Friday, June 14, 2024

ಸತ್ಯ | ನ್ಯಾಯ |ಧರ್ಮ

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ : ‘ಬ್ಯಾಗ್ ಹೊರೆ’ ಇಳಿಸಲು ಮುಂದಾದ ಶಿಕ್ಷಣ ಇಲಾಖೆ

ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಬ್ಯಾಗ್ ‘ಹೊರೆ’ಯ ಬಗ್ಗೆ ಬಹಳ ಕಾಲದಿಂದ ಅನೇಕ ಚರ್ಚೆಗಳು ನಡೆದಿವೆ. ಸಧ್ಯ ಈ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡುವ ಚಿಂತನೆ ನಡೆಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಲಿಕೆಯಲ್ಲಿ ಮಹತ್ವದ ಬದಲಾವಣೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಆ ಮೂಲಕ ಮುಂದಿನ ವರ್ಷದಿಂದ ಸೆಮಿಸ್ಟರ್ ಮಾದರಿಯಲ್ಲಿ ಪಠ್ಯ ಗಳನ್ನು ಎರಡು ಭಾಗಗಳಾಗಿ ಮಾಡಲು ನಿರ್ಧರಿಸಲಾಗಿದೆ.

ಕರ್ನಾಟಕ ಪಠ್ಯ ಪುಸ್ತಕ ಸಂಘ ಈ ಕುರಿತು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಪ್ರತಿ ವಿಷಯದ ಪಠ್ಯಪುಸ್ತಕವೂ ಸೆಮಿಸ್ಟರ್ 1, ಸೆಮಿಸ್ಟರ್ 2 ಎಂದು ಮುದ್ರಣವಾಗಲಿದೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎಂದು ಹೇಳಿದೆ.

ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಹೇಳಲಾಗಿದೆ.

ಇದರ ನಡುವೆ ಪಠ್ಯೇತರ ಚಟುವಟಿಕೆಗಳಾದ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಚಿತ್ರಕಲೆ, ರಂಗಭೂಮಿ, ಸಂಗೀತ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಸಂಸ್ಕೃತಿ, ಕಲೆಗಳನ್ನು ಒಳಗೊಂಡ ಸಮಗ್ರ ಪಠ್ಯವನ್ನು ಶಾಲಾ ಶಿಕ್ಷಣ ನೀತಿಯ ಭಾಗವಾಗಿಸುವಂತೆ ಆಯೋಗಕ್ಕೂ ಸಲಹೆ ನೀಡಲಾಗಿದೆ. ಈ ನೀತಿಯು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಅಳವಡಿಸಲಾಗುವುದು ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು