Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ ಕುರಿತು ನಿರ್ಣಯ ಅಂಗೀಕರಿಸಿದ ಯೂರೋಪಿಯನ್‌ ಪಾರ್ಲಿಮೆಂಟ್‌, ವಸಾಹತು ಶಾಹಿ ಮನಸ್ಥಿತಿಯೆಂದ ಭಾರತ

ಹೊಸದಿಲ್ಲಿ: ಮಣಿಪುರದಲ್ಲಿ ಹಿಂಸಾಚಾರವನ್ನು ನಿಲ್ಲಿಸಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಕ್ರಿಶ್ಚಿಯನ್ನರನ್ನು ರಕ್ಷಿಸಲು “ಎಲ್ಲಾ ಅಗತ್ಯ” ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತಕ್ಕೆ ಕರೆ ನೀಡುವ ನಿರ್ಣಯವನ್ನು ಯುರೋಪಿಯನ್ ಸಂಸತ್ತು ಗುರುವಾರ ಅಂಗೀಕರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತವು ಇದು “ಸ್ವೀಕಾರಾರ್ಹವಲ್ಲ” ಮತ್ತು “ವಸಾಹತುಶಾಹಿ ಮನಸ್ಥಿತಿ”ಯ ಪ್ರತಿಬಿಂಬ ಎಂದಿದೆ.

ಈ ನಿರ್ಣಯವನ್ನು ಐದು ರಾಜಕೀಯ ಗುಂಪುಗಳು ಮಂಡಿಸಿದವು ಮತ್ತು ಯುರೋಪಿಯನ್ ಪಾರ್ಲಿಮೆಂಟ್‌ನ ಪೂರ್ಣ ಅಧಿವೇಶನದಲ್ಲಿ ಕೈ ಎತ್ತುವ ಮೂಲಕ ಅಂಗೀಕರಿಸಲಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಭೇಟಿಗಾಗಿ ಫ್ರಾನ್ಸ್‌ಗೆ ಬಂದಿಳಿದ ನಂತರ ವೇಳಾಪಟ್ಟಿಯಲ್ಲಿದ್ದ ಇತರ ವಿಷಯಗಳೊಂದಿಗೆ ಈ ನಿರ್ಣಯವನ್ನೂ ಮಧ್ಯಾಹ್ನ ಪರಿಗಣನೆಗೆ ತೆಗೆದುಕೊಳ್ಳಲಾಯಿತು.

ಈ ಕುರಿತು ನೀಡಿದ ಹೇಳಿಕೆಯಲ್ಲಿ, “ಭಾರತದ ಆಂತರಿಕ ವ್ಯವಹಾರಗಳಲ್ಲಿ ಇಂತಹ ಹಸ್ತಕ್ಷೇಪವು ಸ್ವೀಕಾರಾರ್ಹವಲ್ಲ ಮತ್ತು ಇದು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

“ನ್ಯಾಯಾಂಗ ಸೇರಿದಂತೆ ಪ್ರತಿಯೊಂದು ಹಂತದ ಭಾರತದ ಪ್ರಾಧಿಕಾರಗಳು ಮಣಿಪುರದ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದಾರೆ ಮತ್ತು ಶಾಂತಿ ಮತ್ತು ಸಾಮರಸ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯುರೋಪಿಯನ್ ಪಾರ್ಲಿಮೆಂಟ್ ನಮ್ಮ ಕುರಿತು ಹೆಚ್ಚು ತಲೆಕೆಡಿಸಕೊಳ್ಳದೆ ತನ್ನ ಆಂತರಿಕ ವಿಷಯಗಳ ಬಗ್ಗೆ ಹೆಚ್ಚು ಉತ್ಪಾದಕವಾಗಿ ತನ್ನ ಸಮಯವನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದೇನೆ,” ಎಂದು ಅವರು ಹೇಳಿದರು.

ಕಳೆದ ಎರಡು ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ 120 ಮಂದಿ ಸಾವನ್ನಪ್ಪಿದ್ದಾರೆ, 50,000 ಮಂದಿ ನಿರಾಶ್ರಿತರಾಗಿದ್ದಾರೆ ಮತ್ತು 1,700 ಮನೆಗಳು, 250ಕ್ಕೂ ಹೆಚ್ಚು ಚರ್ಚ್‌ಗಳು ಮತ್ತು ಹಲವಾರು ದೇವಾಲಯಗಳನ್ನು ನಾಶಪಡಿಸಲಾಗಿದೆ ಎಂದು ನಿರ್ಣಯವು ಕಳವಳ ವ್ಯಕ್ತಪಡಿಸಿದೆ.

ಕ್ರಿಶ್ಚಿಯನ್‌ ಸೇರಿದಂತೆ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಮತ್ತು ಹೆಚ್ಚಿನ ಹಿಂಸಾಚಾರವಾಗದಂತೆ ತಡೆಯಬೇಕು ಎಂದು ನಿರ್ಣಯ ಒತ್ತಾಯಿಸಿದೆ.

ಹಿಂಸೆಯನ್ನು ಪ್ರೇರೇಪಿಸುವ ಹೇಳಿಕೆಗಳನ್ನು ನಿಲ್ಲಿಸಿ ಜನರ ನಡುವೆ ಪರಸ್ಪರ ನಂಬಿಕೆ ಹುಟ್ಟಿಸುವ ವಿಷಯದಲ್ಲಿ ಕಾರ್ಯೋನ್ಮತ್ತರಾಗುವಂತೆಯೂ ಇದು ರಾಜಕೀಯ ನಾಯಕರಿಗೆ ಕರೆ ನೀಡಿದೆ.

ಅಲ್ಲದೆ ಯುರೋಪಿಯನ್ ಪಾರ್ಲಿಮೆಂಟ್, “ಸರ್ಕಾರದ ನಡವಳಿಕೆಯನ್ನು ಟೀಕಿಸುವವರನ್ನು ಅಪರಾಧಿಗಳಲ್ಲ” ಎಂದು ಪ್ರತಿಪಾದಿಸಿದೆ.

“ರಾಜಕೀಯ ಪ್ರೇರಿತ, ಹಿಂದೂ ಬಹುಸಂಖ್ಯಾತತೆಯನ್ನು ಉತ್ತೇಜಿಸುವ ವಿಭಜಕ ನೀತಿಗಳು” ಹಾಗೂ ಉಗ್ರಗಾಮಿ ಗುಂಪುಗಳ ಹೆಚ್ಚಿದ ಚಟುವಟಿಕೆಗಳು ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದೆ ಎಂದು ಅಲ್ಲಿನ ಸಂಸತ್‌ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು