Friday, June 14, 2024

ಸತ್ಯ | ನ್ಯಾಯ |ಧರ್ಮ

ಆನೆ ದಾಳಿ ನೀರಾವರಿ ಯೋಜನೆಗಳ ಕೊಡುಗೆ

ಇದೀಗ  ಸುಮಾರು ಹದಿನೈದು ವರ್ಷಗಳಿಂದ ಆನೆಗಳಿಂದ ಹಾವಳಿ ಹೆಚ್ಚಾಗಿ ಪ್ರಾರಂಭವಾಯಿತು. ಈ ವಿದ್ಯಮಾನ ನಮ್ಮ ನೀರಾವರಿ ಯೋಜನೆಗಳ ಕೊಡುಗೆ ಎನ್ನುತ್ತಾರೆ ʼಕಾಡು ಹೆಜ್ಜೆಯ ಜಾಡು ಹಿಡಿದುʼ ಅಂಕಣದಲ್ಲಿ ರಂಗಕರ್ಮಿ ಪ್ರಸಾದ್‌ ರಕ್ಷಿದಿ.

ಕೇವಲ ಮೂವತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ  ಸುಮಾರು ಹದಿನೈದು ವರ್ಷಗಳಿಂದ ಆನೆಗಳಿಂದ ಹಾವಳಿ ಹೆಚ್ಚಾಗಿ ಪ್ರಾರಂಭವಾಯಿತು.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪು. ಇವು ಬಯಲುಸೀಮೆಗೂ ಧಾಳಿಮಾಡುತ್ತವೆ. ಹಗಲು ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆದು ರಾತ್ರಿವೇಳೆ ಆಹಾರ ಅರಸಿ ಹೊರಡುತ್ತವೆ. ಈ ವಿದ್ಯಮಾನ ನಮ್ಮ ನೀರಾವರಿ ಯೋಜನೆಗಳ ಕೊಡುಗೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲಾಶಯಗಳ ನಿರ್ಮಾಣವಾದಾಗಲೆಲ್ಲ ಆನೆಗಳ ಆಶ್ರಯ ತಾಣಗಳ ಕೆಲವು ಪ್ರದೇಶಗಳು ಮುಳುಗಡೆಯಾಗುತ್ತವೆ. ಆನೆಗಳು ಸ್ಥಳಾಂತರಗೊಳ್ಳುತ್ತವೆ. ಹಾಸನ -ಕೊಡಗಿನ ಗಡಿಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡಿರುವ  ಈ ಆನೆಗಳು ಅನಿವಾರ್ಯವಾಗಿ ಹಳ್ಳಿಗಳತ್ತ ಬಂದು ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತಿರುವ  ಈ ಆನೆಗಳು ಜನವಸತಿಗಳ ಪಕ್ಕದಲ್ಲೇ ಇರುತ್ತವೆ.

ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆತಿಂದು- ನಾಶಮಾಡಿ ಬೆಳಗಿನ ಜಾವ ತಮ್ಮ ಅಡಗುದಾಣ ಸೇರುತ್ತವೆ. ಒಂದು ಕಾಡಾನೆ ತನ್ನ ಆಹಾರಕ್ಕಾಗಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ. ಅಷ್ಟು ವಿಸ್ತಾರವಾದ ಪ್ರದೇಶ  ಅಡಗುತಾಣಗಳಲ್ಲಿ ಇಲ್ಲ. ಇವು ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಯಾವುದೇ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ಮಾಡುತ್ತವೆ. ಯಂತ್ರೋಪಕರಣಗಳನ್ನೂ ಹಾಳುಮಾಡುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಈ ಆನೆಗಳನ್ನು ಹಿಡಿದು ಸ್ಥಳಾಂತರಿಸಿದರೂ ಅವು ಮರಳಿ ಬರುತ್ತವೆ. ಇಂತಹ ಆನೆಗಳನ್ನು ಪುಂಡಾನೆಗಳೆಂದು ಕರೆಯುತ್ತಾರೆ.

ಎರಡನೆಯ ವಿಧದ ಆನೆಗಳು ಈ ರೀತಿಯವಲ್ಲ. ಅಪರೂಪಕ್ಕೊಮ್ಮೆ ದಟ್ಟ ಅರಣ್ಯಗಳಿಂದ ಹೊರಬಂದು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶಮಾಡುವುದು ಕಡಿಮೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿ ತಪ್ಪಿ ಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ಧಾಳಿ ಮಾಡುವುದಿಲ್ಲ. ಕೆಲವುಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ ರೊಚ್ಚಿಗೆದ್ದು ಧಾಳಿ ಮಾಡಿವೆ. ಇವು ಹಿಂಡು ಹಿಂಡಾಗಿ ಬರುವುದು ಕಡಿಮೆ.

ಮಲೆನಾಡಿನಲ್ಲಿ ಕಾಡು ಪ್ರಾಣಿಗಳು ಅರಣ್ಯದ ಅಂಚಿನ ಹಳ್ಳಗಳಿಗೆ ಬಂದುಹೋಗುವುದು ಅನೇಕ ವರ್ಷಗಳಿಂದಲೂ ಮಾಮೂಲಾದ ಸಂಗತಿಯಾಗಿತ್ತು. ಮಲೆನಾಡಿನ ಜನ ಕಾಡುಪ್ರಾಣಿಗಳ ಜೊತೆಗೆ ಸಹಬಾಳ್ವೆಯನ್ನು ಸಾಧಿಸಿ ಕೊಂಡಿದ್ದರು. ಇಂದು ರಕ್ಷಿತಾರಣ್ಯ ಆಗಿರುವ ಮಲೆನಾಡಿನ ತಾಲ್ಲೂಕುಗಳ ದಟ್ಟ ಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಸಕಲೇಶಪುರ ತಾಲ್ಲೂಕಿನ ಚಂದ್ರಮಂಡಲ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದು ಕೂಡಾ ಜನವಸತಿಯಿರುವ ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯುತ್ತದೆ. ಹಾಗಾದರೆ ಇದೆಲ್ಲ ಎಂದಿನಿಂದ ಪ್ರಾರಂಭವಾಯಿತು? ಏಕೆ ಪ್ರಾರಂಭವಾಯಿತು? ಮುಂದೆ ನೋಡೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ.

Related Articles

ಇತ್ತೀಚಿನ ಸುದ್ದಿಗಳು