ಬೆಂಗಳೂರು: ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ದಂಧೆಯ ಮನಿ-ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಸಹೋದರನನ್ನು ವಶಕ್ಕೆ ಪಡೆದಿದೆ.
ಕಾಂಗ್ರೆಸ್ ಶಾಸಕರು, ಅವರ ಸಹೋದರರು ಮತ್ತು ಸಹವರ್ತಿಗಳಿಗೆ ಸಂಬಂಧಿಸಿದ ನಾಲ್ಕು ರಾಜ್ಯಗಳ 30 ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ, ಇಡಿ ಅಧಿಕಾರಿಗಳು ಕೆ.ಸಿ.ನಾಗರಾಜ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಇಡಿ ನೀಡಿರುವ ಹೇಳಿಕೆಯ ಪ್ರಕಾರ, ಬೆಂಗಳೂರಿನಲ್ಲಿ 10, ಚಿತ್ರದುರ್ಗದಲ್ಲಿ ಆರು, ಹುಬ್ಬಳ್ಳಿಯಲ್ಲಿ ಒಂದು, ಜೋಧ್‌ಪುರದಲ್ಲಿ ಮೂರು, ಮುಂಬೈನಲ್ಲಿ ಎರಡು ಮತ್ತು ಗೋವಾದಲ್ಲಿ ಎಂಟು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.
ಶಾಸಕ ನಡೆಸುತ್ತಿದ್ದಾರೆ ಎನ್ನಲಾದ ಪಪ್ಪಿಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪಿಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ ಸೇರಿದಂತೆ ಐದು ಕ್ಯಾಸಿನೊಗಳ ಮೇಲೂ ದಾಳಿ ನಡೆಸಲಾಗಿದೆ.
ಇಡಿ ಪ್ರಕಾರ, ಆರೋಪಿಗಳು ಕಿಂಗ್567, ರಾಜಾ567, ಪಪ್ಪಿಸ್003 ಮತ್ತು ರತ್ನ ಗೇಮಿಂಗ್‌ನಂತಹ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನೂ ನಡೆಸುತ್ತಿದ್ದರು.
ಶಾಸಕರ ಮತ್ತೊಬ್ಬ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ದುಬೈನಲ್ಲಿ ಡೈಮಂಡ್ ಸಾಫ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್ ಮತ್ತು ಪ್ರೈಮ್9 ಟೆಕ್ನಾಲಜೀಸ್ ಎಂಬ ಮೂರು ವ್ಯವಹಾರ ಸಂಸ್ಥೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಇವು ಶಾಸಕರು ನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಮತ್ತು ಗೇಮಿಂಗ್ ವ್ಯವಹಾರಗಳಿಗೆ ಸಂಬಂಧ ಹೊಂದಿವೆ ಎಂದು ಏಜೆನ್ಸಿ ಹೇಳಿದೆ.
ಇದಲ್ಲದೆ, ಈ ದಾಳಿಗಳಲ್ಲಿ ಕಾಂಗ್ರೆಸ್ ನಾಯಕ ಕುಸುಮಾ ಎಚ್. ಅವರ ಸಹೋದರ ಅನಿಲ್ ಗೌಡ ಅವರ ಪಾತ್ರವೂ ಇರುವುದು ಬೆಳಕಿಗೆ ಬಂದಿದೆ.
ವೀರೇಂದ್ರ (49) ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಶೇ 59.84ರಷ್ಟು ಮತಗಳನ್ನು ಪಡೆದು ಕಾಂಗ್ರೆಸ್ ಟಿಕೆಟ್‌ನಿಂದ ಚಿತ್ರದುರ್ಗದಲ್ಲಿ ಜಯಗಳಿಸಿದ್ದರು. ಅವರು ಗೋವಾದಲ್ಲಿ ನೋಂದಾಯಿತ ಎರಡು ಸಂಸ್ಥೆಗಳಾದ ಪಪ್ಪಿಸ್ ಟೆಕ್ನಾಲಜಿ ಪ್ರೈ. ಲಿ. ಮತ್ತು ರತ್ನ ಗೋಲ್ಡ್ ಪ್ರೈ. ಲಿ., ಹಾಗೂ ಬೆಂಗಳೂರಿನಲ್ಲಿರುವ ಅನಾಲಜಿ ಗೇಮಿಂಗ್ ಇಂಡಿಯಾ ಪ್ರೈ. ಲಿ. ನ ನಿರ್ದೇಶಕರಾಗಿದ್ದಾರೆ.
ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್ ಪ್ರೈ. ಲಿ. (ಎಸ್‌ಕೆಎಂಇಪಿಎಲ್) ನ ನಿರ್ದೇಶಕರಾದ ಶಂತೇಶ್ ಗುರೆಡ್ಡಿ ಮತ್ತು ಜ್ಯೋತಿ ಶಂತೇಶ್ ಗುರೆಡ್ಡಿ ಅವರಿಂದ ಸುಮಾರು 61.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ.
ಫೆಮಾ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಆಸ್ತಿಗಳನ್ನು ಹೊಂದಿದ ಆರೋಪದ ಮೇಲೆ ಫಾರಿನ್ ಎಕ್ಸ್‌ಚೇಂಜ್ ಮ್ಯಾನೇಜ್‌ಮೆಂಟ್ ಆಕ್ಟ್, 1999 ರ ಸೆಕ್ಷನ್ 37ಎ(1) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಏಜೆನ್ಸಿ ಹೇಳಿದೆ.
ಎಸ್‌ಕೆಎಂಇಪಿಎಲ್ ಸಂಸ್ಥೆಯು ತಮ್ಮ ವೆಬ್‌ಸೈಟ್ ಪ್ರಕಾರ, ಬಳ್ಳಾರಿ ಜಿಲ್ಲೆಯ ಸಂಡೂರಿನ ಮೀಸಲು ಅರಣ್ಯದಲ್ಲಿ ರಾಮನದುರ್ಗ ಕಬ್ಬಿಣದ ಅದಿರು ಗಣಿಯನ್ನು ನಿರ್ವಹಿಸುತ್ತದೆ. ಈ ಗಣಿಯು ವಾರ್ಷಿಕ 2.80 ದಶಲಕ್ಷ ಟನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.