ಐಪ್ಯಾಕ್ ಮೇಲೆ ಇಡಿ ದಾಳಿ: ಬಂಗಾಳ ಚುನಾವಣೆ ಹೊತ್ತಲ್ಲೇ ಚುನಾವಣಾ ತಂತ್ರಗಾರಿಕೆ ಸಂಸ್ಥೆಯ ಕಚೇರಿಗಳಲ್ಲಿ ತಪಾಸಣೆ

ಹೈದರಾಬಾದ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಪ್ರಖ್ಯಾತ ಚುನಾವಣಾ ತಂತ್ರಗಾರಿಕೆ ಸಂಸ್ಥೆಯಾದ ಐಪ್ಯಾಕ್ (I-PAC) ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದೆ. ಹೈದರಾಬಾದ್, ಬೆಂಗಳೂರು, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರುವ ಐಪ್ಯಾಕ್ ಕಚೇರಿಗಳಲ್ಲಿ ಈ ಶೋಧ ಕಾರ್ಯ ನಡೆದಿದೆ.

ಐಪ್ಯಾಕ್ ಸಂಸ್ಥೆಯ ಸಹ-ಸಂಸ್ಥಾಪಕ ರಿಷಿರಾಜ್ ಸಿಂಗ್ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಲ್ಲಿದ್ದಲು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಈ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಸಿರು ಫೈಲ್ ಹಿಡಿದು ಬಂದಿದ್ದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪರವಾಗಿ ಚುನಾವಣಾ ವ್ಯೂಹ ರಚಿಸುತ್ತಿರುವ ಐಪ್ಯಾಕ್ ಕಚೇರಿಗಳ ಮೇಲೆ ಈ ವರ್ಷದ ಜನವರಿಯಲ್ಲೂ ಇಡಿ ದಾಳಿ ನಡೆಸಿತ್ತು. ಆಗ ಕೋಲ್ಕತ್ತಾದ ಲಾಡನ್ ಸ್ಟ್ರೀಟ್‌ನಲ್ಲಿರುವ ಐಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ದಾಳಿ ನಡೆದಾಗ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಿಗೆ ಆಗಮಿಸಿದ್ದರು. ತಪಾಸಣೆ ನಡೆಯುತ್ತಿದ್ದಾಗಲೇ ಒಳಗೆ ಹೋದ ಅವರು, ಸ್ವಲ್ಪ ಸಮಯದ ನಂತರ ಕೈಯಲ್ಲಿ ಹಸಿರು ಬಣ್ಣದ ಫೈಲ್ ಹಿಡಿದು ಹೊರಬಂದಿದ್ದರು.

ಆ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಈ ದಾಳಿಗಳು ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ್ದರು. “ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಇಡಿ ಈ ದಾಳಿ ನಡೆಸುತ್ತಿದೆ. ಟಿಎಂಸಿಯ ಚುನಾವಣಾ ವ್ಯೂಹ, 2026ರ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಮತ್ತು ಪಕ್ಷದ ರಹಸ್ಯ ದಾಖಲೆಗಳನ್ನು ಕದಿಯಲು ಈ ಸಂಚು ರೂಪಿಸಲಾಗಿದೆ,” ಎಂದು ಅವರು ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೆ, ಇಡಿ ಅಧಿಕಾರಿಗಳು ಚುನಾವಣಾ ತಂತ್ರಗಾರಿಕೆಗೆ ಸಂಬಂಧಿಸಿದ ಪ್ರಮುಖ ಫೈಲ್‌ಗಳನ್ನು ಕದ್ದಿದ್ದಾರೆ ಎಂದು ದೂರಿದ್ದರು.

Related Articles

ಇತ್ತೀಚಿನ ಸುದ್ದಿಗಳು