿಂದೆ ಆನ್‌ಲೈನ್‌ನಲ್ಲಿ ಒಂದೇ ಬಾರಿಗೆ ಗರಿಷ್ಠ 6 ಫಾರ್ಮ್‌ಗಳನ್ನು ಸಲ್ಲಿಸುವ ಮಿತಿ ಇತ್ತಾದರೂ, ಚುನಾವಣಾ ನೋಂದಣಿ ಅಧಿಕಾರಿಗಳ (EROs) ಕಚೇರಿಗೆ ನೇರವಾಗಿ ತೆರಳಿ ನೂರಾರು ಅರ್ಜಿಗಳನ್ನು ಸುರಿಯುವುದಕ್ಕೆ ಯಾವುದೇ ಸ್ಪಷ್ಟ ಮಿತಿಯಿರಲಿಲ್ಲ. ಇಂತಹ ಗೊಂದಲ ಮತ್ತು ಸಾಮೂಹಿಕ ಆಕ್ಷೇಪಣೆಗಳ ದುರ್ಬಳಕೆಯನ್ನು ತಡೆಯಲು ಆಯೋಗ ಈಗ ಆಫ್‌ಲೈನ್ ಹಾಗೂ ಆನ್‌ಲೈನ್ ಎರಡರಲ್ಲೂ ಕಠಿಣ ಮಿತಿ ಹೇರಿದೆ.

ಏನಿದು ‘ಫಾರ್ಮ್-7’?:

ಮತದಾರರ ಪಟ್ಟಿಯಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ಸೇರಿಸುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಅಥವಾ ಈಗಾಗಲೇ ಪಟ್ಟಿಯಲ್ಲಿರುವ ವ್ಯಕ್ತಿಯ ಹೆಸರನ್ನು ತೆಗೆದುಹಾಕುವಂತೆ ಮನವಿ ಮಾಡಲು ಫಾರ್ಮ್-7 ಅನ್ನು ಬಳಸಲಾಗುತ್ತದೆ. ನಿಯಮಗಳ ಪ್ರಕಾರ, ಆಕ್ಷೇಪಣೆ ಸಲ್ಲಿಸುವ ವ್ಯಕ್ತಿಯು ಅದೇ ವಿಧಾನಸಭಾ ಕ್ಷೇತ್ರದ ನೋಂದಾಯಿತ ಮತದಾರನಾಗಿರುವುದು ಕಡ್ಡಾಯವಾಗಿದೆ.

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕಡಿತಗೊಳಿಸಲಾಗುತ್ತಿದೆ ಎಂಬ ಆರೋಪದ ನಡುವೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗದ ಈ ನಿರ್ಧಾರ ಹೊರಬಿದ್ದಿದೆ.

You cannot copy content of this page

Exit mobile version