ದೆಹಲಿ: ಭಾರತ ಚುನಾವಣಾ ಆಯೋಗ (ಇಸಿಐ) ಅಸ್ಸಾಂನಲ್ಲಿ ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಬದಲಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ಕೈಗೊಳ್ಳುವಂತೆ ಆದೇಶಿಸಿದೆ. ಈ ಕುರಿತು ಆಯೋಗವು ಸೋಮವಾರ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ಆದೇಶಗಳನ್ನು ಹೊರಡಿಸಿದೆ.
ಮುಂದಿನ ವರ್ಷ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ.
ರಾಜ್ಯದಲ್ಲಿ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಬಾಕಿ ಉಳಿದಿರುವ ಕಾರಣದಿಂದಾಗಿ ಇಸಿಐ ಅಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅನ್ನು ಕೈಗೊಳ್ಳುತ್ತಿಲ್ಲ. ಅದಕ್ಕೆ ಬದಲಾಗಿ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಸಾಮಾನ್ಯವಾಗಿ ವಾರ್ಷಿಕ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‌ಎಸ್‌ಆರ್)ಗೆ ಹೋಲಿಸಿದರೆ, ಅಸ್ಸಾಂನಲ್ಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಹೆಚ್ಚಿನ ಪರಿಶೀಲನೆ ಇರುತ್ತದೆ ಎಂದು ಹಿರಿಯ ಇಸಿ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನಲ್ಲಿ 3.3 ಕೋಟಿ ಅರ್ಜಿ ಸಲ್ಲಿಸಿದವರ ಪಟ್ಟಿಯಿಂದ 2019 ರ ಎನ್‌ಆರ್‌ಸಿ ಪಟ್ಟಿಯಲ್ಲಿ ಸುಮಾರು 19.6 ಲಕ್ಷ ಜನರನ್ನು ಹೊರಗಿಡಲಾಗಿದೆ. ಇಲ್ಲಿಯವರೆಗೆ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ, ಆದರೆ ಅಸ್ಸಾಂ ಸರ್ಕಾರವು ಪ್ರಸ್ತುತ ಸ್ವರೂಪದಲ್ಲಿನ ಎನ್‌ಆರ್‌ಸಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಕಳೆದ ತಿಂಗಳು ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳಲ್ಲಿ ಎಸ್‌ಐಆರ್ ಕೈಗೊಳ್ಳುವುದಾಗಿ ಇಸಿಐ ಘೋಷಿಸಿತ್ತು. ಇದರಲ್ಲಿ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ 2026 ರಲ್ಲಿ ಚುನಾವಣೆಗಳು ನಡೆಯಲಿವೆ. 2026 ರಲ್ಲಿ ಚುನಾವಣೆ ನಡೆಯಲಿರುವ ಅಸ್ಸಾಂಗೆ ಪ್ರತ್ಯೇಕವಾಗಿ ಎಸ್‌ಆರ್ ಅನ್ನು ಘೋಷಿಸಲಾಗಿದೆ.
ಈ ಪ್ರಕ್ರಿಯೆಯ ಅಡಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ, ಆದರೆ ಎಸ್‌ಐಆರ್‌ನಲ್ಲಿ ಮಾಡಿದಂತೆ ಮತದಾರರು ಗಣತಿ ನಮೂನೆಗಳನ್ನು ಭರ್ತಿ ಮಾಡುವುದಿಲ್ಲ. ಇದಕ್ಕೆ ಬದಲಾಗಿ, ಬಿಎಲ್‌ಒಗಳು ಸ್ಟೇಟ್‌ಮೆಂಟ್ 1-3 ಎಂದು ಹೆಸರಿಸಲಾದ ಮೂರು ನಮೂನೆಗಳನ್ನು ಹೊಂದಿರುತ್ತಾರೆ ಎಂದು ಸೋಮವಾರದ ಇಸಿಐ ಆದೇಶಗಳು ತಿಳಿಸಿವೆ.
