Home ದೇಶ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳು ಔಟ್: ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಕೈಬಿಟ್ಟ ಚುನಾವಣಾ ಆಯೋಗ

ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳು ಔಟ್: ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಕೈಬಿಟ್ಟ ಚುನಾವಣಾ ಆಯೋಗ

0

ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SSR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಇದರ ಬೆನ್ನಲ್ಲೇ ಬಿಡುಗಡೆಯಾಗಿರುವ ಕರಡು ಪಟ್ಟಿಯು ದೇಶಾದ್ಯಂತ ಸಂಚಲನ ಮೂಡಿಸಿದೆ. ತಮಿಳುನಾಡಿನಲ್ಲಿ ಬರೊಬ್ಬರಿ 97.37 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಪರಿಷ್ಕರಣೆಗಿಂತ ಮೊದಲು 6.41 ಕೋಟಿ ಇದ್ದ ಮತದಾರರ ಸಂಖ್ಯೆ ಈಗ 5.43 ಕೋಟಿಗೆ ಕುಸಿದಿದ್ದು, ಕೇವಲ ರಾಜಧಾನಿ ಚೆನ್ನೈ ಒಂದರಲ್ಲೇ 14.25 ಲಕ್ಷ ಮತಗಳನ್ನು ಕೈಬಿಡಲಾಗಿದೆ. ಈ ಪೈಕಿ 26.94 ಲಕ್ಷ ಮೃತಪಟ್ಟವರ ಹೆಸರಿದ್ದರೆ, 66.44 ಲಕ್ಷ ಜನರು ಶಾಶ್ವತವಾಗಿ ವಲಸೆ ಹೋದವರು ಮತ್ತು ಉಳಿದವರು ದ್ವಿಪ್ರತಿ ಮತದಾರರು ಎಂದು ಆಯೋಗ ಸಮರ್ಥಿಸಿಕೊಂಡಿದೆ.

ಚುನಾವಣಾ ಆಯೋಗದ ಈ ಕ್ರಮವು ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. “ಬಿಹಾರದಲ್ಲಿ ಅನುಸರಿಸಿದ ತಂತ್ರವನ್ನೇ ಕೇಂದ್ರ ಸರ್ಕಾರ ತಮಿಳುನಾಡಿನಲ್ಲೂ ಜಾರಿಗೆ ತಂದಿದೆ” ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಿಡಿಕಾರಿದ್ದಾರೆ.

ಲಕ್ಷಾಂತರ ನೈಜ ಮತದಾರರ ಹೆಸರನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಅಳಿಸಿಹಾಕುವ ಮೂಲಕ ವಿರೋಧ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ಈ ‘ಸಂಸ್ಕರಣೆ’ಯು ರಾಜಕೀಯ ಪ್ರೇರಿತವಾಗಿದೆ ಎಂಬ ಚರ್ಚೆ ಈಗ ತಮಿಳುನಾಡು ರಾಜಕೀಯದಲ್ಲಿ ಮುನ್ನೆಲೆಗೆ ಬಂದಿದೆ.

ಇದೇ ರೀತಿಯ ಮತದಾರರ ಕಡಿತದ ಪ್ರಕ್ರಿಯೆಯು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಕಂಡುಬಂದಿದೆ. ಗುಜರಾತ್‌ನಲ್ಲಿ ಪರಿಷ್ಕರಣೆ ನಂತರ ಸುಮಾರು 74 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗೆಯೇ ಮಧ್ಯಪ್ರದೇಶದಲ್ಲಿ ಬಿಡುಗಡೆಯಾದ ಕರಡು ಪಟ್ಟಿಯಲ್ಲಿ 42 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ.

ಮಧ್ಯಪ್ರದೇಶದಲ್ಲಿ ಸ್ಥಳಾಂತರಗೊಂಡ 22.5 ಲಕ್ಷ ಜನರು ಮತ್ತು ಮೃತಪಟ್ಟ 8.4 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ. ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಪಾರದರ್ಶಕ ಎಂದು ಹೇಳುತ್ತಿದ್ದರೂ, ಇಷ್ಟು ದೊಡ್ಡ ಪ್ರಮಾಣದ ಮತದಾರರ ಕಡಿತವು ಮುಂಬರುವ ಚುನಾವಣೆಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ತೀವ್ರ ಆತಂಕ ವ್ಯಕ್ತವಾಗುತ್ತಿದೆ.

You cannot copy content of this page

Exit mobile version