‘ಮೋದಿಯಿಂದ ನನ್ನ ಜೀವನ ನರಕವಾಗಿದೆ’: ಟ್ರೋಲ್‌ಗೆ ಒಳಗಾದ ಬಾಲಕಿ ಹುಡುಗಿ

ಜಂತರ್ ಮಂತರ್‌ನಲ್ಲಿ ನಡೆದ ಯುವಜನರ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದ್ದರಿಂದ ತೀವ್ರ ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದ 15 ವರ್ಷದ ಬಾಲಕಿಯೊಬ್ಬಳು, ಇದೀಗ ಮತ್ತೊಂದು ವಿಡಿಯೋದಲ್ಲಿ “ಪ್ರಧಾನಿ ನನ್ನ ಜೀವನವನ್ನು ನರಕವಾಗಿಸಿದ್ದಾರೆ” ಎಂದು ಆರೋಪಿಸಿದ್ದಾಳೆ.

ಈ ವಿಡಿಯೋ ಈ ವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಪ್ರಧಾನಿ ಮೋದಿ ತನ್ನನ್ನು “ಚಿತ್ರಹಿಂಸೆ ನೀಡುವ ಮಟ್ಟಿಗೆ ಕಿರುಕುಳ ನೀಡಿದ್ದಾರೆ” ಎಂದು ಬಾಲಕಿ ಆರೋಪಿಸಿದ್ದು, ಇದರಿಂದ ತನ್ನ ಸ್ವಾತಂತ್ರ್ಯ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ವಿಡಿಯೋವನ್ನು ಯಾವಾಗ ಅಥವಾ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಆ ಬಾಲಕಿಯ ವಕೀಲರು ಅದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ವಿಡಿಯೋ ಅಲ್ಲ ಎಂದು ದಿ ವೈರ್ ಎಂದು ವರದಿ ಮಾಡಿದೆ.

ವಿಡಿಯೋದಲ್ಲಿ ಬಾಲಕಿ, “ಮೋದಿ ಜೀ, ನೀವು ನನ್ನ ಜೀವನವನ್ನು ನರಕವಾಗಿಸಿದ್ದೀರಿ. ನನಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಾನು ಎಲ್ಲಿಗೆ ಹೋದರೂ ಮುಖ ಮುಚ್ಚಿಕೊಂಡು ಹೋಗಬೇಕಾಗಿದೆ,” ಎಂದು ಹೇಳುವುದು ಕೇಳಿಸುತ್ತದೆ.

ಈ ವಿಡಿಯೋವನ್ನು ಕಾಂಗ್ರೆಸ್ ಕೂಡ Xನಲ್ಲಿ ಹಂಚಿಕೊಂಡಿದೆ. 15 ವರ್ಷದ ಬಾಲಕಿಯನ್ನು “BJP ಗೂಂಡಾಗಳಿಂದ ಟ್ರೋಲ್ ಮಾಡಿಸಿದ” ಹಾಗೂ ಆಕೆಯನ್ನು ಬೆದರಿಸಿ, ಹೆದರಿಸಿ ಮತ್ತು ಕ್ಷಮೆ ಕೇಳುವಂತೆ ‘ಒತ್ತಾಯಿಸಿದ’ ಪ್ರಧಾನಿ “ನಾಚಿಕೆಪಡಬೇಕು” ಎಂದು ಕಾಂಗ್ರೆಸ್ ಹೇಳಿದೆ.

ಈ ಬಾಲಕಿ ನಿರಂತರವಾಗಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾಳೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಆಕೆಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿ (doxxing) ಕಿರುಕುಳ ನೀಡುತ್ತಿರುವವರ ವಿರುದ್ಧ ಸ್ಥಳೀಯ ಪೊಲೀಸರು ಅಥವಾ ದೆಹಲಿ ಪೊಲೀಸರು ತನಿಖೆ ಆರಂಭಿಸಿರುವುದು ಕಂಡುಬಂದಿಲ್ಲ.

ವಾಸ್ತವವಾಗಿ, ನೋಯ್ಡಾದ ಅಪ್ರಾಪ್ತ ಬಾಲಕಿಯ ವಿರುದ್ಧ ಜೀರೋ ಎಫ್‌ಐಆರ್ ದಾಖಲಿಸಲಾಗಿತ್ತು. ತನ್ನ ಹೇಳಿಕೆಗಳಿಗೆ ಕ್ಷಮೆಯಾಚಿಸಿ ಆಕೆ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಳು. ಪ್ರತಿಭಟನೆಯಲ್ಲಿದ್ದ ಇತರರ ‘ಪ್ರಭಾವದಡಿ’ ತಾನು ಆ ಮಾತುಗಳನ್ನು ಆಡಿದ್ದಾಗಿ, ತಾನು ಕೇವಲ 15 ವರ್ಷದವಳಾಗಿದ್ದು, ಇದು ತನ್ನ “ಮೊದಲ ಮತ್ತು ಕೊನೆಯ ತಪ್ಪು” ಆಗಲಿದೆ ಎಂದು ಆಕೆ ಹೇಳಿದ್ದಳು. ಇದಕ್ಕೂ ಮೊದಲು ಕೆಲವು ಮಾಧ್ಯಮ ವರದಿಗಳಲ್ಲಿ ಆಕೆಯ ವಯಸ್ಸು 25 ವರ್ಷ ಎಂದು ಹೇಳಲಾಗಿತ್ತು.

‘ಅಖಂಡ ಭಾರತ್ ಹಿಂದೂ ಸೇನಾ’ದ ಕಾನೂನು ವಿಭಾಗದ ಮುಖ್ಯಸ್ಥೆ ಸ್ಮೃತಿ ಸಿಂಗ್ ಚಾಂಡೆಲ್ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಶಾಂತಿಭಂಗಕ್ಕೆ ಪ್ರಚೋದಿಸುವ ಉದ್ದೇಶದ ಅವಹೇಳನ, ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳು ಮತ್ತು ಮಾನಹಾನಿಗೆ ಸಂಬಂಧಿಸಿದ BNS ಸೆಕ್ಷನ್‌ಗಳಡಿ ಅಪ್ರಾಪ್ತ ಬಾಲಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ನಡುವೆ, ಪ್ರತಿಭಟನೆಗಳ ಕುರಿತು ಮೋದಿ ಅವರು ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಮೂಲಕ, ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮ ವಿರುದ್ಧವೂ ಮತ್ತು ತಮ್ಮ ತೀರಿಕೊಂಡಿರುವ ತಮ್ಮ ತಾಯಿಯ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿದ “ದಾರಿ ತಪ್ಪಿಸಲ್ಪಟ್ಟ” ಯುವಕರನ್ನು — ವಿಶೇಷವಾಗಿ ಮಹಿಳಾ ಪ್ರತಿಭಟನಾಕಾರರನ್ನು — ಕ್ಷಮಿಸುವುದಾಗಿ ಹೇಳಿದ್ದರು.

ಇದೇ ವೇಳೆ, ಕಾಕ್ರೋಚ್‌ ಜನತಾ ಪಾರ್ಟಿ (CJP) ಬಾಲಕಿಯನ್ನು ಆನ್‌ಲೈನ್ ಮತ್ತು ಟಿವಿಯಲ್ಲಿ ಗುರಿಯಾಗಿಸಿ ನಿಂದಿಸುವುದರ ವಿರುದ್ಧ ಪ್ರತಿಭಟನೆ ನಡೆಸಿತ್ತು. Xನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ CJP ವಕ್ತಾರ ಸೌರವ್ ದಾಸ್, “[ಅಪ್ರಾಪ್ತೆಯಾಗಿರುವ ಕಾರಣ ಹೆಸರು ಬಹಿರಂಗಪಡಿಸಲಾಗಿಲ್ಲ] ವಿರುದ್ಧ ಕ್ರಿಮಿನಲ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಅಸಭ್ಯ ಭಾಷೆ ಬಳಸಿದ್ದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದಿಲ್ಲ. ಪೊಲೀಸರು ತಮ್ಮ ಸಮಯ ಮತ್ತು ಶಕ್ತಿಯನ್ನು ಬೇರೆಡೆ ಬಳಸಬಹುದು; 25 ವರ್ಷದ ಯುವತಿಯ ಹಿಂದೆ ಬೀಳುವ ಅಗತ್ಯವಿಲ್ಲ,” ಎಂದು ಹೇಳಿದ್ದರು.

ವಿಡಿಯೋ ಹೇಳಿಕೆಯಲ್ಲಿ CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಕೂಡ, “ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ದೇಶದ ಯುವಕರ ವಿರುದ್ಧ ಅದನ್ನು ಬಳಸಲಾಗುವುದಿಲ್ಲ; ಆದರೆ ರಾಜಕೀಯ ನಾಯಕರು ನಿಂದನೀಯ ಭಾಷೆ ಬಳಸಿದಾಗ ಅವರ ವಿರುದ್ಧ ಅದೇ ಕಾನೂನನ್ನು ಬಳಸದೇ ಇರಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು