ಹಿಂದೂ ಸಂತರ ನಿಯೋಗವೊಂದು ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳನ್ನು ಕರ್ತವ್ಯದಿಂದ ಬದಿಗೆ ಸರಿಸಿದ ವಿವಾದಕ್ಕೆ ಸಂಬಂಧಿಸಿದಂತೆ, ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ನಿರ್ವಹಣಾ ಸಂಸ್ಥೆಯ (SETE) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ರಿಕ್ ಬ್ರಾಂಕೋ ರುಯಿವೊ (Patrick Branco Ruivo) ವರ್ಷಾಂತ್ಯಕ್ಕೆ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ 5ರಂದು ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ (BAPS) ಸಂತರ ನಿಯೋಗ ಐಫೆಲ್ ಟವರ್‌ಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ನಿರ್ದಿಷ್ಟ ಸ್ಥಳಗಳಿಂದ ತೆರವುಗೊಳಿಸಿ ಅವರ ಜಾಗಕ್ಕೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಲಿಂಗ ತಾರತಮ್ಯದ ಈ ಕ್ರಮವನ್ನು ವಿರೋಧಿಸಿ ನೌಕರರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಸೆಪ್ಟೆಂಬರ್ 7ರಂದು ಈಫಿಲ್ ಟವರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಘಟನೆ ಕುರಿತು ಆಡಳಿತ ಮಂಡಳಿ ನಡೆಸಿದ ಆಂತರಿಕ ತನಿಖೆಯಲ್ಲಿ ಭದ್ರತಾ ಹಾಗೂ ನಿರ್ವಹಣಾ ಲೋಪಗಳಿರುವುದು ದೃಢಪಟ್ಟಿದೆ.ಲಿಂಗ ಸಮಾನತೆಯ ನಿಯಮಗಳಿಗೆ ವಿರುದ್ಧವಾಗಿ ನಡೆದ ಈ ಘಟನೆಯ ಹೊಣೆ ಹೊತ್ತು, 2018ರಿಂದ ಈಫಿಲ್ ಟವರ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ಯಾಟ್ರಿಕ್ ಬ್ರಾಂಕೋ ರುಯಿವೊ ಅವರು ಈ ವರ್ಷದ ಕೊನೆಯಲ್ಲಿ ಅಧಿಕಾರದಿಂದ ನಿರ್ಗಮಿಸಲಿದ್ದಾರೆ.
ವಾರ್ಷಿಕ ಸುಮಾರು 70 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಜಾಗತಿಕ ಸ್ಮಾರಕದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ತರಬೇತಿ ಮತ್ತು ಮಾರ್ಗಸೂಚಿಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ.
