Thursday, June 13, 2024

ಸತ್ಯ | ನ್ಯಾಯ |ಧರ್ಮ

ಎಂಟೂವರೆ ವರ್ಷದ ಪೊಲೀಸ್ ಅಧಿಕಾರಿ ಅಜಾನ್ ಖಾನ್ ; ಏನಿದು ಅಪರೂಪದ ಸುದ್ದಿ?

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಇಂದು ನೂತನ ಪೊಲೀಸ್ ಇನಿಸ್ಪೆಕ್ಟರ್ ಆಗಿ ಎಂಟೂವರೆ ವರ್ಷದ ಅಜಾನ್ ಖಾನ್ ಅಧಿಕಾರ ಸ್ವೀಕರಿಸಿದ ಅಪರೂಪದ ಸಂಗತಿಗೆ ಸಾಕ್ಷಿಯಾಯಿತು. ಶಿವಮೊಗ್ಗದ ಸೂಳೆಬೈಲು ನಿವಾಸಿ (ಹಾಲಿ ವಾಸ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು) ಅಜಾನ್ ಖಾನ್ ಗೆ ಇದ್ದ ಒಂದು ದೊಡ್ಡ ಕನಸನ್ನು ಪೊಲೀಸರು ನನಸು ಮಾಡಿದ್ದಾರೆ.

ಪುಟ್ಟ ಬಾಲಕನ ‘ಹೃದಯ’ವಿದ್ರಾವಕ ಕಥೆ
ಅಜಾನ್ ಖಾನ್ ಪೊಲೀಸ್ ಆಗುವ ಕನಸಿನ ಹಿಂದೆ ಹೃದಯ ವಿದ್ರಾವಕ ಕಥೆಯಿದ್ದು, ಆತನ ಕನಸನ್ನು ನನಸು ಮಾಡಲು ಪೊಲೀಸರು ಕೈ ಜೋಡಿಸಿದ್ದೂ ಸಹ ಮನ ಮಿಡಿಯುವಂತಿದೆ. ಅಜಾನ್ ಖಾನ್ ಮೂರು ತಿಂಗಳು ಇರುವಾಗಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ.

8 ವರ್ಷಕ್ಕೆ ಅಜಾನ್ ಖಾನ್ ಗೆ ಮತ್ತೊಂದು ಶಸ್ತ್ರಚಿಕಿತ್ಸೆ ಕೂಡಾ ಆಗಿದೆ. ಈಗ ಮತ್ತೊಮ್ಮೆ ಹೃದಯ ಮತ್ತು ಲಂಗ್ಸ್ ಕಸಿಯಾಗಬೇಕು ಎಂದಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಮಗು ಇಲ್ಲಿಯವರೆಗೆ ಬದುಕಿದ್ದೇ ಕಷ್ಟಕರವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಿಂದಲೇ ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕು ಹಾಗೂ ಚಿತ್ರನಟರಾದ ಸುದೀಪ್ ಅವರನ್ನು ಭೇಟಿ ಆಗಬೇಕು ಮಹದಾಸೆ ಇತ್ತು. ಸಧ್ಯ ಎರಡು ಆಸೆಗಳಲ್ಲಿ ಒಂದು ಆಸೆಯನ್ನು ಠಾಣಾಧಿಕಾರಿ ಅಂಜನ್ ಕುಮಾರ್ ಈಡೇರಿಸಿದ್ದಾರೆ. ಒಂದು ಗಂಟೆಯ ಮಟ್ಟಿಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಜಾನ್ ಖಾನ್ ‘ನಾನು ಪೊಲೀಸ್ ಆಗಬೇಕು ಎಂಬ ಆಸೆಯನ್ನು ಅಪ್ಪನಿಗೆ ಹೇಳಿದ್ದೆ. ಈ ಕ್ಷಣಕ್ಕೆ ನನ್ನನ್ನು ಪೊಲೀಸ್ ಅಧಿಕಾರಿಯಾಗಲು ಅವಕಾಶ ಮಾಡಿಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾನೆ.

ಈ ಸಂದರ್ಭದಲ್ಲಿ ಎಸ್.ಪಿ ಮಿಥುನ್ ಕುಮಾರ್, ಅನಿಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬಾಲರಾಜ್ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ, ಪ್ರಭು ಡಿ.ಟಿ, ಪೊಲೀಸ್ ಉಪಾಧೀಕ್ಷರು, ಡಿಸಿಆರ್.ಬಿ, ವಿಭಾಗ, ಜಿಲ್ಲಾ ಪೊಲೀಸ್ ಕಛೇರಿ, ಅಂಜನ್ ಕುಮಾರ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಧಿಗಳು ಹಾಗೂ ಬಾಲಕನ ಪೋಷಕರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು