Wednesday, December 17, 2025

ಸತ್ಯ | ನ್ಯಾಯ |ಧರ್ಮ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಪ್ರಗತಿ: ಮುಖ್ಯಮಂತ್ರಿಗಳಿಗೆ ತಜ್ಞರ ಸಮಿತಿ ವರದಿ ಸಲ್ಲಿಕೆ

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಕ್ಷಣ ತಜ್ಞರ ಸಮಿತಿಯು ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಅಧ್ಯಯನ ವರದಿಯನ್ನು ಸಲ್ಲಿಕೆ ಮಾಡಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡಾ. ಛಾಯಾ ದೇಗಾಂವಕರ್ ಅಧ್ಯಕ್ಷತೆಯ ಸಮಿತಿಯು ಸಮಗ್ರ ಕ್ಷೇತ್ರ ಭೇಟಿ ಮತ್ತು ಅಧ್ಯಯನದ ನಂತರ ಈ ವರದಿಯನ್ನು ಸಿದ್ಧಪಡಿಸಿದ್ದು, ವರದಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ ಶೀಘ್ರವೇ ಅನುಷ್ಠಾನಕ್ಕೆ ತರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಈ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಪಾಲು ಶೇ. 57.35 ರಷ್ಟಿದ್ದು, ಶೈಕ್ಷಣಿಕ ಪ್ರಗತಿಗೆ ಸರ್ಕಾರಿ ಶಾಲೆಗಳ ಬಲವರ್ಧನೆ ಅತ್ಯಗತ್ಯ ಎಂದು ಸಮಿತಿ ಒತ್ತಿ ಹೇಳಿದೆ.

ವರದಿಯ ಅತ್ಯಂತ ಆತಂಕಕಾರಿ ಅಂಶವೆಂದರೆ ಈ ಭಾಗದಲ್ಲಿ ಎದುರಾಗಿರುವ ಶಿಕ್ಷಕರ ಬೃಹತ್ ಪ್ರಮಾಣದ ಕೊರತೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸುಮಾರು 17,274 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಅಂದರೆ ಒಟ್ಟು ಹುದ್ದೆಗಳ ಶೇ. 38.2 ರಷ್ಟು ಖಾಲಿ ಇವೆ. ಅದೇ ರೀತಿ 4,107 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಸಹ ಭರ್ತಿಯಾಗದೆ ಉಳಿದಿವೆ.

ಈ ಕೊರತೆಯು ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಗುಣಮಟ್ಟ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಈ ಭಾಗದ ಎಸ್‌ಎಸ್‌ಎಲ್‌ಸಿ ಫಲಿತಾಂಶವು ರಾಜ್ಯದ ಸರಾಸರಿಗಿಂತ ಬಹಳ ಹಿಂದೆ ಉಳಿದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇದು ಕೇವಲ ಶೇ. 42.43 ರಷ್ಟು ದಾಖಲಾಗಿದೆ.

ಕಲಿಕೆಯ ಗುಣಮಟ್ಟ ಸುಧಾರಿಸಲು ಸಮಿತಿಯು ಹಲವಾರು ಕ್ರಾಂತಿಕಾರಿ ಶಿಫಾರಸ್ಸುಗಳನ್ನು ಮುಂದಿಟ್ಟಿದೆ. ವಿಶೇಷವಾಗಿ ಶಿಕ್ಷಕರ ಲಭ್ಯತೆಯನ್ನು ಖಚಿತಪಡಿಸಲು ವರ್ಗಾವಣೆ ನೀತಿಯನ್ನು ಮರುಪರಿಶೀಲಿಸುವುದು ಮತ್ತು ಮುಂದಿನ ಐದು ವರ್ಷಗಳಲ್ಲಿ ಈ ಪ್ರದೇಶದಲ್ಲಿ 350 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಸ್ಥಾಪಿಸುವುದು ಪ್ರಮುಖ ಅಂಶಗಳಾಗಿವೆ.

ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಇಂಗ್ಲಿಷ್ ಜ್ಞಾನವಿರುವ ಶಿಕ್ಷಕರನ್ನು ನಿಯೋಜಿಸುವುದು ಮತ್ತು 1 ರಿಂದ 3ನೇ ತರಗತಿಯವರೆಗೆ ಮೂಲಭೂತ ಸಾಕ್ಷರತೆ ಹಾಗೂ ಗಣಿತಜ್ಞತೆ ಕೌಶಲ್ಯಗಳನ್ನು ಬಲಪಡಿಸುವುದು ಅತ್ಯಗತ್ಯ ಎಂದು ವರದಿ ಹೇಳಿದೆ. ಕೆಕೆಆರ್‌ಡಿಬಿ ವತಿಯಿಂದ ‘ಕಲಿಕಾ ಖಾರಿ’ ಕಾರ್ಯಕ್ರಮ ಜಾರಿಗೊಳಿಸಿ ಉತ್ತಮ ಸಾಧನೆ ಮಾಡುವ ಶಾಲೆ ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಲು ಸಮಿತಿ ಸೂಚಿಸಿದೆ.

ಕಡಿಮೆ ಫಲಿತಾಂಶಕ್ಕೆ ಕೇವಲ ಶಿಕ್ಷಕರ ಕೊರತೆ ಮಾತ್ರವಲ್ಲದೆ, ಬೋಧನಾ ವಿಧಾನದಲ್ಲಿನ ಸಾಮರ್ಥ್ಯದ ಕೊರತೆ ಮತ್ತು ಡಯಟ್ ಹಾಗೂ ಬಿಆರ್‌ಸಿ ಸಂಸ್ಥೆಗಳ ದುರ್ಬಲ ಮಾರ್ಗದರ್ಶನವೂ ಕಾರಣವೆಂದು ಸಮಿತಿ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಹೊಸ ಡಯಟ್ ಸಂಸ್ಥೆ ಮತ್ತು ಅಗತ್ಯವಿರುವ ಕಡೆ ಹೊಸ ಬಿಇಒ ಕಚೇರಿಗಳನ್ನು ಸ್ಥಾಪಿಸಲು ಶಿಫಾರಸ್ಸು ಮಾಡಲಾಗಿದೆ.

ಶಾಲೆಯಿಂದ ಹೊರಗುಳಿಯುವಿಕೆ ಮತ್ತು ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗುಗಳನ್ನು ತಡೆಯಲು ಸಮುದಾಯದ ಸಹಭಾಗಿತ್ವದೊಂದಿಗೆ ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವ ಅಗತ್ಯವನ್ನು ಸಮಿತಿ ಎತ್ತಿ ತೋರಿಸಿದೆ. ಫೆಬ್ರವರಿ 2025 ರಲ್ಲಿ ರಚನೆಯಾಗಿದ್ದ ಈ ಸಮಿತಿಯು ಸುಮಾರು 100 ಶಾಲೆಗಳಿಗೆ ಭೇಟಿ ನೀಡಿ ಈ ಸಮಗ್ರ ದಸ್ತಾವೇಜನ್ನು ಸಿದ್ಧಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page