ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಸೇರಿಸದಿರುವುದನ್ನು ಪ್ರಶ್ನಿಸಿ ಎನ್‌ಜಿಒ ಸಲ್ಲಿಸಿದ ಮನವಿಯನ್ನು ಮಾರ್ಚ್ 15ರಂದು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಎನ್‌ಜಿಒ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರ ವಾದವನ್ನು ಗಮನಿಸಿ ಶುಕ್ರವಾರ ವಿಚಾರಣೆಗೆ ಪಟ್ಟಿಮಾಡಿತು. ಭೂಷಣ್ ಅವರು ಅರ್ಜಿಯನ್ನು ತಕ್ಷಣ ಪಟ್ಟಿ ಮಾಡುವಂತೆ ವಾದ ಮಂಡಿಸಿದ್ದರು.
ನ್ಯಾಯಮೂರ್ತಿ ಖನ್ನಾ ಅವರು, “ಶುಕ್ರವಾರದಂದು ಪಟ್ಟಿ ಮಾಡಬೇಕೆಂದು ಮುಖ್ಯ ನ್ಯಾಯಾಧೀಶರಿಂದ ನನಗೆ ಸಂದೇಶ ಬಂದಿದೆ.” ಎಂದಿದ್ದಾರೆ. ಎನ್‌ಜಿಒ ‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯಿದೆ, 2023’ ರ ನಿಬಂಧನೆಯ ಸಿಂಧುತ್ವವನ್ನು ಪ್ರಶ್ನಿಸಿದೆ.
ಹೊಸ ಕಾನೂನಿನ ಪ್ರಕಾರ, ಆಯ್ಕೆ ಸಮಿತಿಯು ಪ್ರಧಾನಿಯವರ ನೇತೃತ್ವದಲ್ಲಿರುತ್ತದೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಿ ನಾಮನಿರ್ದೇಶನ ಮಾಡುವ ಕೇಂದ್ರ ಸಚಿವರು ಸೇರಿದಂತೆ ಇಬ್ಬರು ಸದಸ್ಯರನ್ನು ಹೊಂದಿರುತ್ತಾರೆ. ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ ನಂತರ, ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.