Saturday, June 15, 2024

ಸತ್ಯ | ನ್ಯಾಯ |ಧರ್ಮ

ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆ: ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಕಳವಳ

ನ್ಯೂಡೆಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡಲಾಗುವ “ನಕಲಿ ಸುದ್ದಿ” ಗಳ ಮೇಲೆ ನಿಗಾ ಇಡಲು ಫ್ಯಾಕ್ಟ್‌ ಚೆಕ್ ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ.

ಫ್ಯಾಕ್ಟ್‌ ಚೆಕ್ಕಿಂಗ್ ಪ್ರಯತ್ನಗಳನ್ನು ಸರ್ಕಾರದ ಬದಲು ಸ್ವಾಯತ್ತ ಸಂಸ್ಥೆಗಳು ನಡೆಸಬೇಕು, ಇಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗಿ ಬದಲಾಗುತ್ತವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಫ್ಯಾಕ್ಟ್‌ ಚೆಕ್‌ನಂತಹ ಯಾವುದೇ ಮೇಲ್ವಿಚಾರಣಾ ಚೌಕಟ್ಟುಗಳು ಪೂರ್ವ ಸೂಚನೆ ನೀಡುವುದು, ಮೇಲ್ಮನವಿ ಸಲ್ಲಿಸುವ ಹಕ್ಕು ಮತ್ತು ನ್ಯಾಯಾಂಗ ಮೇಲ್ವಿಚಾರಣೆ ಸೇರಿದಂತೆ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಬೇಕು ಎಂದು ಗಿಲ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರ ಸೂಕ್ತ ಸಮಾಲೋಚನೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಇಂತಹ ಫ್ಯಾಕ್ಟ್‌ ಚೆಕಿಂಗ್ ಘಟಕಗಳನ್ನು ಸ್ಥಾಪಿಸಬೇಕು ಎಂದು ಅದು ಹೇಳಿದೆ.

ಗಿಲ್ಡ್ ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಐಟಿ ನಿಯಮಗಳು 2023ರ ತಿದ್ದುಪಡಿಯನ್ನು ಪ್ರಶ್ನಿಸಿ ಈ ಕಾಯ್ದೆಯು ʼಫ್ಯಾಕ್ಟ್‌ ಚೆಕ್‌ʼ ಘಟಕವನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ. ಅದರಡಿಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕರು ಸುಳ್ಳು ಯಾವುದು ಎನ್ನುವುದನ್ನು ಕಂಡುಹಿಡಿಯುವ ಅಧಿಕಾರವನ್ನು ಏಕಸ್ವಾಮ್ಯವಾಗಿ ಹೊಂದಿರುತ್ತಾರೆ. ಮತ್ತು ಇದು ಅವರಿಗೆ ಅಂತಹ ʼವಿಷಯ-ವಸ್ತುವನ್ನುʼ ಹಿಂತೆಗೆದುಕೊಳ್ಳಲು ಆದೇಶ ನೀಡುವ ಅಧಿಕಾರವನ್ನೂ ನೀಡುತ್ತದೆ ಎಂದು ದೂರಿದೆ.

ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ “ಫ್ಯಾಕ್ಟ್‌ ಚೆಕ್ ಘಟಕದಿಂದ ನಕಲಿ ಎಂದು ಟ್ಯಾಗ್ ಮಾಡಲ್ಪಟ್ಟ ಪೋಸ್ಟ್‌ಗಳು ಮತ್ತು ವರದಿಗಳನ್ನು ತೆಗೆದುಹಾಕಲಾಗುವುದು” ಮತ್ತು “ಅಗತ್ಯವಿದ್ದರೆ, ಸರ್ಕಾರವು ಐಪಿಸಿಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಂಬಂಧಪಟ್ಟವರ ಮೇಲೆ ದಂಡದ ಕ್ರಮಗಳನ್ನು ಸಹ ತೆಗೆದುಕೊಳ್ಳಬಹುದು” ಎಂದು ಹೇಳಿದ್ದರು. .

Related Articles

ಇತ್ತೀಚಿನ ಸುದ್ದಿಗಳು