Monday, June 24, 2024

ಸತ್ಯ | ನ್ಯಾಯ |ಧರ್ಮ

ಎಲಿಫೆಂಟ್ ವಿಸ್ಪರರ್ಸ್: ನಿರ್ದೇಶಕಿ ಮತ್ತು ನಿರ್ಮಾಪಕರ ವಿರುದ್ಧ ಕೋರ್ಟ್‌ ಮೆಟ್ಟಿಲು ಹತ್ತಿದ ಬೊಮ್ಮನ್‌-ಬೆಳ್ಳಿ ದಂಪತಿ, 2 ಕೋಟಿ ಡಿಮ್ಯಾಂಡ್!

ಆಸ್ಕರ್ ಪ್ರಶಸ್ತಿ ವಿಜೇತ ಭಾರತೀಯ ಸಾಕ್ಷ್ಯಚಿತ್ರ ‘ಎಲಿಫೆಂಟ್ ವಿಸ್ಪರ್ಸ್’ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡ ದಂಪತಿಗಳು ಪ್ರಕರಣ ದಾಖಲಿಸಿದ್ದಾರೆ. ತಮಗೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎನ್ನುವುದು ದಂಪತಿಗಳ ಆರೋಪ.

ದಕ್ಷಿಣ ತಮಿಳುನಾಡಿನ ಮುದುಮುಲೈ ಹುಲಿ ಮೀಸಲು ಅರಣ್ಯ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯು ಆನೆ ಮರಿಯೊಂದನ್ನು ಕಾಪಾಡಿದ್ದು ಹಾಗೂ ವನ್ಯಜೀವಿಗಳೊಂದಿಗಿನ ಅವರ ಒಡನಾಟವನ್ನು ಆಧರಿಸಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.

Netflix OTT ಯಲ್ಲಿ ಬಿಡುಗಡೆಯಾದ ಈ ಸಾಕ್ಷ್ಯಚಿತ್ರವು ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಗೆದ್ದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಇದರೊಂದಿಗೆ ಸಾಕ್ಷ್ಯಚಿತ್ರದಲ್ಲಿ ಆನೆಯನ್ನು ನೋಡಿಕೊಳ್ಳುತ್ತಿದ್ದ ಬೊಮ್ಮನ್ ಮತ್ತು ಬೆಲ್ಲೆ ರಾತ್ರೋರಾತ್ರಿ ಪ್ರಸಿದ್ಧರಾದರು.

ಅಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ದಂಪತಿಗಳನ್ನು ಸನ್ಮಾನಿಸಿ ಗೆದ್ದ ದಂಪತಿಗಳಿಗೆ 1 ಲಕ್ಷ ರೂ.ಗಳ ನಗದು ಬಹುಮಾನವನ್ನು ಸಹ ನೀಡಿದ್ದರು. ಈ ವರ್ಷದ ಎಪ್ರಿಲ್‌ ತಿಂಗಳಿನಲ್ಲಿ ಪ್ರಧಾನ ಮಂತ್ರಿ ನರೇಂಧ್ರ ಮೋದಿ ಕೂಡಾ ಈ ದಂಪತಿಗಳನ್ನು ಭೇಟಿಯಾಗಿದ್ದರು.

ಆದರೆ, ಈಗ ಬೊಮ್ಮನ್ ಮತ್ತು  ಬೆಳ್ಳಿ ತಮಗೆ ಸಾಕ್ಷ್ಯಚಿತ್ರದಲ್ಲಿ ನಟಿಸಿದ್ದಕ್ಕಾಗಿ ಸರಿಯಾಗಿ ಸಂಭಾವನೆ ನೀಡಲಾಗಿಲ್ಲ ಎಂದು ಆರೋಪಿಸಿ ನಿರ್ದೇಶಕ ಕಾರ್ತಿ ಗೊನ್ಸಾಲ್ವಿಸ್, ನಿರ್ಮಾಣ ಸಂಸ್ಥೆ ಸಿಖ್ಯಾ ಎಂಟರ್ಟೈನ್ಮೆಂಟ್ ಮತ್ತು ನಿರ್ಮಾಪಕ ಗುನೀತ್ ಮೊಂಗಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಾಕ್ಷ್ಯ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅವರು 2 ಕೋಟಿ ಸಂಭಾವನೆಯ ಬೇಡಿಕೆಯಿಟ್ಟಿದ್ದಾರೆ. ಈ ಹಣದಿಂದ ಮನೆ ಕಟ್ಟಿಕೊಳ್ಳುವುದರ ಜೊತೆಗೆ ವೃದ್ಯಾಪ್ಯದಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳುವುದಾಗಿ ದಂಪತಿಗಳು ಹೇಳಿದ್ದಾರೆ.

ಈ ಪ್ರಕರಣ ಯಾವಾಗ ವಿಚಾರಣೆಗೆ ಬರಲಿದೆಯೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕಾನೂನು ಹೋರಾಟ ಮುಂದುವರೆಯಲಿದೆಯೆಂದು ದಂಪತಿಗಳನ್ನು ಪ್ರತಿನಿಧಿಸುತ್ತಿರುವ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಬೊಮ್ಮನ್-ಬೆಲ್ಲಿ ಜೋಡಿಯ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಸಾಕ್ಷ್ಯಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನೀಲಗಿರಿ ಬೆಟ್ಟಗಳ ಸುಂದರವಾದ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಗಾಯಗೊಂಡಿದ್ದ ‘ರಘು’ ಎಂಬ ಆನೆ ಮರಿಯನ್ನು ಬೊಮ್ಮನ್ ಮತ್ತು  ಬೆಳ್ಳಿ ನೋಡಿಕೊಳ್ಳುವುದೇ ಚಿತ್ರದ ಕತೆಯಾಗಿದೆ. ದಂಪತಿಗಳು ಕಾಡುಗಳಲ್ಲಿ ವಾಸಿಸುವ ಕಟ್ಟನಾಯಕನ್ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವರು.

ವನ್ಯಜೀವಿಗಳನ್ನು ಉಳಿಸುವಲ್ಲಿ ಅವರ ಪ್ರಯತ್ನಗಳು ಮತ್ತು ಅವುಗಳೊಂದಿಗಿನ ಒಡನಾಟವನ್ನು ಚಿತ್ರದಲ್ಲಿ ಶ್ಲಾಘಿಸಿ ತೋರಿಸಲಾಗಿದೆ.

ಜೂನ್‌ ತಿಂಗಳಿನಲ್ಲೇ ದಂಪತಿಗಳು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನೋಟಿಸ್‌ ಕಳಿಸಿದ್ದರು ಆದರೆ ಇದು ಎಲ್ಲೂ ಸುದ್ದಿಯಾಗಿರಲಿಲ್ಲ. ಕಳೆದ ತಿಂಗಳು ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಷಯ ಬಹಿರಂಗಗೊಂಡಿದೆ.

ಸಾಕ್ಷ್ಯಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಿರ್ದೇಶಕರು ಮತ್ತು ನಿರ್ಮಾಪಕರು ಕೆಲವು ಭರವಸೆಗಳನ್ನು ನೀಡಿದ್ದರು ಆದರೆ ಅವುಗಳನ್ನು ಈಡೇರಿಸಿಲ್ಲ ಎಂದು ದಂಪತಿಗಳು ಆರೋಪಿಸಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ನಟಿಸಿದರೆ ಮನೆ ಖರೀದಿಸಿ ಆರ್ಥಿಕ ನೆರವು ನೀಡುವುದಾಗಿ ಅವರು ಹೇಳಿದ್ದರು ಎನ್ನುತ್ತಾರೆ ಈ ದಂಪತಿ.

“ಕಾರ್ತಿಕಿ ಗೊನ್ಸಾಲ್ವೆಸ್‌ ಅವರು ನಮ್ಮನ್ನು ಭೇಟಿಯಾಗಿ, ನಮ್ಮ ಕುರಿತು ಸಾಕ್ಷ್ಯಚಿತ್ರ ತೆಗಯುವುದಾಗಿ ಹೇಳಿದರು. ಆದರೆ ಆಗ ನಮಗೆ ಈ ಚಿತ್ರಕ್ಕೆ ಪ್ರಶಸ್ತಿ ಸಿಗಬಹುದೆನ್ನುವ ಅಂದಾಜಿರಲಿಲ್ಲ. ಅವರು ಹೇಳಿದಂತೆ ನಾವು ಮಾಡಿದೆವು” ಎಂದು ಬೊಮ್ಮನ್‌ ಬಿಬಿಸಿ ತಮಿಳು ವಾಹಿನಿಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

“ಮನೆ ಕಟ್ಟಿಸಿಕೊಡುತ್ತೇನೆ, ಕಾರು ಕೊಡಿಸುತ್ತೇನೆ” ಎಂದು ಶೂಟಿಂಗ್‌ ಸಮಯದಲ್ಲಿ ನಿರ್ದೇಶಕರು ಭರವಸೆ ಕೊಟ್ಟಿದ್ದರು, ಆದರೆ ನಮ್ಮ ಬ್ಯಾಂಕ್‌ ಅಕೌಂಟ್‌ ನೋಡಿದಾಗ ಅದರಲ್ಲಿ ಹಣ ಇದ್ದಿರಲಿಲ್ಲ” ಎಂದು ಅವರು ಹೇಳುತ್ತಾರೆ.

“ಮುಖ್ಯಮಂತ್ರಿ ನೀಡಿದ 1 ಲಕ್ಷ ರೂಪಾಯಿ ಮತ್ತು ಸರ್ಕಾರಿ ಉದ್ಯೋಗವನ್ನು ಹೊರತುಪಡಿಸಿ ನಮಗೆ ಬೇರೇನೂ ಸಿಗಲಿಲ್ಲ. ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಅವರು ನಮಗೆ ಯಾವುದೇ ಆರ್ಥಿಕ ನೆರವು ನೀಡಿಲ್ಲ’ ಎಂದು ಬೊಮ್ಮನ್ ಹೇಳಿದರು.

ಶೂಟಿಂಗ್‌ ಸಮಯದಲ್ಲಿ ನಮ್ಮ ಕೈಯಿಂದಲೇ ಹಣ ಖರ್ಚು ಮಾಡಿದೆವು ಮತ್ತು ಕಾರ್ತಿಕಿ ಗೊನ್ಸಾಲ್ವೆಸ್‌ ಅವರಿಗೆ ಸಾವಿರ ರೂಪಾಯಿಗಳನ್ನು ಸಾಲವಾಗಿ ನೀಡಿದ್ದು ಅವರು ಅದನ್ನೂ ವಾಪಾಸ್‌ ಮಾಡಿಲ್ಲವೆಂದು ಅವರು ಆರೋಪಿಸಿದ್ದಾರೆ. ಆದರೆ ಕಾರ್ತಿಕಿ ಈ ಆರೋಪವನ್ನು ನಿರಾಕರಿಸಿದ್ದಾರೆ.

ನಿರ್ಮಾಣ ಸಂಸ್ಥೆ ಸಿಖ್ಯಾ ಎಂಟರ್ಟೈನ್ಮೆಂಟ್, ನಿರ್ಮಾಪಕ ಮೋಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಚಿತ್ರದಿಂದ ಬಹಳಷ್ಟು ಗಳಿಸಿದ್ದಾರೆ ಆದರೆ ನಮಗೆ ಏನೂ ದೊರೆತಿಲ್ಲ ಎನ್ನುವುದು ಬೊಮ್ಮನ್‌ ಮತ್ತು ಬೆಳ್ಳಿಯ ದೂರು.

“ಸಾಕ್ಷ್ಯಚಿತ್ರವು ಅದ್ಭುತ ಯಶಸ್ಸು ಗಳಿಸಿರುವಾಗ ನಾವು ಚಿತ್ರಕ್ಕಾಗಿ ವ್ಯಯಿಸಿದ ಸಮಯ ಮತ್ತು ಶ್ರಮಕ್ಕೆ ಅವರು ಹಣ ನೀಡಬೇಕು” ಎಂದು ಅವರು ಹೇಳುತ್ತಾರೆ.

ಕಳೆದ ವಾರ ಸಿಖ್ಯಾ ಎಂಟರ್ಟೈನ್ಮೆಂಟ್ ಮತ್ತು ಕಾರ್ತಿಕಿ ಗೊನ್ಜಾಲ್ವೆಸ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಬೊಮ್ಮನ್‌ ಮತ್ತು ಬೆಳ್ಳಿ ದಂಪತಿಯ ಆರೋಪವನ್ನು ನಿರಾಕರಿಸಿದ್ದಾರೆ. “ಅವರು ನಮ್ಮ ಮೇಲೆ ಹೊರಿಸಿರುವ ಆರೋಪಗಳು ಸುಳ್ಳು. ನಮಗೆ ಚಿತ್ರದಲ್ಲಿ ನಟಿಸಿದ ಎಲ್ಲರ ಕುರಿತು ಗೌರವವಿದೆ. ನಾವು ಈ ಪ್ರಕರಣದ ವಿಷಯದಲ್ಲಿ ಆಶಾವಾದಿ ದೃಷ್ಟಿಕೋನದೊಂದಿಗೆ ಮುಂದುವರೆಯುತ್ತೇವೆ” ಎಂದು ಹೇಳಿದರು.

ಸಾಕ್ಷ್ಯಚಿತ್ರವು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದೆ ಮತ್ತು ಸಮಾಜದ ಮೇಲೆ ನಿಜವಾದ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

“ಸಾಕ್ಷ್ಯಚಿತ್ರವು ಭಾರಿ ಯಶಸ್ಸನ್ನು ಗಳಿಸಿದೆ ಮತ್ತು ಅದು ಅದರ ಭಾಗವಾಗಿರುವ ಬೊಮ್ಮನ್ ಮತ್ತು ಬೆಳ್ಳಿ ಅವರಂತಹವರಿಗೆ ವಿಶೇಷ ಮನ್ನಣೆಯನ್ನು ತಂದುಕೊಟ್ಟಿದೆ ಎಂಬುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರಿ ಯಶಸ್ಸನ್ನು ಗಳಿಸಿದ ಮತ್ತು ಪ್ರಶಸ್ತಿಗಳನ್ನು ಗೆದ್ದ ಚಿತ್ರಗಳ ಬಗ್ಗೆ ವಿವಾದಗಳು ಹೊಸತೇನಲ್ಲ.

2021ರಲ್ಲಿ, ನಿರ್ದೇಶಕರಾದ ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್ ಅವರು ಖಬರ್ ಲಹರಿಯಾ ಎಂಬ ಸಾಕ್ಷ್ಯಚಿತ್ರವನ್ನು ಮಾಡಿದರು, ಇದು ದಲಿತ, ಮುಸ್ಲಿಂ ಮತ್ತು ಬುಡಕಟ್ಟು ಮಹಿಳೆಯರು ನಡೆಸುತ್ತಿರುವ ಸುದ್ದಿ ಸಂಸ್ಥೆಯ ಕುರಿತಾದ ಚಿತ್ರವಾಗಿತ್ತು. ಇದರ ಸಾಮಾಜಿಕ ಹಿನ್ನೆಲೆಯಲ್ಲಿ 2022ರ ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಂದು ವಾರವಿರುವಾಗ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಕಥೆಯನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿತ್ತು, ಆದರೆ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಆರೋಪಗಳನ್ನು ನಿರಾಕರಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು