ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ದೆಹಲಿ ಮದ್ಯ ಹಗರಣ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ದೆಹಲಿಯ ಮದ್ಯ ನೀತಿಯಲ್ಲಿ ಅವ್ಯವಹಾರ ನಡೆದಿದೆ, ಅಪಾರ ಪ್ರಮಾಣದ ಹಣ ಕೈಬದಲಾವಣೆಯಾಗಿದೆ ಮತ್ತು ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣದ ನಷ್ಟವಾಗಿದೆ ಎಂಬ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದರೆ, ಅದೇ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಫೆಬ್ರವರಿ 26, 2023ರಂದು ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ.
ದೆಹಲಿ ಮದ್ಯ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇದೇ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದೆ. ಇಡಿ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಿರುವ ಬಗ್ಗೆ ಸಚಿವ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿದ್ದಾರೆ. ಎಎಪಿ ಪಕ್ಷವನ್ನು ಇಲ್ಲವಾಗಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು. ಈ ನಕಲಿ ಪ್ರಕರಣದಲ್ಲಿ ಸಿಲುಕಿರುವ ಅರವಿಂದ್ ಕೇಜ್ರಿವಾಲ್ ಅವರನ್ನೂ ಜೈಲಿಗೆ ಕಳುಹಿಸುವವರೆಗೂ ಅದು ಬಿಡುವುದಿಲ್ಲ ಎಂದರು.
ಈ ಪ್ರಕರಣದಲ್ಲಿ 338 ಕೋಟಿ ರೂಪಾಯಿ ಕೈ ಬದಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಕೆಲವು ಪುರಾವೆಗಳನ್ನು ಒದಗಿಸಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿರುವುದು ಗಮನಾರ್ಹ. ಅದೇ ಸಮಯದಲ್ಲಿ, ತನಿಖಾ ಸಂಸ್ಥೆಗಳಿಗೆ ಕೇವಲ 6-8 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ವಿಚಾರಣೆ ಸುಗಮವಾಗಿ ನಡೆದರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.