Friday, June 14, 2024

ಸತ್ಯ | ನ್ಯಾಯ |ಧರ್ಮ

Online Gambling : ನಕಲಿ ಕಂಪನಿಗಳನ್ನು ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ

ಆನ್‌ಲೈನ್‌ ಬೆಟ್ಟಿಂಗ್‌, ಜೂಜಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಂಪನಿಗಳ ವಿರುದ್ಧ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಗುಪ್ತಚರ ನಿರ್ದೇಶನಾಲಯದ ಮಹಾ ನಿರ್ದೇಶಕರ ಕಚೇರಿಯಿಂದ ಬಂದ ದೂರಿನನ್ವಯ ಆನ್‌ಲೈನ್‌ ಬೆಟ್ಟಿಂಗ್‌ ಹೆಸರಿನಲ್ಲಿ ಜನರನ್ನು ವಂಚಿಸಿದ್ದ ನಕಲಿ ಕಂಪನಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ.

ಗುಪ್ತಚರ ನಿರ್ದೇಶನಾಲಯದ ಮಹಾ ನಿರ್ದೇಶಕರ ಕಚೇರಿಯಿಂದ ಬಂದ ದೂರಿನನ್ವಯ ಬೆಂಗಳೂರಿನ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಈ ರೀತಿಯ ನಕಲಿ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (PMLA) ನಕಲಿ ಕಂಪೆನಿಗಳ ವಿರುದ್ಧ ತನಿಖೆ ನಡೆಸಲಾಗಿತ್ತು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಸಧ್ಯ ಮುಟ್ಟುಗೋಲು ಹಾಕಲಾದ ನಕಲಿ ಕಂಪನಿಗಳು ಹಾಗೂ ಆ ಕಂಪನಿಗೆ ಸೇರಿದ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿನ 5.87 ಕೋಟಿ ರೂಪಾಯಿ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ನಕಲಿ ಕಂಪನಿಗಳು ಆನ್ಲೈನ್ ಬೆಟ್ಟಿಂಗ್ ಹಾಗು ಗ್ಯಾಂಬಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದವು. ಎನ್. ಶ್ಯಾಮಲಾ ಹಾಗೂ ಉಮರ್ ಫಾರುಖ್ ಬೇರೆ ವ್ಯಕ್ತಿಗಳ ದಾಖಲೆ ಪತ್ರಗಳನ್ನು ದುರ್ಬಳಕೆ ಮಾಡಿಕೊಂಡು ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ತೆರೆದಿದ್ದರು.

ಆರೋಪಿಗಳು ಸಾರ್ವಜನಿಕರನ್ನು ವಂಚಿಸುವ ಉದ್ದೇಶಕ್ಕಾಗಿಯೇ ರಾಕ್‌ಸ್ಟಾರ್‌ ಇಂಟರ್‌ ಆಯಕ್ಟೀವ್‌, ಇಂಡಿಯಾ ವಲ್ಡ್ ಸ್ಟುಡಿಯೋ, ಫಾಲ್ಕನ್‌ ಎಂಟರ್‌ಟೈನ್‌ಮೆಂಟ್‌ ಏಜೆನ್ಸೀಸ್‌, ದಿ ನೆಕ್ಸ್ಟ್‌ ಲೆವೆಲ್‌ ಟೆಕ್ನಾಲಜಿ, ರಿಫ್ಟ್‌ ಗೇಮರ್‌ ಟೆಕ್ನಾಲಜೀಸ್‌, ರಿಯಾಲಿಟಿ ಕೋಡ್‌ ಟೆಕ್ನಾಲಜಿ, ಟೆನೆಸ್‌ ಸಲ್ಯೂಷನ್ಸ್‌, ಎಲೆಕ್ಟ್ರಾನಿಕ್‌ ವರ್ಚುವಲ್‌ ಸಲ್ಯೂಷನ್ಸ್‌, ಝಿಂಗ ಇಂಟರ್‌ ಆಯಕ್ಟಿವ್‌, ವಾಲೆ ಬೈಟ್ಸ್‌ ಟೆಕ್ನಾಲಜಿ, ಐಯೋ ಬಿಟ್ಕೋಡ್‌ ಇಂಟರ್‌ ಆಯಕ್ಟಿವ್‌ ಏಜೆನ್ಸಿ, ಓಕ್ಯುಲಸ್‌ ವಾಲ್ವ್ ಎಂಟರ್‌ಟೈನ್‌ಮೆಂಟ್‌, ನೆಸ್ಟ್ರಾ ವೆಬ್‌ ಸಲ್ಯೂಷನ್ಸ್‌ ಸೇರಿದಂತೆ ಹಲವು ನಕಲಿ ಕಂಪನಿಗಳನ್ನು ತೆರೆದಿದ್ದರು.ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು