Monday, September 2, 2024

ಸತ್ಯ | ನ್ಯಾಯ |ಧರ್ಮ

ನನ್ನ ಸಿನೆಮಾದ ಮೇಲೆ ‌ʼಎಮರ್ಜೆನ್ಸಿʼ ಹೇರಲಾಗಿದೆ. ಸೆನ್ಸಾರ್‌ ಮಾಡದಿದ್ದರೆ ಕೋರ್ಟ್‌ ಮೆಟ್ಟಿಲು ಹತ್ತುವೆ: ಕಂಗನಾ ರನಾವತ್

ಬಿಜೆಪಿ ಪಾಲಿಗೆ ಸಂಸದೆ ಕಂಗನಾ ರನಾವತ್‌ ದಿನದಿಂದ ದಿನಕ್ಕೆ ಇನ್ನಷ್ಟು ಬಿಸಿತುಪ್ಪವಾಗುತ್ತಿದ್ದಾರೆ. ಅವರ ಮಾತುಗಳಿಂದಾಗಿ ಬಿಜೆಪಿ ಮತ್ತೆ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ.

ಈಗ ಹೊಸದಾಗಿ ಕಂಗನಾ ತನ್ನ ಚಿತ್ರ ಎಮರ್ಜೆನ್ಸಿ ವಿರುದ್ಧ ಸೆನ್ಸಾರ್‌ ಇಲಾಖೆ ಎಮರ್ಜೆನ್ಸಿ ಹೇರಿದ್ದು ಸರ್ಟಿಫಿಕೇಟ್‌ ಕೊಡದೆ ಸತಾಯಿಸುತ್ತಿದೆ ಎಂದಿದ್ದಾರೆ. ತನ್ನ ಚಿತ್ರದ ಪ್ರೀಮಿಯರ್‌ ಪ್ರದರ್ಶನಕ್ಕೆ ನಾಲ್ಕು ದಿನವಿರುವಾಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ತನಗೆ ಸರ್ಟಿಫಿಕೇಟ್‌ ನೀಡದೆ ಸತಾಯಿಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

“ನನ್ನ ಚಿತ್ರದ ಮೇಲೂ ಎಮರ್ಜೆನ್ಸಿ ಹೇರಲಾಗಿದೆ. ಇದು ಬಹಳ ಹತಾಶ ಸ್ಥಿತಿ, ನನ್ನ ದೇಶದಲ್ಲೇ ನನಗೆ ನಿರಾಶೆಯಾಗಿದೆ. ಎಂತಹದ್ದೇ ಪರಿಸ್ಥಿತಿ ಇರಲಿ ಎಷ್ಟು ಎಂದು ಹೆದರುವುದು?” ಎಂದು ಅವರು ಕೇಳಿದ್ದಾರೆ.

“ನಾನು ಬಹಳ ಸ್ವಾಭಿಮಾನದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ . ಸಿಬಿಎಫ್‌ಸಿ ನನಗೆ ಯಾವುದೇ ಕಟ್‌ ಇಲ್ಲದೆ ಸರ್ಟಿಫಿಕೇಟ್‌ ಕೊಡಬೇಕು. ಹಾಗೊಂದು ವೇಳೆ ಕೊಡದೆ ಹೋದರೆ ನಾನು ಕೋರ್ಟ್‌ ಮೆಟ್ಟಿಲು ಹತ್ತುತ್ತೇನೆ. ಕಾನೂನು ಹೋರಾಟ ನಡೆಸಿ ನನ್ನ ಚಿತ್ರದ ಅನ್‌ ಕಟ್‌ ವರ್ಷನ್‌ ಬಿಡುಗಡೆ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ ಚಿತ್ರ ಈ ಶುಕ್ರವಾರ ಬಿಡುಗಡೆ ಕಾಣಬೇಕಿತ್ತು. ಆದರೆ ಸಿಬಿಎಫ್‌ಸಿ ಸರ್ಟಿಫಿಕೇಟ್‌ ದೊರೆಯದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.

“ಅವರು (CBFC) ತನ್ನ ವೆಬ್‌ಸೈಟಿನಲ್ಲಿ U/A ಪ್ರಮಾಣಪತ್ರವನ್ನು ಹಾಕಿದ್ದರೂ, ಚಿತ್ರದ ತಯಾರಕರಿಗೆ ಇನ್ನೂ ಸರ್ಟಿಫಿಕೇಟ್‌ ದೊರೆತಿಲ್ಲ. ದಿನದಿಂದ ದಿನಕ್ಕೆ ಚಿತ್ರಕ್ಕೆ ಹೊಸದಾಗಿ ಕತ್ತರಿ ಹಾಕಲಾಗುತ್ತಿದೆ, ದೃಶ್ಯಗಳನ್ನು ತೆಗೆದು ಹಾಕಲಾಗುತ್ತಿದೆ. ಮಂಡಳಿ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದು, ಕಂಗನಾ ಚಿತ್ರವನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇಂದು (ಸೋಮವಾರ) ಮಧ್ಯಪ್ರದೇಶದ ಹೈಕೋರ್ಟ್‌ ಚಿತ್ರವನ್ನು ನಿಷೇಧಿಸುವಂತೆ ಕೋರಿ ಬಂದಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಶುಕ್ರವಾರ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ರನಾವತ್ ಅವರ ಚಿತ್ರವು “ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ” ಮತ್ತು “ತಪ್ಪು ಮಾಹಿತಿ ಹರಡಬಹುದು” ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page