Sunday, June 16, 2024

ಸತ್ಯ | ನ್ಯಾಯ |ಧರ್ಮ

ದೆಹಲಿ ಮದ್ಯ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಇಡಿ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಗುರುವಾರ ಸಂಜೆ ದಾಳಿ ನಡೆಸಿ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಿದೆ. 12 ಇಡಿ ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಸರ್ಚ್ ವಾರಂಟ್‌ನೊಂದಿಗೆ ತಲುಪಿದ್ದರು.

ಸುದೀರ್ಘ ವಿಚಾರಣೆಯ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ. ದೆಹಲಿ ಸರ್ಕಾರದ ಸಚಿವ ಸೌರಭ್ ಭಾರದ್ವಾಜ್ ಸೇರಿದಂತೆ ಎಎಪಿಯ ಹಲವು ಹಿರಿಯ ನಾಯಕರು ಮತ್ತು ಸಚಿವರು ಸಿಎಂ ಮನೆ ತಲುಪಿದ್ದಾರೆ. ಇದು ಇಡಿ ಸಂಸ್ಥೆಯ ರೆಡ್‌ ಪ್ಲಾನ್ಡ್ ಎಂದು ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಈಗಾಗಲೇ ಸಂಚು ರೂಪಿಸಲಾಗಿದೆ. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಪ್ರಕರಣದಲ್ಲಿ ತಕ್ಷಣದ ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಆದರೆ ಶುಕ್ರವಾರ ಬೆಳಗ್ಗೆಗೆ ಮೊದಲು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯಮಂತ್ರಿ ನಿವಾಸದ ಹೊರಗೆ ಬಿಗಿ ಭದ್ರತೆ

ಮುಖ್ಯಮಂತ್ರಿ ನಿವಾಸದಲ್ಲಿ ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸುತ್ತಿತ್ತು. ಸಿಎಂ ಭವನದ ಬಳಿ ಎಎಪಿ ಬೆಂಬಲಿಗರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಂಧನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು, ಸಿಎಂ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಎಂ ಭವನದ ಹೊರಗೆ ಸಿಆರ್‌ಪಿಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಕೇಜ್ರಿವಾಲ್ ಅವರನ್ನು ಬಂಧನದಿಂದ ಪಾರು ಮಾಡುವಂತೆ ತಂಡವೊಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಮಧ್ಯರಾತ್ರಿ ಅರವಿಂದ್ ಕೇಜ್ರಿವಾಲ್ ಅರ್ಜಿಯ ವಿಚಾರಣೆ ನಡೆಸಲು ಕೋರ್ಟ್ ನಿರಾಕರಿಸಿದೆ. ಶುಕ್ರವಾರ ಬೆಳಗ್ಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.

ದೆಹಲಿ ಹೈಕೋರ್ಟ್ ಗುರುವಾರ ಮಧ್ಯಾಹ್ನ ಪರಿಹಾರ ನೀಡಲು ನಿರಾಕರಿಸಿತ್ತು

ಅರವಿಂದ್ ಕೇಜ್ರಿವಾಲ್ ಆಪಾದಿತ ಮದ್ಯ ನೀತಿ ಪ್ರಕರಣದಲ್ಲಿ ಇ ಡಿ ಸಂಸ್ಥೆಯ ಒಂಬತ್ತು ಸಮನ್ಸ್‌ಗಳನ್ನು ನಿರ್ಲಕ್ಷಿಸಿದ್ದರು. ಸೋಮವಾರ, ಅವರು ದೆಹಲಿ ಜಲ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಸ್ಥೆ ನೀಡಿದ ಸಮನ್ಸ್‌ಗಳನ್ನು ನಿರ್ಲಕ್ಷಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧನದಿಂದ ಮುಕ್ತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗುರುವಾರ ಪರಿಹಾರವನ್ನು ನಿರಾಕರಿಸಿತು.

ದೆಹಲಿ ಹೈಕೋರ್ಟ್‌ನಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಇಡಿ ಅಧಿಕಾರಿಗಳು ಸಂಜೆ ಅವರ ನಿವಾಸಕ್ಕೆ ತಲುಪಿದಾಗ ಅರವಿಂದ್ ಕೇಜ್ರಿವಾಲ್ ಅವರ ತೊಂದರೆ ಹೆಚ್ಚಾಯಿತು. ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ವಾರದ ಹಿಂದೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾ ಅವರನ್ನು ಇಡಿ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು ಮತ್ತು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು