ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕಸಾಲಿಯಾನ್ ಪ್ರದೇಶದಲ್ಲಿ ಬುಧವಾರ (ಜುಲೈ 30, 2025) ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಸಾಲಿಯಾನ್‌ನಲ್ಲಿ ಕಾರ್ಡನ್ ಮತ್ತು ಸರ್ಚ್ ಆಪರೇಷನ್ ನಡೆಯುತ್ತಿರುವಾಗ, ಪೊಲೀಸರು ಮತ್ತು ಭದ್ರತಾ ಪಡೆಗಳ ತಂಡವು ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಬೆನ್ನಟ್ಟಿತು. ಅಡಗಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಪ್ರತಿದಾಳಿ ನಡೆಯಿತು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆಯು ‘ಎಕ್ಸ್’ (ಹಿಂದಿನ ಟ್ವಿಟರ್) ಮೂಲಕ ತಿಳಿಸಿದೆ.
ಯಶಸ್ವಿ ನುಸುಳುವಿಕೆ ವಿರೋಧಿ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯ ಭದ್ರತಾ ಪಡೆಗಳು ನಿಯಂತ್ರಣ ರೇಖೆಯ ಉದ್ದಕ್ಕೂ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ ಎಂದು ಹೇಳಲಾಗಿದೆ. ಉಗ್ರರ ಕ್ರಮಗಳನ್ನು ತ್ವರಿತ ಕಾರ್ಯಾಚರಣೆಯೊಂದಿಗೆ ಹಿಮ್ಮೆಟ್ಟಿಸಲಾಗಿದೆ. ಮೂರು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತನ್ನ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ.
ಈ ವರ್ಷ ಏಪ್ರಿಲ್‌ನಲ್ಲಿ 26 ನಾಗರಿಕರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ಎರಡು ದಿನಗಳ ನಂತರ ಈ ತಾಜಾ ಗುಂಡಿನ ಚಕಮಕಿ ನಡೆದಿದೆ.