Monday, June 17, 2024

ಸತ್ಯ | ನ್ಯಾಯ |ಧರ್ಮ

ಆಪ್ ಸಂಸದ ಸಂಜಯ್ ಸಿಂಗ್ ಮನೆ ಮೇಲೆ ಇಡಿ ದಾಳಿ

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರ ದೆಹಲಿ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತಂಡ ಇಂದು ಬೆಳಗ್ಗೆ ಶೋಧ ಆರಂಭಿಸಿದೆ.

ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಇಡಿ ಈ ದಾಳಿಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ಸಂಜಯ್ ಸಿಂಗ್ ಮತ್ತು ಆತನ ಆಪ್ತರ ಮನೆಗಳ ಮೇಲೆ ಈ ವರ್ಷದ ಮೇ ತಿಂಗಳಲ್ಲಿ ಇಡಿ ದಾಳಿ ನಡೆಸಿ ಕೆಲವು ಮಾಹಿತಿ ಕಲೆಹಾಕಿದ್ದು, ಅದರ ಆಧಾರದ ಮೇಲೆ ಇದೀಗ ಮತ್ತೆ ತಪಾಸಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಅವರೇ ಮನೆಯಲ್ಲಿದ್ದು ಇಡಿ ದಾಳಿ ನಡೆಯುತ್ತಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದೆಹಲಿ ಮದ್ಯ ಹಗರಣದಲ್ಲಿ ಬಂಧಿತರಾಗಿರುವ ಆಪ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸದ್ಯ ಜೈಲಿನಲ್ಲಿದ್ದಾರೆ. ಅವರು ಫೆಬ್ರವರಿ 28ರಂದು ದೆಹಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿರುವ ಸಮಯದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಮನೆ ಮೇಲೆ ಇಡಿ ದಾಳಿ ನಡೆದಿರುವುದು ಗಮನಾರ್ಹ.

https://x.com/ANI/status/1709386048671985930?s=20

ಇಡಿ ಚಾರ್ಜ್ ಶೀಟ್ ಪ್ರಕಾರ, ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ದಿನೇಶ್ ಅರೋರಾ ಅವರು ಸಂಸದ ಸಂಜಯ್ ಸಿಂಗ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದಾರೆ.

ದಿನೇಶ್ ಅರೋರಾ ದೆಹಲಿಯಲ್ಲಿ ಅನ್‌ಪ್ಲಗ್ಡ್ ಕೋರ್ಟ್‌ಯಾರ್ಡ್ ಎಂಬ ರೆಸ್ಟೋರೆಂಟ್ ಹೊಂದಿದ್ದಾರೆ. ದಿನೇಶ್ ಅರೋರಾ ಮೊದಲ ಬಾರಿಗೆ ಸಂಜಯ್ ಸಿಂಗ್ ಅವರನ್ನು ಭೇಟಿಯಾದರು. ಅವರ ಮೂಲಕ ಮನೀಶ್ ಸಿಸೋಡಿಯಾ ಅವರನ್ನು ಭೇಟಿಯಾದರು. ದೆಹಲಿ ವಿಧಾನಸಭಾ ಚುನಾವಣೆಗೆ ಪಕ್ಷದ ನಿಧಿ ನೀಡುವಂತೆ ದಿನೇಶ್ ಅರೋರಾ ಅವರನ್ನು ಸಂಜಯ್ ಸಿಂಗ್ ಕೇಳಿದ್ದರು ಎಂದು ಇಡಿ ಆರೋಪಪಟ್ಟಿಯಲ್ಲಿ ಆರೋಪಿಸಿದೆ.

ದಿನೇಶ್ ಅರೋರಾ ದೆಹಲಿಯ ಹೆಚ್ಚಿನ ರೆಸ್ಟೋರೆಂಟ್ ಮಾಲೀಕರೊಂದಿಗೆ ಮಾತನಾಡಿ ಸಿಸೋಡಿಯಾಗೆ ರೂ.32 ಲಕ್ಷ ಚೆಕ್ ನೀಡಿದರು. ಆ ನಂತರವೂ ಸಂಜಯ್ ಸಿಂಗ್ ಮನೀಶ್ ಸಿಸೋಡಿಯಾ ಜೊತೆ ಸಂಪರ್ಕದಲ್ಲಿದ್ದರು. ದೆಹಲಿ ಮದ್ಯ ಇಲಾಖೆಯಲ್ಲಿ ದಿನೇಶ್ ಅರೋರಾ ಅವರ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಸಂಜಯ್ ಸಿಂಗ್ ಸಹ ಕ್ರಮವನ್ನು ತೆಗೆದುಕೊಂಡರು ಎಂದು ಇಡಿ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು