Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯ ಮತ್ತು ಸಾಮ್ರಾಜ್ಯ ನಷ್ಟ

ಹಿಂದುತ್ವದ ಹುಟ್ಟು ಒಂದು ವಿಶೇಷ ಉಪಜಾತಿಯೊಂದಿಗೆ ಅಭೇದ್ಯ ಸಂಬಂಧ ಹೊಂದಿರುವುದರಿಂದ ಹಿಂದುತ್ವದ ಇತಿಹಾಸ ಕೆದಕುವಾಗ ಅದರ ಮೂಲಕ್ಕೂ ಹೋಗಬೇಕಾಗುತ್ತದೆ.

ಜಾತಿಪದ್ದತಿಯ ಕುರಿತ ಚರ್ಚೆಗಳು ಒಂದು ಕಾಲದ ಕೇರಳದಲ್ಲಿ ಅತಿಯಾಗಿ ನಡೆದಿದ್ದವು. ಆದರೆ, ಜಾತಿ ಎಂಬ ಸಾಮಾಜಿಕ ವಿದ್ಯಮಾನದ ಭೌತಿಕ ಸ್ವರೂಪವನ್ನು ಒಟ್ಟು ಭಾರತೀಯ ಆಯಾಮದಲ್ಲಿ ಅಷ್ಟಾಗಿ ಅನ್ವೇಷಿಸಬೇಕಾದ ಅಗತ್ಯ ಇಲ್ಲಿ ಬರಲಿಲ್ಲ. ಆದ್ದರಿಂದಲೇ ಉತ್ತರ ಭಾರತದ ಜಾತಿಬಲಗಳನ್ನು ಅರ್ಥಮಾಡಿಕೊಳ್ಳುವಷ್ಟು ಸಾಕ್ಷರತೆಯೂ ನಮಗೆ ಅಗತ್ಯವಿಲ್ಲದ ಸಂಗತಿಯಾಗಿತ್ತು, ಅಲ್ಲಿನ ಜಾತಿಬೇಧಗಳು ಕೂಡ. ಅದರ ಫಲವಾಗಿ ಜಾತಿ ಕುರಿತ ನಮ್ಮ ಚರ್ಚೆಗಳೆಲ್ಲವು ಸರ್ವನಾಮಗಳಿಗೆ ಸೀಮಿತವಾದವು. ಬ್ರಾಹ್ಮಣರು, ಬ್ರಾಹ್ಮನಿಸಂ, ಬ್ರಾಹ್ಮಣ್ಯ ಎಲ್ಲ ನಮಗೆ ಅರ್ಥವಾಗುತ್ತವೆಯಾದರೂ ಅದರ ಉಪಜಾತಿ ಚರಿತ್ರೆಯನ್ನೆಲ್ಲ ನಾವು ಮಾನವಸಾಸ್ತ್ರ ಪಂಡಿತರ ಸಂಶೋಧನಾ ವಾಪ್ತಿಗೆ ಬಿಟ್ಟುಕೊಟ್ಟು ನಿರುಮ್ಮಳಾದೆವು. ನಿಜದಲ್ಲಿ ಅದೇ ಬೇಕಾಗಿರುವುದು ಕೂಡ.

ಆದರೆ, ಹಿಂದುತ್ವದ ಹುಟ್ಟು ಒಂದು ವಿಶೇಷ ಉಪಜಾತಿಯೊಂದಿಗೆ ಅಭೇದ್ಯ ಸಂಬಂಧ ಹೊಂದಿರುವುದರಿಂದ ಹಿಂದುತ್ವದ ಇತಿಹಾಸ ಕೆದಕುವಾಗ ಅದರ ಮೂಲಕ್ಕೂ ಹೋಗಬೇಕಾಗುತ್ತದೆ. ಜೊತೆಗೆ ಆ ಉಪಜಾತಿ ಸಮೂಹ ಕಾರ್ಯಾಚರಿಸುತ್ತಿದ್ದ ಭೌಗೋಳಿಕತೆಯನ್ನೂ ನೋಡಬೇಕಾಗುತ್ತದೆ.

೧೮ನೇ ಶತಮಾನದ ಆರಂಭದಿಂದಲೇ, ಮರಾಠಿ ಭಾಷೆ ಮಾತನಾಡುವ ಡೆಕ್ಕನ್‌ ಪ್ರದೇಶದ ಅತ್ಯಂತ ಪ್ರಬಲ ಸಮುದಾಯ ಚಿತ್ಪಾವನ ಬ್ರಾಹ್ಮಣರದ್ದಾಗಿತ್ತು. ೧೯ನೇ ಶತಮಾನದ ಆರಂಭದಲ್ಲಿ ಆ ಪ್ರದೇಶ ಬ್ರಿಟಿಷ್‌ ಇಂಡಿಯಾದ ಭಾಗವಾಗಿ ಬದಲಾದಾಗಲೂ ಈ ಪ್ರಾಬಲ್ಯವನ್ನು ಅವರು ಬಿಟ್ಟುಕೊಡಲಿಲ್ಲ. ಇಂದಿನ ಮಹಾರಾಷ್ಟ್ರದ ಒಂದು ಭಾಗ, ಗುಜರಾತ್‌, ವಾಯುವ್ಯ ಕರ್ನಾಟಕ, ಒಂದು ಹಂತದವರೆಗೆ ಇಂದು ಪಾಕಿಸ್ತಾನದ ಭಾಗವಾಗಿರುವ ಸಿಂಧ್‌ ತನಕದ ಭೂಭಾಗ ಸೇರಿದ ದೊಡ್ಡದೊಂದ ಪ್ರಾಂತ್ಯವಾಗಿತ್ತು ಬಾಂಬೆ ಪ್ರೆಸಿಡೆನ್ಸಿ. ಬಾಂಬೆ ಪ್ರೆಸಿಡೆನ್ಸಿಯ ದೇಸೀಯರ ನಡುವೆ, ಅದರಲ್ಲೂ ಮರಾಠಿ ಭಾಷೆ ಮಾತನಾಡುವವರ ನಡುವೆ, ಸಾಮಾನ್ಯ ಜನರ ಪ್ರಜ್ಞೆಯನ್ನು ಕಟ್ಟಿಬೆಳೆಸುವಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿದ ಹಲವರು ಈ ಚಿತ್ಪಾವನ ಬ್ರಾಹ್ಮಣ ವಂಶಕ್ಕೆ ಸೇರಿದವರಾಗಿದ್ದರು. ಜನಸಂಖ್ಯೆಯ ಹಿನ್ನೆಲೆಯಲ್ಲಿ ನೋಡಿದರೆ ಅವರು ಮರಾಠ ಬ್ರಾಹ್ಮಣರಲ್ಲಿ ಬಹುಸಂಖ್ಯಾತರೇನು ಆಗಿರಲಿಲ್ಲ. ಮರಾಠ ಪ್ರಾಂತ್ಯದಲ್ಲಿದ್ದ ದೇಶಸ್ತ, ಚಿತ್ಪಾವನ್‌, ಕರಾಡೆ, ಸಾರಸ್ವತ, ಗೌಡ ಸಾರಸ್ವತ ಮೊದಲಾದ ಬ್ರಾಹ್ಮಣ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡರೆ, ೧೯೦೧ರ ಜನಗಣತಿ ಪ್ರಕಾರ ಚಿತ್ಪಾವನ ಬ್ರಾಹ್ಮಣರು ಕೇವಲ ೨೦% ಮಾತ್ರವಿದ್ದರು. ಅಂದರೆ, ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹೊಂದಿದ್ದ ಪ್ರಾಬಲ್ಯ ಜನಸಂಖ್ಯಾನುಪಾತಕ್ಕೆ ತಾಳೆಯಾಗುತ್ತಿರಲಿಲ್ಲ. ಜಾತಿಪದ್ಧತಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ದೊಡ್ಡ ಪ್ರಭಾವ ಇರುವುದರಿಂದ ಆ ವಲಯಗಳಲ್ಲಿ ಮೇಲ್ಜಾತಿ ಪಾರುಪತ್ಯ ಎಂಬುದು ಆಶ್ಚರ್ಯ ಪಡುವ ಸಂಗತಿಯೇನಲ್ಲ. ಆದರೆ, ಜಾತಿವ್ಯವಸ್ಥೆಯ ಪಿರಮಿಡ್ಡಿನಲ್ಲಿ ಮೇಲಿನ ಹಂತವನ್ನು ಆವರಿಸಿಕೊಂಡಿರುವ ಬ್ರಾಹ್ಮಣರ ಒಳಗೆಯೆ ಅತ್ಯಂತ ಮೇಲಕ್ಕೆ ಏರಲು ಈ ಅಲ್ಪಸಂಖ್ಯಾತರಿಗೆ ಸಾಧ್ಯವಾದುದರ ಹಿನ್ನೆಲೆಯಲ್ಲಿ ಐತಿಹಾಸಿಕವಾದ ಕಾರಣಗಳಿವೆ.

ಬಾಂಬೆ ಪ್ರೆಸಿಡೆನ್ಸಿಯಲ್ಲಿ ತುಲನಾತ್ಮಕವಾಗಿ ಆರ್ಥಿಕ ದುರ್ಬಲ ಪ್ರದೇಶವಾಗಿದ್ದ ಕೊಂಕಣ್‌ ಪ್ರಾಂತ್ಯದ ಬೆಟ್ಟಗಳ ನಡುವಿನ ಜನವಾಸಕೇಂದ್ರಗಳಲ್ಲಿ ಇವರು ವಾಸವಿದ್ದರು. ಆದ್ದರಿಂದಲೇ ಇವರನ್ನು ಕೊಂಕಣಸ್ತ ಬ್ರಾಹ್ಮಣರು ಎಂದೂ ಕರೆಯುತ್ತಿದ್ದರು. ಹಿಂದೂ ಜಾತಿವ್ಯವಸ್ಥೆ ನೀಡಿದ್ದ ತಮ್ಮ ಪ್ರಾಥಮಿಕ ಸ್ಥಾನವನ್ನು ಬ್ರಾಹ್ಮಣರು ತಮ್ಮದೇ ರೀತಿಯಲ್ಲಿ ಸ್ವಯಂ ಕಲ್ಪಿತ ಹಲವು ತರದ ಪುರಾಣಕತೆಗಳ ಮೂಲಕ ಮತ್ತಷ್ಟು ವೈಭವೀಕರಿಸುತ್ತಿದ್ದರು. ಚಿತ್ಪಾನವನ ಬ್ರಾಹ್ಮಣರಿಗೂ ಅಂಥದ್ದೊಂದು ಪುರಾಣಕತೆ ಖಂಡಿತವಾಗಿ ಇತ್ತು. ಚಿತ್ಪಾವನ ಬ್ರಾಹ್ಮಣರು ಒಂಭತ್ತನೇ ಶತಮಾನದಲ್ಲಿ ಮಧ್ಯಏಷ್ಯಾದಿಂದ ವಲಸೆ ಬಂದವರು ಎಂದು ಹೇಳುತ್ತಾರೆ. ಉಳಿದೆಲ್ಲ ಆರ್ಯ ವರ್ಗಗಳ ಹಾಗೆಯೆ, ಭಾರತ ಉಪಖಂಡದಲ್ಲಿ ಅವರ ಚರಿತ್ರೆಯ ಭಾಗವನ್ನು, ಸಹ್ಯಾದ್ರಿ ಖಾಂಡ ಎಂಬ ಪುರಾಣ ಭಾಗದಲ್ಲಿ ಹೀಗೆ ಸೃಜನಶೀಲವಾಗಿ ತಿರುಚಿ ಬರೆದರು:

ʼಸತ್ತು ಹೆಣಗಳಾಗಿ ತೀರಕ್ಕೆ ಬಂದ ಅವರನ್ನು ಪರಶುರಾಮ, ಕ್ಷಾತ್ರತೇಜಸ್ಸಿನ ಬ್ರಾಹ್ಮಣ, ಚಿತೆಯಿಂದ ಜೀವಂತವಾಗಿ ಮೇಲೆತ್ತಿದ.ʼ ಹೀಗೆ ಸಾಮಾನ್ಯವಾಗಿ ಹುಟ್ಟಿನಿಂದ ಶುರುವಾಗುವ ಕಥೆಯನ್ನು ಇವರು ಚಿತೆಯಿಂದ ಶುರುವಾಗುವ ಕಥೆಯಾಗಿ ಬದಲಿಸಿ ಬರೆದರು. ಚಿತೆ ಅವರನ್ನು ಪಾವನಗೊಳಿಸಿದ್ದರಿಂದ ಅವರು ಚಿತ್‌ಪಾವನರಾದರು. ಜನನದಿಂದಲೇ ತಮ್ಮನ್ನು ತಾವು ಉತ್ತಮರಾಗಿಸಿಕೊಂಡ ಅವರು ಈ ಪುರಾಣವನ್ನು, ಇಂಡಿಯನ್‌ ಬ್ರಾಹ್ಮಣ ಚರಿತ್ರೆಯಲ್ಲಿ ಸಾಮಾನ್ಯವಾಗಿ ಕಾಣುವ ಹಾಗೆ ಇತರ ಜಾತಿಗಳ ಮೇಲೆ ಅಧಿಪತ್ಯ ಸ್ಥಾಪಿಸಲು ಮಾತ್ರವೇ ಬಳಸಲಿಲ್ಲ. ಬದಲಿಗೆ ಇತರ ಬ್ರಾಹ್ಮಣ ವಿಭಾಗಗಲ್ಲಿ ನಡೆಯುತ್ತಿದ್ದ ಸಂಘರ್ಷಗಳಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಕೂಡ ಇದನ್ನು ಬಳಸಿದರು.

ಬ್ರಿಟಿಷ್‌ ಪೂರ್ವ ಇಂಡಿಯಾದಲ್ಲಿ ಬೆಳೆದಿದ್ದ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ಛತ್ರಪತಿ ಶಿವಾಜಿಯ ಮರಾಠ ಸಾಮ್ರಾಜ್ಯದ ಕಾಲದಲ್ಲಿ ದೊಡ್ಡ ಮಟ್ಟದ ಸಾಮಾಜಿಕ ಚಲನೆ ಚಿತ್ಪಾವನ ಬ್ರಾಹ್ಮಣರಿಗೆ ಲಭಿಸಿತ್ತು. ಕೊಂಕಣ್‌ ಪ್ರದೇಶ ಬಿಟ್ಟು ಹೊರ ಬಂದ ಅವರು ಹೊಸದಾಗಿ ಕಟ್ಟಲ್ಪಟ್ಟಿದ್ದ ಆಡಳಿತ ವ್ಯವಸ್ಥೆಯೊಳಗೆ ಸೇರಿಕೊಂಡರು. ಜನಸಂಖ್ಯೆ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದಲ್ಲಿ ಅವರಿಗಿಂತ ಮೇಲೆ ಇದ್ದ ದೇಶಸ್ತ ಬ್ರಾಹ್ಮಣರು ಮಾತ್ರ ಬಹುತೇಕ ಹಳೆಯ ಸ್ಥಾನಮಾನಗಳಾದ ಕೃಷಿ, ಪೌರೋಹಿತ್ಯ, ಸಣ್ಣ ವ್ಯಾಪಾರ ಮೊದಲಾದ ಕಡೆಯಲ್ಲೇ ನಿಂತಿದ್ದಾಗ ಚಿತ್ಪಾವನ ಬ್ರಾಹ್ಮಣರು ಮಾತ್ರ ಅಧಿಕಾರ, ಉದ್ಯೋಗ ಮತ್ತು ರಾಜತಾಂತ್ರಿಕತೆಯ ಹೊಸ ಸಾಧ್ಯತೆಗಳಿಗೆ ಏರುತ್ತಲೇ ಹೋದರು. ಶಿವಾಜಿಯ ದರ್ಬಾರಿನಲ್ಲಿ ಪ್ರಮುಖ ಸ್ಥಾನ ಅಲಂಕರಿಸಿದ್ದ ಬಾಲಾಜಿ ವಿಶ್ವನಾಥ ಭಟ್ ಎಂಬ ಚಿತ್ಪಾವನ ಬ್ರಾಹ್ಮಣ ನಂತರ ಶಿವಾಜಿಯ ಉತ್ತರಾಧಿಕಾರಿಯಾದ ಶಾಹುಜಿ ಮಹಾರಾಜ್ ಕಾಲದಲ್ಲಿ ಪ್ರಧಾನಮಂತ್ರಿ ಪದವಿಯಾದ ಪೇಶ್ವೆ ಸ್ಥಾನಕ್ಕೇರಿದ. ಅದರೊಂದಿಗೆ ನಿಜಾರ್ಥದಲ್ಲಿ ಮರಾಠ ಸಾಮ್ರಾಜ್ಯದ ಅಧಿಕಾರ ಚಿತ್ಪಾವನ ಬ್ರಾಹ್ಮಣರ ಹಿಡಿತಕ್ಕೆ ಸಿಲುಕಿತು. ಬಾಲಾಜಿ ವಿಶ್ವನಾಥ ಭಟ್‌ ಆಡಳಿತದ ಆಯಕಟ್ಟಿನ ಜಾಗಗಳಲ್ಲಿ ಚಿತ್ಪಾವನ ಬ್ರಾಹ್ಮಣರನ್ನು ತಂದು ಕೂರಿಸಿದ್ದು ಮಾತ್ರವಲ್ಲ, ಅವರಿಗೆ ಧಾರಾಳ ಭೂದಾನವನ್ನೂ ನೀಡಿದ. ಈ ಕಾಲದಲ್ಲಿ ಚಿತ್ಪಾವನ ಬ್ರಾಹ್ಮಣರು ಉಳಿದ ವಿಭಾಗಗಳ ಮೇಲೆ ತಮ್ಮ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದರು ಎಂದು ಮಾತ್ರವಲ್ಲ, ನೇರವಾಗಿ ಅಧಿಕಾರ ಚಲಾಯಿಸುವ ಆಧುನಿಕ ಕಾಲದ ಬಹುಷಃ ಮೊದಲನೇ ಬ್ರಾಹ್ಮಣ ವರ್ಗವಾಗಿ ಹೊಮ್ಮಿದರು. ಹಿಂದೂ ಧರ್ಮದ ಜಾತಿಶ್ರೇಣಿಯಲ್ಲಿ ಉಚ್ಛ ಪರಿಗಣನೆಯ ಜೊತೆಗೆ ರಾಜಾಡಳಿತದ ಅಧಿಕಾರವನ್ನು ಈ ಬ್ರಾಹ್ಮಣ ವಿಭಾಗವು ಕನಿಷ್ಠ ೧೭೧೩ರಿಂದಲೇ ಅನುಭವಿಸಿದರು.

ಸುಮಾರು ಒಂದು ಶತಮಾನಗಳ ಕಾಲ ಅನುಭವಿಸಿದ, ಇಂಡಿಯಾದ ಉಳಿದ ಬ್ರಾಹ್ಮಣ ವಿಭಾಗಗಳಿಗೆ ಸಿಗದ ಈ ಮನ್ನಣೆ ೧೮೧೮ರಲ್ಲಿ ಕೊನೆಯಾಯಿತು. ಆ ವರ್ಷ ಶನಿವಾರವಾಡದಲ್ಲಿ ನಡೆದ ಯುದ್ಧದಲ್ಲಿ ಪೇಶ್ವೆಗಳು ಬ್ರಿಟಿಷರ ವಿರುದ್ಧ ಸೋತು ಶರಣಾದರು. ಅವರಿಗೆ ಮನ್ನಣೆ ನೀಡಿದ್ದ ಮರಾಠ ಸಾಮ್ರಾಜ್ಯವು ಬ್ರಿಟಿಷ್‌ ಇಂಡಿಯಾದಲ್ಲಿ ಲೀನವಾಯಿತು.

ಒಂದು ಶತಮಾನ ಕಾಲ ಸಾಮಾಜಿಕ ಸ್ಥಾನಮಾನದ ಉನ್ನತ ಪದವಿಯಲ್ಲಿ ಕೂತಿದ್ದ ಚಿತ್ಪಾವನ ಬ್ರಾಹ್ಮಣರಿಗೆ ಈ ಸೋಲು ದೊಡ್ಡ ಆಘಾತವಾಗಿತ್ತು. ಆದರೂ, ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಲು ಬೇಕಾದ ಅಧಿಕಾರ ಶೈಲಿಯನ್ನು ಅವರು ಆಗಲೇ ಕಲಿತುಕೊಂಡಿದ್ದರಿಂದ ಈ ಹಂತದಲ್ಲಿ ಅದರಿಂದ ಪಾರಾಗಲು ಸಹಾಯವಾಯಿತು ಎಂದು ಹೇಳಬಹುದು. ಬ್ರಿಟಿಷ್‌ ಆಡಳಿತದ ಅಡಿಯಲ್ಲೂ ಸ್ವದೇಶಿಗಳಿಗೆ ಸಿಗಬಹುದಾದ ಹುದ್ದೆಗಳಲ್ಲಿ ಬಹುತೇಕ ಕಡೆ ಅವರು ಆವರಿಸಿಕೊಂಡರು. ಸ್ವದೇಶೀ ಸಾಮಂತರನ್ನು ಸೃಷ್ಠಿಸಲು ವಸಾಹತುಶಾಹಿ ವಿದ್ಯಾಭ್ಯಾಸ ಪದ್ಧತಿಯನ್ನು ಬಾಂಬೆಯಲ್ಲಿ ಶುರು ಮಾಡಿದಾಗ, ಅದರ ಮೊದಲ ಫಲಶೃತಿಗಳನ್ನು ಒಂದು ಸಮುದಾಯವಾಗಿ ತಮ್ಮದಾಗಿಸಿಕೊಂಡವರು ಕೂಡ ಇದೇ ಚಿತ್ಪಾವನ ಬ್ರಾಹ್ಮಣರು.  ದೇಸೀ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಬಾರದ ಹಾಗೆ ಆಡಳಿತ ನಡೆಸಬೇಕೆಂಬ ಬ್ರಿಟಿಷರ ನೀತಿ ಕೂಡ ಮರಾಠ ಬ್ರಾಹ್ಮಣರಿಗೆ ಅನುಕೂಲಕರವಾಗಿತ್ತು. ಅಂಕಿಅಂಶಗಳ ಪ್ರಕಾರ ಒಂದು ಕಾಲದಲ್ಲಿ ಬಾಂಬೆ ಪ್ರಾಂತ್ಯದ ಅತ್ಯಂತ ಉನ್ನತ ಹುದ್ದೆಗಳಲ್ಲಿ ಒಂದಾಗಿದ್ದ ಮಮ್ಲತ್‌ದಾರ್‌ (ಜಿಲ್ಲಾ ಕಲೆಕ್ಟರ್)‌ ಸ್ಥಾನದಲ್ಲಿ ಎಪ್ಪತ್ತೈದು ಶೇಕಡ ಆವರಿಸಿಕೊಂಡಿದ್ದವರು ಮರಾಠ ಬ್ರಾಹ್ಮಣರು, ಅದರಲ್ಲೂ ಬಹುತೇಕ ಚಿತ್ಪಾವನ ಬ್ರಾಹ್ಮಣರು. ೧೮೮೬ರ ಅಂಕಿಅಂಶಗಳ ಪ್ರಕಾರ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಇದ್ದ ೧೦೪ ಸಬ್‌ ಆರ್ಡಿನೇಟ್‌ ಜಡ್ಜುಗಳಲ್ಲಿ ೩೩ ಮಂದಿ ಚಿತ್ಪಾವನ ಬ್ರಾಹ್ಮಣರಾಗಿದ್ದರು.

ಹೀಗೆ ಆಡಳಿತ ವ್ಯವಸ್ಥೆಯಲ್ಲೂ ಪ್ರಾಮುಖ್ಯತೆ ವಹಿಸುವ ಮೂಲಕ ಅವರಿಗೆ ಸಿಕ್ಕ ಸಾಮಾಜಿಕ ಚಲನೆ, ಮರಾಠ ಪ್ರಾಂತ್ಯದ ಸಾಮಾಜಿಕ ಸಾಂಸ್ಕೃತಿಕ ವಲಯಗಳಲ್ಲಿ ಕೂಡ ದೊಡ್ಡ ಮಟ್ಟದ ಅಧಿಕಾರವನ್ನು ಅವರಿಗೆ ನೀಡಿತು. ಹತ್ತೊಂಬತ್ತನೇ ಶತಮಾನದ ಮಹಾರಾಷ್ಟ್ರದಲ್ಲಿ ಸಾಮಾಜಿಕ ಸುಧಾರಣಾವಾದಿಗಳೆಂದೂ ಸಾಂಸ್ಕೃತಿಕ ನಾಯಕರೆಂದೂ ಗುರುತಿಸಲ್ಪಟ್ಟ ಹಲವರು ಈ ಬ್ರಾಹ್ಮಣ ವಂಶದಿಂದ ಪ್ರಭಾವಿತರಾಗಿದ್ದರು. ಮಹಾದೇವ್‌ ಗೋವಿಂದ ರಾಣಡೆ, ವಿಷ್ಣುಶಾಸ್ತ್ರಿ ಕೃಷ್ಣಶಾಸ್ತ್ರಿ ಚಿಪ್ಲುಂಕರ್‌, ಗಣೇಶ್‌ ಅಗರ್ಕರ್‌, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್‌ ಮೊದಲಾದವರು ಅವರಲ್ಲಿ ಕೆಲವರು ಮಾತ್ರ. ಅದೇ ಹೊತ್ತು ಆರ್ಥಿಕವಾಗಿ ಅವರು ಕುಸಿಯತೊಡಗಿದ್ದರು. ಹುಂಡಿ ಮತ್ತು ಬಡ್ಡಿ ವಹಿವಾಟು ನಡೆಸುತ್ತಿದ್ದ ಚಿತ್ಪಾವನ ಬ್ರಾಹ್ಮಣರು ತಾತ್ಕಾಲಿಕವಾಗಿ ಹಿಮ್ಮೆಟ್ಟಬೇಕಾಯಿತು. ಅವರ ಕೇಂದ್ರವಾಗಿದ್ದ ಪುಣೆಗೆ ಬದಲಾಗಿ ಬ್ರಿಟಿಷರ ಪಾಲನೆಯಲ್ಲಿ ಬಾಂಬೆ ಹೊಸ ಆರ್ಥಿಕ ಶಕ್ತಿಯಾಗಿ ಹೊಮ್ಮಿತು. ೧೮೩೦ರ ಹೊತ್ತಿಗೆ ಬ್ರಿಟಿಷರು ಚೀನಾದೊಂದಿಗೆ ವ್ಯಾಪಾರ ಸಂಬಂಧ ಸ್ಥಾಪಿಸಿದ ನಂತರ ಈಸ್ಟ್‌ ಇಂಡಿಯಾ ಕಂಪೆನಿಯ ವ್ಯಾಪಾರ ಸಾಮ್ರಾಜ್ಯದಲ್ಲಿ ಬಾಂಬೆ ಅತ್ಯುನ್ನತಿಗೇರಿತು. ಅಲ್ಲಿ ಬಟ್ಟೆ ಮಿಲ್‌ಗಳು ಸ್ಥಾಪನೆಗೊಂಡವು. ೧೮೫೪ರಲ್ಲಿ ಮೊದಲ ಮಿಲ್‌ ಬಾಂಬೆಯಲ್ಲಿ ಸ್ಥಾಪನೆಗೊಂಡಿತು. ೧೮೮೫ರ ಹೊತ್ತಿಗೆ ಅವುಗಳ ಸಂಖ್ಯೆ ೭೪ಕ್ಕೆ ಏರುತ್ತವೆ. ಈ ಮಿಲ್‌ಗಳು ಮತ್ತು ಅವು ನಿರ್ಮಿಸಿದ ಹೊಸ ಆರ್ಥಿಕ ವ್ಯವಸ್ಥೆಯ ಲಾಭ ಪಡೆದವರು ಬಾಂಬೆಗೆ ಹೊರಗಿನಿಂದ ವಲಸೆ ಬಂದವರೇ ಆಗಿದ್ದರು. ಬ್ರಿಟಿಷರು, ಪಾರ್ಸಿಗಳು, ಭಾಟಿಯರು, ಖೋಜಾಗಳು ಮೊದಲಾದವರು. ಚಿತ್ಪಾವನ ಬ್ರಾಹ್ಮಣರ ಅದುವರೆಗಿನ ಆರ್ಥಿಕ ಪಾರಮ್ಯ ಅಲ್ಲಿಗೆ ಕೊನೆಯಾಯಿತು. ಇದೇ ಹೊತ್ತಲ್ಲಿ ಮೌಂಟ್‌ ಸ್ಟುವರ್ಟ್‌ ಎಲ್ಫಿನ್ಸ್ಟೈನ್‌ ಹಲವು ವಿದ್ಯಾಭ್ಯಾಸ ಕೇಂದ್ರಗಳನ್ನು ಬಾಂಬೆಯಲ್ಲಿ ಶುರು ಮಾಡುತ್ತಾನೆ.ಇದರೊಂದಿಗೆ ಚಿತ್ಪಾವನ ಬ್ರಾಹ್ಮಣರ ಆಸ್ಥಾನವಾಗಿದ್ದ ಪುಣೆ ಪ್ರೇತನಗರವಾಗಿ ಬದಲಾಯಿತು.

೧೮೧೮ರ ಅಧಿಕಾರ ನಾಶ ಮತ್ತು ಅದರ ಹಿಂದೆಯೇ ಸಂಭವಿಸಿದ ಆರ್ಥಿಕ ಪಾರಮ್ಯದ ಕುಸಿತವೂ ಸೇರಿ ಮುಗಿಯದ ಕಣ್ಣೀರ ಕಥೆಯಾಗಿ ಚಿತ್ಪಾವನ ಬ್ರಾಹ್ಮಣ ಸಮುದಾಯದಲ್ಲಿ ನೆಲೆ ನಿಂತಿತ್ತು. ೧೮೪೯ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಚಿತ್ಪಾವನ ಬ್ರಾಹ್ಮಣರಲ್ಲಿ ಪ್ರಮುಖರೂ ಮತ್ತು ಲೋಕಹಿತವಾದಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಲೂ ಇದ್ದ ಗೋಪಾಲ ಹರಿ ದೇಶ್‌ಮುಖ್‌ ಹೀಗೆ ಬರೆದಿದ್ದರು:

ʼ…ಯಾವಾಗ ದೇವರು ಬ್ರಾಹ್ಮಣರ ಈ ಅಳಲು ಕೇಳಿಸಿಕೊಳ್ಳುತ್ತಾನೆ? ಆಗ ವಿವೇಕವಂತ (ಬ್ರಾಹ್ಮಣ) ಸಂಪ್ರದಾಯಸ್ಥ ಹೇಳುತ್ತಾನೆ: ಜನರೇ, ಹಿಂದೆ ಯಾದವರು ಹೇಗೆ ಸತ್ತು ನಾಶವಾದರು? ರಾವಣ ತನ್ನ ಕೋಪದಿಂದ ಯಾರನ್ನಾದರು ಬಿಟ್ಟಿದ್ದನೇ? ಎಲ್ಲ ದೇವರುಗಳನ್ನು ಬಂಧಿಸಿಡಲಾಗಿತ್ತು. ಆದರೆ, ವಾನರರ ಸಹಾಯದಿಂದ ರಾಮನು ಲಂಕೆಯನ್ನು ಮತ್ತೆ ಗೆಲ್ಲಲಿಲ್ಲವೇ? ನೀರಿನ ಮೇಲೆ ಕಲ್ಲುಗಳು ತೇಲಲಿಲ್ಲವೇ? ಹಾಗೆಯೇ ಬ್ರಿಟಿಷರು ಒಂದು ದಿನ ಇಲ್ಲಿಂದ ಹೋಗುತ್ತಾರೆ. ಧರ್ಮ ಸ್ಥಾಪನೆಯಾಗುತ್ತದೆ. ಬ್ರಾಹ್ಮಣರು ಸಂತುಷ್ಠರಾಗುತ್ತಾರೆ.ʼ

ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದಿದ್ದ, ಒಂದರ್ಥದಲ್ಲಿ ಸುಧಾರಣಾವಾದಿ ಎಂದು ಹೆಸರು ಪಡೆದಿದ್ದ, ಲೋಕಹಿತವಾದಿಯ ಕನಸು ಬ್ರಿಟಿಷರನ್ನು ಓಡಿಸಬೇಕು ಎಂಬುದರ ಆಚೆಗೆ ಬ್ರಾಹ್ಮಣರ ಉದ್ಧಾರವೂ ಆಗಿತ್ತು ಎಂಬುದನ್ನು ಈ ಮೇಲಿನ ಮಾತು ಪುಷ್ಠೀಕರಿಸುತ್ತದೆ. ಅವರು ತನ್ನ ಸಮುದಾಯದಲ್ಲಿದ್ದ ಬಾಲ್ಯವಿವಾಹ ಮತ್ತು ಬಹುಪತ್ನಿತ್ವ/ಬಹುಪತಿತ್ವದ ಜೊತೆಗೆ ಜಾತಿ ಪದ್ಧತಿಯನ್ನೂ ಖಂಡಿಸಿದ್ದರು. ಅವರ ಹಿಂದೂ ಅಷ್ಟಕ್‌  ಎಂಬ ಪ್ರಸಿದ್ಧ ಪುಸ್ತಕದಲ್ಲಿ ಈ ವಾದಗಳನ್ನು ಕಾಣಬಹುದು. ಆದರೆ, ಇದು ಧರ್ಮಾತೀತ ಆಧುನಿಕ ಬದುಕಿನೆಡಗಿನ ದಾರಿ ಆಗಿರಲಿಲ್ಲ. ಬದಲಾಗಿ, ಚಿತ್ಪಾವನರ ಅಧಿಕಾರವನ್ನು ಪುನರುಜ್ಜೀವನಗೊಳಿಸಬೇಕೆಂಬ ಗುರಿಯೊಂದಿಗೆ ಬ್ರಾಹ್ಮಣಪರವಾದ, ಆದರೆ ಹಳೆಯದರೊಂದಿಗೆ ತುಲನೆ ಮಾಡುವಾಗ ಸುಧಾರಣಾವಾದವಾಗಿಯೂ ಕಾಣುವ ಧಾರ್ಮಿಕ ಪ್ರಜ್ಞೆಯಿಂದ ಮಾತ್ರವೇ ಬ್ರಿಟಿಷರನ್ನು ಎದುರಿಸುತ್ತಿದ್ದರು. ತಮ್ಮ ಕನಸನ್ನು ಹದಿನೆಂಟನೆ ಶತಮಾನದ ಚಿತ್ಪಾವನ ಪ್ರಾಬಲ್ಯದ ಮೂಸೆಯಲ್ಲಿ ಕಟೆದು ನಿಲ್ಲಿಸಲು ಹೊಸಕಾಲದ ಪರಿಸ್ಥಿತಿಗಳಿಂದಾಗಿ ಅಸಾದ್ಯವೆಂಬ ಅರಿವು ತಮ್ಮನ್ನು ತಾವೇ ಒಡೆದು ಕಟ್ಟುವ ಪ್ರಕ್ರಿಯೆಗೆ ಒಳಪಡಿಸಿತ್ತು.

ಆದರೆ, ಹತ್ತೊಂಬತ್ತನೇ ಶತಮಾನದಲ್ಲಿಯೇ ಆಧುನಿಕಮುಖಿಯಾದ ಚಳುವಳಿಗಳು ಚಿತ್ಪಾವನರ ನಡುವೆ ಹುಟ್ಟಿಕೊಳ್ಳುತ್ತವೆ. ರಾಮಕೃಷ್ಣ ಗೋಪಾಲ್‌ ಭಂಡಾರ್ಕರ್‌ (೧೮೩೭-೧೯೨೫), ಜಸ್ಟಿಸ್‌ ಮಹಾದೇವ್‌ ಗೋವಿಂದ್‌ ರಾಣಡೆ (೧೮೪೨-೧೯೦೧) ಮೊದಲಾದವರು ಬ್ರಾಹ್ಮಣರ ಆಂತರಿಕ ಸುಧಾರಣೆ ಎಂಬುದಕ್ಕಿಂತ ಒಟ್ಟು ಸಾಮಾಜಿಕ ಸುಧಾರಣೆಗೆ ತಮ್ಮ ಸಾಂಸ್ಕೃತಿಕ ಶಕ್ತಿಯನ್ನು ವಿನಿಯೋಗಿಸಿದರು. ಅವರು ಜಾತಿವ್ಯವಸ್ಥೆ ಎಂಬ ಸಾಮಾಜಿಕ ಪಿಡುಗನ್ನು ಪಿಡುಗಾಗಿಯೇ ಕಂಡರು. ಅವರು ಕೂಡ ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದವರಾಗಿದ್ದರು. ಪಾಶ್ಚಾತ್ಯ ದೇಶಗಳ ಸಮಕಾಲೀನ ಸಮಾನಮನಸ್ಕ ಚಳುವಳಿಗಳು ಅವರನ್ನು ಪ್ರಚೋದಿಸಿದವು. ಆದರೆ, ಮರಾಠ ಪ್ರಾಂತ್ಯದಲ್ಲಿ ಅದನ್ನು ಹಾಗೆಯೇ ಎತ್ತಿ ಪ್ರಯೋಗಿಸಲು ವಿಭಿನ್ನ ಸಾಮಾಜಿಕ ಕಾರಣಗಳಿಂದಾಗಿ ಅವರಿಂದ ಸಾಧ್ಯವಾಗಲಿಲ್ಲ. ಅದೇ ಹೊತ್ತು, ರಾಜಕೀಯವಾಗಿ ಮುನ್ನೇರಬೇಕಾದರೆ ಸಾಂಸ್ಕೃತಿಕವಾಗಿ ಒಡೆದು ಕಟ್ಟುವುದು ಅನಿವಾರ್ಯ ಎಂಬುದನ್ನೂ ಅವರು ಮನಗಂಡಿದ್ದರು. ಅದರ ಫಲವಾಗಿಯೇ ಬ್ರಹ್ಮ ಸಮಾಜ, ಪರಮಹಂಸ ಸಭೆ, ಪ್ರಾರ್ಥನಾ ಸಮಾಜ ಮೊದಲಾದವು ಬಂಗಾಳದಲ್ಲಿ ಎಂಬಂತೆ ಮರಾಠ ಪ್ರಾಂತ್ಯದಲ್ಲೂ, ಮುಖ್ಯವಾಗಿ ಪುಣೆಯಲ್ಲೂ ಬೇರುಬಿಟ್ಟವು. ಇವೆಲ್ಲವೂ ಮೇಲ್ಜಾತಿ ಚಳುವಳಿಗಳಾಗಿದ್ದವು. ಆದರೆ, ಮೇಲ್ಜಾತಿ ಪ್ರಾಬಲ್ಯವನ್ನು ಹೊಸ ಸಂದರ್ಭಕ್ಕೆ ತಕ್ಕುದಾಗಿ ವಿಕಸನಗೊಳಿಸುವುದು ಎಂಬುದಕ್ಕಿಂತ, ಅದನ್ನು ಮುಂದೆ ಬರಲಿರುವ ಆಧುನಿಕ ಸಮಾಜದ ಜೊತೆ ವಿಲೀನಗೊಳಿಸಲು ಬೇಕಾದ ತಯಾರಿಗೆ ಈಗಲೇ ಕಾಲುದಾರಿಯೊಂದನ್ನು ಕಡಿಯುವುದು ಅವರ ಮುಖ್ಯ ಉದ್ದೇಶವಾಗಿತ್ತು. ಅವರು ತಮ್ಮ ಪಾಶ್ಚಾತ್ಯ ವಿದ್ಯಾಭ್ಯಾಸದಿಂದ ಪಡೆದ ಜ್ಞಾನಭಂಡಾರವನ್ನು ಇದಕ್ಕಾಗಿ ಬಳಸಲಿಲ್ಲ. ಬದಲಿಗೆ ಆ ಜ್ಞಾನದ ಬೆಳಕಲ್ಲಿ ತಮ್ಮ ಬ್ರಾಹ್ಮಣ ವಂಶಕ್ಕೆ ಚಿರಪರಿಚಿತವಾದ ವೇದೋಕ್ತಿಗಳು ಮತ್ತು ಉಪನಿಷತ್‌ ವಾಕ್ಯಗಳ ಹೊಚ್ಚ ಹೊಸ ವ್ಯಾಖ್ಯಾನಗಳನ್ನು ತಂದರು. ಹಾಗಾಗಿಯೆ ಅರವಿಂದ್‌ ಗಣಾಚಾರಿ ಈ ಕಾಲವನ್ನು ವಿಚಾರಶೀಲ ಪುನರುಜ್ಜೀವನ (Rational Revivalism) ಎಂದು ಕರೆಯುತ್ತಾರೆ.

ಪುಣೆ ಕೇಂದ್ರವಾಗಿ ನಡೆದ ಈ ವಿಚಾರಶೀಲ ಪುನರುಜ್ಜೀವನಕ್ಕೆ ದೊಡ್ಡ ಮಟ್ಟದ ಶಕ್ತಿ ನೀಡಿದ ಪ್ರಮುಖರಲ್ಲಿ ಮಹಾದೇವ್‌ ಗೋವಿಂದ್‌ ರಾಣಡೆ ಒಬ್ಬರಾಗಿದ್ದರು. ಬಾಂಬೆ ಹೈಕೋರ್ಟಿನ ಜಡ್ಜ್‌ ಆಗಿದ್ದ ಆ ಚಿತ್ಪಾವನ ಬ್ರಾಹ್ಮಣ ೧೮೭೧ರಲ್ಲಿ ಪುಣೆಗೆ ವರ್ಗವಾಗಿ ಬಂದರು. ಅದರೊಂದಿಗೆ ಚಿತ್ಪಾವನರ ನಡುವಿನ ಪ್ರಗತಿಪರರು ಎಚ್ಚರವಾದರು. ಮಹಿಳಾ ವಿದ್ಯಾಭ್ಯಾಸ ಮತ್ತು ವಿಧವಾ ವಿವಾಹಗಳೆಂಬ ಎರಡು ಸಾಮಾಜಿಕ ಸುಧಾರಣೆಗಳನ್ನು ಅವರು ಕೈಗೆತ್ತಿಕೊಂಡರು. ಅದರ ಜೊತೆಗೆ ಹಲವಾರು ಬರಹಗಳ ಮೂಲಕ ಬ್ರಿಟಿಷ್‌ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸುತ್ತಾ ಅದಕ್ಕೆ ಬದಲಾಗಿ ಸ್ವದೇಶಿ ಪರಿಕಲ್ಪನೆಯ ಕೈಗಾರೀಕರಣ ಮತ್ತು ಬಂಡವಾಳ ಹೂಡಿಕೆಯ ಕುರಿತು ನಿರ್ದೇಶನಗಳನ್ನು ನೀಡಿದರು.

ರಾಣಡೆ ಪುಣೆಗೆ ಬರುವ ಮೊದಲೇ ಜನರು ಸಾರ್ವಜನಿಕ್‌ ಕಾಕಾ ಎಂದು ಗೌರವಪೂರ್ವಕವಾಗಿ ಕರೆಯುತ್ತಿದ್ದ ಗಣೇಶ್‌ ವಾಸುದೇವ್‌ ಜೋಷಿ ಸಾರ್ವಜನಿಕ್‌ ಸಭಾಎಂಬ ಪ್ರಗತಿಪರ ಸಂಘಟನೆಯೊಂದನ್ನು ಆರಂಭಿಸಿದ್ದರು. ಪುಣೆಯ ಚಿತ್ಪಾವನ ಬ್ರಾಹ್ಮಣರ ವಾಪ್ತಿಯನ್ನು ಮೀರಿ ಸಾರ್ವಜನಿಕ್‌ ಸಭಾದ ಚಟುವಟಿಕೆಗಳು ಬಾಂಬೆ ಪ್ರಾಂತ್ಯದ ಮರಾಠಿ ಮಾತನಾಡುವ ಎಲ್ಲ ಜನರ ಬಳಿಗೆ ತಲುಪಿತ್ತು. ಡೆಕ್ಕನ್‌ ಪ್ರದೇಶದಲ್ಲಿ ಅತಿ ಕಠಿಣ ಬರಗಾಲದಲ್ಲಿ ಬರ ನೀಗಿಸಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು, ಸಾಮಾಜಿಕ ಸುಧಾರಣೆಯನ್ನು ಜಾರಿಗೊಳಿಸಲು ಮತ್ತು ಆಡಳಿತದಲ್ಲಿ ಭಾರತೀಯ ಪ್ರಾತಿನಿದ್ಯ ಖಾತರಿ ಪಡಿಸಲು ಸಭಾದ ನೇತೃತ್ವದಲ್ಲಿ ಹಲವು ನಿವೇದನೆಗಳು ಸರಕಾರಕ್ಕೆ ಸಲ್ಲಿಕೆಯಾದವು. ರಾಣಡೆ ಸಭಾದ ಇಂತಹ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪೇಶ್ವೆಗಳ ಪತನದ ನಂತರ ಮತ್ತೊಮ್ಮೆ ಪುಣೆ ಕೇಂದ್ರವಾಗಿರಿಸಿಕೊಂಡ ರಾಜಕೀಯ ಚಟುವಟಿಕೆಗಳನ್ನು ಅವರು ಆರಂಭಿಸಿದ್ದರು.

ಆದರೆ, ಈ ಕಾಲವೂ ಹೆಚ್ಚು ನಿಲ್ಲಲಿಲ್ಲ. ಸುಧಾರಣೆಗಳ ಸಂಪ್ರದಾಯವಾದಿ ಎಳೆಯೊಂದು ಚಿತ್ಪಾವನರ ನಡುವೆ ಮತ್ತು ಉಳಿದ ಬ್ರಾಹ್ಮಣರ ನಡುವೆ ವ್ಯಾಪಕವಾಗಿ ಹಬ್ಬತೊಡಗಿತ್ತು. ಈ ಸಂಪ್ರದಾಯವಾದಿ ಸುಧಾರಣೆಗಳಿಗೆ ನಾಯಕತ್ವ ನೀಡಿದವರು ವಿಷ್ಣು ಬಿಕ್ಕಾಜಿ ಗೋಖಲೆ (೧೮೨೫-೭೧) ಎಂಬ ವಿಷ್ಣುಸಭಾ ಬ್ರಹ್ಮಚಾರಿಯಾಗಿದ್ದರು. ಧರ್ಮವನ್ನು ಅದರ ಶುದ್ಧರೂಪದಲ್ಲಿ ಬೆಳಗಿಸುವುದು ವಿಷ್ಣುಸಭಾ ಬ್ರಹ್ಮಚಾರಿಯ ತತ್ವವಾಗಿತ್ತು. ಪಾಶ್ಚಿಮಾತ್ಯ ಚಿಂತನೆಗಳ ಮೂಸೆಯಲ್ಲಿ ಧರ್ಮವನ್ನು ಸಂಸ್ಕರಿಸುವ ರೀತಿಯನ್ನು ಖಂಡಿಸಿ ಅವರು ಬರೆದ ವೇದೋಕ್ತ ಧರ್ಮಪ್ರಕಾಶಂ ಸಂಪ್ರದಾಯವಾದಿ ಬ್ರಿಟಿಷ್‌ ವಿರೋಧಿ ಬ್ರಾಹ್ಮಣರಿಗೆ ಪ್ರೊಚೋದನೆ ನೀಡಿತು. ಅದು ಮನುಸ್ಮೃತಿಯನ್ನು ಮರಳಿ ತಂದಿತು. ಜಾತಿ ವ್ಯವಸ್ಥೆಯನ್ನು ನ್ಯಾಯೀಕರಿಸಿತು.

ಮುಖ್ಯವಾಹಿನಿ ಇತಿಹಾಸದಲ್ಲಿ ಅತಿಯಾಗಿ ಹೊಗಳಲ್ಪಟ್ಟ ವಿಷ್ಣುಶಾಸ್ತ್ರಿ ಚಿಪ್ಲುಂಕರ್‌ (೧೮೫೦-೧೮೮೨) ಸಂಪ್ರದಾಯವಾದಿಗಳನ್ನು ಖುಷಿಪಡಿಸುತ್ತಾ ಈ ಧಾರೆಯನ್ನು ಮುಂದಕ್ಕೊಯ್ದ ಮತ್ತೊಬ್ಬ ವ್ಯಕ್ತಿ. ಚಿತ್ಪಾವನ ಬ್ರಾಹ್ಮಣರ ನಡುವೆ ಬೇರೂರಲು ಶ್ರಮಿಸುತ್ತಿದ್ದ ಬ್ರಹ್ಮ ಸಮಾಜ ಮತ್ತಿತರ ಪ್ರಗತಿಶೀಲ ಸುಧಾರಣಾ ಚಳುವಳಿ ಧಾರೆಗಳನ್ನು ತನ್ನ ನಿಬಂಧಮಾಲಾ ರೀತಿಯ ಪುಸ್ತಕಗಳ ಮೂಲಕ ನುಚ್ಚುನೂರು ಮಾಡಿದರು.

ಇದೇ ಹೊತ್ತಲ್ಲಿ ಜ್ಯೋತಿಬಾ ಫುಲೆಯ ಸತ್ಯಶೋಧಕ ಸಮಾಜದಂತಹ ಕೆಳಜಾತಿ ಚಳುವಳಿಗಳು ಕೂಡ ಪ್ರಬಲವಾಗುತ್ತಿತ್ತು. ಅವರ ಪತ್ನಿ ಸಾವಿತ್ರಿ ಫುಲೆ ಮತ್ತು ನಂತರದ ಕಾಲದಲ್ಲಿ ಆಳವಾಗಿ ಗುರುತಿಸಲ್ಪಟ್ಟ ಪಂಡಿತ ರಮಾಬಾಯಿ ತರಹದ ಮಹಿಳೆಯರು ಆ ಚಳುವಳಿಯ ಭಾಗವಾಗಿದ್ದರು. ಜಾತಿವಿನಾಶ ಮತ್ತು ಮಹಿಳಾ ಸಮಾನತೆಯ ಗುರಿಗಳನ್ನು ಹೊಂದಿದ್ದ ಸಂಘಟನೆಯಾಗಿತ್ತು ಸತ್ಯಶೋಧಕ ಸಮಾಜ. ವಿದ್ಯಾಭ್ಯಾಸವನ್ನು ಮುಂದಿಟ್ಟುಕೊಂಡು ವಿದ್ಯಾಕೇಂದ್ರಗಳ ಚಟುವಟುಕೆಗಳ ಸಹಿತ ಹಲವು ಸುಧಾರಣೆಗಳನ್ನು ಅವರು ಮುಂದಿಟ್ಟರು. ಅದಕ್ಕೆ ದೊಡ್ಡ ಮಟ್ಟದ ಸಾರ್ವಜನಿಕ ಬೆಂಬಲವೂ ದೊರೆಯಿತು.

ವೈಚಾರಿಕ ಮೇಲ್ಜಾತಿ ನವೋತ್ಥಾನ ಚಳುವಳಿಗಳು ಮತ್ತು ಜಾತಿ ವಿರೋಧಿ ಕೆಳಜಾತಿ ಚಳುವಳಿಗಳೆರಡನ್ನು ಒಟ್ಟಿಗೆ ನಿರಾಕರಿಸಿಕೊಂಡು ಸಂಪ್ರದಾಯವಾದಿ ಬ್ರಾಹ್ಮನಿಸಮ್ಮಿಗೆ ಚಿಪ್ಲುಂಕರ್‌ ಭಾರೀ ಪ್ರಚಾರ ನೀಡಿದರು. ರಾಣಡೆ ಮತ್ತು ಫುಲೆಯನ್ನು ಅವರು ಒಟ್ಟಿಗೆ ವಿರೋಧಿಸಿದರು. ಅದೇ ಹೊತ್ತು ಹಳೆಯ ಪೇಶ್ವಾ ಸಾಮ್ರಾಜ್ಯ, ಚಿತ್ಪಾವನ ಅಸ್ಮಿತೆಯಲ್ಲಿ ಗಟ್ಟಿಯಾಗಿ ನಿಂತುಕೊಂಡೇ ಬ್ರಿಟಿಷ್‌ ವಿರೋಧವನ್ನೂ ರೂಪಿಸಿಕೊಂಡರು. ಹೀಗೆ ಚಿಪ್ಲುಂಕರ್‌ ಸಾಧ್ಯವಾಗಿಸಿದ ಹೊಸ ಸಂಪ್ರದಾಯವಾದಿ ಬ್ರಾಹ್ಮಣ ಅಸ್ಮಿತೆಯನ್ನು ರಾಜಕೀಯವಾಗಿ ಪರಿವರ್ತಿಸುವುದು ಲೋಕಮಾನ್ಯ ಬಾಲಗಂಗಾಧರ ತಿಲಕ್ (೧೮೫೬-೧೯೨೦). ಚಿಪ್ಲುಂಕರ್‌ ಮರಣದ ನಂತರ, ಮೇಲೆ ಹೇಳಿದ ವೈಚಾರಿಕ‌ ಮೇಲ್ಜಾತಿ ನವೋತ್ಥಾನ ಚಳುವಳಿಗಳ, ಜಾತಿ ವಿರೋಧಿ ಕೆಳಜಾತಿ ಚಳುವಳಿಗಳ ಮತ್ತು ಬ್ರಿಟಿಷರ ಎದುರಾಳಿಯಾಗಿ ಹೊಸ ಸಂಪ್ರದಾಯವಾದಿ ಬ್ರಾಹ್ಮಣ್ಯದ ಪ್ರಶ್ನಿಸಲಾಗದ ಅದ್ವಿತೀಯ ನಾಯಕ ಸ್ಥಾನಕ್ಕೆ ತಿಲಕ್‌ ಏರಿದರು.

Related Articles

ಇತ್ತೀಚಿನ ಸುದ್ದಿಗಳು