Saturday, June 15, 2024

ಸತ್ಯ | ನ್ಯಾಯ |ಧರ್ಮ

ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವಿರುದ್ಧ ವಿಚಾರಣೆಗೆ ಆದೇಶ!

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಅವ್ಯವಹಾರ, ಭ್ರಷ್ಟಾಚಾರ, ಹಣ ದುರುಪಯೋಗ ನಡೆಸಿದೆ ಎಂಬ ಆರೋಪದ ಆಧಾರದಲ್ಲಿ ಈ ಸಂಬಂದ ವಿಚಾರಣೆ ನಡೆಸಿ, ಆರೋಪ ಸಾಬೀತಾದಲ್ಲಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಆದೇಶ ಹೊರಡಿಸಿದೆ. 

ದಿನಾಂಕ 19-06-2023 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಳಿಸಿರುವ ಆದೇಶ ಪತ್ರದಲ್ಲಿ ನೌಕರರ ಸಂಘದ ಕುರಿತು ಬಂದಿರುವ ಲಿಖಿತ ದೂರಿನ ಅನ್ವಯ ಈ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಲಾಗಿದೆ. NPS ನೌಕರರ ಸಂಘದ ಶಾಂತಾರಾಮ್‌ ಮತ್ತು ಇತರರು ದಿನಾಂಕ 02.06.2023ರಂದು ಸರ್ಕಾರಕ್ಕೆ ದೂರು ಅರ್ಜಿ ಸಲ್ಲಿಸಿ ಷಡಾಕ್ಷರಿಯವರು ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿರುದ್ಧ 5 ಗುರುತರ ಆರೋಪಗಳನ್ನು ಮಾಡಿದ್ದರು ಎಂದು ಈ ಆದೇಶಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಸಂಘವು ಸರ್ಕಾರದಿಂದ ಪ್ರತಿವರ್ಷ ಕೋಟ್ಯಂತರ ರೂ.ಗಳ ಸಹಾಯಧನ ಪಡೆಯುತ್ತಿದ್ದು ಸಂಘವು ವಿವಿಧ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿ ಗಂಭೀರ ಸ್ವರೂಪದ ಅಪರಾಧಗಳು, ಭ್ರಷ್ಟಾಚಾರ, ಹಣ ದುರುಪಯೋಗ, ವಂಚನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು, ಆರ್ಥಿಕ ಅಪರಾಧಗಳನ್ನು ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೆಲ ದಾಖಲೆಗಳನ್ನು ಒದಗಿಸಿ ಶಾಸನಾತ್ಮಕ ಕ್ರಮ ಜರುಗಿಸಲು ಕೋರಲಾಗಿದ್ದರೂ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದೂ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿ ನೇಮಿಸಿ ಸರಕಾರದ ಬೊಕ್ಕಸಕ್ಕೆ, ಸಂಘಕ್ಕೆ ಹಾಗೂ ಸಂಘದ ಸದಸ್ಯರುಗಳಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ರಾಜ್ಯಾಧ್ಯಕ್ಷ ಷಡಾಕ್ಷರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೋರಾಲಾಗಿದೆ.

ಬಿಜೆಪಿ ಮುಖಂಡ ಈಶ್ವರಪ್ಪನೊಂದಿಗೆ ಸಿ ಎಸ್‌ ಷಡಾಕ್ಷರಿ

 ಕೆಲವು ತಿಂಗಳ ಹಿಂದೆ ರಾಜ್ಯದ NPS ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಳೆ ಪಿಂಚಣಿ ಪದ್ಧತಿ ಜಾರಿಗಾಗಿ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿ ಶಾಂತಾರಾಮ್‌ ಮುಂದಾಳತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಷಡಾಕ್ಷರಿ ಈ ಹೋರಾಟದ ವಿರುದ್ಧ ನಿಲುವು ತಳೆದಿದ್ದರಲ್ಲದೇ ಬಿಜೆಪಿ ಸರ್ಕಾರಕ್ಕೆ ಅನುಕೂಲಕರವಾಗಿ ವರ್ತಿಸಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದರು. ಇದರಿಂದ NPS ನೌಕರರ ಆಕ್ರೋಶಕ್ಕೂ ಒಳಗಾಗಿದ್ದರು. ಆಡಳಿತಾರೂಢ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಂಡು ನೌಕರರ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. 

ಶಾಂತಾರಾಮ್‌

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇತ್ತೀಚೆಗೆ OPS ಕುರಿತು ವೀರಾವೇಷದ ಹೇಳಿಕೆಯನ್ನೂ ಷಡಾಕ್ಷರಿ ನೀಡಿದ್ದನ್ನು ಗಮನಿಸಬಹುದು. ಈ ನಡುವೆ ಶಾಂತಾರಾಮ್‌ ನೇತೃತ್ವದ NPS ನೌಕರರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿ ಚರ್ಚೆ ನಡೆಸಿದ್ದನ್ನು ಸಹ ಸ್ಮರಿಸಬಹುದು. 

ಇದೀಗ ಷಡಾಕ್ಷರಿ ವಿರುದ್ಧದ ದೂರಿನ ಹಿನ್ನೆಲೆಯಲ್ಲಿ, ದೂರು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಸಂಘದ ವಿರುದ್ಧ ಇರುವ ಐದು ಪ್ರಮುಖ ಆರೋಪಗಳ ವಿಚಾರಣೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಸಂಘದ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲು ಸರ್ಕಾರ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು