ಜ್ಞಾನೇಶ್ ಕುಮಾರ್ ಪ್ರವಾಸದ ವೆಚ್ಚ ಬಹಿರಂಗಪಡಿಸಲು ಸಾಧ್ಯವಿಲ್ಲ: ಆರ್‌ಟಿಐ ಅರ್ಜಿಗೆ ಚುನಾವಣಾ ಆಯೋಗದ ಉತ್ತರ

ಹೊಸದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧಿಕೃತ ಪ್ರವಾಸಗಳು ಮತ್ತು ಅದಕ್ಕಾಗಿ ಸಾರ್ವಜನಿಕ ಹಣದಿಂದ ವೆಚ್ಚವಾದ ವಿವರಗಳು ವೈಯಕ್ತಿಕ ಮಾಹಿತಿಯಾಗಿದ್ದು, ಅವುಗಳನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಬಹಿರಂಗಪಡಿಸಲು ಚುನಾವಣಾ ಆಯೋಗ ನಿರಾಕರಿಸಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಶುಕ್ರವಾರ ಆರೋಪಿಸಿದ್ದಾರೆ.

2025 ರ ಫೆಬ್ರವರಿ 19 ರಂದು ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಜ್ಞಾನೇಶ್ ಕುಮಾರ್ ಅವರ ಪ್ರವಾಸಗಳು ಹಾಗೂ ಇನ್ನಿತರ ವಿಷಯಗಳಿಗೆ ಸರ್ಕಾರದ ಬೊಕ್ಕಸದಿಂದ ಆದ ವೆಚ್ಚದ ಬಗ್ಗೆ ಜೂನ್ 18 ರಂದು ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು ಎಂದು ಗೋಖಲೆ ತಿಳಿಸಿದ್ದಾರೆ. ಇದಕ್ಕೆ ಜುಲೈ 31 ರಂದು ಉತ್ತರಿಸಿರುವ ಆಯೋಗ, ಅವರ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಸಾರ್ವಜನಿಕ ಹಣದಿಂದ ಮಾಡಿದ ವೆಚ್ಚವನ್ನು ವೈಯಕ್ತಿಕ ಮಾಹಿತಿ ಎಂದು ಹೇಗೆ ಹೇಳಲು ಸಾಧ್ಯ? ಪ್ರಧಾನಮಂತ್ರಿಯವರ ವೆಚ್ಚದ ವಿವರಗಳನ್ನು ಕೂಡ ಸಂಸತ್ತಿನಲ್ಲಿ ಬಹಿರಂಗಪಡಿಸಲಾಗುತ್ತದೆ, ಹಾಗಿರುವಾಗ ಜ್ಞಾನೇಶ್ ಕುಮಾರ್ ಅವರ ವಿಚಾರದಲ್ಲಿ ಈ ವಿಶೇಷತೆ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು