Saturday, June 15, 2024

ಸತ್ಯ | ನ್ಯಾಯ |ಧರ್ಮ

ಜಾರಿ ನಿರ್ದೇಶನಾಲಯ v/s ವಿಶೇಷ ತನಿಖಾ ದಳ ; ಪ್ರತ್ಯೇಕ ಪ್ರಕರಣಗಳಲ್ಲಿ ಗಮನ ಸೆಳೆಯುವ ಅಂಶಗಳಿವು

ನವೆಂಬರ್ 30 ಮತ್ತು ಡಿಸೆಂಬರ್ 1 2022 ರ ನಡುವೆ ಎರಡು ಪ್ರತ್ಯೇಕ ಪ್ರಕರಣಗಳು ತೆಲಂಗಾಣದಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿವೆ. ಎರಡು ರಾಜಕೀಯ ಪಕ್ಷಗಳ ದೊಡ್ಡ ನಾಯಕರಾದ ಬಿಜೆಪಿಯ ಬಿಎಲ್ ಸಂತೋಷ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಯಕಿ ಕೆ. ಕವಿತಾ ಅವರಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣ ಎರಡು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯ ಬಿ.ಎಲ್.ಸಂತೋಷ್ ಮತ್ತು ಟಿಆರ್ಎಸ್ ನ ಕೆ. ಕವಿತಾ ಅವರು ನಡೆಯುತ್ತಿರುವ ಎರಡು ತನಿಖೆಗಳಲ್ಲಿ ಭಾಗಿಯಾಗಿದ್ದಾರೆ.

ಅದರಲ್ಲಿ ತೆಲಂಗಾಣ ಪೊಲೀಸರು TRS ಶಾಸಕರ ಕಳ್ಳತನದ ಆರೋಪದ ಅಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಹೆಸರಿಸಿ ಆರೋಪಿಸಿ ಹೈಕೋರ್ಟ್‌ಗೆ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ದೆಹಲಿ ಅಬಕಾರಿ ಹಗರಣದ ಪ್ರಮುಖ ಆರೋಪಿ ಉದ್ಯಮಿ ಅಮಿತ್ ಅರೋರಾ ಅವರನ್ನು ವಶಕ್ಕೆ ಪಡೆಯುವಂತೆ ಜಾರಿ ನಿರ್ದೇಶನಾಲಯ ಕೋರಿದ್ದು, ಈ ಪ್ರಕರಣದಲ್ಲಿ ಟಿಆರ್‌ಎಸ್ ನಾಯಕ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರ ಹೆಸರು ಕೇಳಿ ಬಂದಿದೆ.

ಇಲ್ಲಿ ಗಮನಿಸಬಹುದಾದ ವಿಚಾರ ಎಂದರೆ ಅಬಕಾರಿ ಹಗರಣದಲ್ಲಿ ಆರೋಪಿ ಅಮಿತ್ ಅರೋರಾ ಅವರನ್ನು ಕಸ್ಟಡಿಗೆ ತಗೆದುಕೊಳ್ಳಲು ಸಲ್ಲಿಸಿರುವ ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯ ಕೆ.ಕವಿತಾ ಹೆಸರನ್ನು ಬಳಸಿದೆಯೇ ಹೊರತು, ಇಲ್ಲಿಯವರೆಗೂ ಅವರು ಅಬಕಾರಿ ಹಗರಣದಲ್ಲಿ ಆರೋಪಿಯಾಗಿಲ್ಲ.
ಆದರೆ ತೆಲಂಗಾಣ SIT ಪೊಲೀಸರು ಸಿದ್ದಪಡಿಸಿರುವ ಶಾಸಕರ ಕಳ್ಳತನದ ಆರೋಪ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಮುಂಚೂಣಿಯಲ್ಲಿ ಇದ್ದು ಪ್ರಕರಣದ 4 ನೇ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ.

ಈಗಾಗಲೇ ತೆಲಂಗಾಣ ಪೊಲೀಸರು ಬಂಧಿಸಿರುವ ಮೂವರು ಪ್ರಮುಖ ಆರೋಪಿಗಳಾದ – ರಾಮಚಂದ್ರ ಭಾರತಿ, ಸಿಂಹಯಾಜಿ ಮತ್ತು ಕೆ ನಂದ ಕುಮಾರ್ ಅವರ ಕಡೆಯಿಂದ ಬಂದ ಮಾಹಿತಿಯಂತೆ ಬಿ.ಎಲ್‌.ಸಂತೋಷ್ ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಬಿಜೆಪಿಗೆ ಸೇರಲು ನಾಲ್ವರು ಟಿಆರ್‌ಎಸ್ ಶಾಸಕರಿಗೆ 250 ಕೋಟಿ ಹಣದ ಆಮೀಷ ಒಡ್ಡಿದ ಗಂಭೀರ ಪ್ರಕರಣ ಇದಾಗಿದ್ದು ತೆಲಂಗಾಣ SIT ಇದರ ತನಿಖೆ ನಡೆಸುತ್ತಿದೆ.

ಇನ್ನು ದೆಹಲಿ ಮೂಲದ ಅಬಕಾರಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ  ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೌತ್ ಗ್ರೂಪ್ ಸೇರಿದಂತೆ ಕೆಲವು ಮದ್ಯದ ವ್ಯವಹಾರಗಳಿಗೆ ಒಲವು ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಸೌತ್ ಗ್ರೂಪ್ ಸಂಸ್ಥೆ ತೆಲಂಗಾಣ ಎಂಎಲ್ಸಿ ಕೆ.ಕವಿತಾ ಅವರಿಗೆ ಸಂಬಂಧಿಸಿದ ಸಂಸ್ಥೆ ಎಂದು ಹೇಳಲಾಗಿದೆ. ಹಾಗಾಗಿ ಹಣದ ಕಿಕ್‌ಬ್ಯಾಕ್‌ಗಾಗಿ ಆರೋಪದ ಅಡಿಯಲ್ಲಿ ಕವಿತಾ ಹೆಸರನ್ನು ಇಲ್ಲಿ ಲಿಂಕ್ ಮಾಡಲಾಗಿದೆ.

ಕಳೆದ ನವೆಂಬರ್ 30 ಮತ್ತು ಡಿಸೆಂಬರ್ 1 ರ ನಡುವೆ ನಡೆದ ಪ್ರತ್ಯೇಕ ಪ್ರಕರಣದ ಬೆಳವಣಿಗೆ ಇದಾದರೂ ಮೇಲ್ನೋಟಕ್ಕೆ ಇವೆರಡೂ ತೆಲಂಗಾಣ SIT ಮತ್ತು ಜಾರಿ ನಿರ್ದೇಶನಾಲಯದ ನಡುವೆ ಒಂದು ಒಳಜಗಳದಂತೆ ಭಾಸವಾಗಿದೆ. ಸಾರ್ವಜನಿಕವಾಗಿ ಕ್ರಮವಾಗಿ ಟಿಆರ್‌ಎಸ್ ಮತ್ತು ಬಿಜೆಪಿ ನಾಯಕರ ಮೇಲೆ ಇದು ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಮಾಡಿದೆ ಎಂದು the quint ವರದಿ ಮಾಡಿದೆ.

ಇಲ್ಲಿ ಜಾರಿ ನಿರ್ದೇಶನಾಲಯ ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬಂದರೆ, SIT ರಾಜ್ಯದ ಗೃಹ ಇಲಾಖೆಯ ಅಡಿಯಲ್ಲಿ ಬರುವ ತೆಲಂಗಾಣ ಪೊಲೀಸರ ಒಂದು ಅಂಗವಾಗಿದೆ. ಆದಾಗ್ಯೂ, ತೆಲಂಗಾಣ ಹೈಕೋರ್ಟ್, ನವೆಂಬರ್‌ನಲ್ಲಿ ಹೈಕೋರ್ಟ್ ನ್ಯಾಯಾಧೀಶರಿಗೆ ವರದಿ ಮಾಡುವಂತೆ ಎಸ್‌ಐಟಿ ಸ್ವತಂತ್ರವಾಗಿ ಆದೇಶ ನೀಡಿತ್ತು. ನಂತರ ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಈ ನಡುವೆ ಬಿಜೆಪಿ ನಾಯಕರನ್ನು ಗುರಿಯಾಗಿಸಲು TRS ಪಕ್ಷ ರಾಜ್ಯ ಪೊಲೀಸರನ್ನು ಬಳಸಿಕೊಂಡಿದೆ ಎಂದು BJP ಆರೋಪಿಸಿದೆ. ಹಾಗೂ ಎಲ್ಲಾ ಆರೋಪಗಳನ್ನು ನಿರಾಕರಿಸಿ, ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸುವಂತೆ ತೆಲಂಗಾಣ ಹೈಕೋರ್ಟ್‌ಗೆ ಬಿಜೆಪಿ ಮನವಿ ಮಾಡಿದೆ. ಬಿ.ಎಲ್.ಸಂತೋಷ್ ನೇರವಾಗಿ ಅವರ ಮೇಲಿನ ಆರೋಪವನ್ನು ತಳ್ಳಿ ಹಾಕದಿದ್ದರೂ ತೆಲಂಗಾಣ ಮೂಲದ ಭಾರತ ಧರ್ಮ ಜನಸೇನೆ ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ (ಬಿ.ಎಲ್.ಸಂತೋಷ್ ಜೊತೆಗೆ ಶಾಸಕರ ಕಳ್ಳತನದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾದ ವ್ಯಕ್ತಿ. ತೆಲಂಗಾಣ ಬಿಜೆಪಿ ಜೊತೆಗೆ ನಿಕಟ ಸಂಪರ್ಕ ಹೊಂದಿದ ವ್ಯಕ್ತಿ) ತನ್ನ ಮೇಲಿನ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

ಇನ್ನು ಕೆ.ಕವಿತಾ ಪತ್ರಿಕಾಗೋಷ್ಠಿ ಕರೆದಿದ್ದು ಈ ಸಂಬಂಧವನ್ನು ತಾನು ಎಂತಹ ವಿಚಾರಣೆಯನ್ನು ಎದುರಿಸಲಿದೆ, ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಇನ್ನು ಈ ವಿಚಾರವಾಗಿ ಬಿಜೆಪಿ ತಂತ್ರಗಾರಿಕೆಯಿಂದ ನಾನು ಜೈಲಿಗೆ ಹೋಗಬೇಕಾಗಿ ಬಂದರೂ ಅದಕ್ಕೂ ಸಿದ್ಧಳಿದ್ದೇನೆ. ಆದರೆ ಬಿಜೆಪಿ ಪಕ್ಷದ ಬಂಡವಾಳ ಬಯಲು ಮಾಡುವ ನನ್ನ ನಿರ್ಧಾರದಿಂದ ಹಿಂದೆ ಉಳಿಯುವ ಮಾತೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು