ಕಾಡು ತೋಳ ಮತ್ತು ಕಕೇಶಿಯನ್ ಶೆಫರ್ಡ್ ತಳಿಯ ಮಿಶ್ರಣವಾಗಿರುವಂತ ತೋಳನಾಯಿ ಎಂದೇ ಕರೆಯಲ್ಪಡುವ ಅಪರೂಪದ ತಳಿಯ ನಾಯಿ 50 ಕೋಟಿ ಬೆಲೆಬಾಳುವಂತದ್ದು ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ಶ್ವಾನ ಪ್ರಿಯ ಸತೀಶ್ ಅವರಿಗೆ ಇಂದು ಬೆಂಗಳೂರಿನಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಸರಿಯಾದ ಶಾಕ್ ನೀಡಿದೆ.
ಕೆಲ ದಿನಗಳ ಹಿಂದೆ 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ಅತಿ ದುಬಾರಿಯಾಗಿರುವಂತ ನಾಯಿಯನ್ನು ಖರೀದಿಸಿದ್ದಾಗಿ ಸತೀಶ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮಾಹಿತಿ ಆಧರಿಸಿ ಇಂದು ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದು ವಿಶ್ವದಲ್ಲೇ ಅತೀ ದುಬಾರಿಯಾದಂತ ನಾಯಿಯಾಗಿದೆ. ಇದರ ಬೆಲೆ 50 ಕೋಟಿ. ಇದನ್ನು ನಾನು ಖರೀದಿ ಮಾಡಿದ್ದೇನೆ ಎಂದು ಶ್ವಾನಪ್ರಿಯ ಸತೀಶ್ ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ಆದರೆ ಇಡಿ ದಾಳಿಯ ನಂತರ ಈ ನಾಯಿಯ ಬೆಲೆ 50 ಕೋಟಿ ಅಲ್ಲ ಎಂಬ ಸತ್ಯ ಬಯಲಾಗಿದೆ. ಇನ್ನು ಇಡಿ ಅಧಿಕಾರಿಗಳು ಸತೀಶ್ ಮನೆಯಲ್ಲಿ ತನಿಖೆ ಮುಂದುವರಿಸಿದ್ದಾರೆ.